
Dubai Attack| ದುಬೈ ಮೇಲೆ ಮತ್ತೆ ಅಟ್ಯಾಕ್! ಬುರ್ಜ್ ಖಲೀಫಾದ ಹಿಂದೆ ಆವರಿಸಿದ ದಟ್ಟ ಹೊಗೆ
Iran Israel War| ಪಶ್ಚಿಮ ಏಷ್ಯಾದಲ್ಲಿ ಉಲ್ಬಣಿಸಿರುವ ಸಂಘರ್ಷ ಈಗ ದುಬೈ ನಗರದ ಹೊಸ್ತಿಲಿಗೆ ಬಂದು ತಲುಪಿದೆ. ಶುಕ್ರವಾರ ಮಧ್ಯಾಹ್ನ ದುಬೈನ ಆಯಕಟ್ಟಿನ ಪ್ರದೇಶವಾದ DIFC ಆವರಣದಲ್ಲಿ ಭಾರಿ ಸ್ಫೋಟದ ಸದ್ದು ಕೇಳಿಬಂದಿದೆ.
ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ಮುಂದುವರಿದಿರುವ ಬೆನ್ನಲ್ಲೇ, ಯುನೈಟೆಡ್ ಅರಬ್ ಎಮಿರೇಟ್ಸ್‌ನ ಆರ್ಥಿಕ ರಾಜಧಾನಿ ದುಬೈನಲ್ಲಿ ಶುಕ್ರವಾರ ಭೀಕರ ಸ್ಫೋಟದ ಸದ್ದು ಕೇಳಿಬಂದಿದೆ. ಆಕಾಶದಲ್ಲಿ ನಡೆದ ಕ್ಷಿಪಣಿ ಅಥವಾ ಡ್ರೋನ್ ಪ್ರತಿಬಂಧದ ಪರಿಣಾಮವಾಗಿ ವಿಶ್ವ ವಿಖ್ಯಾತ ಬುರ್ಜ್ ಖಲೀಫಾ ಸೇರಿದಂತೆ ಹಲವು ಕಟ್ಟಡಗಳ ಹಿಂದೆ ದಟ್ಟವಾದ ಕಪ್ಪು ಹೊಗೆ ಆವರಿಸಿದ್ದು, ನಗರದ ಹೃದಯಭಾಗದಲ್ಲಿರುವ ಬಹುಮಹಡಿ ಕಟ್ಟಡಗಳು ಕಂಪಿಸಿವೆ.
ನಗರದ ಮಧ್ಯಭಾಗದಲ್ಲಿ ಅವಳಿ ಸ್ಫೋಟದ ಸದ್ದು
ಅಂತರಾಷ್ಟ್ರೀಯ ಸುದ್ದಿ ಸಂಸ್ಥೆ AFP ವರದಿಗಾರರ ಪ್ರಕಾರ, ಶುಕ್ರವಾರ ನಗರದ ಕೇಂದ್ರ ಭಾಗದಲ್ಲಿ ಭಾರಿ ತೀವ್ರತೆಯ ಎರಡು ಸ್ಫೋಟಗಳು ಸಂಭವಿಸಿವೆ. ಈ ಸ್ಫೋಟದ ತೀವ್ರತೆಗೆ ಸುತ್ತಮುತ್ತಲ ಕಟ್ಟಡಗಳು ನಡುಗಿದ್ದು, ಆಕಾಶದಲ್ಲಿ ಕಪ್ಪು ಹೊಗೆಯ ಮೋಡಗಳು ಕಂಡುಬಂದಿವೆ. ದುಬೈನ ಪ್ರಮುಖ ರಸ್ತೆಯಾದ 'ಶೇಖ್ ಜಾಯೆದ್ ರೋಡ್' ಕಡೆಯಿಂದ ಆಂಬ್ಯುಲೆನ್ಸ್ ಹಾಗೂ ಪೊಲೀಸ್ ಸೈರನ್‌ಗಳ ಸದ್ದು ನಿರಂತರವಾಗಿ ಕೇಳಿಬರುತ್ತಿದೆ.
ದುಬೈ ಸರ್ಕಾರ ನೀಡಿದ ಸ್ಪಷ್ಟನೆ ಏನು?
