Balen Shah| ನೇಪಾಳದಲ್ಲಿ ಬಲೇನ್ ಯುಗಾರಂಭ: ಕ್ಯಾಂಪಸ್ ಪಾಲಿಟಿಕ್ಸ್ ಬ್ಯಾನ್, ಮಾಜಿ ಪ್ರಧಾನಿ ಓಲಿ ಬಂಧನ!
x
ನೇಪಾಳ ನೂತನ ಪ್ರಧಾನಿ ಬಲೇನ್ ಶಾ(ಸಂಗ್ರಹ ಚಿತ್ರ)

Balen Shah| ನೇಪಾಳದಲ್ಲಿ ಬಲೇನ್ ಯುಗಾರಂಭ: ಕ್ಯಾಂಪಸ್ ಪಾಲಿಟಿಕ್ಸ್ ಬ್ಯಾನ್, ಮಾಜಿ ಪ್ರಧಾನಿ ಓಲಿ ಬಂಧನ!

ನೇಪಾಳದ ನೂತನ ಪ್ರಧಾನಿ ಬಲೇಂದ್ರ ಶಾ ಅಧಿಕಾರ ವಹಿಸಿಕೊಂಡ 48 ಗಂಟೆಗಳಲ್ಲಿ ಕೈಗೊಂಡಿರುವ 100 ಅಂಶಗಳ ಕ್ರಾಂತಿಕಾರಿ ನಿರ್ಧಾರಗಳು ಜಗತ್ತಿನಾದ್ಯಂತ ಸಂಚಲನ ಮೂಡಿಸಿವೆ.


Click the Play button to hear this message in audio format

ರ‍್ಯಾಪರ್ ಆಗಿದ್ದ ಬಲೇಂದ್ರ ಶಾ (ಬಲೇನ್ ಶಾ) ಈಗ ನೇಪಾಳದ ನೂತನ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ದೇಶಾದ್ಯಂತ ಸಂಚಲನ ಮೂಡಿಸಿದ್ದಾರೆ. ಪ್ರಮಾಣ ವಚನ ಸ್ವೀಕರಿಸಿದ ಕೇವಲ 48 ಗಂಟೆಗಳಲ್ಲಿ 100 ಅಂಶಗಳ ಕಾರ್ಯಯೋಜನೆಯನ್ನು ಬಿಡುಗಡೆ ಮಾಡುವ ಮೂಲಕ ಹಳೆಯ ವ್ಯವಸ್ಥೆಯನ್ನು ಆಳವಾಗಿ ಬದಲಿಸಲು ಮುಂದಾಗಿದ್ದಾರೆ.

ಕ್ಯಾಂಪಸ್‌ಗಳಿಂದ ರಾಜಕೀಯಕ್ಕೆ ಗೇಟ್‌ಪಾಸ್!

ಬಾಲೆನ್ ಶಾ ಸರ್ಕಾರದ ಅತ್ಯಂತ ಧೈರ್ಯದ ಮತ್ತು ವಿವಾದಾತ್ಮಕ ನಿರ್ಧಾರವೆಂದರೆ ಶಾಲಾ-ಕಾಲೇಜು ಕ್ಯಾಂಪಸ್‌ಗಳಲ್ಲಿ ವಿದ್ಯಾರ್ಥಿ ರಾಜಕೀಯವನ್ನು ಸಂಪೂರ್ಣವಾಗಿ ನಿಷೇಧಿಸಿರುವುದು. ಇನ್ನು ಮುಂದೆ ರಾಜಕೀಯ ಪಕ್ಷಗಳ ಅಂಗಸಂಸ್ಥೆಗಳಾಗಿರುವ ವಿದ್ಯಾರ್ಥಿ ಸಂಘಟನೆಗಳು ಕ್ಯಾಂಪಸ್‌ನಲ್ಲಿ ಇರುವಂತಿಲ್ಲ.

ಬದಲಿಗೆ, ಮುಂದಿನ 90 ದಿನಗಳಲ್ಲಿ 'ಸ್ಟೂಡೆಂಟ್ ಕೌನ್ಸಿಲ್' ಅಥವಾ 'ವಾಯ್ಸ್ ಆಫ್ ಸ್ಟೂಡೆಂಟ್ಸ್' ಎಂಬ ಪಕ್ಷಾತೀತ ಸಂಘಟನೆಗಳನ್ನು ರಚಿಸಲಾಗುತ್ತದೆ. ಶಿಕ್ಷಣ ಸಂಸ್ಥೆಗಳು ರಾಜಕೀಯದ ಆಖಾಡವಾಗಬಾರದು ಮತ್ತು ಪರೀಕ್ಷೆಗಳು ವಿಳಂಬವಾಗಬಾರದು ಎಂಬುದು ಪ್ರಧಾನಿಯವರ ಗುರಿ.

ಅಧಿಕಾರಿಗಳ ಪಕ್ಷಪಾತಕ್ಕೆ ಬ್ರೇಕ್

ಸರ್ಕಾರಿ ನೌಕರರು ಮತ್ತು ಶಿಕ್ಷಕರು ಯಾವುದೇ ರಾಜಕೀಯ ಪಕ್ಷದ ಸದಸ್ಯತ್ವ ಹೊಂದುವುದನ್ನು ಸರ್ಕಾರ ಕಟ್ಟುನಿಟ್ಟಾಗಿ ನಿಷೇಧಿಸಿದೆ. ಸರ್ಕಾರಿ ಸಂಸ್ಥೆಗಳ ಒಳಗಿರುವ ಪಕ್ಷ ಆಧಾರಿತ ಕಾರ್ಮಿಕ ಸಂಘಗಳನ್ನು ರದ್ದುಗೊಳಿಸಲು ಆದೇಶಿಸಲಾಗಿದೆ. ಇದರಿಂದ ಆಡಳಿತದಲ್ಲಿ ಪಾರದರ್ಶಕತೆ ಬರಲಿದೆ ಎಂಬುದು ಸರ್ಕಾರದ ವಾದ.

ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ವದ ಸುಧಾರಣೆ

• ವಿದೇಶಿ ಹೆಸರುಗಳಿಗೆ ನಿಷೇಧ: ಆಕ್ಸ್‌ಫರ್ಡ್, ಪೆಂಟಗನ್, ಸೇಂಟ್ ಕ್ಸೇವಿಯರ್ಸ್‌ನಂತಹ ವಿದೇಶಿ ಹೆಸರುಗಳನ್ನು ಹೊಂದಿರುವ ಶಿಕ್ಷಣ ಸಂಸ್ಥೆಗಳು ಇನ್ನು ಮುಂದೆ ನೇಪಾಳಿ ಮೂಲದ ಹೆಸರುಗಳನ್ನು ಅಳವಡಿಸಿಕೊಳ್ಳುವುದು ಕಡ್ಡಾಯ.

• ಪರೀಕ್ಷಾ ಪದ್ಧತಿ ಬದಲಾವಣೆ: 5ನೇ ತರಗತಿಯವರೆಗೆ ಇದ್ದ ಆಂತರಿಕ ಪರೀಕ್ಷೆಗಳನ್ನು ರದ್ದುಗೊಳಿಸಿ, ಪರ್ಯಾಯ ಮೌಲ್ಯಮಾಪನ ಪದ್ಧತಿ ಜಾರಿಗೆ ತರಲಾಗಿದೆ.

• ಅಂಡರ್ ಗ್ರಾಜುಯೇಟ್ (UG) ಪ್ರವೇಶಕ್ಕೆ ಇದ್ದ ಪೌರತ್ವದ ಅಗತ್ಯತೆಯನ್ನು ತೆಗೆದುಹಾಕಲಾಗಿದೆ.

ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಬಂಧನ

ಬಾಲೆನ್ ಶಾ ಸರ್ಕಾರವು ಅಧಿಕಾರಕ್ಕೆ ಬರುತ್ತಿದ್ದಂತೆ ರಾಜಕೀಯ ವಿರೋಧಿಗಳ ವಿರುದ್ಧವೂ ಕಠಿಣ ಕ್ರಮ ಕೈಗೊಂಡಿದೆ. ಕಳೆದ ವರ್ಷ ನಡೆದ 'Gen Z' ಪ್ರತಿಭಟನೆಯನ್ನು ಹತ್ತಿಕ್ಕಿದ ಆರೋಪದ ಮೇಲೆ ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಮತ್ತು ಮಾಜಿ ಸಚಿವ ರಮೇಶ್ ಲೇಖಕ್ ಅವರನ್ನು ಬಂಧಿಸಲಾಗಿದೆ. ಈ ಪ್ರತಿಭಟನೆಯಲ್ಲಿ ಸುಮಾರು 77 ಜನರು ಪ್ರಾಣ ಕಳೆದುಕೊಂಡಿದ್ದರು.

ಹುತಾತ್ಮ ಪ್ರತಿಭಟನಾಕಾರರ ಕುಟುಂಬಕ್ಕೆ ಉದ್ಯೋಗ

ಚುನಾವಣಾ ಭರವಸೆಯಂತೆ, 'Gen Z' ಪ್ರತಿಭಟನೆಯಲ್ಲಿ ಮೃತಪಟ್ಟ 27 ವಿದ್ಯಾರ್ಥಿಗಳ ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡಲು ಮೊದಲ ಸಚಿವ ಸಂಪುಟ ಸಭೆಯಲ್ಲೇ ನಿರ್ಧಾರ ಕೈಗೊಳ್ಳಲಾಗಿದೆ. ನೇಪಾಳ ವಿದ್ಯುತ್ ಪ್ರಾಧಿಕಾರ ಈಗಾಗಲೇ ಈ ಬಗ್ಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ.

ಭಾರತದೊಂದಿಗೆ ಸಂಬಂಧ

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಅಭಿನಂದನಾ ಸಂದೇಶಕ್ಕೆ ಪ್ರತಿಕ್ರಿಯಿಸಿರುವ ಬಾಲೆನ್ ಶಾ, ನವದೆಹಲಿಯೊಂದಿಗೆ ನಿಕಟವಾಗಿ ಕೆಲಸ ಮಾಡಲು ಉತ್ಸುಕನಾಗಿದ್ದೇನೆ ಎಂದು ತಿಳಿಸಿದ್ದಾರೆ. ಆದರೆ, ಕಾಠ್ಮಂಡುವಿನ ಮೇಯರ್ ಆಗಿದ್ದಾಗ 'ಗ್ರೇಟರ್ ನೇಪಾಳ'ದ ಬಗ್ಗೆ ಮಾತನಾಡಿದ್ದ ಬಾಲೆನ್ ಶಾ ಅವರ ಬಗ್ಗೆ ಭಾರತ ಸದ್ಯಕ್ಕೆ 'ಕಾದು ನೋಡುವ' ತಂತ್ರ ಅನುಸರಿಸುತ್ತಿದೆ. ಅವರ ತೀವ್ರ ರಾಷ್ಟ್ರೀಯತಾವಾದಿ ನಿಲುವುಗಳು ಭಾರತದೊಂದಿಗೆ ಹೇಗೆ ಹೊಂದಾಣಿಕೆಯಾಗಲಿವೆ ಎಂಬುದು ಕುತೂಹಲ ಮೂಡಿಸಿದೆ.

Read More
Next Story