Epstein Files Vanish from DOJ Website Hours After Release
x

ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌

ಅಮೆರಿಕ ನ್ಯಾಯಾಂಗ ಇಲಾಖೆ ವೆಬ್‌ಸೈಟ್‌ನಿಂದ ಕಡತಗಳು ದಿಢೀರ್ ಮಾಯ: ಟ್ರಂಪ್ ಫೋಟೋ ಕೂಡ ನಾಪತ್ತೆ

ಪಾರದರ್ಶಕತೆ ಕಾಯ್ದೆಯಡಿ ಶುಕ್ರವಾರವಷ್ಟೇ ಈ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಪ್ರಕಟಿಸಲಾಗಿತ್ತು. ಆದರೆ 24 ಗಂಟೆಯೊಳಗೆ ಯಾವುದೇ ಮುನ್ಸೂಚನೆ ಅಥವಾ ವಿವರಣೆ ನೀಡದೆ ಇಲಾಖೆಯು ಕೆಲವು ಕಡತಗಳನ್ನು ತೆಗೆದುಹಾಕಲಾಗಿದೆ.


Click the Play button to hear this message in audio format

ಲೈಂಗಿಕ ಅಪರಾಧಗಳ ಆರೋಪ ಹೊತ್ತಿದ್ದ ಕುಖ್ಯಾತ ಉದ್ಯಮಿ ಜೆಫ್ರಿ ಎಪ್ಸ್ಟೀನ್‌ಗೆ ಸಂಬಂಧಿಸಿದ ಸಾವಿರಾರು ಪುಟಗಳ ದಾಖಲೆಗಳನ್ನು ಅಮೆರಿಕದ ನ್ಯಾಯಾಂಗ ಇಲಾಖೆ (DOJ) ಸಾರ್ವಜನಿಕವಾಗಿ ಬಿಡುಗಡೆ ಮಾಡಿದ ಬೆನ್ನಲ್ಲೇ, ವೆಬ್‌ಸೈಟ್‌ನಿಂದ ಕನಿಷ್ಠ 16 ಮಹತ್ವದ ಕಡತಗಳು ನಿಗೂಢವಾಗಿ ಕಣ್ಮರೆಯಾಗಿವೆ. ಇದರಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಛಾಯಾಚಿತ್ರವೊಂದು ಕೂಡ ಸೇರಿದ್ದು, ಇದು ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಪಾರದರ್ಶಕತೆ ಕಾಯ್ದೆಯಡಿ ಶುಕ್ರವಾರವಷ್ಟೇ ಈ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಪ್ರಕಟಿಸಲಾಗಿತ್ತು. ಆದರೆ 24 ಗಂಟೆಯೊಳಗೆ ಯಾವುದೇ ಮುನ್ಸೂಚನೆ ಅಥವಾ ವಿವರಣೆ ನೀಡದೆ ಇಲಾಖೆಯು ಕೆಲವು ಕಡತಗಳನ್ನು ತೆಗೆದುಹಾಕಲಾಗಿದೆ. ಕಣ್ಮರೆಯಾದ ಕಡತಗಳಲ್ಲಿ ನಗ್ನ ಮಹಿಳೆಯರನ್ನು ಚಿತ್ರಿಸುವ ಪೇಂಟಿಂಗ್‌ಗಳು ಮತ್ತು ಡ್ರಾಯರ್‌ ಒಂದರಲ್ಲಿ ಪತ್ತೆಯಾದ ಫೋಟೋಗಳ ಸರಣಿಯೂ ಸೇರಿದೆ. ವಿಶೇಷವೆಂದರೆ, ಆ ಡ್ರಾಯರ್‌ನಲ್ಲಿದ್ದ ಫೋಟೋವೊಂದರಲ್ಲಿ ಡೊನಾಲ್ಡ್ ಟ್ರಂಪ್, ಅವರ ಪತ್ನಿ ಮೆಲಾನಿಯಾ ಟ್ರಂಪ್, ಜೆಫ್ರಿ ಎಪ್ಸ್ಟೀನ್ ಮತ್ತು ಆತನ ಸಹಚರೆ ಗಿಸ್ಲೇನ್ ಮ್ಯಾಕ್ಸ್‌ವೆಲ್ ಒಟ್ಟಿಗೆ ಕಾಣಿಸಿಕೊಂಡಿದ್ದರು ಎಂದು ವರದಿಯಾಗಿದೆ.

