ಪಾಕಿಸ್ತಾನದದಲ್ಲಿ ಸಂಸ್ಕೃತ ಕೋರ್ಸ್​​: ವಿಭಜನೆ ನಂತರ ಮೊದಲ ಬಾರಿಗೆ ಶಾಸ್ತ್ರೀಯ ಭಾಷೆಗೆ ಆದ್ಯತೆ
x

ಪಾಕಿಸ್ತಾನದದಲ್ಲಿ ಸಂಸ್ಕೃತ ಕೋರ್ಸ್​​: ವಿಭಜನೆ ನಂತರ ಮೊದಲ ಬಾರಿಗೆ ಶಾಸ್ತ್ರೀಯ ಭಾಷೆಗೆ ಆದ್ಯತೆ

ಸಂಸ್ಕೃತ ಕಲಿಕೆಯ ಮೂರು ತಿಂಗಳ ಕಾರ್ಯಾಗಾರವೊಂದರ ಮೂಲಕ ಈ ವಿಷಯವನ್ನು ಅವರು ಮುನ್ನೆಲೆಗೆ ತರಲಾಗಿತ್ತು. ಅದಕ್ಕೆ ವಿದ್ಯಾರ್ಥಿಗಳು ಮತ್ತು ವಿದ್ವಾಂಸರಿಂದ ನಿರೀಕ್ಷೆಗೂ ಮೀರಿದ ಆಸಕ್ತಿ ವ್ಯಕ್ತವಾಯಿತು.


Click the Play button to hear this message in audio format

ಭಾರತ ಮತ್ತು ಪಾಕಿಸ್ತಾನ ವಿಭಜನೆಯಾದ ಸುಮಾರು ಏಳು ದಶಕಗಳ ನಂತರ, ಇದೇ ಮೊದಲ ಬಾರಿಗೆ ಸಂಸ್ಕೃತ ಭಾಷೆಯು ಪಾಕಿಸ್ತಾನದ ತರಗತಿ ಕೋಣೆಗಳಿಗೆ ಅಧಿಕೃತವಾಗಿ ಮರಳಿದೆ. ಲಾಹೋರ್ ಯೂನಿವರ್ಸಿಟಿ ಆಫ್ ಮ್ಯಾನೇಜ್‌ಮೆಂಟ್ ಸೈನ್ಸಸ್ (LUMS) ವಿಶ್ವವಿದ್ಯಾಲಯವು ಈ ಪುರಾತನ ಶಾಸ್ತ್ರೀಯ ಭಾಷೆಯಲ್ಲಿ ಕೋರ್ಸ್ ಒಂದನ್ನು ಪರಿಚಯಿಸುವ ಮೂಲಕ ಐತಿಹಾಸಿಕ ಹೆಜ್ಜೆ ಇಟ್ಟಿದೆ. 1947ರ ದೇಶ ವಿಭಜನೆಯ ನಂತರ ಪಾಕಿಸ್ತಾನದ ಶೈಕ್ಷಣಿಕ ವಲಯದಲ್ಲಿ ಸಂಸ್ಕೃತ ಕಲಿಕೆಗೆ ಚಾಲನೆ ಸಿಕ್ಕಿರುವುದು ಇದೇ ಮೊದಲು ಎಂದು ವರದಿಯಾಗಿದೆ.

ಈ ಮಹತ್ವದ ಬದಲಾವಣೆಯ ಹಿಂದಿನ ಶಕ್ತಿ

ಈ ಐತಿಹಾಸಿಕ ಬದಲಾವಣೆಯು ಫಾರ್ಮನ್ ಕ್ರಿಶ್ಚಿಯನ್ ಕಾಲೇಜಿನ ಸಮಾಜಶಾಸ್ತ್ರದ ಸಹ ಪ್ರಾಧ್ಯಾಪಕರಾದ ಡಾ. ಶಾಹಿದ್ ರಶೀದ್ ಅವರ ನಿರಂತರ ಪ್ರಯತ್ನದ ಫಲವಾಗಿದೆ. ಸಂಸ್ಕೃತ ಭಾಷೆಯನ್ನು ಆಳವಾಗಿ ಅಧ್ಯಯನ ಮಾಡಲು ಹಲವು ವರ್ಷಗಳನ್ನು ಮೀಸಲಿಟ್ಟಿರುವ ಡಾ. ರಶೀದ್ ಅವರೇ ಈ ನಾಲ್ಕು ಕೋರ್ಸ್ ರೂಪುಗೊಳ್ಳಲು ಪ್ರಮುಖ ಕಾರಣಕರ್ತರು. ಆರಂಭದಲ್ಲಿ ಮೂರು ತಿಂಗಳ ಕಾರ್ಯಾಗಾರವೊಂದರ ಮೂಲಕ ಈ ವಿಷಯವನ್ನು ಅವರು ಮುನ್ನೆಲೆಗೆ ತಂದರು. ಈ ಕಾರ್ಯಾಗಾರಕ್ಕೆ ಅಲ್ಲಿನ ವಿದ್ಯಾರ್ಥಿಗಳು ಮತ್ತು ವಿದ್ವಾಂಸರಿಂದ ನಿರೀಕ್ಷೆಗೂ ಮೀರಿದ ಆಸಕ್ತಿ ವ್ಯಕ್ತವಾಯಿತು.

