
Nepal Election| ನೇಪಾಳ ಸಾರ್ವತ್ರಿಕ ಚುನಾವಣೆ 2026: ಬದಲಾವಣೆಗಾಗಿ ಸಜ್ಜಾದ ನೆರೆರಾಷ್ಟ್ರ
ನೇಪಾಳದಲ್ಲಿ ಇಂದು (ಮಾರ್ಚ್ 5) ಮಹತ್ವದ ಸಾರ್ವತ್ರಿಕ ಚುನಾವಣೆ ನಡೆಯುತ್ತಿದೆ. ಯುವ ನಾಯಕ ಬಾಲೆನ್ ಶಾ ಮತ್ತು ಗಗನ್ ಥಾಪಾ ನಡುವೆ ತೀವ್ರ ಪೈಪೋಟಿ ಎದುರಾಗಿದೆ.
ಕಳೆದ ವರ್ಷ ನಡೆದ 'ಜೆನ್ ಜಿ' (Gen Z) ನೇತೃತ್ವದ ಬೃಹತ್ ಜನಜಾಗೃತಿಯ ನಂತರ, ಕೆ.ಪಿ. ಶರ್ಮಾ ಓಲಿ ಸರ್ಕಾರ ಪತನಗೊಂಡು ಹೊಸ ರಾಜಕೀಯ ಭವಿಷ್ಯದ ಹುಡುಕಾಟದಲ್ಲಿರುವ ನೇಪಾಳದಲ್ಲಿ ಇಂದು (ಮಾರ್ಚ್ 5, ಗುರುವಾರ) ನಿರ್ಣಾಯಕ ಸಾರ್ವತ್ರಿಕ ಚುನಾವಣೆ ನಡೆಯುತ್ತಿದೆ. "ಶಾಂತಿಯೇ ನೇಪಾಳದ ಗುರುತು" ಎಂದು ಸಾರಿದ ಮಧ್ಯಂತರ ಪ್ರಧಾನಿ ಸುಶೀಲಾ ಕಾರ್ಕಿ ಅವರು ದೇಶದ ಅಭಿವೃದ್ಧಿಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಲು ಜನತೆಗೆ ಕರೆ ನೀಡಿದ್ದಾರೆ.
ಮತದಾನದ ಸಮಯ
275 ಸದಸ್ಯರ ಪ್ರತಿನಿಧಿ ಸಭೆಗೆ ಮತದಾನವು ಸ್ಥಳೀಯ ಕಾಲಮಾನ ಬೆಳಿಗ್ಗೆ 7 ಗಂಟೆಗೆ (ಭಾರತೀಯ ಕಾಲಮಾನ ಬೆಳಿಗ್ಗೆ 6:45) ಆರಂಭವಾಗಿದ್ದು, ಸಂಜೆ 5 ಗಂಟೆಯವರೆಗೆ ನಡೆಯಲಿದೆ. ನೇಪಾಳದ ಮುಂದಿನ ಸರ್ಕಾರವನ್ನು ನಿರ್ಧರಿಸಲು ಸುಮಾರು 1.89 ಕೋಟಿ (18.9 ಮಿಲಿಯನ್) ಅರ್ಹ ಮತದಾರರು ಈ ಚುನಾವಣೆಯಲ್ಲಿ ಭಾಗವಹಿಸುತ್ತಿದ್ದಾರೆ.
ಸೀಟುಗಳ ಹಂಚಿಕೆ ಹೇಗೆ?
ಒಟ್ಟು 275 ಸಂಸದೀಯ ಸ್ಥಾನಗಳ ಪೈಕಿ 165 ಸದಸ್ಯರನ್ನು ನೇರ ಮತದಾನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಇನ್ನುಳಿದ 110 ಸ್ಥಾನಗಳನ್ನು 'ಅನುಪಾತದ ಪ್ರಾತಿನಿಧ್ಯ' ಪದ್ಧತಿಯ ಮೂಲಕ ಹಂಚಿಕೆ ಮಾಡಲಾಗುತ್ತದೆ. ಬ್ಯಾಲೆಟ್ ಬಾಕ್ಸ್‌ಗಳ ಸಂಗ್ರಹವಾದ 24 ಗಂಟೆಗಳ ಒಳಗೆ ನೇರ ಮತದಾನದ ಫಲಿತಾಂಶಗಳನ್ನು ಘೋಷಿಸಲು ಚುನಾವಣಾ ಆಯೋಗ ಯೋಜಿಸಿದೆ.
