ಅಮೆರಿಕದಲ್ಲಿ ಪೊಲೀಸ್‌ ವಾಹನ ಡಿಕ್ಕಿಯಾಗಿ ಬಲಿಯಾಗಿದ್ದ ಯುವತಿ ಕುಟುಂಬಕ್ಕೆ 265 ಕೋಟಿ ರೂ. ಪರಿಹಾರ
x
ಅಮೆರಿಕದಲ್ಲಿ ಮೃತಪಟ್ಟಿದ್ದ ಭಾರತೀಯ ವಿದ್ಯಾರ್ಥಿನಿ ಜಾಹ್ನವಿ ಕಂಡೂಲಾ

ಅಮೆರಿಕದಲ್ಲಿ ಪೊಲೀಸ್‌ ವಾಹನ ಡಿಕ್ಕಿಯಾಗಿ ಬಲಿಯಾಗಿದ್ದ ಯುವತಿ ಕುಟುಂಬಕ್ಕೆ 265 ಕೋಟಿ ರೂ. ಪರಿಹಾರ

2023ರ ಜನವರಿಯಲ್ಲಿ ಈಶಾನ್ಯ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಜಾಹ್ನವಿ ಕಂಡೂಲಾ ರಸ್ತೆ ದಾಟುತ್ತಿದ್ದಾಗ, ಅತೀ ವೇಗವಾಗಿ ಬಂದ ಸಿಯಾಟಲ್ ಪೊಲೀಸ್ ಅಧಿಕಾರಿ ಕೆವಿನ್ ಡೇವ್ ಅವರ ವಾಹನ ಡಿಕ್ಕಿ ಹೊಡೆದಿತ್ತು.


ಅಮೆರಿಕದ ಸಿಯಾಟಲ್‌ನಲ್ಲಿ ಪೊಲೀಸ್ ವಾಹನ ಡಿಕ್ಕಿ ಹೊಡೆದು ಮೃತಪಟ್ಟಿದ್ದ ಭಾರತೀಯ ವಿದ್ಯಾರ್ಥಿನಿ ಜಾಹ್ನವಿ ಕಂಡೂಲಾ ಅವರ ಕುಟುಂಬಕ್ಕೆ ಸುಮಾರು 265 ಕೋಟಿ ರೂಪಾಯಿ (29 ಮಿಲಿಯನ್ ಡಾಲರ್) ಪರಿಹಾರ ನೀಡಲು ಸಿಯಾಟಲ್ ನಗರ ಆಡಳಿತ ಒಪ್ಪಿಕೊಂಡಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಕ್ರೋಶ ಮೂಡಿಸಿದ್ದ ಈ ಪ್ರಕರಣಕ್ಕೆ ಈ ಮೂಲಕ ಒಂದು ಹಂತದ ತಾರ್ಕಿಕ ಅಂತ್ಯ ಸಿಕ್ಕಂತಾಗಿದೆ.

ಘಟನೆಯ ಹಿನ್ನೆಲೆ

2023ರಲ್ಲಿ ಈಶಾನ್ಯ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ 23 ವರ್ಷದ ಜಾಹ್ನವಿ ಕಂಡೂಲಾ ರಸ್ತೆ ದಾಟುತ್ತಿದ್ದಾಗ, ಅತೀ ವೇಗವಾಗಿ ಬಂದ ಸಿಯಾಟಲ್ ಪೊಲೀಸ್ ಅಧಿಕಾರಿ ಕೆವಿನ್ ಡೇವ್ ಅವರ ವಾಹನ ಡಿಕ್ಕಿ ಹೊಡೆದಿತ್ತು. ಡ್ರಗ್ ಓವರ್‌ಡೋಸ್ ಪ್ರಕರಣವೊಂದ ವಿಚಾರಣೆಗೆಂದು ಘಟನಾ ಸ್ಥಳಕ್ಕೆ ಹೋಗುತ್ತಿದ್ದ ಅಧಿಕಾರಿ, ಗಂಟೆಗೆ 40 ಕಿ.ಮೀ ವೇಗ ಮಿತಿ ಇರುವ ಜಾಗದಲ್ಲಿ ಬರೋಬ್ಬರಿ 119 ಕಿ.ಮೀ ವೇಗದಲ್ಲಿ ವಾಹನ ಚಲಾಯಿಸುತ್ತಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿತ್ತು.

