
ಸ್ವಿಟ್ಜರ್ಲೆಂಡ್‌ನಲ್ಲಿ ಹೊಸ ವರ್ಷದಂದೇ ಭಾರೀ ಸ್ಫೋಟ- ಕ್ಷಣ ಕ್ಷಣಕ್ಕೂ ಏರುತ್ತಿದೆ ಸಾವಿನ ಸಂಖ್ಯೆ
ಸ್ವಿಟ್ಜರ್ಲೆಂಡ್‌ನ ಕ್ರಾನ್ಸ್ ಮೊಂಟಾನಾ ಸ್ಕೀ ರೆಸಾರ್ಟ್‌ನ ಬಾರ್‌ನಲ್ಲಿ ಭೀಕರ ಸ್ಫೋಟ ಸಂಭವಿಸಿದ್ದು, 10ಕ್ಕೂ ಹೆಚ್ಚು ಪ್ರವಾಸಿಗರ ಮೃತಪಟ್ಟಿದ್ದಾರೆ. 100ಕ್ಕೂ ಹೆಚ್ಚು ಮಂದಿಗೆ ಗಾಯಗೊಂಡಿದ್ದಾರೆ.
ಹೊಸ ವರ್ಷದ ಸಂಭ್ರಮಾಚರಣೆಯಲ್ಲಿದ್ದ ಸ್ವಿಟ್ಜರ್ಲೆಂಡ್‌ನ ಐಷಾರಾಮಿ ಪಟ್ಟಣವಾದ ಕ್ರಾನ್ಸ್ ಮೊಂಟಾನಾದಲ್ಲಿ ಗುರುವಾರ (ಜನವರಿ 1) ಮುಂಜಾನೆ ಭೀಕರ ಸ್ಫೋಟ ಸಂಭವಿಸಿದೆ. ಇಲ್ಲಿನ 'ಲೆ ಕಾನ್‌ಸ್ಟೆಲೇಶನ್' ಎಂಬ ಬಾರ್‌ನಲ್ಲಿ ನಡೆದ ಈ ದುರಂತದಲ್ಲಿ ಹತ್ತಕ್ಕೂ ಹೆಚ್ಚು ಜನ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಇನ್ನು ಸಾವಿನ ಸಂಖ್ಯೆ ಕ್ಷಣ ಕ್ಷಣಕ್ಕೂ ಏರಿಕೆ ಆಗುತ್ತಿದ್ದು, ಹಲವರು ಮೃತಪಟ್ಟಿರುವ ಭೀತಿ ಎದುರಾಗಿದೆ ಎಂದು ಸ್ವಿಟ್ಜರ್ಲೆಂಡ್‌ನ ಪ್ರಾದೇಶಿಕ ದಿನಪತ್ರಿಕೆ 'ಲೆ ನೌವೆಲಿಸ್ಟ್' ವರದಿ ಮಾಡಿದೆ.
ಸಂಭ್ರಮಾಚರಣೆ ನಡುವೆ ಭೀಕರ ಘಟನೆ
ಪೊಲೀಸ್ ವಕ್ತಾರ ಗೇಟನ್ ಲಥಿಯಾನ್ ನೀಡಿರುವ ಮಾಹಿತಿಯ ಪ್ರಕಾರ, ಮುಂಜಾನೆ ಸುಮಾರು 1:30ರ ವೇಳೆಗೆ ಬಾರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. "ಸ್ಫೋಟ ಸಂಭವಿಸಿದಾಗ ಕಟ್ಟಡದೊಳಗೆ 100ಕ್ಕೂ ಹೆಚ್ಚು ಜನರಿದ್ದರು. ಅನೇಕರು ಸಾವನ್ನಪ್ಪಿದ್ದಾರೆ ಮತ್ತು ಹತ್ತಾರು ಜನರು ಗಾಯಗೊಂಡಿದ್ದಾರೆ," ಎಂದು ಅವರು ತಿಳಿಸಿದ್ದಾರೆ. ಹಾನಿಗೊಳಗಾದ ಕುಟುಂಬಗಳಿಗೆ ನೆರವಾಗಲು ಸಹಾಯವಾಣಿ ಮತ್ತು ಸ್ವಾಗತ ಕೇಂದ್ರವನ್ನು ಸ್ಥಾಪಿಸಲಾಗಿದೆ.
