ಅಮೆರಿಕ ವ್ಯಾಪಾರ ಒಪ್ಪಂದ: ಕಾಳು ಜೊಳ್ಳಾದರೂ ಸಾರ್ವಭೌಮತ್ವಕ್ಕೆ ಗಟ್ಟಿ ತಳಹದಿ, ರಫ್ತಿಗಿನ್ನು ಸುಗಮ ಹಾದಿ
x
ಭಾರತ-ಅಮೆರಿಕ ನಡುವಿನ ವ್ಯಾಪಾರ ಒಪ್ಪಂದವು ಭಾರತದ ಕೈಗಾರಿಕೆಗಳನ್ನು ಅನಿವಾರ್ಯವಾಗಿ ಆಧುನೀಕರಣಕ್ಕೆ ಒಳಗಾಗುವಂತೆ ಮಾಡಲಿದೆ. ಇದು ಭಾರತೀಯ ಸಂಪ್ರದಾಯದಲ್ಲಿ ಕರೆಯಲಾಗುವ ʼಊರ್ವಶಿಯ ಶಾಪʼಕ್ಕೆ ಒಂದು ಉತ್ತಮ ಉದಾಹರಣೆ. ಇದು ಮೇಲ್ನೋಟಕ್ಕೆ ನಿಮ್ಮ ಜೀವನವನ್ನು ಹಾಳುಗೆಡವಿದಂತೆ ಕಂಡರೂ ಪ್ರಾಯೋಗಿಕವಾಗಿ ಬಹಳ ಸಹಾಯ ಮಾಡುತ್ತದೆ ಎಂಬುದರಲ್ಲಿ ಅನುಮಾನವಿಲ್ಲ. AI ಮೂಲಕ ಸೃಷ್ಟಿಸಲಾದ ಚಿತ್ರ

ಅಮೆರಿಕ ವ್ಯಾಪಾರ ಒಪ್ಪಂದ: ಕಾಳು ಜೊಳ್ಳಾದರೂ ಸಾರ್ವಭೌಮತ್ವಕ್ಕೆ ಗಟ್ಟಿ ತಳಹದಿ, ರಫ್ತಿಗಿನ್ನು ಸುಗಮ ಹಾದಿ

ಕೆಲವು ವಿನಾಯ್ತಿಗಳ ಜೊತೆಗೆ ಈ ಒಪ್ಪಂದವು ಭಾರತೀಯ ರಫ್ತುದಾರರಿಗೆ ಮಾರುಕಟ್ಟೆ ಪ್ರವೇಶವನ್ನು ಸುಗಮಗೊಳಿಸುತ್ತದೆ. ಕಾರ್ಯತಂತ್ರದ ಸಂಕೇತಗಳನ್ನು ಬಲಪಡಿಸುತ್ತದೆ.


ಭಾರತ ಮತ್ತು ಅಮೆರಿಕ ನಡುವಿನ ಮಧ್ಯಂತರ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಚೌಕಟ್ಟು ಭಾರತದ ರಾಷ್ಟ್ರೀಯ ಹಿತಾಸಕ್ತಿಗಳ ಜೊತೆ ರಾಜಿ ಮಾಡಿಕೊಳ್ಳುವ ಯಾವುದೇ ಸುಳಿವನ್ನು ಹೊಂದಿಲ್ಲ ಎಂಬುದು ಕೇವಲ ರಾಜಕೀಯವಾಗಿ ಅರೆಬೆಂದಿರುವವರಿಗೆ ಮಾತ್ರ ಅಚ್ಚರಿಯನ್ನು ತರಬಹುದು.

