Iran-Israel War| ಬುರ್ಜ್ ಖಲೀಫಾ ಸಮೀಪ ಭೀಕರ ಸ್ಫೋಟ? ವಿಡಿಯೊ ಫುಲ್‌ ವೈರಲ್‌
x
ಬುರ್ಜ್ ಖಲೀಫಾ ಸಮೀಪ ಡ್ರೋನ್ ದಾಳಿ

Iran-Israel War| ಬುರ್ಜ್ ಖಲೀಫಾ ಸಮೀಪ ಭೀಕರ ಸ್ಫೋಟ? ವಿಡಿಯೊ ಫುಲ್‌ ವೈರಲ್‌

ವಿಶ್ವದ ಅತ್ಯಂತ ಎತ್ತರದ ಕಟ್ಟಡ ಬುರ್ಜ್ ಖಲೀಫಾ ಹಾಗೂ ಪಾಮ್ ಜುಮೇರಾ ಬಳಿ ಡ್ರೋನ್ ದಾಳಿ ಮತ್ತು ಸ್ಫೋಟ ಸಂಭವಿಸಿರುವ ಬಗ್ಗೆ ವರದಿಯಾಗಿದೆ. ಇರಾನ್-ಇಸ್ರೇಲ್ ಯುದ್ಧದ ಲೇಟೆಸ್ಟ್ ಅಪ್‌ಡೇಟ್ ಇಲ್ಲಿದೆ.


ಇರಾನ್‌ನ ಸುಪ್ರೀಂ ಲೀಡರ್ ಆಯತೊಲ್ಲಾ ಅಲಿ ಖಮೇನಿ ಹತ್ಯೆಗೆ ಪ್ರತಿಕಾರವಾಗಿ ಇರಾನ್ ನಡೆಸಿದ ವಾಯುದಾಳಿಯಿಂದಾಗಿ ದುಬೈ ನಗರ ಅಕ್ಷರಶಃ ನಡುಗಿದೆ. ವಿಶ್ವದ ಅತ್ಯಂತ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾ ಸಮೀಪ ಡ್ರೋನ್ ದಾಳಿ ನಡೆದಿದೆ ಎಂಬ ವರದಿ ಇದೀಗ ಹೊರ ಬಿದ್ದಿದೆ. ಈ ಬಗ್ಗೆ ಎನ್‌ಡಿಟಿವಿ ವರದಿ ಮಾಡಿದ್ದು, ದಟ್ಟವಾದ ಕಪ್ಪು ಹೊಗೆ ಆವರಿಸಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಬುರ್ಜ್ ಖಲೀಫಾ ಸಮೀಪ ಸ್ಫೋಟ

ವರದಿಗಳ ಪ್ರಕಾರ, 828 ಮೀಟರ್ ಎತ್ತರದ ಬುರ್ಜ್ ಖಲೀಫಾ ಕಟ್ಟಡದ ಸಮೀಪ ಇರಾನ್‌ನ ಡ್ರೋನ್ ಒಂದು ಕಾಣಿಸಿಕೊಂಡ ಬೆನ್ನಲ್ಲೇ ಭೀಕರ ಸ್ಫೋಟ ಸಂಭವಿಸಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಕಟ್ಟಡವನ್ನು ಮೊದಲೇ ತೆರವುಗೊಳಿಸಲಾಗಿತ್ತು. ಆದರೆ, ಈ ಐಕಾನಿಕ್ ಕಟ್ಟಡಕ್ಕೆ ಯಾವುದೇ ಹಾನಿಯಾಗಿದೆಯೇ ಎಂಬ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ಬುರ್ಜ್‌ ಖಲೀಫಾ ಮೇಲೆ ದಾಳಿಯ ವಿಡಿಯೊ

