Nepal Election Results|ನೇಪಾಳ ಚುನಾವಣೆ: Gen Z ಬೆಂಬಲಿತ ಬಲೆನ್ ಶಾಗೆ ಭಾರೀ ಮುನ್ನಡೆ
x
ನೇಪಾಳ ಪ್ರಧಾನಿ ಅಭ್ಯರ್ಥಿ ಬಲೆನ್‌ ಶಾ

Nepal Election Results|ನೇಪಾಳ ಚುನಾವಣೆ: Gen Z ಬೆಂಬಲಿತ ಬಲೆನ್ ಶಾಗೆ ಭಾರೀ ಮುನ್ನಡೆ

ನೇಪಾಳ ಸಾರ್ವತ್ರಿಕ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಕೆ.ಪಿ. ಶರ್ಮಾ ಓಲಿ ವಿರುದ್ಧ ಬಲೆನ್ ಶಾ ಮುನ್ನಡೆ ಕಾಯ್ದುಕೊಂಡಿದ್ದಾರೆ.


ನೇಪಾಳದಲ್ಲಿ ಕಳೆದ ವರ್ಷ ನಡೆದ ‘ಜೆನ್-ಜೆ’ (Gen Z) ಪ್ರತಿಭಟನೆಯ ನಂತರ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಬಿರುಸಿನಿಂದ ಸಾಗುತ್ತಿದೆ. ಆರಂಭಿಕ ಟ್ರೆಂಡ್‌ಗಳ ಪ್ರಕಾರ, ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ ನೇತೃತ್ವದ ಸರ್ಕಾರವನ್ನು ಉರುಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಯುವ ನಾಯಕರು ಈ ಬಾರಿ ಭರ್ಜರಿ ಮುನ್ನಡೆ ಸಾಧಿಸುತ್ತಿದ್ದಾರೆ. ಅದರಲ್ಲೂ ಪ್ರಧಾನ ಮಂತ್ರಿ ಅಭ್ಯರ್ಥಿ ಬಲೆನ್‌ ಶಾ ಭರ್ಜರಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಓಲಿ ಕೋಟೆಯಲ್ಲಿ 'ಬಲೆನ್ ಶಾ' ಅಬ್ಬರ

ಆರಂಭದಲ್ಲಿ ರ್ಯಾಪರ್‌ ಆಗಿದ್ದ ಬಲೆಂದ್ರ ಶಾ (ಬಲೆನ್) ಅವರು ಕಠ್ಮಂಡುವಿನ ಮಾಜಿ ಮೇಯರ್ ಆಗಿದ್ದರು. ಓಲಿ ಅವರ ತವರು ಕ್ಷೇತ್ರವಾದ ಜಾಪಾದಲ್ಲಿ ಅವರ ವಿರುದ್ಧವೇ ಭರ್ಜರಿ ಮುನ್ನಡೆ ಸಾಧಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಕೇವಲ 35 ವರ್ಷದ ಬಲೆನ್ ಶಾ, ಕಳೆದ ಡಿಸೆಂಬರ್‌ನಲ್ಲಿ ಮಾಜಿ ಟಿವಿ ನಿರೂಪಕ ರಬಿ ಲಾಮಿಚಾನೆ ನೇತೃತ್ವದ ರಾಷ್ಟ್ರೀಯ ಸ್ವತಂತ್ರ ಪಕ್ಷ (RSP) ಸೇರಿದ್ದರು. ಭ್ರಷ್ಟಾಚಾರದ ವಿರುದ್ಧ ಯುವಕರನ್ನು ಸಂಘಟಿಸಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಿದ್ದ ಬಲೆನ್, ಈಗ ಚುನಾವಣಾ ಕಣದಲ್ಲಿಯೂ ಕಮಾಲ್ ಮಾಡುತ್ತಿದ್ದಾರೆ.

ಚುನಾವಣಾ ಫಲಿತಾಂಶ

ನೇಪಾಳದ ಕೆಳಮನೆಯ 275 ಸ್ಥಾನಗಳ ಪೈಕಿ 165 ಸ್ಥಾನಗಳಿಗೆ ನೇರ ಚುನಾವಣೆ ನಡೆದಿದ್ದು, ಉಳಿದ ಸ್ಥಾನಗಳು ಅನುಪಾತದ ಪ್ರಾತಿನಿಧ್ಯದ ಮೂಲಕ ನಿರ್ಧಾರವಾಗಲಿವೆ. ಬಲೆನ್ ಶಾ ಅವರ ರಾಷ್ಟ್ರೀಯ ಸ್ವತಂತ್ರ ಪಕ್ಷ (RSP) ಪಕ್ಷ ಈಗಾಗಲೇ ಕಠ್ಮಂಡುವಿನ 3 ಪ್ರಮುಖ ಕ್ಷೇತ್ರಗಳಲ್ಲಿ (1, 7 ಮತ್ತು 8) ಗೆಲುವು ಸಾಧಿಸಿದ್ದು, ಸುಮಾರು 50ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರ ಸಿಪಿಎನ್-ಯುಎಂಎಲ್ (CPN-UML) ಪಕ್ಷವು ಸದ್ಯಕ್ಕೆ ಕೇವಲ 4 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ದೇಶದ ಅತ್ಯಂತ ಹಳೆಯ ಪಕ್ಷವಾದ ಗಗನ್ ಥಾಪಾ ನೇತೃತ್ವದ ನೇಪಾಳಿ ಕಾಂಗ್ರೆಸ್ 6 ಸ್ಥಾನಗಳಲ್ಲಿ ಮುಂದಿದೆ. ಗುರುವಾರ ನಡೆದ ಮತದಾನದಲ್ಲಿ ನೇಪಾಳದ 1.9 ಕೋಟಿ ಅರ್ಹ ಮತದಾರರ ಪೈಕಿ ಸುಮಾರು ಶೇ. 60 ರಷ್ಟು ಜನರು ಮತ ಚಲಾಯಿಸಿದ್ದಾರೆ. ಒಟ್ಟು 65 ಪಕ್ಷಗಳ 3,400 ಕ್ಕೂ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ನೇಪಾಳ ಫಲಿತಾಂಶದ ಮೇಲೆ ಭಾರತದ ನಿಗಾ

ನೇಪಾಳದ ನೆರೆರಾಷ್ಟ್ರವಾಗಿರುವ ಭಾರತವು ಈ ಚುನಾವಣಾ ಫಲಿತಾಂಶವನ್ನು ಕುತೂಹಲದಿಂದ ಗಮನಿಸುತ್ತಿದೆ. ಈ ಕುರಿತು ಪ್ರತಿಕ್ರಿಯಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, "ಭಾರತವು ನೇಪಾಳದ ಶಾಂತಿ, ಪ್ರಗತಿ ಮತ್ತು ಸ್ಥಿರತೆಯನ್ನು ಸದಾ ಬೆಂಬಲಿಸುತ್ತದೆ. ನೂತನ ಸರ್ಕಾರದೊಂದಿಗೆ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸಲು ನಾವು ಉತ್ಸುಕರಾಗಿದ್ದೇವೆ" ಎಂದು ತಿಳಿಸಿದ್ದಾರೆ.

Read More
Next Story