ತಮ್ಮ ಕಲಿಕೆಯ ಅನುಭವವನ್ನು ದಿ ಟ್ರಿಬ್ಯೂನ್ ಜೊತೆ ಹಂಚಿಕೊಂಡಿರುವ ಡಾ. ರಶೀದ್, "ಶಾಸ್ತ್ರೀಯ ಭಾಷೆಗಳು ಮಾನವಕುಲಕ್ಕೆ ಅಗತ್ಯವಾದ ಅಪಾರ ಜ್ಞಾನವನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿವೆ. ನಾನು ಮೊದಲು ಅರೇಬಿಕ್ ಮತ್ತು ಪರ್ಷಿಯನ್ ಭಾಷೆಗಳನ್ನು ಕಲಿಯುವುದರೊಂದಿಗೆ ನನ್ನ ಅಧ್ಯಯನ ಆರಂಭಿಸಿದೆ, ನಂತರ ಸಂಸ್ಕೃತದತ್ತ ಹೊರಳಿದೆ," ಎಂದು ಹೇಳಿದ್ದಾರೆ. ವಿಶೇಷವೆಂದರೆ, ಅವರು ತಮ್ಮ ಸಂಸ್ಕೃತ ಕಲಿಕೆಯ ಬಹುಭಾಗವನ್ನು ಆನ್‌ಲೈನ್ ಸಂಪನ್ಮೂಲಗಳ ಮೂಲಕವೇ ಪಡೆದುಕೊಂಡಿದ್ದಾರೆ. ಶಾಸ್ತ್ರೀಯ ಸಂಸ್ಕೃತ ವ್ಯಾಕರಣವನ್ನು ಕಲಿಯಲು ತಮಗೆ ಸುಮಾರು ಒಂದು ವರ್ಷ ಹಿಡಿಯಿತು ಮತ್ತು ಇಂದಿಗೂ ತಮ್ಮ ಅಧ್ಯಯನ ಮುಂದುವರಿದಿದೆ ಎಂದು ಅವರು ತಿಳಿಸಿದ್ದಾರೆ.

ಪಾಕಿಸ್ತಾನದಲ್ಲಿರುವ ಅನ್ವೇಷಣೆಯಾಗದ ಸಂಸ್ಕೃತ ಸಂಪತ್ತು

ಪಾಕಿಸ್ತಾನದಲ್ಲಿ ಸಂಸ್ಕೃತ ಪಠ್ಯಗಳ ಅತ್ಯಂತ ಶ್ರೀಮಂತ ಸಂಗ್ರಹವಿದ್ದರೂ, ಅದು ಇಂದಿಗೂ ನಿರ್ಲಕ್ಷ್ಯಕ್ಕೊಳಗಾಗಿದೆ ಎಂಬ ವಿಚಾರವನ್ನು ಗುರ್ಮಾನಿ ಕೇಂದ್ರದ ನಿರ್ದೇಶಕ ಡಾ. ಅಲಿ ಉಸ್ಮಾನ್ ಖಾಸ್ಮಿ ಹೇಳಿದ್ದಾರೆ. ಪಂಜಾಬ್ ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ ತಾಳೆಗರಿ ಹಸ್ತಪ್ರತಿಗಳ ಬೃಹತ್ ಸಂಗ್ರಹವೇ ಇದೆ. "1930ರ ದಶಕದಲ್ಲಿ ವಿದ್ವಾಂಸ ಜೆ.ಸಿ.ಆರ್. ವೂಲ್ನರ್ ಅವರು ಈ ಸಂಸ್ಕೃತ ತಾಳೆಗರಿ ಹಸ್ತಪ್ರತಿಗಳನ್ನು ಪಟ್ಟಿ ಮಾಡಿದ್ದರು. ಆದರೆ 1947ರ ನಂತರ ಯಾವೊಬ್ಬ ಪಾಕಿಸ್ತಾನಿ ಶೈಕ್ಷಣಿಕ ತಜ್ಞರೂ ಇವುಗಳ ಅಧ್ಯಯನಕ್ಕೆ ಮುಂದಾಗಿಲ್ಲ. ಪ್ರಸ್ತುತ ಕೇವಲ ವಿದೇಶಿ ಸಂಶೋಧಕರು ಮಾತ್ರ ಇವುಗಳನ್ನು ಬಳಸುತ್ತಿದ್ದಾರೆ. ಸ್ಥಳೀಯ ವಿದ್ವಾಂಸರಿಗೆ ತರಬೇತಿ ನೀಡುವ ಮೂಲಕ ಈ ಪರಿಸ್ಥಿತಿಯನ್ನು ಬದಲಾಯಿಸಬಹುದು," ಎಂದು ಡಾ. ಖಾಸ್ಮಿ ಅಭಿಪ್ರಾಯಪಟ್ಟಿದ್ದಾರೆ.

