Nepal Election 2026| ನೇಪಾಳದಲ್ಲಿ Gen Z ಕ್ರಾಂತಿ: ಬಲೆನ್ ಶಾಗೆ ಭರ್ಜರಿ ಜಯಭೇರಿ
x
ಬಲೇಂದ್ರ ಶಾ (ಬಲೆನ್ ಶಾ) ನೇತೃತ್ವದ ರಾಷ್ಟ್ರೀಯ ಸ್ವತಂತ್ರ ಪಾರ್ಟಿ (RSP)ಗೆ ಭರ್ಜರಿ ಜಯ

Nepal Election 2026| ನೇಪಾಳದಲ್ಲಿ Gen Z ಕ್ರಾಂತಿ: ಬಲೆನ್ ಶಾಗೆ ಭರ್ಜರಿ ಜಯಭೇರಿ

ನೇಪಾಳ ಸಾರ್ವತ್ರಿಕ ಚುನಾವಣೆಯಲ್ಲಿ ರ್‍ಯಾಪರ್ ಬಲೆನ್ ಶಾ ಅವರ ರಾಷ್ಟ್ರೀಯ ಸ್ವತಂತ್ರ ಪಾರ್ಟಿ (RSP) 98 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿ ಇತಿಹಾಸ ನಿರ್ಮಿಸಿದೆ.


ನೇಪಾಳದ ರಾಜಕೀಯ ಇತಿಹಾಸದಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದೆ. ಕಳೆದ ವರ್ಷ ನಡೆದ 'ಜೆನ್ ಜಿ' (Gen Z) ಯುವ ಸಮೂಹದ ತೀವ್ರ ಪ್ರತಿಭಟನೆಯ ನಂತರ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ, ರ್‍ಯಾಪರ್ ಹಾಗೂ ಮಾಜಿ ಮೇಯರ್ ಬಲೇಂದ್ರ ಶಾ (ಬಲೆನ್ ಶಾ) ನೇತೃತ್ವದ ರಾಷ್ಟ್ರೀಯ ಸ್ವತಂತ್ರ ಪಾರ್ಟಿ (RSP) ಭರ್ಜರಿ ಜಯದತ್ತ ದಾಪುಗಾಲು ಹಾಕುತ್ತಿದೆ.

ಚುನಾವಣಾ ಫಲಿತಾಂಶದ ಮುಖ್ಯಾಂಶಗಳು

ನೇಪಾಳದ ಚುನಾವಣಾ ಆಯೋಗದ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ರ್‍ಯಾಪರ್ ಬಲೆನ್ ಶಾ ನೇತೃತ್ವದ ರಾಷ್ಟ್ರೀಯ ಸ್ವತಂತ್ರ ಪಾರ್ಟಿ (RSP) ಈಗಾಗಲೇ 20 ಸ್ಥಾನಗಳಲ್ಲಿ ಜಯಗಳಿಸಿ, ಬರೊಬ್ಬರಿ 98 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಅಭೂತಪೂರ್ವ ಗೆಲುವಿನತ್ತ ಸಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ ಸ್ಥಾಪಿತ ಪಕ್ಷಗಳು ಹಿನ್ನಡೆ ಅನುಭವಿಸುತ್ತಿದ್ದು, ನೇಪಾಳಿ ಕಾಂಗ್ರೆಸ್ 4 ಸ್ಥಾನಗಳಲ್ಲಿ ಗೆದ್ದು 11 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದರೆ, CPN-UML ಕೇವಲ 1 ಸ್ಥಾನದಲ್ಲಿ ಜಯಗಳಿಸಿ 11 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಇನ್ನುಳಿದಂತೆ ನೇಪಾಳಿ ಕಮ್ಯುನಿಸ್ಟ್ ಪಾರ್ಟಿ 2 ಸ್ಥಾನಗಳನ್ನು ಗೆದ್ದು 10 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಶ್ರಮ ಸಂಸ್ಕೃತಿ ಪಾರ್ಟಿಯು ಕೇವಲ 3 ಸ್ಥಾನಗಳಲ್ಲಿ ಮಾತ್ರ ಮುನ್ನಡೆ ಸಾಧಿಸಲು ಶಕ್ತವಾಗಿದೆ.

ಭಾರತದ ಪ್ರತಿಕ್ರಿಯೆ ಮತ್ತು ಹಿತಾಸಕ್ತಿ

ನೇಪಾಳದ ಈ ಮಹತ್ವದ ಚುನಾವಣೆಯನ್ನು ಭಾರತವು ಹತ್ತಿರದಿಂದ ಗಮನಿಸುತ್ತಿದೆ. ನವದೆಹಲಿಯಲ್ಲಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, "ನೇಪಾಳದ ನೂತನ ಸರ್ಕಾರದೊಂದಿಗೆ ಕೆಲಸ ಮಾಡಲು ನಾವು ಉತ್ಸುಕರಾಗಿದ್ದೇವೆ. ಉಭಯ ದೇಶಗಳ ನಡುವಿನ ಬಹುಮುಖಿ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲು ಶ್ರಮಿಸುತ್ತೇವೆ," ಎಂದು ಹೇಳಿದ್ದಾರೆ. ಅಲ್ಲದೆ, ನೇಪಾಳದ ಶಾಂತಿ ಮತ್ತು ಸ್ಥಿರತೆಗೆ ಭಾರತವು ಸದಾ ಬೆಂಬಲ ನೀಡಲಿದೆ ಎಂದು ಅವರು ಪುನರುಚ್ಚರಿಸಿದ್ದಾರೆ.

ಜೆನ್ ಜಿ (Gen Z) ಕ್ರಾಂತಿ ಮತ್ತು ಬದಲಾವಣೆ

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಭ್ರಷ್ಟಾಚಾರ ನಿರ್ಮೂಲನೆ, ಸುಶಾಸನ ಮತ್ತು ರಾಜಕೀಯ ನಾಯಕತ್ವದಲ್ಲಿ ತಲೆಮಾರುಗಳ ಬದಲಾವಣೆಯನ್ನು ಒತ್ತಾಯಿಸಿ ಯುವ ಸಮೂಹ ಬೃಹತ್ ಪ್ರತಿಭಟನೆ ನಡೆಸಿತ್ತು. ಇದರ ಪರಿಣಾಮವಾಗಿ ಪ್ರಧಾನಿ ಓಲಿ ಅವರ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನಗೊಂಡು, ಸಂಸತ್ತನ್ನು ವಿಸರ್ಜಿಸಲಾಗಿತ್ತು. ಇದೀಗ ಯುವಜನತೆಯ ಅದೇ ಆಶಯಗಳು ಬಲೆನ್ ಶಾ ಅವರ RSP ಪಕ್ಷಕ್ಕೆ ಶ್ರೀರಕ್ಷೆಯಾಗಿವೆ.

Read More
Next Story