ಪ್ರಸ್ತಾಪಿತ ಒಪ್ಪಂದವು ಭಾರತೀಯ ಉತ್ಪಾದಕರು ನಿರೀಕ್ಷಿಸುವ ʼಸಂಪೂರ್ಣ ರಕ್ಷಣೆʼಯ ನಿಲುವಿನಿಂದ ತಕ್ಕಮಟ್ಟಿಗೆ ವಿನಾಯ್ತಿಯನ್ನು ಹೊಂದಿರುವುದೇನೋ ನಿಜ. ಆದರೆ ಕೊಡು-ಕೊಳ್ಳುವಿಕೆ ಎನ್ನುವುದು ಯಾವುದೇ ವ್ಯಾಪಾರದ ಮಾತುಕತೆಯ ಅವಿಭಾಜ್ಯ ಅಂಗ. ಅಮೆರಿಕದ ಜೊತೆ ವ್ಯವಹರಿಸುವ ಸಂದರ್ಭದಲ್ಲಿ ಭಾರತಕ್ಕೆ ತನ್ನದೇ ಆದ ಕೆಲವು ವಿಶೇಷ ನಿರ್ಬಂಧಗಳಿರುತ್ತವೆ. ಅವುಗಳಲ್ಲಿ ಭಾರತದ ಜೊತೆಗೆ ಗಡಿ ವಿವಾದವನ್ನು ಬಗೆಹರಿಸಲು ಚೀನಾದ ನಿರಾಕರಣೆ ಮತ್ತು ಇಂಡೋ-ಪೆಸಿಫಿಕ್ ವಲಯದಲ್ಲಿ ಭಾರತವು ನಿರ್ಣಾಯಕ ಪಾತ್ರ ವಹಿಸುವುದನ್ನು ಒಪ್ಪಿಕೊಳ್ಳದ ಚೀನಾದ ಧೋರಣೆಗಳು ಸೇರಿವೆ.

ಯಾವುದು ಮುಖ್ಯ ಇಲ್ಲಿ?

ಒಪ್ಪಂದದ ಚೌಕಟ್ಟು ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ತಂದಿದೆ ಎಂದು ಸರ್ಕಾರದ ಕಡೆಗೆ ಬೊಟ್ಟು ಮಾಡಲು ಬಯಸುವವರು ಈ ಎರಡು ವಿಚಾರಗಳ ಬಗ್ಗೆ ಗಮನ ಹರಿಸುವುದು ಮುಖ್ಯವಾಗುತ್ತದೆ; ಆಡಳಿತ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಪ್ರಚೋದಿಸುತ್ತಿರುವ ಆಂತರಿಕ ಭಿನ್ನಾಭಿಪ್ರಾಯಗಳು ಮತ್ತು ಭಾರತದ ರಾಷ್ಟ್ರೀಯ ಭದ್ರತಾ ಮೂಲಸೌಕರ್ಯದ ಪ್ರಸ್ತುತ ತಾಂತ್ರಿಕ ಮಟ್ಟ ಹಾಗೂ ಸವಾಲಾಗಿರುವ ಅತ್ಯಾಧುನಿಕ ಬೆದರಿಕೆಗಳನ್ನು ಎದುರಿಸಲು ಅಗತ್ಯ ತಾಂತ್ರಿಕ ಮಟ್ಟದ ನಡುವೆ ನಿರಂತರವಾಗಿ ಹೆಚ್ಚುತ್ತಿರುವ ಅಂತರವನ್ನು ತಗ್ಗಿಸಲು ಸರ್ಕಾರ ಯಾವುದೇ ಅರ್ಥಪೂರ್ಣ ಕ್ರಮಗಳನ್ನು ಕೈಗೊಳ್ಳುವಲ್ಲಿ ವಿಫಲವಾಗಿರುವುದು.

ಸಾಮಾನ್ಯವಾಗಿ ಯಾವುದೇ ವ್ಯಾಪಾರ ಒಪ್ಪಂದವನ್ನು ಮೌಲ್ಯಮಾಪನ ಮಾಡುವ ಸಂದರ್ಭದಲ್ಲಿ ವ್ಯಾಪಾರವಾಗುವ ಸರಕುಗಳ ಮೇಲೆ ಎಷ್ಟೆಲ್ಲ ಸುಂಕ ವಿಧಿಸಲಾಗಿದೆ ಎಂಬ ವಿವರಗಳನ್ನು ಗಮನಿಸುವುದು ಸಹಜ. ಆದರೆ ಈ ಒಪ್ಪಂದಕ್ಕೆ ಬರಲು ತೆಗೆದುಕೊಂಡ ನಿರ್ಧಾರ, ಹಣಕಾಸು ಮತ್ತು ವ್ಯವಹಾರದ ಜಗತ್ತಿಗೆ ನೀಡುವ ಒಟ್ಟಾರೆ ಸಂಕೇತವು ಅದಕ್ಕಿಂತ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿರುತ್ತದೆ.

