
ಉಸ್ಮಾನ್ ಹಾದಿ ಹತ್ಯೆ ಕೇಸ್‌ಗೆ ಟ್ವಿಸ್ಟ್: ಪ್ರಮುಖ ಆರೋಪಿಯಿಂದ ವಿಡಿಯೊ ಸಂದೇಶ ರಿಲೀಸ್
ಬಾಂಗ್ಲಾದೇಶದ ಯುವ ನಾಯಕ ಉಸ್ಮಾನ್ ಹಾದಿ ಕೊಲೆ ಪ್ರಕರಣದ ಆರೋಪಿ ಫೈಸಲ್ ಕರೀಮ್ ಮಸೂದ್ ದುಬೈನಿಂದ ವಿಡಿಯೋ ಬಿಡುಗಡೆ ಮಾಡಿದ್ದಾನೆ. ಹತ್ಯೆಯಲ್ಲಿ ತನ್ನ ಪಾತ್ರವಿಲ್ಲ ಎಂದು ವಾದಿಸಿದ್ದಾನೆ.
ಬಾಂಗ್ಲಾದೇಶದ ಪ್ರಭಾವಿ ಯುವ ನಾಯಕ ಉಸ್ಮಾನ್ ಹಾದಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಫೈಸಲ್ ಕರೀಮ್ ಮಸೂದ್, ತಾನು ಈ ಕೊಲೆಯಲ್ಲಿ ಭಾಗಿಯಾಗಿಲ್ಲ ಎಂದು ಹೇಳಿಕೊಂಡಿದ್ದಾನೆ. ಮಂಗಳವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಸಂದೇಶದಲ್ಲಿ, ತಾನು ಸದ್ಯ ದುಬೈನಲ್ಲಿರುವುದಾಗಿ ಮತ್ತು ಈ ಹತ್ಯೆಯ ಹಿಂದೆ 'ಜಮಾತ್-ಶಿಬಿರ' ಸಂಘಟನೆಯ ಕೈವಾಡವಿದೆ ಎಂದು ಆತ ಆರೋಪಿಸಿದ್ದಾನೆ.
ಫೈಸಲ್ ಹೇಳಿಕೆಯಲ್ಲೇನಿದೆ?
ವಿಡಿಯೋದಲ್ಲಿ ಮಾತನಾಡಿರುವ ಫೈಸಲ್, "ನಾನು ಹಾದಿಯನ್ನು ಕೊಂದಿಲ್ಲ. ನನ್ನನ್ನು ಮತ್ತು ನನ್ನ ಕುಟುಂಬವನ್ನು ಈ ಪ್ರಕರಣದಲ್ಲಿ ವಿನಾ:ಕಾರಣ ಸಿಲುಕಿಸಲಾಗುತ್ತಿದೆ. ಸೇಡಿನ ರಾಜಕಾರಣದಿಂದ ಬಚಾವಾಗಲು ನಾನು ದುಬೈಗೆ ಬಂದಿದ್ದೇನೆ. ಹಾದಿ ಜಮಾತ್ ಸಂಘಟನಗೆ ಸೇರಿದವನಾಗಿದ್ದು, ಅವರೇ ಈ ಹತ್ಯೆಯ ಹಿಂದೆ ಇರಬಹುದು. ನನ್ನ ಐಟಿ ಕಂಪನಿಯ ಕೆಲಸದ ನಿಮಿತ್ತ ನಾನು ಹಾದಿಯನ್ನು ಭೇಟಿಯಾಗುತ್ತಿದ್ದೆ ಮತ್ತು ಸರ್ಕಾರಿ ಕಾಂಟ್ರಾಕ್ಟ್ ಪಡೆಯುವ ಸಲುವಾಗಿ ಅವರಿಗೆ ರಾಜಕೀಯ ದೇಣಿಗೆ ನೀಡಿದ್ದೆ ಅಷ್ಟೇ," ಎಂದು ಸ್ಪಷ್ಟಪಡಿಸಿದ್ದಾನೆ.