ಸಂಸ್ಕೃತ ಯಾವುದೇ ಧರ್ಮಕ್ಕೆ ಸೀಮಿತವಲ್ಲ

ಹಿಂದೂ ಧರ್ಮಗ್ರಂಥಗಳೊಂದಿಗೆ ಹೆಚ್ಚಾಗಿ ಗುರುತಿಸಿಕೊಂಡಿರುವ ಭಾಷೆಯ ಬಗ್ಗೆ ತಮಗೇಕೆ ಇಷ್ಟೊಂದು ಆಸಕ್ತಿ ಎಂಬ ಪ್ರಶ್ನೆಗೆ ಡಾ. ರಶೀದ್ ಬಹಳ ಸ್ಪಷ್ಟವಾದ ಉತ್ತರ ನೀಡಿದ್ದಾರೆ. ಸಂಸ್ಕೃತವು ಕೇವಲ ಒಂದು ಧರ್ಮಕ್ಕೆ ಸೀಮಿತವಾದ ಭಾಷೆಯಲ್ಲ, ಅದೊಂದು "ಸಾಂಸ್ಕೃತಿಕ ಸ್ಮಾರಕ"ವಿದ್ದಂತೆ ಎಂದು ಅವರು ಬಣ್ಣಿಸಿದ್ದಾರೆ.

"ನಾವು ಇದನ್ನು ಏಕೆ ಕಲಿಯಬಾರದು? ಇದು ಇಡೀ ಪ್ರಾಂತ್ಯವನ್ನು ಬೆಸೆಯುವ ಭಾಷೆಯಾಗಿದೆ. ಶ್ರೇಷ್ಠ ಸಂಸ್ಕೃತ ವ್ಯಾಕರಣಕಾರ ಪಾಣಿನಿಯ ಗ್ರಾಮ ಇದೇ ಪ್ರದೇಶದಲ್ಲಿತ್ತು. ಸಿಂಧೂ ಕಣಿವೆ ನಾಗರೀಕತೆಯ ಕಾಲದಲ್ಲಿ ಇಲ್ಲಿ ಸಾಕಷ್ಟು ಬರವಣಿಗೆಗಳು ನಡೆದಿವೆ. ಸಂಸ್ಕೃತವು ಒಂದು ಪರ್ವತವಿದ್ದಂತೆ, ಅದೊಂದು ಸಾಂಸ್ಕೃತಿಕ ಸ್ಮಾರಕ. ನಾವು ಅದನ್ನು ನಮ್ಮದೇ ಎಂದು ಭಾವಿಸಬೇಕು. ಇದು ಯಾರದೋ ಒಬ್ಬರ ಅಥವಾ ಒಂದು ಧರ್ಮದ ಸ್ವತ್ತಲ್ಲ," ಎಂದು ಅವರು ಪ್ರತಿಪಾದಿಸಿದ್ದಾರೆ.

ದಕ್ಷಿಣ ಏಷ್ಯಾದಲ್ಲಿ ಭಾಷೆಗಳು ಅಡೆತಡೆಗಳಾಗುವ ಬದಲು ಸೇತುವೆಗಳಾಗಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿರುವ ಅವರು, "ಭಾರತದಲ್ಲಿ ಹೆಚ್ಚು ಹಿಂದೂಗಳು ಮತ್ತು ಸಿಖ್ಖರು ಅರೇಬಿಕ್ ಕಲಿಯಲು ಪ್ರಾರಂಭಿಸಿದರೆ ಮತ್ತು ಪಾಕಿಸ್ತಾನದಲ್ಲಿ ಹೆಚ್ಚು ಮುಸ್ಲಿಮರು ಸಂಸ್ಕೃತವನ್ನು ಕಲಿತರೆ, ಇದು ದಕ್ಷಿಣ ಏಷ್ಯಾದಲ್ಲಿ ಹೊಸ ಭರವಸೆಯ ಆರಂಭವಾಗಬಹುದು," ಎಂದು ಡಾ. ರಶೀದ್ ಹೇಳಿದ್ದಾರೆ.

Read More
Next Story