ವ್ಯಾಪಾರ ಒಪ್ಪಂದದಿಂದ ಭಾರತಕ್ಕಾಗುವ ಪ್ರಮುಖ ಸುಧಾರಣೆಗಳು

• ಕಡಿಮೆ ಸುಂಕ ಭಾರತದ ರಫ್ತು ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

• ಬಿಗಡಾಯಿಸಿದ್ದ ಭಾರತ-ಅಮೆರಿಕ ವ್ಯಾಪಾರ ಸಂಬಂಧದಲ್ಲಿ ಸುಧಾರಣೆ

• ಅಮೆರಿಕದ ಮಾರುಕಟ್ಟೆ ಪ್ರವೇಶಕ್ಕೆ ದಾರಿ ಸುಗಮ

• ಕಾಲಾನಂತರದಲ್ಲಿ ನಿಭಾಯಿಸಬಹುದಾದ ಆಮದು ಬದ್ಧತೆಗಳು

• ಪೈಪೋಟಿಯ ಒತ್ತಡದಿಂದ ಭಾರತೀಯ ಕೈಗಾರಿಕೆಗಳು ತಂತ್ರಜ್ಞಾನ ನವೀಕರಿಸಲು ಅವಕಾಶ

ಈ ಒಪ್ಪಂದದಿಂದ ಮುಖ್ಯವಾಗಿ ಸಿಗುವ ಸಂಕೇತವೇನೆಂದರೆ ಭಾರತ ಮತ್ತು ಅಮೆರಿಕ ನಡುವೆ ಕೆಲಕಾಲದಿಂದ ನೆಲೆಗೊಂಡಿದ್ದ ಅಂತರ ಈಗ ಮಾಯವಾಗಿದೆ ಎಂಬುದು. ಈ ಒಪ್ಪಂದದಿಂದ ಮೂಲ ನಿಯಮಗಳ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ವ್ಯಾಪಕ ಶ್ರೇಣಿಯ ಸರಕುಗಳನ್ನು ಅಮೆರಿಕಕ್ಕೆ ರಫ್ತು ಮಾಡುವಾಗ ವಿಧಿಸುವ ಆಮದು ಸುಂಕವನ್ನು ಶೇ. 18ಕ್ಕೆ ಇಳಿಯುತ್ತದೆ. ಇಷ್ಟು ಮಾತ್ರವಲ್ಲದೆ ಮುಂದಿನ ಮಾತುಕತೆಗಳ ಮೂಲಕ ಇತರ ಸರಕುಗಳ ಮೇಲಿನ ಸುಂಕವನ್ನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಮಾಡುವ ಭರವಸೆಯನ್ನು ಕೂಡ ಇದು ನೀಡುತ್ತದೆ. ಹಾಗೆ ಮಾಡುವ ಮೂಲಕ ಒಪ್ಪಂದದ ಚೌಕಟ್ಟಿನಿಂದ ಮಧ್ಯಂತರಕ್ಕೆ ಮತ್ತು ಮಧ್ಯಂತರದಿಂದ ಅಂತಿಮ ಹಂತಕ್ಕೆ ಮುನ್ನಡೆಯಲಿದೆ.

