
ʻನೊಬೆಲ್ ಪ್ರಶಸ್ತಿ ವರ್ಗಾವಣೆ ಸಾಧ್ಯವೇ ಇಲ್ಲʼ- ಟ್ರಂಪ್‌ಗೆ ಪದಕ ಗಿಫ್ಟ್ ಕೊಟ್ಟ ಮರಿಯಾ ನಡೆಗೆ ಸಮಿತಿ ಅಸಮಾಧಾನ
ವೆನೆಜುವೆಲಾದ ವಿರೋಧ ಪಕ್ಷದ ನಾಯಕಿ ಮರಿಯಾ ಕೊರಿನಾ ಮಚಾಡೊ ತಮ್ಮ 2025ರ ನೊಬೆಲ್ ಶಾಂತಿ ಪ್ರಶಸ್ತಿಯ ಪದಕವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಉಡುಗೊರೆಯಾಗಿ ನೀಡಿದ್ದಾರೆ.
ವೆನೆಜುವೆಲಾದ ವಿರೋಧ ಪಕ್ಷದ ನಾಯಕಿ ಮರಿಯಾ ಕೊರಿನಾ ಮಚಾಡೊ ಅವರು ತಮಗೆ ಸಂದ 2025ರ ನೊಬೆಲ್ ಶಾಂತಿ ಪ್ರಶಸ್ತಿಯ ಪದಕವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಉಡುಗೊರೆಯಾಗಿ ನೀಡಿದ್ದು, ಇದು ಜಾಗತಿಕ ಮಟ್ಟದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.
ನೊಬೆಲ್ ಸಮಿತಿಯ ಸ್ಪಷ್ಟನೆ
ನೊಬೆಲ್ ಶಾಂತಿ ಪ್ರಶಸ್ತಿಯು ಅದನ್ನು ಪಡೆದ ವ್ಯಕ್ತಿಗೆ ಮಾತ್ರ ಸೀಮಿತವಾಗಿರುತ್ತದೆ ಎಂದು ನಾರ್ವೇಜಿಯನ್ ನೊಬೆಲ್ ಸಮಿತಿ ಸ್ಪಷ್ಟಪಡಿಸಿದೆ. ಪ್ರಶಸ್ತಿ ವಿಜೇತರು ಪದಕ, ಡಿಪ್ಲೊಮಾ ಅಥವಾ ಬಹುಮಾನದ ಹಣವನ್ನು ಯಾರಿಗಾದರೂ ನೀಡಬಹುದು ಅಥವಾ ಮಾರಾಟ ಮಾಡಬಹುದು, ಆದರೆ ಆ ಪ್ರಶಸ್ತಿಯ ಗೌರವ ಮತ್ತು ಇತಿಹಾಸದಲ್ಲಿ ದಾಖಲಾಗುವ 'ಪುರಸ್ಕೃತ' ಎಂಬ ಹೆಸರನ್ನು ಬೇರೆಯವರಿಗೆ ವರ್ಗಾಯಿಸಲು ಸಾಧ್ಯವಿಲ್ಲ ಎಂದು ಸಮಿತಿ ಹೇಳಿದೆ.
ಮಚಾಡೊ ಈ ನಿರ್ಧಾರ ಕೈಗೊಂಡಿದ್ದೇಕೆ?
ವೆನೆಜುವೆಲಾದಲ್ಲಿ ಪ್ರಜಾಪ್ರಭುತ್ವಕ್ಕಾಗಿ ಹೋರಾಡುತ್ತಿರುವ ಮಚಾಡೊ ಅವರಿಗೆ 2025ರ ನೊಬೆಲ್ ಶಾಂತಿ ಪ್ರಶಸ್ತಿ ನೀಡಲಾಗಿತ್ತು. ಇತ್ತೀಚೆಗೆ ಅಮೆರಿಕವು ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ನಡೆಸಿದ ಕಾರ್ಯಾಚರಣೆಯನ್ನು ಬೆಂಬಲಿಸಿದ್ದ ಮಚಾಡೊ, ಟ್ರಂಪ್ ಅವರ ಈ ನಿರ್ಧಾರವನ್ನು ಶ್ಲಾಘಿಸಿ ಗೌರವಾರ್ಥವಾಗಿ ತಮ್ಮ ಪದಕವನ್ನು ಅವರಿಗೆ ನೀಡಿದ್ದಾರೆ. "ಇದು ವೆನೆಜುವೆಲಾದ ಜನರ ಪರವಾಗಿ ಅಧ್ಯಕ್ಷ ಟ್ರಂಪ್ ಅವರಿಗೆ ನೀಡುತ್ತಿರುವ ಕೃತಜ್ಞತೆಯ ಸಂಕೇತ" ಎಂದು ಅವರು ಹೇಳಿದ್ದರು.
ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯೆ
ಶ್ವೇತಭವನದಲ್ಲಿ ಮಚಾಡೊ ಅವರನ್ನು ಭೇಟಿಯಾದ ಬಳಿಕ ಟ್ರಂಪ್ ಈ ಪದಕವನ್ನು ಸ್ವೀಕರಿಸಿದ್ದಾರೆ. "ಮರಿಯಾ ಅವರು ತಮ್ಮ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನನಗೆ ನೀಡಿದ್ದಾರೆ. ಇದು ಪರಸ್ಪರ ಗೌರವದ ಅದ್ಭುತ ಸಂಕೇತ," ಎಂದು ಅವರು ತಮ್ಮ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ 'ಟ್ರುತ್ ಸೋಶಿಯಲ್'ನಲ್ಲಿ ಹಂಚಿಕೊಂಡಿದ್ದಾರೆ. ತಮಗೆ ಈ ಪ್ರಶಸ್ತಿ ಸಿಗಬೇಕಿತ್ತು ಎಂದು ಟ್ರಂಪ್ ಈ ಹಿಂದೆ ಹಲವು ಬಾರಿ ಹೇಳಿಕೊಂಡಿದ್ದರು ಎಂಬುದು ಇಲ್ಲಿ ಗಮನಾರ್ಹ.
ನೊಬೆಲ್ ಪ್ರಶಸ್ತಿ ನಿಯಮಗಳ ಪ್ರಕಾರ, ಒಮ್ಮೆ ಘೋಷಣೆಯಾದ ಪ್ರಶಸ್ತಿಯನ್ನು ಹಿಂಪಡೆಯಲು ಅಥವಾ ಬೇರೆಯವರಿಗೆ ಹಂಚಲು ಸಾಧ್ಯವಿಲ್ಲ. ಮಚಾಡೊ ಅವರು ವೆನೆಜುವೆಲಾದಲ್ಲಿ ಸರ್ವಾಧಿಕಾರದ ವಿರುದ್ಧ ಶಾಂತಿಯುತ ಹೋರಾಟ ನಡೆಸಿದ್ದಕ್ಕಾಗಿ 2025ರ ಅಕ್ಟೋಬರ್‌ನಲ್ಲಿ ಈ ಗೌರವಕ್ಕೆ ಪಾತ್ರರಾಗಿದ್ದರು.