ಅನುಮಾನಕ್ಕೆ ಎಡೆಮಾಡಿಕೊಟ್ಟ ನಡೆ

ನ್ಯಾಯಾಂಗ ಇಲಾಖೆಯು ಈ ಕಡತಗಳನ್ನು ತೆಗೆದುಹಾಕಲು ಕಾರಣವೇನು ಎಂಬ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಈ ಕುರಿತು ಕೇಳಲಾದ ಪ್ರಶ್ನೆಗಳಿಗೂ ಅಧಿಕಾರಿಗಳು ಉತ್ತರಿಸಿಲ್ಲ. ಈ ದಿಢೀರ್ ಬೆಳವಣಿಗೆಯು ಸಾಮಾಜಿಕ ಜಾಲತಾಣಗಳಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಪ್ರಬಲ ವ್ಯಕ್ತಿಗಳನ್ನು ರಕ್ಷಿಸಲು ಹೀಗೆ ಮಾಡಲಾಗುತ್ತಿದೆಯೇ ಎಂಬ ಪ್ರಶ್ನೆ ಎದ್ದಿದೆ.

ಹೌಸ್ ಓವರ್‌ಸೈಟ್ ಕಮಿಟಿಯಲ್ಲಿದ್ದ ಡೆಮಾಕ್ರಟಿಕ್ ಪಕ್ಷದ ಸದಸ್ಯರು ಈ ಬಗ್ಗೆ 'ಎಕ್ಸ್' (ಟ್ವಿಟರ್) ಖಾತೆಯಲ್ಲಿ ಪ್ರಶ್ನಿಸಿದ್ದು, "ಇನ್ನೇನು ಮುಚ್ಚಿಡಲಾಗುತ್ತಿದೆ? ಅಮೆರಿಕದ ಜನತೆಗೆ ಪಾರದರ್ಶಕತೆಯ ಅಗತ್ಯವಿದೆ," ಎಂದು ಆಗ್ರಹಿಸಿದ್ದಾರೆ.

ನಿರೀಕ್ಷಿತ ಮಾಹಿತಿ ಲಭ್ಯವಿಲ್ಲ

ದಶಕಗಳ ಕಾಲ ಎಪ್ಸ್ಟೀನ್ ಕಾನೂನಿನ ಕುಣಿಕೆಯಿಂದ ಹೇಗೆ ತಪ್ಪಿಸಿಕೊಂಡರು ಎಂಬ ಬಗ್ಗೆ ಈ ಹೊಸ ದಾಖಲೆಗಳಲ್ಲಿ ಮಹತ್ವದ ಮಾಹಿತಿ ಸಿಗಬಹುದು ಎಂಬ ನಿರೀಕ್ಷೆಯಿತ್ತು. ಆದರೆ ಬಿಡುಗಡೆಯಾದ ಸಾವಿರಾರು ಪುಟಗಳಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿಗಳು ಇಲ್ಲ. ಪ್ರಮುಖವಾಗಿ, ಸಂತ್ರಸ್ತರೊಂದಿಗಿನ ಎಫ್‌ಬಿಐ (FBI) ಸಂದರ್ಶನಗಳು ಮತ್ತು 2008ರಲ್ಲಿ ಎಪ್ಸ್ಟೀನ್‌ಗೆ ಕಡಿಮೆ ಶಿಕ್ಷೆಯಾಗಲು ಕಾರಣವಾದ ಒಪ್ಪಂದದ ಕುರಿತಾದ ಆಂತರಿಕ ಮೆಮೊಗಳು ಈ ದಾಖಲೆಗಳಲ್ಲಿ ಕಾಣುತ್ತಿಲ್ಲ.