ಆಮದಿನ ಪ್ರಮಾಣ

ಸಾಂಪ್ರದಾಯಿಕ ರಫ್ತು ಸರಕುಗಳಲ್ಲಿ ಭಾರತಕ್ಕೆ ಪೈಪೋಟಿ ನೀಡುವ ಬಾಂಗ್ಲಾದೇಶ, ಪಾಕಿಸ್ತಾನ, ಶ್ರೀಲಂಕಾ, ವಿಯೆಟ್ನಾಂ ಮತ್ತು ಪ್ರತಿಯೊಂದು ರಂಗದಲ್ಲೂ ಸ್ಪರ್ಧೆಗೆ ಇಳಿಯುವ ಚೀನಾದಂತಹ ದೇಶಗಳು ಭಾರತಕ್ಕಿಂತ ಹೆಚ್ಚಿನ ಆಮದು ಸುಂಕವನ್ನು ನೀಡುತ್ತಿವೆ. ಈ ಹಿನ್ನೆಲೆಯಲ್ಲಿ ಅಮೆರಿಕಕ್ಕೆ ಭಾರತದ ರಫ್ತನ್ನು ಗಣನೀಯವಾಗಿ ಮರುಸ್ಥಾಪನೆ ಮಾಡುವ ಭರವಸೆ ಈ ಒಪ್ಪಂದದಿಂದ ದಕ್ಕಿದೆ ಎಂಬುದು ಸತ್ಯ. ಆದರೆ ಅಮೆರಿಕದ ಗ್ರಾಹಕರು ಪಾವತಿಸುವ ಬೆಲೆ ಹೆಚ್ಚಾದಷ್ಟೂ ರಫ್ತಿನ ಪ್ರಮಾಣದಲ್ಲಿ ಇಳಿಕೆಯಾಗುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.

ಅಮೆರಿಕದಿಂದ ಭಾರತವು ಮಾಡಿಕೊಳ್ಳಲಿರುವ 500 ಬಿಲಿಯನ್ ಡಾಲರ್ ಮೊತ್ತದ ಆಮದು ಈಗ ಹೆಚ್ಚು ಸಮಂಜಸವಾಗಿ ಕಾಣುತ್ತಿದೆ. ಯಾಕೆಂದರೆ, ಇದನ್ನು ಐದು ವರ್ಷಗಳ ಅವಧಿಯಲ್ಲಿ ಸಾಧಿಸಬೇಕು ಮತ್ತು ಇದರಲ್ಲಿ ಪ್ರಯಾಣಿಕ ವಿಮಾನಗಳಂತಹ ದೊಡ್ಡ ಮೊತ್ತದ ಖರೀದಿಗಳು (ಇದರಲ್ಲಿ ಈಗಾಗಲೇ 77 ಶತಕೋಟಿ ಡಾಲರ್ ಮೊತ್ತದ ವಿಮಾನಗಳು ಕಾಯುವ ಪಟ್ಟಿಯಲ್ಲಿವೆ), ರಕ್ಷಣಾ ಉಪಕರಣಗಳು, ತೈಲ ಮತ್ತು ಎಲ್ಎನ್ಜಿ ಒಳಗೊಂಡಿರುತ್ತವೆ ಎಂದು ಅಧಿಕೃತವಾಗಿ ಸ್ಪಷ್ಟಪಡಿಸಲಾಗಿದೆ.

ಯುದ್ಧ ವಿಮಾನ ತೈಲ ಇತ್ಯಾದಿ

ಭಾರತವು ಅಮೆರಿಕದಿಂದ ಮಿಲಿಟರಿ ಸಾರಿಗೆ ವಿಮಾನಗಳನ್ನು ಖರೀದಿಸಲು ಸಾಧ್ಯವಾಗಬಹುದು, ಆದರೆ ಸುಧಾರಿತ ಯುದ್ಧ ವಿಮಾನಗಳನ್ನಲ್ಲ. ಏಕೆಂದರೆ ಇವು ಹೆಚ್ಚಾಗಿ ಅಮೆರಿಕದ ಮಿಲಿಟರಿಯ ಎಲೆಕ್ಟ್ರಾನಿಕ್ ಟ್ರ್ಯಾಕಿಂಗ್ ಮತ್ತು ಗುಪ್ತಚರ ವ್ಯವಸ್ಥೆಗಳೊಂದಿಗೆ ಬೆಸೆದುಕೊಂಡಿರುತ್ತವೆ. ಯಾವುದೇ ಕಾರಣಕ್ಕೆ ಅಮೆರಿಕ ಸರ್ಕಾರವು 'ಮಿಷನ್ ಡೇಟಾ ಫೈಲ್ಸ್' (MDF) ಅಥವಾ ಅವುಗಳ ಅಪ್ಡೇಟ್ಗಳನ್ನು ನೀಡಲು ನಿರಾಕರಿಸಿದರೆ, ಈ ವಿಮಾನಗಳು ತಮ್ಮ ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗದು. ಯಾಕೆಂದರೆ ಎಂಡಿಎಫ್ಗಳು ರಾಡಾರ್ ಗುರುತಿಸುವಿಕೆಯಿಂದ ತಪ್ಪಿಸಿಕೊಳ್ಳಲು ಬಳಸುವ ಜಾಮಿಂಗ್ ಫ್ರೀಕ್ವೆನ್ಸಿಗಳು ಮತ್ತು ಗುರಿಯ ನಿಖರ ವಿವರಗಳನ್ನು ಒಳಗೊಂಡಿರುತ್ತವೆ.

