
Plane Crash| ಕೊಲಂಬಿಯಾದಲ್ಲಿ ಸೇನಾ ವಿಮಾನ ಪತನ: ಸಾವಿನ ಸಂಖ್ಯೆ 66ಕ್ಕೆ ಏರಿಕೆ
ಕೊಲಂಬಿಯಾದಲ್ಲಿ 125 ಜನರನ್ನು ಹೊತ್ತೊಯ್ಯುತ್ತಿದ್ದ C-130 ಹರ್ಕ್ಯುಲಸ್ ಸೇನಾ ವಿಮಾನ ಪತನಗೊಂಡು 66 ಜನರು ಸಾವನ್ನಪ್ಪಿದ್ದಾರೆ. ಅಪಘಾತದ ವಿವರ ಮತ್ತು ಅಧ್ಯಕ್ಷರ ಪ್ರತಿಕ್ರಿಯೆ ಇಲ್ಲಿದೆ.
ದಕ್ಷಿಣ ಅಮೆರಿಕದ ಕೊಲಂಬಿಯಾದಲ್ಲಿ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ಕನಿಷ್ಠ 66 ಜನರು ಸಾವನ್ನಪ್ಪಿದ್ದಾರೆ ಮತ್ತು ಹತ್ತಾರು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. ನೈಋತ್ಯ ಕೊಲಂಬಿಯಾದಲ್ಲಿ ಸೋಮವಾರ ಮುಂಜಾನೆ 125 ಜನರನ್ನು ಹೊತ್ತೊಯ್ಯುತ್ತಿದ್ದ ಸೇನಾ ವಿಮಾನವು ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿದೆ.
ಸ್ಥಳೀಯ ಸರ್ಕಾರದ ಕಾರ್ಯದರ್ಶಿ ಕಾರ್ಲೋಸ್ ಕ್ಲಾರೋಸ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, "ಅಪಘಾತದಲ್ಲಿ 48 ಜನರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳಾಂತರಿಸುವ ಮತ್ತು ತುರ್ತು ಚಿಕಿತ್ಸೆ ನೀಡುವ ಕಾರ್ಯಗಳು ಭರದಿಂದ ಸಾಗಿವೆ" ಎಂದು ತಿಳಿಸಿದ್ದಾರೆ.
ಅಪಘಾತ ಸಂಭವಿಸಿದ್ದು ಹೇಗೆ?
ಲೋಕ್ಹೀಡ್ ಮಾರ್ಟಿನ್ ನಿರ್ಮಿತ C-130 ಹರ್ಕ್ಯುಲಸ್ (Hercules C-130) ಜೆಟ್ ವಿಮಾನವು ಪೆರು ದೇಶದ ಗಡಿಗೆ ಹೊಂದಿಕೊಂಡಿರುವ ಪೋರ್ಟೊ ಲೆಗುಯಿಜಾಮೊದಿಂದ ಟೇಕ್ ಆಫ್ ಆಗುತ್ತಿದ್ದಾಗ ಈ ದುರಂತ ಸಂಭವಿಸಿದೆ. ವಿಮಾನವು ಟೇಕ್ ಆಫ್ ಆದ ಕೆಲವೇ ಸೆಕೆಂಡುಗಳಲ್ಲಿ ದಿಢೀರನೆ ಕೆಳಮುಖವಾಗಿ ನುಗ್ಗಿ ಪತನಗೊಂಡ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ವರದಿಗಳ ಪ್ರಕಾರ, ಜನವಸತಿ ಪ್ರದೇಶದಿಂದ ಕೇವಲ 3 ಕಿಮೀ ದೂರದಲ್ಲಿರುವ ಅಮೆಜಾನ್ ಅರಣ್ಯ ಪ್ರದೇಶದಲ್ಲಿ ಈ ಅಪಘಾತ ನಡೆದಿದೆ.
ವಿಮಾನದಲ್ಲಿ ಒಟ್ಟು 114 ಪ್ರಯಾಣಿಕರು ಮತ್ತು 11 ಸಿಬ್ಬಂದಿ ಇದ್ದರು ಎಂದು ವಾಯುಪಡೆಯ ಕಮಾಂಡರ್ ಫೆರ್ನಾಂಡೊ ಸಿಲ್ವಾ ಮಾಹಿತಿ ನೀಡಿದ್ದಾರೆ. ಅಪಘಾತಕ್ಕೆ ನಿಖರವಾದ ತಾಂತ್ರಿಕ ಕಾರಣಗಳೇನು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.
ಅಧ್ಯಕ್ಷ ಗುಸ್ಟಾವೊ ಪೆಟ್ರೊ ಆಕ್ರೋಶ
ಈ ದುರಂತದ ಬೆನ್ನಲ್ಲೇ ಕೊಲಂಬಿಯಾದ ಅಧ್ಯಕ್ಷ ಗುಸ್ಟಾವೊ ಪೆಟ್ರೊ ಅವರು ತಮ್ಮ ಸರ್ಕಾರದ ಆಡಳಿತಾತ್ಮಕ ವಿಳಂಬದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಎಕ್ಸ್ (ಟ್ವಿಟರ್) ನಲ್ಲಿ ಪೋಸ್ಟ್ ಮಾಡಿರುವ ಅವರು, ಸೇನಾ ಪಡೆಗಳ ಶಸ್ತ್ರಾಸ್ತ್ರ ಮತ್ತು ವಿಮಾನಗಳ ಆಧುನೀಕರಣಕ್ಕೆ ನಾನು ವರ್ಷಗಳ ಹಿಂದೆಯೇ ನಿರ್ಧಾರ ಕೈಗೊಂಡಿದ್ದರೂ, ಅಧಿಕಾರಿಗಳ ವಿಳಂಬ ನೀತಿಯಿಂದಾಗಿ ಅದು ಜಾರಿಯಾಗಿಲ್ಲ ಎಂದು ಕಿಡಿಕಾರಿದ್ದಾರೆ.
ಆಧುನೀಕರಣದ ಯೋಜನೆಗಳಿಗೆ ಅನುಮೋದನೆ ನೀಡದಿದ್ದರೆ ಸಂಬಂಧಪಟ್ಟ ನಾಗರಿಕ ಅಥವಾ ಮಿಲಿಟರಿ ಆಡಳಿತ ಅಧಿಕಾರಿಗಳನ್ನು ತಕ್ಷಣವೇ ಹುದ್ದೆಯಿಂದ ತೆಗೆದುಹಾಕುವುದಾಗಿ ಅವರು ಎಚ್ಚರಿಸಿದ್ದಾರೆ. ರಕ್ಷಣಾ ಸಚಿವರು ಮತ್ತು ಯೋಜನಾ ನಿರ್ದೇಶಕರು ತಕ್ಷಣವೇ ತಮ್ಮನ್ನು ಭೇಟಿ ಮಾಡಿ, ಆಂಟಿ-ಡ್ರೋನ್ ಮತ್ತು ಹೊಸ ಶಸ್ತ್ರಾಸ್ತ್ರಗಳ ಖರೀದಿಗೆ ಅನುಮೋದನೆ ಪಡೆಯುವಂತೆ ಅವರು ಸೂಚಿಸಿದ್ದಾರೆ.
ದುರಂತ ನಡೆದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಸಾವಿನ ಸಂಖ್ಯೆ ಇನ್ನು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ.

