
ಎಟಿಎಂ ಯಂತ್ರವನ್ನು ಕಟ್ಟಿಂಗ್ ಮಷಿನ್ ಬಳಸಿ ಒಡೆಯಲು ಯತ್ನಿಸಿದ್ದ ನೇಪಾಳ ಮೂಲದ ಯುವಕನನ್ನು ಇಂದಿರಾನಗರ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಬಂಧಿತ ಆರೋಪಿಯನ್ನು 23 ವರ್ಷದ ರಾಜೇಂದ್ರ ಸಿಂಗ್ ಎಂದು ಗುರುತಿಸಲಾಗಿದೆ.
ಬೆಂಗಳೂರಿನಲ್ಲಿ ಎಟಿಎಂ ದರೋಡೆಗೆ ಯತ್ನ: ಕಟ್ಟಿಂಗ್ ಮಷಿನ್ ಬಳಸಿದ್ದ ನೇಪಾಳ ಮೂಲದ ಯುವಕನ ಬಂಧನ
ಆರೋಪಿ ರಾಜೇಂದ್ರ ಸಿಂಗ್ ತನ್ನ ಹಿನ್ನೆಲೆಯನ್ನು ಬಾಯ್ಬಿಟ್ಟಿದ್ದಾನೆ. ನಗರದ ಪ್ರಸಿದ್ಧ ನಾಗಾರ್ಜುನ ಹೋಟೆಲ್‌ನ ಅಡುಗೆಮನೆಯಲ್ಲಿ (ಕಿಚನ್) ತಾನು ಕೆಲಸ ಮಾಡುತ್ತಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ.
ಸಿಎಂಎಸ್ ಕಂಪನಿಯ ಮಾಜಿ ಸಿಬ್ಬಂದಿ ಶಾಮೀಲಾಗಿ ನಡೆಸಿದ್ದ ಎಟಿಎಂ ದರೋಡೆ ಪ್ರಕರಣದ ಹಸಿರು ಮಾಸುವ ಮುನ್ನವೇ, ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಬ್ಯಾಂಕ್ ಎಟಿಎಂ ದರೋಡೆಗೆ ವಿಫಲ ಯತ್ನ ನಡೆದಿದೆ. ಎಟಿಎಂ ಯಂತ್ರವನ್ನು ಕಟ್ಟಿಂಗ್ ಮಷಿನ್ ಬಳಸಿ ಒಡೆಯಲು ಯತ್ನಿಸಿದ್ದ ನೇಪಾಳ ಮೂಲದ ಯುವಕನನ್ನು ಇಂದಿರಾನಗರ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಬಂಧಿತ ಆರೋಪಿಯನ್ನು 23 ವರ್ಷದ ರಾಜೇಂದ್ರ ಸಿಂಗ್ ಎಂದು ಗುರುತಿಸಲಾಗಿದೆ.
ಸಿಸಿಟಿವಿ ಮುಚ್ಚಿ ದರೋಡೆಗೆ ಸ್ಕೆಚ್
ಫೆಬ್ರವರಿ 10ರಂದು ಇಂದಿರಾನಗರದ ಡಬಲ್ ರೋಡ್ ಬಳಿ ಇರುವ 'ಬ್ಯಾಂಕ್ ಆಫ್ ಬರೋಡಾ' ಎಟಿಎಂ ಕೇಂದ್ರದಲ್ಲಿ ಮಧ್ಯರಾತ್ರಿ ಈ ಘಟನೆ ನಡೆದಿದೆ. ತಡರಾತ್ರಿ ಎಟಿಎಂ ಕೇಂದ್ರದೊಳಗೆ ನುಗ್ಗಿದ್ದ ಆರೋಪಿ, ಹೊರಗಿನಿಂದ ಶಟರ್ ಬಂದ್ ಮಾಡಿ ಕೃತ್ಯಕ್ಕೆ ಮುಂದಾಗಿದ್ದ. ದರೋಡೆಗೂ ಮುನ್ನ ಎಟಿಎಂ ಒಳಗಿದ್ದ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿ ಸೆರೆಯಾಗದಿರಲು ಕ್ಯಾಮೆರಾಗಳಿಗೆ ಬಟ್ಟೆ ಹಾಗೂ ಟೇಪ್ ಅಂಟಿಸಿ ಮುಚ್ಚಿದ್ದ. ಬಳಿಕ ಕಟ್ಟಿಂಗ್ ಮಷೀನ್ ಬಳಸಿ ಎಟಿಎಂ ಯಂತ್ರವನ್ನು ಒಡೆದು ಹಣ ದೋಚಲು ವಿಫಲ ಯತ್ನ ನಡೆಸಿದ್ದ ಎಂಬ ಅಂಶ ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಹಣ ಸಿಗದೆ ಬರಿಗೈಯಲ್ಲಿ ವಾಪಸ್
ಸಾಕಷ್ಟು ಹೊತ್ತು ಕಟ್ಟಿಂಗ್ ಮಷಿನ್ ಬಳಸಿ ಯಂತ್ರವನ್ನು ಕತ್ತರಿಸಲು ಆರೋಪಿ ಪ್ರಯತ್ನಿಸಿದ್ದಾನೆ. ಆದರೆ, ಅತ್ಯಂತ ಭದ್ರವಾಗಿದ್ದ ಎಟಿಎಂ ಯಂತ್ರವನ್ನು ಸಂಪೂರ್ಣವಾಗಿ ಒಡೆಯಲು ಸಾಧ್ಯವಾಗದ ಕಾರಣ ಯಾವುದೇ ಹಣ ಸಿಗದೆ ಬರಿಗೈಯಲ್ಲಿ ವಾಪಸಾಗಿದ್ದ. ಮಾರನೇ ದಿನ ಬೆಳಿಗ್ಗೆ ಘಟನೆ ಬೆಳಕಿಗೆ ಬರುತ್ತಿದ್ದಂತೆ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು, ತಾಂತ್ರಿಕ ಸಾಕ್ಷ್ಯಗಳು ಹಾಗೂ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಯ ಜಾಡು ಹಿಡಿದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೋಟೆಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಆರೋಪಿ
ಬಂಧನದ ಬಳಿಕ ಪೊಲೀಸರು ನಡೆಸಿದ ವಿಚಾರಣೆ ವೇಳೆ ಆರೋಪಿ ರಾಜೇಂದ್ರ ಸಿಂಗ್ ತನ್ನ ಹಿನ್ನೆಲೆಯನ್ನು ಬಾಯ್ಬಿಟ್ಟಿದ್ದಾನೆ. ನಗರದ ಪ್ರಸಿದ್ಧ ನಾಗಾರ್ಜುನ ಹೋಟೆಲ್‌ನ ಅಡುಗೆಮನೆಯಲ್ಲಿ (ಕಿಚನ್) ತಾನು ಕೆಲಸ ಮಾಡುತ್ತಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ. ಸುಲಭವಾಗಿ ಹಣ ಸಂಪಾದಿಸುವ ದುರುದ್ದೇಶದಿಂದ ರಾತ್ರೋರಾತ್ರಿ ಈ ಕೃತ್ಯಕ್ಕೆ ಕೈಹಾಕಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಕಳ್ಳನನ್ನು ಸೆರೆಹಿಡಿದಿರುವ ಇಂದಿರಾನಗರ ಪೊಲೀಸರು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