ಘಟನಾ ಸ್ಥಳದ ವಿಡಿಯೊ ಇಲ್ಲಿದೆ
ಪ್ರವಾಸಿಗರೇ ಹೆಚ್ಚು ಸಾವು
ಸ್ವಿಟ್ಜರ್ಲೆಂಡ್‌ನ ಆಲ್ಪ್ಸ್ ಪರ್ವತ ಶ್ರೇಣಿಯ ಹೃದಯಭಾಗದಲ್ಲಿರುವ ಈ ರೆಸಾರ್ಟ್ ವಿಶ್ವಪ್ರಸಿದ್ಧ ಪ್ರವಾಸಿ ತಾಣವಾಗಿದೆ. ರಜಾದಿನಗಳನ್ನು ಕಳೆಯಲು ಬಂದಿದ್ದ ವಿದೇಶಿ ಪ್ರವಾಸಿಗರೇ ಈ ದುರಂತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ. ಸ್ಫೋಟದ ತೀವ್ರತೆಗೆ ಕಟ್ಟಡದ ಬೇಸ್‌ಮೆಂಟ್‌ನಲ್ಲಿ ಭಾರಿ ಹಾನಿಯಾಗಿದೆ.
ಪಟಾಕಿ ಸಿಡಿಸಿದ್ದೇ ಕಾರಣ?
ಸ್ಫೋಟಕ್ಕೆ ನಿಖರ ಕಾರಣವೇನು ಎಂಬುದು ಇನ್ನೂ ತನಿಖೆಯ ಹಂತದಲ್ಲಿದೆ. ಆದರೆ, ಸ್ವಿಟ್ಜರ್ಲೆಂಡ್‌ನ ಮಾಧ್ಯಮವೊಂದರ ವರದಿ ಪ್ರಕಾರ, ಬಾರ್‌ನಲ್ಲಿ ನಡೆಯುತ್ತಿದ್ದ ಸಂಗೀತ ಕಚೇರಿಯ ವೇಳೆ ಪಟಾಕಿಗಳನ್ನು ಸಿಡಿಸಿದ್ದೇ ಈ ಅನಾಹುತಕ್ಕೆ ಕಾರಣವಿರಬಹುದು ಎಂದು ಶಂಕಿಸಲಾಗಿದೆ. ಪೈರೋಟೆಕ್ನಿಕ್ಸ್ ಸರಿಯಾಗಿ ನಿರ್ವಹಿಸದ ಕಾರಣ ಈ ದುರಂತ ಸಂಭವಿಸಿರುವ ಸಾಧ್ಯತೆಯಿದೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ. ಕೆಲವು ಸ್ಥಳೀಯ ಮಾಧ್ಯಮಗಳ ಪ್ರಕಾರ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆಯಾದರೂ, ಅಧಿಕಾರಿಗಳು ಇದನ್ನು ಇನ್ನೂ ಖಚಿತಪಡಿಸಿಲ್ಲ.
ರಕ್ಷಣಾ ಕಾರ್ಯಾಚರಣೆ ಚುರುಕು
ಘಟನಾ ಸ್ಥಳಕ್ಕೆ ಹಲವಾರು ಹೆಲಿಕಾಪ್ಟರ್‌ಗಳು, ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿಯನ್ನು ರವಾನಿಸಲಾಗಿದೆ. ಪ್ರಸ್ತುತ ರಕ್ಷಣಾ ಕಾರ್ಯ ಮುಂದುವರಿದಿದ್ದು, ಸ್ಫೋಟದ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