ಫೈಸಲ್ ವಿಡಿಯೊ ಇಲ್ಲಿದೆ
ಪೊಲೀಸರ ವಾದ ಮತ್ತು ಬಿಎಸ್‌ಎಫ್ ನಿರಾಕರಣೆ:
ಆರೋಪಿಗಳಾದ ಫೈಸಲ್ ಮತ್ತು ಆಲಂಗೀರ್ ಶೇಖ್ ಡಿಸೆಂಬರ್ 12ರ ದಾಳಿಯ ನಂತರ ಹಲುಘಾಟ್ ಗಡಿಯ ಮೂಲಕ ಭಾರತದ ಮೇಘಾಲಯಕ್ಕೆ ಪರಾರಿಯಾಗಿದ್ದಾರೆ ಎಂದು ಢಾಕಾ ಪೊಲೀಸರು ಹೇಳಿದ್ದರು. ಆದರೆ, ಮೇಘಾಲಯದ ಬಿಎಸ್‌ಎಫ್ ಐಜಿ ಒ.ಪಿ. ಉಪಾಧ್ಯಾಯ ಈ ವಾದವನ್ನು ತಳ್ಳಿಹಾಕಿದ್ದಾರೆ. "ಯಾವುದೇ ವ್ಯಕ್ತಿ ಗಡಿ ದಾಟಿ ಭಾರತಕ್ಕೆ ಬಂದಿರುವ ಬಗ್ಗೆ ನಮ್ಮ ಬಳಿ ಪುರಾವೆಗಳಿಲ್ಲ ಅಥವಾ ಅಂತಹ ವರದಿಗಳು ಬಂದಿಲ್ಲ," ಎಂದು ಅವರು ತಿಳಿಸಿದ್ದಾರೆ.
ದುಬೈನಲ್ಲಿ ಆರೋಪಿ ಪತ್ತೆ
ಲಭ್ಯವಾಗಿರುವ ದಾಖಲೆಗಳ ಪ್ರಕಾರ, ಫೈಸಲ್ ಬಳಿ 2022ರಲ್ಲಿ ಪಡೆದ ಯುಎಇಯ 5 ವರ್ಷಗಳ ಮಲ್ಟಿಪಲ್ ಎಂಟ್ರಿ ಪ್ರವಾಸೋದ್ಯಮ ವೀಸಾ ಇದೆ. ಆತ ಪ್ರಸ್ತುತ ದುಬೈನಲ್ಲಿರುವುದು ದೃಢಪಟ್ಟಿದ್ದು, ಇದು ತನಿಖಾ ಸಂಸ್ಥೆಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಯಾರು ಈ ಉಸ್ಮಾನ್ ಹಾದಿ?
32 ವರ್ಷದ ಉಸ್ಮಾನ್ ಹಾದಿ 'ಇನ್ಕ್ವಿಲಾಬ್ ಮಂಚ್ʼನ ವಕ್ತಾರರಾಗಿದ್ದ. ಶೇಖ್ ಹಸೀನಾ ಸರ್ಕಾರ ಪತನಗೊಳ್ಳಲು ಕಾರಣವಾದ 2024ರ ಪ್ರತಿಭಟನೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದ. ಫೆಬ್ರವರಿ 12ರಂದು ನಡೆಯಲಿರುವ ಚುನಾವಣೆಗೆ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿದ್ದ ವೇಳೆ, ಡಿಸೆಂಬರ್ 12ರಂದು ಅವರ ಮೇಲೆ ಗುಂಡಿನ ದಾಳಿ ನಡೆದಿತ್ತು. ಸಿಂಗಾಪುರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಈ ಡಿಸೆಂಬರ್ 18ರಂದು ಕೊನೆಯುಸಿರೆಳೆದಿದ್ದ. ಇದಾದ ನಂತರ ಕೆಲವು ತಿಂಗಳಿಂದ ಶಾಂತವಾಗಿದ್ದಂತಹ ಬಾಂಗ್ಲಾದೇಶದಲ್ಲಿ ಹಿಂಸಾಚಾರ ಮತ್ತೆ ಭುಗಿಲೆದ್ದಿತ್ತು.