ಭಾರತವು ತೈಲ ಮತ್ತು ಎಲ್ಎನ್ಜಿಯನ್ನು ಅಮೆರಿಕದಿಂದ ಸುಲಭವಾಗಿ ಖರೀದಿಸಬಹುದು. ಉದಾಹರಣೆಗೆ, ಅಮೆರಿಕದಿಂದ ಭಾರತಕ್ಕೆ ಸರಕುಗಳನ್ನು ಸಾಗಿಸುವ ಹೆಚ್ಚಿನ ವೆಚ್ಚವನ್ನು ತಪ್ಪಿಸಲು, ಯುರೋಪ್ ಅಥವಾ ಜಪಾನ್ ಮಧ್ಯಪ್ರಾಚ್ಯ ದೇಶಗಳಿಂದ ಖರೀದಿಸುವ ಇಂಧನದ ಬದಲಿಗೆ ಅಮೆರಿಕದ ಇಂಧನವನ್ನು ಭಾರತಕ್ಕೆ ವರ್ಗಾಯಿಸುವ ವ್ಯವಸ್ಥೆ ಮಾಡಿಕೊಳ್ಳಬಹುದು.

ಒಂದು ವೇಳೆ ಭಾರತವು ಅಮೆರಿಕದಲ್ಲಿ ತಯಾರಾದ ಸುಧಾರಿತ 'ಎನ್ವಿಡಿಯಾ' (Nvidia) ಚಿಪ್ಗಳನ್ನು ಬಳಸಿ ಡೇಟಾ ಸೆಂಟರ್ಗಳನ್ನು ನಿರ್ಮಿಸಿದರೆ ಅಥವಾ ಪರಮಾಣು ರಿಯಾಕ್ಟರ್ ಬಿಡಿಭಾಗಗಳನ್ನು ಆಮದು ಮಾಡಿಕೊಂಡರೆ, ಅದು ಆಮದು ಮೊತ್ತಕ್ಕೆ ದೊಡ್ಡ ಮಟ್ಟದ ಮೌಲ್ಯವನ್ನು ಸೇರಿಸುತ್ತದೆ.

ಏನೇ ಆದರೂ, ಟ್ರಂಪ್ ಅವರು ಅಧಿಕಾರದಿಂದ ನಿರ್ಗಮಿಸಿದ ನಂತರ ಈ ಒಪ್ಪಂದದ ಗತಿ ಏನಾಗಬಹುದು ಎಂಬುದು ಸದ್ಯಕ್ಕೆ ಊಹೆಗೆ ನಿಲುಕದ ಸಂಗತಿ.

ಭಾರತೀಯ ಕೈಗಾರಿಕೆಗಳ ಸುಧಾರಣೆಗೆ ದಾರಿ

ಅಮೆರಿಕ ಮತ್ತು ಭಾರತವು ಇತ್ತೀಚೆಗೆ ಒಪ್ಪಂದ ಮಾಡಿಕೊಳ್ಳುತ್ತಿರುವ ಇತರ ದೇಶಗಳಿಂದ ಎದುರಾಗಲಿರುವ ತೀವ್ರ ಪೈಪೋಟಿಗೆ ಭಾರತೀಯ ಕೈಗಾರಿಕೆಗಳು ತೆರೆದುಕೊಳ್ಳಲಿವೆ ಎಂಬುದರಲ್ಲಿ ಎರಡು ಮಾತಿಲ್ಲ. ಈ ಒತ್ತಡಕ್ಕೆ ಸಿಲುಕಿ ಕೈಗಾರಿಕೆಗಳು ಒಂದೋ ಪತನವಾಗಬಹುದು ಅಥವಾ ಆಧುನಿಕತೆಯನ್ನು ಅಳವಡಿಸಿಕೊಂಡು ಗಟ್ಟಿಯಾಗಿ ನಿಲ್ಲಬಹುದು.

