
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಕ್ಯಾಥೋಲಿಕ್ ಧರ್ಮಗುರು ಪೋಪ್ 14ನೇ ಲಿಯೊ
ನಾನು ಟ್ರಂಪ್‌ಗೆ ಹೆದರುವುದಿಲ್ಲ; ಜಾಗತಿಕ ಶಾಂತಿಗೆ ಕರೆ ನೀಡಿದ ಪೋಪ್ 14ನೇ ಲಿಯೊ
ರಾಜಕೀಯ ಘರ್ಷಣೆಗಳಿಗಿಂತ ಆಧ್ಯಾತ್ಮಿಕ ವಕಾಲತ್ತು ಮತ್ತು ಜಾಗತಿಕ ಸಾಮರಸ್ಯಕ್ಕೆ ತಾವು ಹೆಚ್ಚು ಬದ್ಧರಾಗಿರುವುದಾಗಿ ಅವರು ಮತ್ತೊಮ್ಮೆ ಪ್ರತಿಪಾದಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತದೊಂದಿಗೆ ಯಾವುದೇ ಮುಖಾಮುಖಿ ಚರ್ಚೆಯಲ್ಲಿ ತೊಡಗಿಸಿಕೊಳ್ಳುವ ಉದ್ದೇಶ ನನಗಿಲ್ಲ ಹಾಗೂ ನಾನು ಅವರ ಆಡಳಿತಕ್ಕೆ ಹೆದರುವುದಿಲ್ಲ" ಎಂದು ಕ್ಯಾಥೋಲಿಕ್ ಧರ್ಮಗುರು ಪೋಪ್ 14ನೇ ಲಿಯೊ ಅವರು ಸ್ಪಷ್ಟಪಡಿಸಿದ್ದಾರೆ.
ರಾಜಕೀಯ ಘರ್ಷಣೆಗಳಿಗಿಂತ ಆಧ್ಯಾತ್ಮಿಕ ವಕಾಲತ್ತು ಮತ್ತು ಜಾಗತಿಕ ಸಾಮರಸ್ಯಕ್ಕೆ ತಾವು ಹೆಚ್ಚು ಬದ್ಧರಾಗಿರುವುದಾಗಿ ಅವರು ಮತ್ತೊಮ್ಮೆ ಪ್ರತಿಪಾದಿಸಿದ್ದಾರೆ.
ಅಲ್ಜೇರಿಯಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದ ಹಿನ್ನೆಲೆಯಲ್ಲಿ ಟ್ರಂಪ್ ಆಡಳಿತದ ನೀತಿಗಳನ್ನು ಪರೋಕ್ಷವಾಗಿ ಟೀಕಿಸಿದರು. "ಓದುವ ಜನರಿಗೆ ತಮ್ಮದೇ ಆದ ತೀರ್ಮಾನಗಳನ್ನು ತೆಗೆದುಕೊಳ್ಳುವ ಶಕ್ತಿ ಇರುತ್ತದೆ. ನಾನೊಬ್ಬ ರಾಜಕಾರಣಿಯಲ್ಲ, ನನ್ನ ಪಾತ್ರವನ್ನು ನಾನು ಆ ದೃಷ್ಟಿಕೋನದಿಂದ ನೋಡುವುದಿಲ್ಲ. ಹೀಗಾಗಿ ಡೊನಾಲ್ಡ್ ಟ್ರಂಪ್ ಅವರೊಂದಿಗೆ ನೇರ ಚರ್ಚೆಗಿಳಿಯುವ ಉದ್ದೇಶ ನನಗಿಲ್ಲ. ಜಗತ್ತಿನಲ್ಲಿ ಈಗಾಗಲೇ ಸಾಕಷ್ಟು ಜನರು ಯುದ್ಧದಿಂದಾಗಿ ಸಂಕಷ್ಟ ಅನುಭವಿಸುತ್ತಿದ್ದಾರೆ. ಚರ್ಚ್‌ನ ಸಂದೇಶವು ಸುವಾರ್ತೆಯ ಸಂದೇಶವಾಗಿದೆ; ಶಾಂತಿ ಸ್ಥಾಪಿಸುವವರು ಧನ್ಯರು" ಎಂದು ಮಾರ್ಮಿಕವಾಗಿ ನುಡಿದರು.