ಬ್ರಿಟನ್‌ನ ರಾಜಕುಮಾರ ಆಂಡ್ರ್ಯೂ ಸೇರಿದಂತೆ ಎಪ್ಸ್ಟೀನ್ ಜೊತೆ ನಂಟು ಹೊಂದಿದ್ದ ಹಲವು ಪ್ರಬಲ ವ್ಯಕ್ತಿಗಳ ಉಲ್ಲೇಖಗಳು ದಾಖಲೆಗಳಲ್ಲಿ ತೀರಾ ಕಡಿಮೆ ಪ್ರಮಾಣದಲ್ಲಿವೆ. ಆದರೆ, ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರ ಈ ಹಿಂದೆ ನೋಡಿರದ ಕೆಲವು ಫೋಟೋಗಳು ಲಭ್ಯವಿದ್ದರೂ, ಟ್ರಂಪ್ ಅವರ ಫೋಟೋಗಳು ವಿರಳವಾಗಿವೆ. ಟ್ರಂಪ್ ಮತ್ತು ಕ್ಲಿಂಟನ್ ಇಬ್ಬರೂ ಎಪ್ಸ್ಟೀನ್ ಜೊತೆಗಿನ ಸ್ನೇಹವನ್ನು ಈಗಾಗಲೇ ತಳ್ಳಿಹಾಕಿದ್ದಾರೆ ಎಂಬುದು ಗಮನಾರ್ಹ.

ಸಂತ್ರಸ್ತರ ಆಕ್ರೋಶ

ನ್ಯಾಯಾಲಯದ ಆದೇಶವಿದ್ದರೂ ದಾಖಲೆಗಳನ್ನು ಪೂರ್ಣವಾಗಿ ಬಿಡುಗಡೆ ಮಾಡದಿರುವುದು ಮತ್ತು ಹಂತ ಹಂತವಾಗಿ ಬಿಡುಗಡೆ ಮಾಡುವುದಾಗಿ ಹೇಳಿರುವುದು ಎಪ್ಸ್ಟೀನ್ ಸಂತ್ರಸ್ತರ ಆಕ್ರೋಶಕ್ಕೆ ಕಾರಣವಾಗಿದೆ. ಹೆಸರುಗಳು ಮತ್ತು ಗುರುತನ್ನು ಮರೆಮಾಚುವ ಪ್ರಕ್ರಿಯೆಗೆ ಸಮಯ ಬೇಕಾಗುತ್ತದೆ ಎಂದು ಇಲಾಖೆ ಸಬೂಬು ನೀಡಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಸಂತ್ರಸ್ತೆ ಮರಿನಾ ಲಾಸೆರ್ಡಾ, "ನ್ಯಾಯಾಂಗ ಇಲಾಖೆ ಮತ್ತು ನ್ಯಾಯ ವ್ಯವಸ್ಥೆ ಮತ್ತೆ ನಮ್ಮನ್ನು ವಿಫಲಗೊಳಿಸುತ್ತಿದೆ ಎಂಬ ಭಾವನೆ ಕಾಡುತ್ತಿದೆ," ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಪಾರದರ್ಶಕತೆಗಾಗಿ ನಡೆದ ಸುದೀರ್ಘ ಹೋರಾಟದ ನಂತರವೂ, ಎಪ್ಸ್ಟೀನ್ ಪ್ರಕರಣದ ಸಂಪೂರ್ಣ ಸತ್ಯ ತಿಳಿಯಲು ಸಂತ್ರಸ್ತರು ಮತ್ತು ಸಾರ್ವಜನಿಕರು ಅನಿರ್ದಿಷ್ಟಾವಧಿ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

Read More
Next Story