Bangladeshi youth leader Hadi murder case: Two suspects flee to India
x

ಶಂಕಿತರನ್ನು ಬಂಧಿಸಬೇಕು ಎಂದು ಮೃತ ಉಸ್ಮಾನ್‌ ಹಾದಿ ಬೆಂಬಲಿಗರು ಪ್ರತಿಭಟನೆ ನಡೆಸಿದರು.

ಬಾಂಗ್ಲಾದ ಯುವ ನಾಯಕ ಹಾದಿ ಹತ್ಯೆ ಪ್ರಕರಣ: ಇಬ್ಬರು ಶಂಕಿತರು ಭಾರತಕ್ಕೆ ಪಲಾಯನ

ಬಾಂಗ್ಲಾ ಪೊಲೀಸರ ಮಾಹಿತಿಯ ಪ್ರಕಾರ, ಗಡಿ ದಾಟಿದ ಶಂಕಿತರನ್ನು ಭಾರತದಲ್ಲಿ ವ್ಯಕ್ತಿಯೊಬ್ಬ ಬರಮಾಡಿಕೊಂಡಿದ್ದಾನೆ. ನಂತರ ಸಾಮಿ ಎಂಬ ಟ್ಯಾಕ್ಸಿ ಚಾಲಕನ ಸಹಾಯದೊಂದಿಗೆ ಇವರನ್ನು ಮೇಘಾಲಯದ ತುರಾ ನಗರಕ್ಕೆ ಕರೆದೊಯ್ಯಲಾಗಿದೆ ಎಂದು ಹೇಳಿದ್ದಾರೆ.


Click the Play button to hear this message in audio format

ಬಾಂಗ್ಲಾದೇಶದ ಪ್ರಭಾವಿ ರಾಜಕೀಯ ಕಾರ್ಯಕರ್ತ ಮತ್ತು 'ಇಂಕಿಲಾಬ್ ಮಂಚ್​' ವೇದಿಕೆಯ ಸಂಸ್ಥಾಪಕ ಶರೀಫ್ ಉಸ್ಮಾನ್ ಹಾದಿ ಹತ್ಯೆ ಪ್ರಕರಣದಲ್ಲಿ ಮಹತ್ವದ ತಿರುವು ಸಿಕ್ಕಿದೆ. ಈ ಕೃತ್ಯದ ಪ್ರಮುಖ ಶಂಕಿತರು ಗಡಿ ದಾಟಿ ಭಾರತದ ಮೇಘಾಲಯ ರಾಜ್ಯದಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಢಾಕಾ ಮೆಟ್ರೋಪಾಲಿಟನ್ ಪೊಲೀಸ್ (DMP) ಭಾನುವಾರ (ಡಿ. 28) ಖಚಿತಪಡಿಸಿದೆ.

ಅಪರ ಕಮಿಷನರ್ ಎಸ್.ಎನ್. ನಜ್ರುಲ್ ಅವರು ಢಾಕಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ್ದು, ಶಂಕಿತರಾದ ಫೈಸಲ್ ಕರೀಮ್ ಮಸೂದ್ ಮತ್ತು ಆಲಂಗೀರ್ ಶೇಖ್ ಎಂಬುವವರು ಮೈಮನ್‌ಸಿಂಗ್‌ನ ಹಲುವಾಘಾಟ್ ಗಡಿಯ ಮೂಲಕ ಭಾರತವನ್ನು ಪ್ರವೇಶಿಸಿದ್ದಾರೆ ಎಂದು ತಿಳಿಸಿದ್ದಾರೆ.

ಮೇಘಾಲಯದ ತುರಾ ನಗರದಲ್ಲಿ ಶಂಕಿತರು?

ಬಾಂಗ್ಲಾ ಪೊಲೀಸರ ಮಾಹಿತಿಯ ಪ್ರಕಾರ, ಗಡಿ ದಾಟಿದ ಶಂಕಿತರನ್ನು ಭಾರತದಲ್ಲಿ ವ್ಯಕ್ತಿಯೊಬ್ಬ ಬರಮಾಡಿಕೊಂಡಿದ್ದಾನೆ. ನಂತರ ಸಾಮಿ ಎಂಬ ಟ್ಯಾಕ್ಸಿ ಚಾಲಕನ ಸಹಾಯದೊಂದಿಗೆ ಇವರನ್ನು ಮೇಘಾಲಯದ ತುರಾ ನಗರಕ್ಕೆ ಕರೆದೊಯ್ಯಲಾಗಿದೆ. ಅನಧಿಕೃತ ಮೂಲಗಳ ಪ್ರಕಾರ, ಈ ಪೂರ್ತಿ ಮತ್ತು ಸಾಮಿ ಎಂಬುವವರನ್ನು ಈಗಾಗಲೇ ಭಾರತೀಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ನಜ್ರುಲ್ ತಿಳಿಸಿದ್ದಾರೆ. ಶಂಕಿತರ ಪತ್ತೆ ಮತ್ತು ಅವರನ್ನು ಬಾಂಗ್ಲಾದೇಶಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಯ ಕುರಿತು ಭಾರತೀಯ ಅಧಿಕಾರಿಗಳೊಂದಿಗೆ ಬಾಂಗ್ಲಾ ಸರ್ಕಾರವು ನಿರಂತರ ಸಂಪರ್ಕದಲ್ಲಿದೆ.

