
ಟ್ರಂಪ್‌ಗೆ ನೊಬೆಲ್ ಶಾಂತಿ ಪದಕ ಗಿಫ್ಟ್ ಕೊಟ್ಟ ವೆನೆಜುವೆಲಾ ನಾಯಕಿ ಮರಿಯಾ ಮಚಾಡೊ
ವೆನೆಜುವೆಲಾದ ವಿರೋಧ ಪಕ್ಷದ ನಾಯಕಿ ಮರಿಯಾ ಮಚಾಡೊ ತಮ್ಮ 2025ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಹಸ್ತಾಂತರಿಸಿದ್ದಾರೆ.
ವೆನೆಜುವೆಲಾದ ವಿರೋಧ ಪಕ್ಷದ ನಾಯಕಿ ಮರಿಯಾ ಕೊರಿನಾ ಮಚಾಡೊ ಅವರು ತಮ್ಮ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಹಸ್ತಾಂತರಿಸಿದ್ದಾರೆ. ವೆನೆಜುವೆಲಾದಲ್ಲಿ ಪ್ರಜಾಪ್ರಭುತ್ವಕ್ಕಾಗಿ ಹೋರಾಡಿ 2025ರ ನೊಬೆಲ್ ಶಾಂತಿ ಪ್ರಶಸ್ತಿ ಗೆದ್ದ ಮರಿಯಾ ಕೊರಿನಾ ಮಚಾಡೊ, ಗುರುವಾರ ಶ್ವೇತಭವನದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾದರು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಈ ಮುಚ್ಚಿದ ಬಾಗಿಲಿನ ಸಭೆಯಲ್ಲಿ ಮಚಾಡೊ, ಅವರು ತಮ್ಮ ಚಿನ್ನದ ನೊಬೆಲ್ ಪದಕವನ್ನು ಟ್ರಂಪ್ ಅವರಿಗೆ ಉಡುಗೊರೆಯಾಗಿ ನೀಡಿದರು.
ವೆನೆಜುವೆಲಾದ ಸರ್ವಾಧಿಕಾರಿ ನಿಕೋಲಾಸ್ ಮಡುರೊನನ್ನು ಅಮೆರಿಕದ ಮಿಲಿಟರಿ ಕಾರ್ಯಾಚರಣೆಯ ಮೂಲಕ ಪದಚ್ಯುತಗೊಳಿಸಿ, ಬಂಧಿಸಿದ ಟ್ರಂಪ್ ಅವರ ಕ್ರಮವನ್ನು ಮಚಾಡೊ ʻಐತಿಹಾಸಿಕ ನಡೆʼ ಎಂದು ಬಣ್ಣಿಸಿದ್ದಾರೆ. ತಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಟ್ರಂಪ್ ತೋರಿದ ಬದ್ಧತೆಗೆ ಕೃತಜ್ಞತೆಯ ಸಂಕೇತವಾಗಿ ಈ ಪದಕ ನೀಡುತ್ತಿರುವುದಾಗಿ ಅವರು ತಿಳಿಸಿದರು.
ಟ್ರಂಪ್ ಅವರ ನೊಬೆಲ್ ಕನಸು
ವಾಸ್ತವದಲ್ಲಿ, ಟ್ರಂಪ್ ಈ ಪ್ರಶಸ್ತಿಗಾಗಿ ಬಹಳ ಆಸೆ ಪಟ್ಟಿದ್ದರು ಮತ್ತು ತಮಗೇ ಈ ಪ್ರಶಸ್ತಿ ಬರಬೇಕೆಂದು ಬಹಿರಂಗವಾಗಿ ಪ್ರಚಾರ ಮಾಡಿದ್ದರು. ಆದರೆ ನೊಬೆಲ್ ಸಮಿತಿ ಮಚಾಡೊ ಅವರನ್ನು ಆಯ್ಕೆ ಮಾಡಿದಾಗ ಟ್ರಂಪ್ ಅಸಮಾಧಾನ ವ್ಯಕ್ತಪಡಿಸಿದ್ದರು. ಈಗ ಮಚಾಡೊ ಅವರೇ ಸ್ವತಃ ಪ್ರಶಸ್ತಿ ತಂದುಕೊಟ್ಟಿದ್ದಕ್ಕೆ ಟ್ರಂಪ್ ಹರ್ಷ ವ್ಯಕ್ತಪಡಿಸಿದ್ದು, ಇದನ್ನು “ಪರಸ್ಪರ ಗೌರವದ ಅದ್ಭುತ ಸಂಕೇತ” ಎಂದು ಕರೆದಿದ್ದಾರೆ.
ನೊಬೆಲ್ ಸಮಿತಿಯ ಅಸಮಾಧಾನ
ನಾರ್ವೆಯ ನೊಬೆಲ್ ಸಮಿತಿಯು ಈ ನಡೆಯನ್ನು ಒಪ್ಪಿಲ್ಲ. ಪ್ರಶಸ್ತಿಯನ್ನು ಬೇರೆಯವರಿಗೆ ವರ್ಗಾಯಿಸಲು ಅಥವಾ ಹಂಚಿಕೊಳ್ಳಲು ಕಾನೂನಿನಲ್ಲಿ ಅವಕಾಶವಿಲ್ಲ, ಪದಕ ಯಾರ ಕೈಯಲ್ಲಿದ್ದರೂ ಅಧಿಕೃತವಾಗಿ ಮಚಾಡೊ ಅವರೇ ವಿಜೇತರು ಎಂದು ಸಮಿತಿ ಸ್ಪಷ್ಟಪಡಿಸಿದೆ.
ರಾಜಕೀಯ ತಂತ್ರಗಾರಿಕೆ
ಮಡುರೊ ಪದಚ್ಯುತಿ ನಂತರ ವೆನೆಜುವೆಲಾದ ನಾಯಕತ್ವದ ಬಗ್ಗೆ ಗೊಂದಲವಿದೆ. ಟ್ರಂಪ್ ಅವರು ಮಚಾಡೊ ಅವರಿಗೆ ದೇಶ ಮುನ್ನಡೆಸುವಷ್ಟು ಜನಬೆಂಬಲ ಇಲ್ಲ ಎಂದು ಈ ಹಿಂದೆ ಹೇಳಿದ್ದರು ಮತ್ತು ಮಡುರೊನ ಮಾಜಿ ಉಪಾಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಅವರನ್ನು ಬೆಂಬಲಿಸುವ ಸೂಚನೆ ನೀಡಿದ್ದರು. ಹೀಗಾಗಿ, ಟ್ರಂಪ್ ಅವರ ವಿಶ್ವಾಸ ಗಳಿಸಲು ಮಚಾಡೊ ಈ ತಂತ್ರ ಬಳಸಿದ್ದಾರೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ.