೧೯೯೧ರ ಆರ್ಥಿಕ ಸುಧಾರಣೆಗಳ ನಂತರದ ಅನುಭವವನ್ನು ಅವಲೋಕಿಸಿದರೆ, ಹೆಚ್ಚಿನ ವಲಯಗಳು ಆಧುನೀಕರಣಗೊಳ್ಳುವ ಸಾಧ್ಯತೆಯೇ ಹೆಚ್ಚು. ಅಂದು ವ್ಯಾಪಾರವನ್ನು ಮುಕ್ತಗೊಳಿಸಿದಾಗ ಆಮದು ಸುಂಕಗಳನ್ನು ಕಡಿತಗೊಳಿಸಲಾಗಿತ್ತು ಮತ್ತು ವಿಶೇಷವಾಗಿ ವಿಶ್ವ ವ್ಯಾಪಾರ ಸಂಸ್ಥೆ ಸೇರಿದ ನಂತರ ಆಮದು ಪ್ರಮಾಣದ ಮೇಲಿದ್ದ ನಿರ್ಬಂಧಗಳನ್ನು ತೆಗೆದುಹಾಕಲಾಗಿತ್ತು. ಅಂತಹ ಕಠಿಣ ಸಂದರ್ಭದಲ್ಲೂ ಭಾರತೀಯ ಕೈಗಾರಿಕೆಗಳು ಸುಧಾರಣೆಯ ಪಥದಲ್ಲಿ ಸಾಗಿ ಜಾಗತಿಕ ಮಟ್ಟಕ್ಕೆ ಏರಿದ್ದವು.

ಉತ್ಪಾದನಾ ವಲಯದ ಕ್ರಾಂತಿ

ಇವೆಲ್ಲದರ ಹೊರತಾಗಿ ಉತ್ಪಾದನಾ ವಲಯವು ಒಂದು ದೊಡ್ಡ ಕ್ರಾಂತಿಗೆ ಸಜ್ಜಾಗುತ್ತಿದೆ. ಕೃತಕ ಬುದ್ಧಿಮತ್ತೆ ಎನ್ನುವುದು ಈಗ ಯಂತ್ರಗಳ ಭಾಗವೇ ಆಗಿದೆ. ಎಲ್ಲ ಕಾರ್ಯಾಚರಣೆಗಳು ಸ್ವಯಂಚಾಲನೆಗೆ ಒಳಗಾಗುತ್ತಿವೆ. ಹಿಂದೆ ಅತಿ ಹೆಚ್ಚು ಮಾನವ ಶ್ರಮವನ್ನು ಬಳಸುತ್ತಿದ್ದ ಉದ್ಯಮಗಳು ಈಗ ಇದ್ದಕ್ಕಿದ್ದಂತೆ ರೋಬೋಟ್-ಆಧಾರಿತ ವಲಯಗಳಾಗಿ ಬದಲಾಗಬಹುದು.

ಈಗಾಗಲೇ ವಿಶ್ವದಾದ್ಯಂತ 4.5 ದಶಲಕ್ಷಕ್ಕೂ ಹೆಚ್ಚು ಕೈಗಾರಿಕಾ ರೋಬೋಟ್ಗಳು ಕಾರ್ಯನಿರ್ವಹಿಸುತ್ತಿವೆ. ಕೇವಲ ಚೀನಾದಲ್ಲೇ 2 ದಶಲಕ್ಷ ರೋಬೋಟ್ಗಳಿವೆ. ಅವುಗಳ ಸಂಖ್ಯೆ ಮತ್ತು ನಾಜೂಕುತನ ಹಾಗೂ ನಿಖರತೆಯೊಂದಿಗೆ ಕೆಲಸಗಳನ್ನು ಮಾಡುವ ಸಾಮರ್ಥ್ಯವು ವೇಗವಾಗಿ ಬೆಳೆಯುತ್ತಿದೆ.