ಘಟನೆಗೆ ಸಂಬಂಧಿಸಿದಂತೆ 'ದುಬೈ ಮೀಡಿಯಾ ಆಫೀಸ್' ಸಾಮಾಜಿಕ ಜಾಲತಾಣ X ನಲ್ಲಿ ಮಾಹಿತಿ ನೀಡಿದ್ದು, "ದುಬೈ ಮೇಲೆ ನಡೆದ ದಾಳಿಯ ಯತ್ನವನ್ನು ಯಶಸ್ವಿಯಾಗಿ ತಡೆಯಲಾಗಿದೆ. ಶತ್ರು ಕ್ಷಿಪಣಿ ಅಥವಾ ಡ್ರೋನ್ ಅನ್ನು ಆಕಾಶದಲ್ಲೇ ಹೊಡೆದು ಉರುಳಿಸಿದಾಗ, ಅದರ ಅವಶೇಷಗಳು ನಗರದ ಮಧ್ಯಭಾಗದ ಕಟ್ಟಡವೊಂದರ ಮೇಲೆ ಬಿದ್ದಿವೆ. ಇದರಿಂದ ಕಟ್ಟಡದ ಹೊರಭಾಗಕ್ಕೆ ಸಣ್ಣ ಪ್ರಮಾಣದ ಹಾನಿಯಾಗಿದೆಯೇ ಹೊರತು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ" ಎಂದು ತಿಳಿಸಿದೆ.
ಆದರೆ, ಪ್ರತ್ಯಕ್ಷದರ್ಶಿಗಳ ಪ್ರಕಾರ ದುಬೈ ಅಂತರಾಷ್ಟ್ರೀಯ ಹಣಕಾಸು ಕೇಂದ್ರದ (DIFC) ಕಟ್ಟಡಕ್ಕೆ ಗಮನಾರ್ಹ ಹಾನಿಯಾಗಿದೆ ಎನ್ನಲಾಗಿದ್ದು, ಪೊಲೀಸರು ಇಡೀ ಪ್ರದೇಶವನ್ನು ಸುತ್ತುವರಿದು ಬಿಗಿ ಭದ್ರತೆ ಕೈಗೊಂಡಿದ್ದಾರೆ.
ಸತತ ಎರಡನೇ ದಿನ ನಡೆದ ದಾಳಿ ಯತ್ನ
ಇದಕ್ಕೂ ಮೊದಲು ಗುರುವಾರ ಕೂಡ ದುಬೈ ಅಧಿಕಾರಿಗಳು 'ಅಲ್ ಬದಾದಾ' ಪ್ರದೇಶದಲ್ಲಿ ಸಣ್ಣ ಮಟ್ಟದ ಡ್ರೋನ್ ಘಟನೆ ನಡೆದಿದ್ದಾಗಿ ವರದಿ ಮಾಡಿದ್ದರು. ಸತತವಾಗಿ ನಡೆಯುತ್ತಿರುವ ಈ ದಾಳಿ ಯತ್ನಗಳು ದುಬೈ ಜನತೆಯಲ್ಲಿ ಆತಂಕ ಮೂಡಿಸಿವೆ.
🇦🇪 New explosions and interceptions were recorded in Dubai (including the DIFC and Al Bada'a areas).
— Argonaut (@FapeFop90614) March 13, 2026
Several loud explosions and smoke clouds were reported over residential and commercial areas near the financial center. pic.twitter.com/6JM7BJo3Rj
ಪಶ್ಚಿಮ ಏಷ್ಯಾದಲ್ಲಿ ಹೆಚ್ಚಿದ ಉದ್ವಿಗ್ನತೆ
ಫೆಬ್ರವರಿ 28 ರಂದು ಪಶ್ಚಿಮ ಏಷ್ಯಾದಲ್ಲಿ ಯುದ್ಧ ಆರಂಭವಾದಾಗಿನಿಂದ ಗಲ್ಫ್ ರಾಷ್ಟ್ರಗಳು ಇರಾನ್ ಬೆಂಬಲಿತ ದಾಳಿಗಳಿಗೆ ಗುರಿಯಾಗುತ್ತಿವೆ. ಈವರೆಗೆ ಈ ಭಾಗದಲ್ಲಿ ಏಳು ಅಮೆರಿಕನ್ ಸೈನಿಕರು ಸೇರಿದಂತೆ ಒಟ್ಟು 24 ಜನರು ಬಲಿಯಾಗಿದ್ದಾರೆ. ಪ್ರವಾಸೋದ್ಯಮ ಮತ್ತು ವ್ಯಾಪಾರದ ಕೇಂದ್ರವಾಗಿರುವ ದುಬೈ ಮೇಲೆ ಇಂತಹ ದಾಳಿಗಳು ನಡೆಯುತ್ತಿರುವುದು ಜಾಗತಿಕ ಮಟ್ಟದಲ್ಲಿ ಕಳವಳಕ್ಕೆ ಕಾರಣವಾಗಿದೆ.