ಹೊಸ ಮತದಾರರ ಸೇರ್ಪಡೆ
ಕಳೆದ ವರ್ಷ ನಡೆದ ಯುವಜನತೆಯ ಪ್ರತಿಭಟನೆಯ ನಂತರ, ಸುಮಾರು 10 ಲಕ್ಷ (1 ಮಿಲಿಯನ್) ಹೊಸ ಮತದಾರರು ಮತದಾರರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಇವರಲ್ಲಿ ಹೆಚ್ಚಿನವರು ಯುವಜನತೆಯೇ ಆಗಿದ್ದಾರೆ.
ಕಣದಲ್ಲಿರುವ ಪ್ರಮುಖರು
ಈ ಚುನಾವಣೆಯಲ್ಲಿ ಸುಮಾರು 65 ರಾಜಕೀಯ ಪಕ್ಷಗಳು ಸ್ಪರ್ಧಿಸುತ್ತಿದ್ದು, ಪ್ರಮುಖವಾಗಿ ರ್‍ಯಾಪರ್‌ನಿಂದ ರಾಜಕಾರಣಿಯಾಗಿ ಬದಲಾಗಿ ಯುವಜನತೆಯ ಆಕರ್ಷಣೆಯಾಗಿರುವ ಬಾಲೆನ್ ಶಾ, ನೇಪಾಳಿ ಕಾಂಗ್ರೆಸ್ ಪಕ್ಷದ ಗಗನ್ ಥಾಪಾ, ಮತ್ತೆ ಅಧಿಕಾರ ಹಿಡಿಯಲು ಹವಣಿಸುತ್ತಿರುವ ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಮತ್ತು ಪುಷ್ಪ ಕಮಲ್ ದಹಾಲ್ (ಪ್ರಚಂಡ) ಅವರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.
ಭ್ರಷ್ಟಾಚಾರ ನಿರ್ಮೂಲನೆ, ಉದ್ಯೋಗ ಸೃಷ್ಟಿ, ಬಡತನ ಮತ್ತು ಯುವ ನಿರುದ್ಯೋಗ ಈ ಚುನಾವಣೆಯ ಪ್ರಮುಖ ವಿಷಯಗಳಾಗಿವೆ. ಇದರೊಂದಿಗೆ ಭಾರತ ಮತ್ತು ಚೀನಾದೊಂದಿಗಿನ ಸಂಬಂಧವೂ ಮತದಾರರ ಮೇಲೆ ಪ್ರಭಾವ ಬೀರಲಿದೆ.
ಪ್ರಚಾರದ ನಿಯಮಗಳು
ಫೆಬ್ರವರಿ 16 ರಿಂದ ಮಾರ್ಚ್ 2 ರವರೆಗೆ ಪ್ರಚಾರ ನಡೆದಿದೆ. ಚುನಾವಣಾ ಆಯೋಗವು ಯಾವುದೇ ಚುನಾವಣಾ ಪೂರ್ವ ಸಮೀಕ್ಷೆಗಳನ್ನು ಪ್ರಕಟಿಸದಂತೆ ಮಾಧ್ಯಮಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಸುಮಾರು 80,000 ಸೇನಾ ಸಿಬ್ಬಂದಿ ಸೇರಿದಂತೆ ಒಟ್ಟು 3,30,000 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ವೈಮಾನಿಕ ಗಸ್ತು ಮತ್ತು ಬಿಗಿ ಪೋಲೀಸ್ ಕಾವಲಿನಲ್ಲಿ ಚುನಾವಣೆ ನಡೆಯುತ್ತಿದೆ.
ವಿಶೇಷ ಕ್ರಮಗಳು
ಮಾರ್ಚ್ 4 ರಿಂದ 6 ರವರೆಗೆ ಮೂರು ದಿನಗಳ ಕಾಲ ಸಾರ್ವಜನಿಕ ರಜೆ ಘೋಷಿಸಲಾಗಿದೆ. ಮಾರ್ಚ್ 2 ರ ಮಧ್ಯರಾತ್ರಿಯಿಂದ ಮಾರ್ಚ್ 5 ರ ಮಧ್ಯರಾತ್ರಿಯವರೆಗೆ ಭಾರತ-ನೇಪಾಳ ಗಡಿಯನ್ನು ಮುಚ್ಚಲಾಗಿದೆ. ದೇಶಾದ್ಯಂತ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