ಈ ವ್ಯಾಪಾರ ಒಪ್ಪಂದವು ಭಾರತೀಯ ಕೈಗಾರಿಕೆಗಳು ಅನಿವಾರ್ಯವಾಗಿ ಆಧುನೀಕರಣಕ್ಕೆ ಒಳಗಾಗುವಂತೆ ಒತ್ತಡ ಹೇರುತ್ತದೆ. ಇದು ಭಾರತೀಯ ಸಂಪ್ರದಾಯದಲ್ಲಿ ಹೇಳಲಾಗುವ ʼಊರ್ವಶಿಯ ಶಾಪ'ದಂತೆ ಕಾಣುತ್ತಿದೆ. ಮೇಲ್ನೋಟಕ್ಕೆ ಇದು ಕಷ್ಟವೆನಿಸಿದರೂ, ಪ್ರಾಯೋಗಿಕವಾಗಿ ನಮಗೆ ಇದರಿಂದ ಸಾಕಷ್ಟು ಸಹಾಯವಾಗಲಿದೆ.

ಭಾರತದ ಉದ್ಧಾರ

ನಾವು ಈ ವ್ಯಾಪಾರ ಒಪ್ಪಂದವನ್ನು ಟೀಕಿಸಲು ಹೆಚ್ಚು ಆತುರಪಡಬಾರದು. ಜಾಗತಿಕ ಆರ್ಥಿಕತೆಯ ಜೊತೆಗೆ ಬೆರೆಯಲು ಭಾರತದ ಆಡಳಿತ ವ್ಯವಸ್ಥೆ, ಉದ್ಯಮಿಗಳು, ಶಿಕ್ಷಣ ತಜ್ಞರು, ಕಾರ್ಮಿಕರು ಮತ್ತು ಒಟ್ಟಾರೆ ಜನತೆ ತಮ್ಮ ಆಂತರಿಕ ಬದಲಾವಣೆಗಳ ವೇಗವನ್ನು ಹೆಚ್ಚಿಸಿಕೊಳ್ಳಬೇಕೆಂದು ಈ ಒಪ್ಪಂದವು ಒತ್ತಾಯಿಸುತ್ತಿದೆ.

ಸರ್ಕಾರವು ಇಂದು ಹದಗೆಟ್ಟ ಶಿಕ್ಷಣ ವ್ಯವಸ್ಥೆಯ ಮುಂದಾಳತ್ವ ವಹಿಸಿರುವುದು ವಿಷಾದನೀಯ. ಸರ್ಕಾರಿ ಮತ್ತು ಖಾಸಗಿ ವಲಯದ ಒಟ್ಟು ಸಂಶೋಧನೆ ಮತ್ತು ಅಭಿವೃದ್ಧಿ ವೆಚ್ಚವು ಒಟ್ಟು ಜಿಡಿಪಿಯ ಕೇವಲ ಶೇ. 0.65 ರಷ್ಟಿದೆ, ಇದು ಅತ್ಯಂತ ಕನಿಷ್ಠ ಮಟ್ಟವಾಗಿದೆ. ಅಲ್ಲದೆ, ಸತತವಾಗಿ ಹೊಸ ಕೌಶಲಗಳನ್ನು ಕಲಿಯಲು ಸಹಾಯ ಮಾಡುವ 'ಶಿಕ್ಷಣ'ಕ್ಕಿಂತ ಹೆಚ್ಚಾಗಿ, ತಾತ್ಕಾಲಿಕವಾಗಿರುವ 'ಕೌಶಲ'ಗಳ ಮೇಲೆ ಸರ್ಕಾರ ಹೆಚ್ಚು ಆದ್ಯತೆ ನೀಡುತ್ತಿದೆ.