ವಿವಾದಕ್ಕೆ ಕಾರಣವಾದ ಅಧಿಕಾರಿಯ ಮಾತು

ಈ ಪ್ರಕರಣವು ಜಾಗತಿಕ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಲು ಮತ್ತೊಬ್ಬ ಪೊಲೀಸ್ ಅಧಿಕಾರಿ ಡೇನಿಯಲ್ ಆಡರರ್ ಅವರ ಬಾಡಿ ಕ್ಯಾಮೆರಾ ದೃಶ್ಯಾವಳಿ ಕಾರಣವಾಗಿತ್ತು. ಅಪಘಾತದ ನಂತರ ನಗುತ್ತಾ ಮಾತನಾಡಿದ್ದ ಆತ, "ಜಾಹ್ನವಿ ಜೀವಕ್ಕೆ ಒಂದು ಮೌಲ್ಯವಿದೆ, ನಗರವು ಕೇವಲ ಒಂದು ಚೆಕ್ ಬರೆದುಕೊಟ್ಟರೆ ಸಾಕು" ಎಂದು ಹೇಳಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಭಾರತ ಸರ್ಕಾರ ಕೂಡ ಈ ಬಗ್ಗೆ ಅತೀ ಹೆಚ್ಚು ಕಳವಳ ವ್ಯಕ್ತಪಡಿಸಿತ್ತು.

ಪರಿಹಾರ ಮತ್ತು ಕ್ರಮಗಳು

ಒಟ್ಟು 29 ಮಿಲಿಯನ್ ಡಾಲರ್ ಪರಿಹಾರದಲ್ಲಿ ಸುಮಾರು 20 ಮಿಲಿಯನ್ ಡಾಲರ್ ಅನ್ನು ನಗರದ ವಿಮಾ ಕಂಪನಿ ಭರಿಸಲಿದೆ. "ಜಾಹ್ನವಿ ಅವರ ಸಾವು ಹೃದಯವಿದ್ರಾವಕ. ಈ ಹಣಕಾಸಿನ ಪರಿಹಾರವು ಅವರ ಕುಟುಂಬಕ್ಕೆ ಸ್ವಲ್ಪ ಮಟ್ಟದ ನೆಮ್ಮದಿ ನೀಡಲಿ ಎಂದು ಆಶಿಸುತ್ತೇವೆ. ಜಾಹ್ನವಿ ಅವರ ಜೀವನ ನಮಗೆ ಅಮೂಲ್ಯವಾಗಿತ್ತು" ಎಂದು ನಗರದ ಅಟಾರ್ನಿ ಎರಿಕಾ ಇವಾನ್ಸ್ ತಿಳಿಸಿದ್ದಾರೆ.

ಅಧಿಕಾರಿಗಳ ವಿರುದ್ಧ ಕ್ರಮ

ವಿವಾದಾತ್ಮಕ ಹೇಳಿಕೆ ನೀಡಿದ್ದ ಡೇನಿಯಲ್ ಆಡರರ್ ಅವರನ್ನು ಕೆಲಸದಿಂದ ವಜಾ ಮಾಡಲಾಗಿದೆ. ಅಪಘಾತಕ್ಕೆ ಕಾರಣವಾದ ಕೆವಿನ್ ಡೇವ್ ಅವರನ್ನು ಕೂಡ ಕೆಲಸದಿಂದ ತೆಗೆದುಹಾಕಲಾಗಿದ್ದು, ನಿರ್ಲಕ್ಷ್ಯದ ಚಾಲನೆಗಾಗಿ 5,000 ಡಾಲರ್ ದಂಡ ವಿಧಿಸಲಾಗಿದೆ. ಆದರೆ, ಪ್ರಾಸಿಕ್ಯೂಟರ್‌ಗಳು ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲು ನಿರಾಕರಿಸಿದ್ದಾರೆ.

Read More
Next Story