ಪಾಮ್ ಜುಮೇರಾ ಮತ್ತು ಜನವಸತಿ ಪ್ರದೇಶಗಳ ಮೇಲೆ ದಾಳಿ

ಕೇವಲ ಬುರ್ಜ್ ಖಲೀಫಾ ಮಾತ್ರವಲ್ಲದೆ, ದುಬೈನ ಅತ್ಯಂತ ಐಷಾರಾಮಿ ಪ್ರದೇಶವಾದ 'ಪಾಮ್ ಜುಮೇರಾ' ದ್ವೀಪದ ಮೇಲೂ ದಾಳಿ ನಡೆದಿದೆ. ಇಲ್ಲಿನ ಒಂದು ಕಟ್ಟಡಕ್ಕೆ ಬೆಂಕಿ ಬಿದ್ದಿದ್ದು, ನಾಲ್ವರು ಗಾಯಗೊಂಡಿದ್ದಾರೆ ಎಂದು ದುಬೈ ಮೀಡಿಯಾ ಆಫೀಸ್ ಖಚಿತಪಡಿಸಿದೆ. ಅಲ್ಲದೆ, ಇರಾನ್‌ನ ಅತ್ಯಂತ ಅಪಾಯಕಾರಿ 'ಶಾಹೆದ್' (Shahed) ಡ್ರೋನ್ ಒಂದು ಜನನಿಬಿಡ ಪ್ರದೇಶದ ಎರಡು ಕಟ್ಟಡಗಳ ಮಧ್ಯೆ ಅಪ್ಪಳಿಸಿ ಸ್ಫೋಟಗೊಳ್ಳುತ್ತಿರುವ ದೃಶ್ಯಗಳು ನೆಕ್ಸ್ಟಾ ಟಿವಿ (Nexta TV) ಹಂಚಿಕೊಂಡಿರುವ ವಿಡಿಯೋದಲ್ಲಿ ಕಂಡುಬಂದಿವೆ.

ಅಮೆರಿಕ-ಇಸ್ರೇಲ್ 'ಆಪರೇಷನ್ ಎಪಿಕ್ ಫ್ಯೂರಿ'

ಇಂದು ಬೆಳಿಗ್ಗೆ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ನಡೆಸಿದ 'ಆಪರೇಷನ್ ಎಪಿಕ್ ಫ್ಯೂರಿ' (Operation Epic Fury) ಕಾರ್ಯಾಚರಣೆಯ ನಂತರ ಇರಾನ್ ಈ ಭೀಕರ ಪ್ರತಿಕಾರ ತೀರಿಸಿಕೊಂಡಿದೆ. "ಶಸ್ತ್ರಾಸ್ತ್ರ ಕೆಳಗಿಳಿಸಿ ಇಲ್ಲವೇ ಸಾವನ್ನು ಎದುರಿಸಿ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ನಾಯಕರಿಗೆ ನೇರ ಎಚ್ಚರಿಕೆ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಇರಾನ್ ತನ್ನ ಆಕಾಶ ಮಾರ್ಗವನ್ನು ಮುಚ್ಚಿ, ಅತಿಕ್ರಮಣಕಾರರ ವಿರುದ್ಧ ನಿರ್ಣಾಯಕ ಹೋರಾಟ ಮಾಡುವುದಾಗಿ ಘೋಷಿಸಿದೆ.

ಪ್ರವಾಸಿಗರಲ್ಲಿ ಆತಂಕ

ದುಬೈ ಅಧಿಕಾರಿಗಳು ಸಾರ್ವಜನಿಕರಿಗೆ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ ಮತ್ತು ದಾಳಿಯ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳದಂತೆ ಸೂಚಿಸಿದ್ದಾರೆ. ಈ ಬೆಳವಣಿಗೆಯಿಂದಾಗಿ ಇಡೀ ಗಲ್ಫ್ ಪ್ರದೇಶದಲ್ಲಿ ಯುದ್ಧದ ಭೀತಿ ಆವರಿಸಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಆತಂಕ ಸೃಷ್ಟಿಯಾಗಿದೆ.

Read More
Next Story