ಯಾರು ಈ ಹಾದಿ? ಹತ್ಯೆಯ ಹಿಂದಿನ ಕಾರಣವೇನು?

31 ವರ್ಷದ ಶರೀಫ್ ಉಸ್ಮಾನ್ ಹಾದಿ ಬಾಂಗ್ಲಾದೇಶದ ರಾಜಕೀಯದಲ್ಲಿ ಉದಯೋನ್ಮುಖ ನಾಯಕನಾಗಿದ್ದರು. 2024ರ ಜುಲೈನಲ್ಲಿ ನಡೆದ ಐತಿಹಾಸಿಕ 'ಜುಲೈ ಕ್ರಾಂತಿ'ಯಲ್ಲಿ ಅವರು ಮುಂಚೂಣಿಯಲ್ಲಿದ್ದರು. ಭಾರತದ ವಿರೋಧಿ ನಿಲುವು ಮತ್ತು ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್ ಸರ್ಕಾರದ ಕಟು ಟೀಕಾಕಾರರಾಗಿದ್ದ ಇವರು, 2026ರ ಫೆಬ್ರವರಿಯಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿದ್ದರು.

ಡಿಸೆಂಬರ್ 12 ರಂದು ಢಾಕಾದಲ್ಲಿ ಇ-ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದಾಗ ಬೈಕ್‌ನಲ್ಲಿ ಬಂದ ಮುಖವಾಡಧಾರಿ ಹಂತಕರು ಹಾದಿ ಅವರ ತಲೆಗೆ ಗುಂಡು ಹಾರಿಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅವರು ಸಿಂಗಾಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಡಿಸೆಂಬರ್ 18 ರಂದು ನಿಧನ ಹೊಂದಿದ್ದರು.

ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ

ಹಾದಿ ಅವರ ಹತ್ಯೆಯು ಬಾಂಗ್ಲಾದೇಶದಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಅವರ ಅಂತ್ಯಕ್ರಿಯೆಯಲ್ಲಿ ಲಕ್ಷಾಂತರ ಜನರು ಪಾಲ್ಗೊಂಡಿದ್ದರು. ಉದ್ರಿಕ್ತ ಗುಂಪುಗಳು 'ದಿ ಡೈಲಿ ಸ್ಟಾರ್' ಮತ್ತು 'ಪ್ರಥಮ್ ಅಲೋ' ಅಂತಹ ಪ್ರಮುಖ ಪತ್ರಿಕಾ ಕಚೇರಿಗಳ ಮೇಲೆ ದಾಳಿ ನಡೆಸಿ ಬೆಂಕಿ ಹಚ್ಚಿದ್ದವು. ಇದೇ ಅವಧಿಯಲ್ಲಿ ಮೈಮನ್‌ಸಿಂಗ್‌ನಲ್ಲಿ ದೀಪು ಚಂದ್ರ ದಾಸ್ ಎಂಬ ಹಿಂದೂ ಕಾರ್ಖಾನೆ ಕಾರ್ಮಿಕನ ಮೇಲೆ ನಡೆದ ದಾಳಿ ಮತ್ತು ಹತ್ಯೆಯು ಪರಿಸ್ಥಿತಿಯನ್ನು ಮತ್ತಷ್ಟು ವಿಷಮಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಹಾದಿ ಹತ್ಯೆ ಪ್ರಕರಣದ ಶಂಕಿತರ ಬಂಧನವು ಎರಡೂ ರಾಷ್ಟ್ರಗಳ ನಡುವಿನ ಭದ್ರತಾ ಸಹಕಾರಕ್ಕೆ ಪರೀಕ್ಷೆಯಾಗಿ ಪರಿಣಮಿಸಿದೆ

Read More
Next Story