Karnatakas Kuvari Major Swathi Shantha Kumar wins prestigious UN Gender Equality award
x

ಮೇಜರ್ ಸ್ವಾತಿ ಶಾಂತ ಕುಮಾರ್‌

ಬೆಂಗಳೂರಿನ ಮೇಜರ್ ಸ್ವಾತಿ ಶಾಂತ ಕುಮಾರ್‌ಗೆ ವಿಶ್ವಸಂಸ್ಥೆಯ ಪ್ರತಿಷ್ಠಿತ 'ಲಿಂಗ ಸಮಾನತೆ' ಪ್ರಶಸ್ತಿ ಗರಿ

ಮೇಜರ್ ಸ್ವಾತಿ ಅವರು ಪ್ರಸ್ತುತ ದಕ್ಷಿಣ ಸುಡಾನ್‌ನಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಯಲ್ಲಿ (UNMISS) ಸೇವೆ ಸಲ್ಲಿಸುತ್ತಿದ್ದಾರೆ. ಅವರು ಕೈಗೊಂಡ ಕಾರ್ಯಗಳನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ.


Click the Play button to hear this message in audio format

ಭಾರತೀಯ ಸೇನೆಯ ಹಿರಿಮೆಗೆ ಮತ್ತೊಂದು ಗರಿ ಸೇರ್ಪಡೆಯಾಗಿದೆ. ಬೆಂಗಳೂರು ಮೂಲದ ಭಾರತೀಯ ಸೇನಾಧಿಕಾರಿ ಮೇಜರ್ ಸ್ವಾತಿ ಶಾಂತ ಕುಮಾರ್ (Major Swathi Shanth Kumar) ಅವರಿಗೆ ವಿಶ್ವಸಂಸ್ಥೆಯು ಕೊಡಮಾಡುವ 2025ನೇ ಸಾಲಿನ ಪ್ರತಿಷ್ಠಿತ 'ಲಿಂಗ ಸಮಾನತೆ ಪ್ರತಿಪಾದಕ' ಪ್ರಶಸ್ತಿ (Military Gender Advocate of the Year Award) ಲಭಿಸಿದೆ.

ಮೇಜರ್ ಸ್ವಾತಿ ಅವರು ಪ್ರಸ್ತುತ ದಕ್ಷಿಣ ಸುಡಾನ್‌ನಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಯಲ್ಲಿ (UNMISS) ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲಿ 'ಸಮಾನ ಪಾಲುದಾರರು, ಶಾಶ್ವತ ಶಾಂತಿ' ಎಂಬ ಧ್ಯೇಯದಡಿ ಅವರು ಕೈಗೊಂಡ ಕಾರ್ಯಗಳನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ. ಭಾರತದಿಂದ ನಿಯೋಜನೆಗೊಂಡ ಮೊದಲ 'ಮಹಿಳಾ ಎಂಗೇಜ್‌ಮೆಂಟ್ ತಂಡ'ದ ನಾಯಕತ್ವ ವಹಿಸಿರುವ ಅವರು, ಸ್ಥಳೀಯ ಮಹಿಳೆಯರನ್ನು ತಲುಪಲು ಮತ್ತು ಅವರ ಸಮಸ್ಯೆಗಳಿಗೆ ಸ್ಪಂದಿಸಲು ಸೃಜನಶೀಲ ಮಾರ್ಗಗಳನ್ನು ಕಂಡುಕೊಂಡಿದ್ದಾರೆ.

ನಾಲ್ಕು ಅಂತಿಮ ಸ್ಪರ್ಧಿಗಳಲ್ಲಿ ಅಗ್ರಸ್ಥಾನ

ವಿಶ್ವದಾದ್ಯಂತ ವಿಶ್ವಸಂಸ್ಥೆ ಕೈಗೊಳ್ಳುವ ವಿವಿಧ ಶಾಂತಿಪಾಲನಾ ಕಾರ್ಯಾಚರಣೆಗಳಿಂದ ಈ ಪ್ರಶಸ್ತಿಗೆ ನಾಮನಿರ್ದೇಶನಗಳನ್ನು ಸ್ವೀಕರಿಸಲಾಗಿತ್ತು. ತಜ್ಞರ ತಂಡ ನಡೆಸಿದ ಆಯ್ಕೆ ಪ್ರಕ್ರಿಯೆಯಲ್ಲಿ ಅಂತಿಮ ನಾಲ್ಕು ಸ್ಪರ್ಧಿಗಳಲ್ಲಿ ಸ್ವಾತಿ ಅವರು ಅತಿ ಹೆಚ್ಚು ಮತಗಳನ್ನು ಪಡೆದು ವಿಜೇತರಾಗಿ ಹೊರಹೊಮ್ಮಿದ್ದಾರೆ. ಶಾಂತಿಪಾಲನೆಯಲ್ಲಿ ಲಿಂಗ ಸಮಾನತೆಯನ್ನು ಉತ್ತೇಜಿಸುವ ಅವರ ಬದ್ಧತೆಯನ್ನು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಶ್ಘಾಸಿದ್ದಾರೆ.

ಸತತ ಎರಡನೇ ಬಾರಿ ಭಾರತಕ್ಕೆ ಗೌರವ

ವಿಶೇಷವೆಂದರೆ, 2023ರ ಸಾಲಿನಲ್ಲಿಯೂ ಈ ಪ್ರತಿಷ್ಠಿತ ಪ್ರಶಸ್ತಿಯು ಭಾರತದ ಪಾಲಾಗಿತ್ತು. ಅಂದು ಭಾರತೀಯ ಸೇನೆಯ ಮೇಜರ್ ರಾಧಿಕಾ ಸೆನ್ ಅವರು ಈ ಗೌರವಕ್ಕೆ ಪಾತ್ರರಾಗಿದ್ದರು. ಇದೀಗ ಮೇಜರ್ ಸ್ವಾತಿ ಅವರ ಸಾಧನೆಯ ಮೂಲಕ ಭಾರತದ ಮಹಿಳಾ ಅಧಿಕಾರಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ.

Read More
Next Story