ದೆಹಲಿಯ ಅಫ್ಘಾನ್ ರಾಯಭಾರ ಕಚೇರಿಗೆ ತಾಲಿಬಾನ್ ಪ್ರತಿನಿಧಿ ಮುಫ್ತಿ ನೂರ್ ಆಗಮನ
x
ಮುಫ್ತಿ ನೂರ್ ಅಹ್ಮದ್ ನೂರ್

ದೆಹಲಿಯ ಅಫ್ಘಾನ್ ರಾಯಭಾರ ಕಚೇರಿಗೆ ತಾಲಿಬಾನ್ ಪ್ರತಿನಿಧಿ ಮುಫ್ತಿ ನೂರ್ ಆಗಮನ

ನವದೆಹಲಿಯಲ್ಲಿರುವ ಅಫ್ಘಾನಿಸ್ತಾನ ರಾಯಭಾರ ಕಚೇರಿಯ ಹೊಣೆಗಾರಿಕೆ ಹೊರಲು ತಾಲಿಬಾನ್ ನೇಮಿಸಿರುವ ರಾಜತಾಂತ್ರಿಕ ಅಧಿಕಾರಿ ಮುಫ್ತಿ ನೂರ್ ಅಹ್ಮದ್ ನೂರ್ ಭಾರತಕ್ಕೆ ಆಗಮಿಸಿದ್ದಾರೆ.


ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರದ ಹಿರಿಯ ಸದಸ್ಯ ಮುಫ್ತಿ ನೂರ್ ಅಹ್ಮದ್ ನೂರ್ ಅವರು ನವದೆಹಲಿಯಲ್ಲಿರುವ ಅಫ್ಘಾನಿಸ್ತಾನ ರಾಯಭಾರ ಕಚೇರಿಯ ಹೊಣೆಗಾರಿಕೆಯನ್ನು ವಹಿಸಿಕೊಂಡಿದ್ದಾರೆ. ಶನಿವಾರ ಭಾರತಕ್ಕೆ ಆಗಮಿಸಿದ ನೂರ್‌ ಅಹ್ಮದ್‌ ಇಂದಿನಿಂದಲೇ ಅವರು ತನ್ನ ಕರ್ತವ್ಯವನ್ನು ಆರಂಭಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯಾರು ಈ ಮುಫ್ತಿ ನೂರ್?

ಮುಫ್ತಿ ನೂರ್ ಅಹ್ಮದ್ ನೂರ್ ಅವರು ಈ ಹಿಂದೆ ಅಫ್ಘಾನಿಸ್ತಾನದ ವಿದೇಶಾಂಗ ಸಚಿವಾಲಯದಲ್ಲಿ ಮೊದಲ ರಾಜಕೀಯ ವಿಭಾಗದ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಕಳೆದ ಅಕ್ಟೋಬರ್‌ನಲ್ಲಿ ತಾಲಿಬಾನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಾಕಿ ನೇತೃತ್ವದಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ನಿಯೋಗದಲ್ಲಿ ಇವರು ಕೂಡ ಒಬ್ಬರಾಗಿದ್ದರು.

ಭಾರತ-ಅಫ್ಘಾನಿಸ್ತಾನ ದ್ವಿಪಕ್ಷೀಯ ಸಂಬಂಧ

ಕಳೆದ ಕೆಲವು ತಿಂಗಳುಗಳಿಂದ ಭಾರತ ಮತ್ತು ಅಫ್ಘಾನಿಸ್ತಾನದ ನಡುವಿನ ದ್ವಿಪಕ್ಷೀಯ ಸಂಬಂಧದಲ್ಲಿ ಸ್ಥಿರವಾದ ಸುಧಾರಣೆ ಕಂಡುಬರುತ್ತಿದೆ. ಅದರಲ್ಲೂ ವಿಶೇಷವಾಗಿ ಅಕ್ಟೋಬರ್‌ನಲ್ಲಿ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಾಕಿ ಅವರ ಏಳು ದಿನಗಳ ಭಾರತ ಭೇಟಿಯ ನಂತರ ಈ ಸಂಬಂಧ ಮತ್ತಷ್ಟು ಗಟ್ಟಿಯಾಗಿದೆ.

