ಭಾರತ-ಅಮೆರಿಕ ವ್ಯಾಪಾರ ಒಪ್ಪಂದದಲ್ಲಿ ಮಹತ್ವದ ಬದಲಾವಣೆ; ಪರಿಷ್ಕೃತ ಪಟ್ಟಿ ಬಿಡುಗಡೆ
x
ಭಾರತ- ಅಮೆರಿಕ ವ್ಯಾಪಾರ ಒಪ್ಪಂದ

ಭಾರತ-ಅಮೆರಿಕ ವ್ಯಾಪಾರ ಒಪ್ಪಂದದಲ್ಲಿ ಮಹತ್ವದ ಬದಲಾವಣೆ; ಪರಿಷ್ಕೃತ ಪಟ್ಟಿ ಬಿಡುಗಡೆ

ಭಾರತ ಮತ್ತು ಅಮೆರಿಕ ನಡುವಿನ ಐತಿಹಾಸಿಕ ವ್ಯಾಪಾರ ಒಪ್ಪಂದದಲ್ಲಿ ಶ್ವೇತಭವನ ಮಹತ್ವದ ಬದಲಾವಣೆ ಮಾಡಿದೆ. ಅಮೆರಿಕನ್ ಬೇಳೆಕಾಳುಗಳ ಮೇಲಿನ ಸುಂಕ ಕಡಿತದ ಪ್ರಸ್ತಾವನೆಯನ್ನು ಕೈಬಿಡಲಾಗಿದೆ.


ಭಾರತ ಮತ್ತು ಅಮೆರಿಕ ನಡುವೆ ಇತ್ತೀಚೆಗೆ ಘೋಷಿಸಲಾದ ಐತಿಹಾಸಿಕ ಮಧ್ಯಂತರ ವ್ಯಾಪಾರ ಒಪ್ಪಂದದ ಕುರಿತು ಶ್ವೇತಭವನವು ತನ್ನ ಅಧಿಕೃತ ಮಾಹಿತಿಯಲ್ಲಿ ಮಹತ್ವದ ತಿದ್ದುಪಡಿ ಮಾಡಿದೆ. ಆರಂಭದಲ್ಲಿ ನೀಡಿದ್ದ ಪಟ್ಟಿಯಿಂದ "ಬೇಳೆಕಾಳುಗಳನ್ನು” ಕೈಬಿಡಲಾಗಿದ್ದು, ಕೆಲವು ಪದಪ್ರಯೋಗಗಳಲ್ಲೂ ಬದಲಾವಣೆ ಮಾಡಲಾಗಿದೆ. ಬಿಡುಗಡೆಯಾದ 24 ಗಂಟೆಯೊಳಗೆ ಆ ಪಟ್ಟಿಯನ್ನು ತಿದ್ದುಪಡಿ ಮಾಡಲಾಗಿದ್ದು, ಇದು ಈಗ ಕುತೂಹಲಕ್ಕೆ ಕಾರಣವಾಗಿದೆ.

ಪಟ್ಟಿಯಿಂದ 'ಬೇಳೆಕಾಳು' ಮಾಯವಾಗಿದ್ದು ಏಕೆ?

ಆರಂಭದ ವರದಿಯಲ್ಲಿ, ಅಮೆರಿಕದಿಂದ ಭಾರತಕ್ಕೆ ರಫ್ತಾಗುವ ಬೇಳೆಕಾಳುಗಳ ಮೇಲೆ ಭಾರತವು ಸುಂಕವನ್ನು ಕಡಿಮೆ ಮಾಡಲಿದೆ ಅಥವಾ ಸಂಪೂರ್ಣವಾಗಿ ತೆಗೆದುಹಾಕಲಿದೆ ಎಂದು ಶ್ವೇತಭವನ ಹೇಳಿತ್ತು. ಹೊಸ ಪಟ್ಟಿಯಲ್ಲಿ 'ಬೇಳೆಕಾಳು' ಎಂಬ ಪದವನ್ನೇ ತೆಗೆದುಹಾಕಲಾಗಿದೆ.

ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಬೇಳೆಕಾಳು ಉತ್ಪಾದಿಸುವ ಮತ್ತು ಬಳಸುವ ದೇಶ. ಒಂದು ವೇಳೆ ಅಮೆರಿಕದ ಬೇಳೆಕಾಳುಗಳಿಗೆ ಸುಂಕ ವಿನಾಯಿತಿ ನೀಡಿದರೆ, ಭಾರತದ ಮಾರುಕಟ್ಟೆಗೆ ಅಗ್ಗದ ವಿದೇಶಿ ಬೇಳೆಕಾಳುಗಳು ಲಗ್ಗೆ ಇಡುತ್ತವೆ. ಇದರಿಂದ ಭಾರತದ ರೈತರಿಗೆ ಭಾರಿ ನಷ್ಟವಾಗುವ ಸಾಧ್ಯತೆ ಇರುತ್ತದೆ. ಈ ಸೂಕ್ಷ್ಮತೆಯನ್ನು ಅರಿತು ಅಥವಾ ಮಾತುಕತೆಯ ಅಂತಿಮ ಹಂತದಲ್ಲಿ ಈ ಬದಲಾವಣೆ ಮಾಡಿರಬಹುದು.

