
ಸ್ವಿಟ್ಜರ್ಲೆಂಡ್‌ನಲ್ಲಿ ಅಗ್ನಿ ದುರಂತ: ಸಾವಿನ ಸಂಖ್ಯೆ 40ಕ್ಕೆ ಏರಿಕೆ, 5 ದಿನಗಳ ಶೋಕಾಚರಣೆ
ಸ್ವಿಟ್ಜರ್ಲೆಂಡ್‌ನ ಕ್ರಾನ್ಸ್-ಮೊಂಟಾನಾ ರೆಸಾರ್ಟ್ ಬಾರ್‌ನಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ 40 ಪ್ರವಾಸಿಗರು ಮೃತಪಟ್ಟಿದ್ದಾರೆ. 5 ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಿಸಲಾಗಿದೆ.
ಹೊಸ ವರ್ಷದ ಸಂಭ್ರಮಾಚರಣೆಯ ವೇಳೆ ಸ್ವಿಟ್ಜರ್ಲೆಂಡ್‌ನ ಐಷಾರಾಮಿ ಸ್ಕೀ ರೆಸಾರ್ಟ್‌ನ ಬಾರ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಸಾವಿನ ಸಂಖ್ಯೆ 40ಕ್ಕೆ ಏರಿಕೆಯಾಗಿದೆ. ಘಟನೆಯಲ್ಲಿ 115ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದು, ಮೃತರ ಸಂಖ್ಯೆ ಇನ್ನೂ ಹೆಚ್ಚಾಗುವ ಆತಂಕವಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದುರಂತದ ಹಿನ್ನೆಲೆ
ಗುರುವಾರ (ಜನವರಿ 1) ಮಧ್ಯರಾತ್ರಿ 2 ಗಂಟೆಯ ಸುಮಾರಿಗೆ ಕ್ರಾನ್ಸ್-ಮೊಂಟಾನಾ ರೆಸಾರ್ಟ್‌ನ 'ಲೆ ಕಾನ್‌ಸ್ಟೆಲೇಶನ್' ಬಾರ್‌ನಲ್ಲಿ ಈ ಬೆಂಕಿ ಕಾಣಿಸಿಕೊಂಡಿತ್ತು. ಮೃತಪಟ್ಟವರಲ್ಲಿ ಹೆಚ್ಚಿನವರು ವಿದೇಶಿ ಪ್ರವಾಸಿಗರು. ಗಾಯಗೊಂಡವರಲ್ಲಿ 13 ಜನರು ಇಟಲಿ ಪ್ರಜೆಗಳಾಗಿದ್ದಾರೆ ಮತ್ತು ಇತರ 6 ಇಟಾಲಿಯನ್ ಪ್ರಜೆಗಳು ನಾಪತ್ತೆಯಾಗಿದ್ದಾರೆ ಎಂದು ಇಟಲಿ ರಾಯಭಾರಿ ತಿಳಿಸಿದ್ದಾರೆ.
ಬೆಂಕಿ ದುರಂತದ ವಿಡಿಯೊ
ದೇಶಾದ್ಯಂತ 5 ದಿನಗಳ ಕಾಲ ಶೋಕಾಚರಣೆ
ಇದು ಸ್ವಿಟ್ಜರ್ಲೆಂಡ್ ಇತಿಹಾಸದ ಅತ್ಯಂತ ಕೆಟ್ಟ ದುರಂತಗಳಲ್ಲಿ ಒಂದಾಗಿದ್ದು, ದೇಶಾದ್ಯಂತ 5 ದಿನಗಳ ಕಾಲ ಶೋಕಾಚರಣೆ ಘೋಷಿಸಲಾಗಿದೆ.