ಮುತ್ತಾಕಿ ತಮ್ಮ ಭೇಟಿಯ ಸಂದರ್ಭದಲ್ಲಿ "ಇದು ನಮ್ಮ ಧ್ವಜ. ನಾವು ಇದರ ಅಡಿಯಲ್ಲಿ ಜಿಹಾದ್ ಮಾಡಿದ್ದೇವೆ. ಇದು 100 ಪ್ರತಿಶತ ನಮ್ಮದೇ ರಾಯಭಾರ ಕಚೇರಿ" ಎಂದು ಅವರು ಹೇಳಿದ್ದರು. ಪ್ರಸ್ತುತ ರಾಯಭಾರ ಕಚೇರಿಯ ಹೊರಗೆ ಅಶ್ರಫ್ ಘನಿ ಸರ್ಕಾರದ ಹಳೆಯ ಧ್ವಜವೇ ಹಾರಾಡುತ್ತಿದ್ದರೂ, ಆಡಳಿತಾತ್ಮಕವಾಗಿ ತಾಲಿಬಾನ್ ತನ್ನ ಹಿಡಿತ ಸಾಧಿಸುತ್ತಿದೆ.

ಭಾರತದ ನಿಲುವು

ಭಾರತವು ಅಧಿಕೃತವಾಗಿ ತಾಲಿಬಾನ್ ಆಡಳಿತವನ್ನು ಇನ್ನೂ ಗುರುತಿಸಿಲ್ಲವಾದರೂ, ಅಫ್ಘಾನಿಸ್ತಾನಕ್ಕೆ ಮಾನವೀಯ ನೆರವು ಮತ್ತು ವೈದ್ಯಕೀಯ ಪೂರೈಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಈಗಾಗಲೇ ಮುಂಬೈ ಮತ್ತು ಹೈದರಾಬಾದ್‌ನಲ್ಲಿರುವ ಅಫ್ಘಾನ್ ಕಾನ್ಸುಲೇಟ್‌ಗಳನ್ನು ತಾಲಿಬಾನ್ ನೇಮಿಸಿದ ರಾಜತಾಂತ್ರಿಕರೇ ನಿರ್ವಹಿಸುತ್ತಿದ್ದಾರೆ.

ಈ ಹಿಂದೆ ಅಶ್ರಫ್ ಘನಿ ಸರ್ಕಾರ ನೇಮಿಸಿದ್ದ ಸೈಯದ್ ಮುಹಮ್ಮದ್ ಇಬ್ರಾಹಿಂ ಖಿಲ್ ಅವರು ನವದೆಹಲಿಯಲ್ಲಿ ಚಾರ್ಜ್ ಡಿ ಅಫೇರ್ಸ್ ಆಗಿದ್ದರು. ಈಗ ಅವರ ಸ್ಥಾನಕ್ಕೆ ಮುಫ್ತಿ ನೂರ್ ಅಹ್ಮದ್ ನೂರ್ ಬಂದಿದ್ದಾರೆ. ಉಭಯ ದೇಶಗಳ ನಡುವೆ ವ್ಯಾಪಾರ, ಇಂಧನ ಅಭಿವೃದ್ಧಿ ಮತ್ತು ಇರಾನ್‌ನಲ್ಲಿರುವ ಭಾರತ ನಿರ್ಮಿತ ಚಬಹಾರ್ ಬಂದರಿನ ಸಾಮರ್ಥ್ಯವನ್ನು ಬಳಸಿಕೊಳ್ಳುವ ಕುರಿತು ಸರಣಿ ಮಾತುಕತೆಗಳು ನಡೆಯುತ್ತಿವೆ.

Read More
Next Story