ಮೊದಲ ಪಟ್ಟಿಯಲ್ಲಿ ಶ್ವೇತಭವನವು "ಅಮೆರಿಕದಿಂದ 500 ಬಿಲಿಯನ್ ಡಾಲರ್ ಮೌಲ್ಯದ ವಸ್ತುಗಳನ್ನು ಖರೀದಿಸಲು ಭಾರತ ಬದ್ಧವಾಗಿದೆ ಎಂಬ ಪದ ಬಳಸಿತ್ತು. ಈಗ ಅದನ್ನು ಭಾರತ ಖರೀದಿಸಲು ಉದ್ದೇಶಿಸಿದೆ” ಎಂದು ಬದಲಾಯಿಸಲಾಗಿದೆ.

'ಬದ್ಧತೆ' ಎಂದರೆ ಅದನ್ನು ಮಾಡಲೇಬೇಕು ಎಂಬ ಒತ್ತಡವಿರುತ್ತದೆ. ಆದರೆ 'ಉದ್ದೇಶ' ಎಂದರೆ ಪರಿಸ್ಥಿತಿಗೆ ತಕ್ಕಂತೆ ಭಾರತವು ತನ್ನ ನಿರ್ಧಾರವನ್ನು ತೆಗೆದುಕೊಳ್ಳಬಹುದು ಎಂದರ್ಥ. ಇದು ರಾಜತಾಂತ್ರಿಕವಾಗಿ ಭಾರತಕ್ಕೆ ಸಿಕ್ಕ ದೊಡ್ಡ ಜಯ, ಏಕೆಂದರೆ ಯಾವುದೇ ದೇಶವು ಇಷ್ಟು ದೊಡ್ಡ ಮೊತ್ತದ ಖರೀದಿಗೆ ಕಡ್ಡಾಯವಾಗಿ ಸಹಿ ಹಾಕಲು ಇಷ್ಟಪಡುವುದಿಲ್ಲ.

ಹಾಗಾದರೆ ಭಾರತ ಯಾವುದಕ್ಕೆ ಒಪ್ಪಿಕೊಂಡಿದೆ?

ಪರಿಷ್ಕೃತ ಪಟ್ಟಿಯ ಪ್ರಕಾರ, ಭಾರತವು ಇನ್ನು ಮುಂದೆ ಈ ಕೆಳಗಿನ ಅಮೆರಿಕನ್ ಉತ್ಪನ್ನಗಳ ಮೇಲೆ ಸುಂಕವನ್ನು ಕಡಿಮೆ ಮಾಡಲಿದೆ:

• ಕೈಗಾರಿಕಾ ಉತ್ಪನ್ನಗಳು

• ಸೋಯಾಬೀನ್ ಎಣ್ಣೆ, ವೈನ್, ಸ್ಪಿರಿಟ್ಸ್, ಒಣ ಹಣ್ಣುಗಳು, ಮತ್ತು ತಾಜಾ ಹಣ್ಣುಗಳು.

• ಕಲ್ಲಿದ್ದಲು ಮತ್ತು ಇಂಧನ ಉತ್ಪನ್ನಗಳು.

500 ಬಿಲಿಯನ್ ಡಾಲರ್ ಹೂಡಿಕೆ ಎಲ್ಲಿಗೆ ಹೋಗುತ್ತದೆ?

ಮುಂದಿನ 5 ವರ್ಷಗಳಲ್ಲಿ ಭಾರತವು ಅಮೆರಿಕದ ಇಂಧನ, ವಿಮಾನ ಮತ್ತು ವಿಮಾನದ ಬಿಡಿಭಾಗಗಳು, ಐಟಿ ತಂತ್ರಜ್ಞಾನ ಹಾಗೂ ಕಲ್ಲಿದ್ದಲು ಕ್ಷೇತ್ರಗಳಲ್ಲಿ ಸುಮಾರು 500 ಬಿಲಿಯನ್ ಡಾಲರ್ (ಸುಮಾರು 41 ಲಕ್ಷ ಕೋಟಿ ರೂಪಾಯಿ) ವಹಿವಾಟು ನಡೆಸುವ ಗುರಿ ಹೊಂದಿದೆ.

ಶ್ವೇತಭವನದ ಈ ತಿದ್ದುಪಡಿಯು ಭಾರತವು ತನ್ನ ದೇಶದ ರೈತರ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನ ಸ್ವತಂತ್ರ ನಿರ್ಧಾರಗಳನ್ನು ಉಳಿಸಿಕೊಳ್ಳಲು ಯಶಸ್ವಿಯಾಗಿದೆ ಎಂಬುದನ್ನು ತೋರಿಸುತ್ತದೆ. ಮಾತುಕತೆಗಳು ಇನ್ನೂ ನಡೆಯುತ್ತಿರುವುದರಿಂದ, ಅಂತಿಮ ಒಪ್ಪಂದದಲ್ಲಿ ಇನ್ನು ಕೆಲವು ಬದಲಾವಣೆಗಳಾಗುವ ಸಾಧ್ಯತೆಯಿದೆ.

Read More
Next Story