ತನಿಖೆಯ ಹಂತ
ವಲೈಸ್ ಕ್ಯಾಂಟನ್ ಪೊಲೀಸ್ ಕಮಾಂಡರ್ ಫ್ರೆಡೆರಿಕ್ ಗಿಸ್ಲರ್ ಮಾತನಾಡಿ, "ಬಲಿಪಶುಗಳ ಗುರುತು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ, ಇಡೀ ಸಮುದಾಯವೇ ಈ ಘಟನೆಯಿಂದ ಸ್ತಬ್ದಗೊಂಡಿದೆ" ಎಂದಿದ್ದಾರೆ. ಅಟಾರ್ನಿ ಜನರಲ್ ಬೀಟ್ರಿಸ್ ಪಿಲ್ಲೌಡ್ ಅವರು, "ಇದು ಯಾವುದೇ ರೀತಿಯ ದಾಳಿಯಲ್ಲ. ಬೆಂಕಿ ಅವಘಡಕ್ಕೆ ನಿಖರ ಕಾರಣ ಏನೆಂಬುದು ಇನ್ನೂ ತಿಳಿದುಬಂದಿಲ್ಲ," ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರತ್ಯಕ್ಷದರ್ಶಿ ಹೇಳಿದಿಷ್ಟು
ದುರಂತದಿಂದ ಪಾರಾದ ಪ್ಯಾರಿಸ್‌ನ 16 ವರ್ಷದ ಅಕ್ಷೆಲ್ ಕ್ಲಾವಿಯರ್ ಎಂಬ ಯುವಕ ಅಲ್ಲಿನ ಪರಿಸ್ಥಿತಿಯನ್ನು ವಿವರಿಸಿದ್ದಾನೆ. "ಬಾರ್ ಒಳಗೆ ಸಂಪೂರ್ಣ ಗೊಂದಲ ನಿರ್ಮಾಣವಾಗಿತ್ತು. ನನ್ನ ಒಬ್ಬ ಸ್ನೇಹಿತ ಸಾವನ್ನಪ್ಪಿದ್ದಾನೆ ಮತ್ತು ಇಬ್ಬರು ನಾಪತ್ತೆಯಾಗಿದ್ದಾರೆ. ವೈಟ್ರೆಸ್‌ಗಳು ಸ್ಪಾರ್ಕ್ಲರ್‌ಗಳಿರುವ (ಕಿಡಿ ಹೊಮ್ಮುವ ಪಟಾಕಿ) ಶಾಂಪೇನ್ ಬಾಟಲಿಗಳೊಂದಿಗೆ ಬರುತ್ತಿದ್ದನ್ನು ನಾನು ನೋಡಿದೆ," ಎಂದು ಆತ ತಿಳಿಸಿದ್ದಾನೆ. ಬೆಂಕಿ ಹತ್ತಿಕೊಳ್ಳಲು ಈ ಸ್ಪಾರ್ಕ್ಲರ್‌ಗಳೇ ಕಾರಣವೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.
ಆಸ್ಪತ್ರೆಯಲ್ಲಿ ದಾಖಲಾಗಿರುವ 115 ಜನರಲ್ಲಿ ಸುಮಾರು 50ಕ್ಕೂ ಹೆಚ್ಚು ಜನರ ಸ್ಥಿತಿ ಅತ್ಯಂತ ಗಂಭೀರವಾಗಿದೆ. ಬೆಂಕಿಯ ಜ್ವಾಲೆಗಿಂತ ಹೆಚ್ಚಾಗಿ, ಬೇಸ್‌ಮೆಂಟ್‌ನಲ್ಲಿ ಉಂಟಾದ ದಟ್ಟವಾದ ಹೊಗೆಯನ್ನು ಉಸಿರಾಡಿದ್ದರಿಂದ ಹೆಚ್ಚಿನವರಿಗೆ ಶ್ವಾಸಕೋಶದ ಸಮಸ್ಯೆ ಮತ್ತು ಸುಟ್ಟ ಗಾಯಗಳಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ.
ಮೃತರ ಗುರುತು ಪತ್ತೆಯೇ ಬಹುದೊಡ್ಡ ಸವಾಲು
ಪೊಲೀಸ್ ಕಮಾಂಡರ್ ಫ್ರೆಡೆರಿಕ್ ಗಿಸ್ಲರ್ ಅವರ ಪ್ರಕಾರ, ಮೃತರ ಗುರುತು ಪತ್ತೆ ಹಚ್ಚುವುದು ದೊಡ್ಡ ಸವಾಲಾಗಿದೆ. ಮೃತರಲ್ಲಿ ಹೆಚ್ಚಿನವರು ಹದಿಹರೆಯದವರು ಮತ್ತು ಯುವಕರು. ಅನೇಕರು ವಿದೇಶಿ ಪ್ರವಾಸಿಗರಾಗಿರುವುದರಿಂದ ಅವರ ಡಿಎನ್‌ಎ (DNA) ಪರೀಕ್ಷೆ ಅಥವಾ ಹಲ್ಲಿನ ದಾಖಲೆಗಳ (Dental records) ಮೂಲಕ ಗುರುತು ಪತ್ತೆ ಹಚ್ಚಬೇಕಿದೆ. ಈ ಪ್ರಕ್ರಿಯೆಗೆ ಕನಿಷ್ಠ ಒಂದು ವಾರ ಹಿಡಿಯಬಹುದು.

