ಬಾಂಗ್ಲಾ ನಾಯಕ ಓಸ್ಮಾನ್ ಹಾದಿ ಕೊಲೆ ಪ್ರಕರಣ: ಪಶ್ಚಿಮ ಬಂಗಾಳದಲ್ಲಿ ಇಬ್ಬರು ಆರೋಪಿಗಳ ಬಂಧನ
x
ವಿದ್ಯಾರ್ಥಿ ನಾಯಕ ಓಸ್ಮಾನ್ ಹಾದಿ(ಸಂಗ್ರಹ ಚಿತ್ರ)

ಬಾಂಗ್ಲಾ ನಾಯಕ ಓಸ್ಮಾನ್ ಹಾದಿ ಕೊಲೆ ಪ್ರಕರಣ: ಪಶ್ಚಿಮ ಬಂಗಾಳದಲ್ಲಿ ಇಬ್ಬರು ಆರೋಪಿಗಳ ಬಂಧನ

Osman Hadi Murder Case| ಕೋಲ್ಕತ್ತಾದಲ್ಲಿ ಬಾಂಗ್ಲಾದೇಶದ ರಾಜಕೀಯ ಕಾರ್ಯಕರ್ತ ಓಸ್ಮಾನ್ ಹಾದಿ ಹತ್ಯೆ ಪ್ರಕರಣದ ಇಬ್ಬರು ಆರೋಪಿಗಳನ್ನು ಪಶ್ಚಿಮ ಬಂಗಾಳ ಪೊಲೀಸರ ವಿಶೇಷ ಕಾರ್ಯಪಡೆ (STF) ಬಂಧಿಸಿದೆ.


ಬಾಂಗ್ಲಾದೇಶದಲ್ಲಿ ಕೆಲವು ತಿಂಗಳ ಹಿಂದೆ ವ್ಯಾಪಕ ಹಿಂಸಾಚಾರಕ್ಕೆ ಕಾರಣವಾಗಿದ್ದ ವಿದ್ಯಾರ್ಥಿ ನಾಯಕ ಓಸ್ಮಾನ್ ಹಾದಿ ಅವರ ಹತ್ಯೆ ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳು ಬಂಧನಕ್ಕೊಳಗಾಗಿದ್ದಾರೆ. ಈ ಬಗ್ಗೆ ಪಶ್ಚಿಮ ಬಂಗಾಳದ ವಿಶೇಷ ಕಾರ್ಯಪಡೆ (STF) ಬಂಧಿಸಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಬಂಗಾಳದ ಗಡಿಯಲ್ಲಿ ಸೆರೆ

ಬಂಧಿತರನ್ನು ಬಾಂಗ್ಲಾದೇಶದ ನಿವಾಸಿಗಳಾದ ರಾಹುಲ್ ಅಲಿಯಾಸ್ ಫೈಸಲ್ ಕರೀಮ್ ಮಸೂದ್ (37) ಮತ್ತು ಆಲಂಗೀರ್ ಹೊಸೈನ್ (34) ಎಂದು ಗುರುತಿಸಲಾಗಿದೆ. ಇವರು ಕ್ರಮವಾಗಿ ಪಟುವಾಖಾಲಿ ಮತ್ತು ಢಾಕಾ ನಿವಾಸಿಗಳಾಗಿದ್ದಾರೆ. ಉತ್ತರ 24 ಪರಗಣ ಜಿಲ್ಲೆಯ ಗಡಿ ಪಟ್ಟಣವಾದ ಬೊಂಗಾಂನಲ್ಲಿ ಇವರನ್ನು ವಶಕ್ಕೆ ಪಡೆಯಲಾಗಿದೆ. ಮಾರ್ಚ್ 7 ಮತ್ತು 8ರ ಮಧ್ಯರಾತ್ರಿ ಈ ಕಾರ್ಯಾಚರಣೆ ನಡೆದಿದೆ ಎಂದು ಎಸ್‌ಟಿಎಫ್ ಪ್ರಕಟಣೆಯಲ್ಲಿ ತಿಳಿಸಿದೆ.

ಮೇಘಾಲಯ ಗಡಿಯ ಮೂಲಕ ಭಾರತಕ್ಕೆ ಪ್ರವೇಶ

ಬಾಂಗ್ಲಾದೇಶದಲ್ಲಿ ಹತ್ಯೆ ಮತ್ತು ಸುಲಿಗೆಯಂತಹ ಗಂಭೀರ ಅಪರಾಧಗಳನ್ನು ಎಸಗಿದ ನಂತರ ಇಬ್ಬರು ಆರೋಪಿಗಳು ಕಾನೂನುಬಾಹಿರವಾಗಿ ಭಾರತಕ್ಕೆ ನುಗ್ಗಿದ್ದರು ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಎಸ್‌ಟಿಎಫ್ ವರದಿಯ ಪ್ರಕಾರ, ಆರೋಪಿಗಳು ಮೊದಲು ಮೇಘಾಲಯ ಗಡಿಯ ಮೂಲಕ ಭಾರತಕ್ಕೆ ಪ್ರವೇಶಿಸಿದ್ದರು. ನಂತರ ಭಾರತದ ವಿವಿಧ ಸ್ಥಳಗಳಲ್ಲಿ ಸಂಚರಿಸಿದ್ದ ಇವರು, ಅಂತಿಮವಾಗಿ ಬೊಂಗಾಂ ತಲುಪಿದ್ದರು. ಅಲ್ಲಿಂದ ಮತ್ತೆ ಬಾಂಗ್ಲಾದೇಶಕ್ಕೆ ತಪ್ಪಿಸಿಕೊಂಡು ಹೋಗಲು ಹೊಂಚು ಹಾಕುತ್ತಿದ್ದಾಗ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಯಾರು ಈ ಓಸ್ಮಾನ್ ಹಾದಿ?

ಓಸ್ಮಾನ್ ಹಾದಿ ಬಾಂಗ್ಲಾದೇಶದ 'ಇಂಕ್ವಿಲಾಬ್ ಮಂಚ' ಸಂಘಟನೆಯ ವಿದ್ಯಾರ್ಥಿ ನಾಯಕ ಮತ್ತು ವಕ್ತಾರರಾಗಿದ್ದರು. 2025ರ ಡಿಸೆಂಬರ್ 12ರಂದು ಢಾಕಾದಲ್ಲಿ ಅವರ ಮೇಲೆ ಗುಂಡಿನ ದಾಳಿ ನಡೆದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ಕರೆದೊಯ್ಯಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಡಿಸೆಂಬರ್ 18ರಂದು ಅವರು ಮೃತಪಟ್ಟಿದ್ದರು. ಈ ಕೊಲೆ ಬಾಂಗ್ಲಾದೇಶದಲ್ಲಿ ದೊಡ್ಡ ಮಟ್ಟದ ರಾಜಕೀಯ ಸಂಚಲನ ಮೂಡಿಸಿತ್ತು. ಬಂಧಿತ ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಭಾನುವಾರ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

Read More
Next Story