ಶಾಂತಿಯನ್ನು ಹುಡುಕೋಣ
ಜಾಗತಿಕ ಸಾಮರಸ್ಯದ ಮೇಲೆ ಗಮನ ಕೇಂದ್ರೀಕರಿಸುವ ತಮ್ಮ ನಿರ್ಧಾರವನ್ನು ಪುನರುಚ್ಚರಿಸಿದ ಪೋಪ್, "ನಾವು ಯಾವಾಗಲೂ ಶಾಂತಿಗಾಗಿ ಹುಡುಕೋಣ ಮತ್ತು ಯುದ್ಧಗಳನ್ನು ಕೊನೆಗೊಳಿಸೋಣ. ನಾನು ಟ್ರಂಪ್ ಆಡಳಿತಕ್ಕೆ ಯಾವುದೇ ಕಾರಣಕ್ಕೂ ಹೆದರುವುದಿಲ್ಲ. ಯುದ್ಧವನ್ನು ವಿರೋಧಿಸಿ ನಾನು ಗಟ್ಟಿಯಾಗಿ ಧ್ವನಿ ಎತ್ತುವುದನ್ನು ಮುಂದುವರಿಸುತ್ತೇನೆ. ಶಾಂತಿ ಮತ್ತು ರಾಷ್ಟ್ರಗಳ ನಡುವೆ ಬಹುಪಕ್ಷೀಯ ಸಂವಾದವನ್ನು ಉತ್ತೇಜಿಸಲು ಸದಾ ಪ್ರಯತ್ನಿಸುತ್ತೇನೆ, ಇದರಿಂದ ಮಾತ್ರ ಜಾಗತಿಕ ಸಮಸ್ಯೆಗಳಿಗೆ ಸರಿಯಾದ ಪರಿಹಾರ ಕಂಡುಕೊಳ್ಳಲು ಸಾಧ್ಯ" ಎಂದು ಭರವಸೆ ವ್ಯಕ್ತಪಡಿಸಿದರು.
ವಾಕ್ಸಮರದ ಹಿನ್ನೆಲೆಯೇನು?
ಇರಾನ್ ಮೇಲಿನ ಯುದ್ಧದ ಸಂದರ್ಭದಲ್ಲಿ, "ಜೀಸಸ್ ಶಾಂತಿಯ ಸಂಕೇತ, ಅವರು ಯಾವುದೇ ಯುದ್ಧವನ್ನು ಬೆಂಬಲಿಸುವುದಿಲ್ಲ. ಯೇಸುವಿನ ಹೆಸರಿನಲ್ಲಿ ಯಾರೂ ಯುದ್ಧವನ್ನು ಸಮರ್ಥಿಸಿಕೊಳ್ಳಲಾಗದು. ದೇವರು ಹಿಂಸೆಯನ್ನು ಒಪ್ಪುವುದಿಲ್ಲ" ಎಂದು ಪೋಪ್ ಲಿಯೊ ಹೇಳಿಕೆ ನೀಡಿದ್ದರು. ಪೋಪ್ ಅವರ ಈ ಶಾಂತಿಯ ಕರೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ಡೊನಾಲ್ಡ್ ಟ್ರಂಪ್, "ಪೋಪ್ ಲಿಯೊ ಅಪರಾಧಗಳ ಕುರಿತು ಮೃದುಧೋರಣೆ ಹೊಂದಿದ್ದಾರೆ ಮತ್ತು ಅವರಿಗೆ ವಿದೇಶಾಂಗ ನೀತಿಯ ಗಂಧಗಾಳಿ ಗೊತ್ತಿಲ್ಲ. ಅವರು ಕೇವಲ ಪೋಪ್ ಆಗಿ ತಮ್ಮ ಕೆಲಸ ಮಾಡಿದರೆ ಸಾಕು" ಎಂದು ಟೀಕಿಸಿದ್ದರು. ಇದೀಗ ಪೋಪ್ ಲಿಯೊ ಅವರು ಟ್ರಂಪ್‌ಗೆ ತಮ್ಮದೇ ಶೈಲಿಯಲ್ಲಿ ದಿಟ್ಟ ತಿರುಗೇಟು ನೀಡಿದ್ದಾರೆ.