ಜಾಗತೀಕರಣವು ರಾಜಕೀಯದಲ್ಲಿ ಬದಲಾವಣೆಗಳನ್ನು ಬಯಸುತ್ತದೆ. ಇಲ್ಲೇ ಆಡಳಿತ ಪಕ್ಷವು ಭಾರತವನ್ನು ವಿಫಲಗೊಳಿಸುತ್ತಿದೆ. ಇದು ಹಿಂದೂಯೇತರ ಸಮುದಾಯಗಳನ್ನು ಮೂಲೆಗುಂಪು ಮಾಡುವ ತನ್ನ ಯೋಜನೆಯನ್ನು ಮುಂದುವರಿಸುವುದಷ್ಟೇ ಅಲ್ಲದೆ, ಅದನ್ನು ತೀವ್ರಗೊಳಿಸುತ್ತಿದೆ; ಇದು ಆಂತರಿಕ ಏಕತೆಯನ್ನು ಕುಸಿಯುವಂತೆ ಮಾಡಿ, ಸಕ್ರಿಯ ಸಂಘರ್ಷಗಳಿಗೆ ದಾರಿ ಮಾಡಿಕೊಡುತ್ತಿದೆ. ಈ ರಾಜಕಾರಣವು ಭಾರತದ ಬಗೆಗಿನ ಬಾಹ್ಯ ದೃಷ್ಟಿಕೋನವನ್ನೂ ಬದಲಿಸುತ್ತಿದೆ.

ಅಪಾರ ಸಾಮರ್ಥ್ಯ ಮತ್ತು ಗಾತ್ರದ 'ಸಂಘರ್ಷಪೂರ್ಣ ಪ್ರಜಾಪ್ರಭುತ್ವ' ಎಂಬ ಪಟ್ಟದಿಂದ, ತನ್ನದೇ ಆದ ವಿಷಕಾರಿ ವಾತಾವರಣಕ್ಕೆ ಬಲಿಯಾಗುತ್ತಿರುವ 'ಪತನಗೊಳ್ಳುತ್ತಿರುವ ರಾಷ್ಟ್ರ' ಎಂಬ ಹಂತಕ್ಕೆ ಭಾರತವನ್ನು ತಲುಪಿಸುತ್ತಿದೆ. ವಿದೇಶಗಳಲ್ಲಿ ಕೆಲವು ಭಾರತೀಯ ಪ್ರವಾಸಿಗರು ಮತ್ತು ವಲಸಿಗರ ಸ್ತ್ರೀದ್ವೇಷಿ ಹಾಗೂ ಗದ್ದಲದ ನಡವಳಿಕೆಯು ಈ ನಕಾರಾತ್ಮಕ ಭಾವನೆಯನ್ನು ಮತ್ತಷ್ಟು ಪೋಷಿಸುವಂತೆ ಮಾಡಿದೆ.

ಭಾರತದ ಗಣ್ಯಮಾನ್ಯರು ಜನಸಾಮಾನ್ಯರನ್ನು ಅಪಾರ ಪ್ರತಿಭೆ ಮತ್ತು ಕ್ರಿಯಾಶೀಲ ಸಮಾಜವನ್ನು ಸುಧಾರಿಸಬಲ್ಲ ಮಾನವರನ್ನಾಗಿ ನೋಡುತ್ತಿಲ್ಲ. ಬದಲಾಗಿ, ಅವರನ್ನು ಕೇವಲ ಕೆಳಸ್ತರದ ಜನರಂತೆ ಕಾಣುತ್ತಿದ್ದಾರೆ; ಚುನಾವಣೆ ಬಂದಾಗ ಹಣ, ಆಸೆ ಮತ್ತು ಸುಳ್ಳು ಭರವಸೆಗಳನ್ನು ನೀಡಿ ಅಥವಾ ಅವರಲ್ಲೇ ಪರಸ್ಪರ ದ್ವೇಷವನ್ನು ಬಿತ್ತುವ ಮೂಲಕ ಅವರ ಮತಗಳನ್ನು ಕಸಿದುಕೊಳ್ಳಬೇಕಾದ ಮತಬ್ಯಾಂಕ್‌ಗಳಂತೆ ನೋಡುತ್ತಿದ್ದಾರೆ.

ಭಾರತದ ಉದ್ಧಾರವಿರುವುದು ಉತ್ತಮ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳುವುದರಲ್ಲಿ ಅಲ್ಲ, ಬದಲಾಗಿ ಭಾರತದ ಪ್ರಜಾಪ್ರಭುತ್ವವನ್ನು ಇನ್ನಷ್ಟು ಬಲಪಡಿಸುವುದರಲ್ಲಿ ಅಡಗಿದೆ.

Read More
Next Story