
ಸಂಸ್ಕೃತ ಮೃತ ಭಾಷೆ ಎಂದ ಉದಯನಿಧಿಗೆ ಬಿಜೆಪಿ ತರಾಟೆ; 'ವಿಭಜನೆಯ ಪ್ರತೀಕ' ಎಂದು ಕಿಡಿ
ಉದಯನಿಧಿ ಅವರ ಈ ಹೇಳಿಕೆಗೆ ಶನಿವಾರ ದೆಹಲಿಯಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ, "ಉದಯನಿಧಿ ಸ್ಟಾಲಿನ್ ಅವರು ಹಿಂದೂಗಳ ಮೇಲಿನ ದ್ವೇಷಕ್ಕೆ ಹೆಸರಾಗಿದ್ದಾರೆ," ಎಂದು ಕಿಡಿಕಾರಿದ್ದಾರೆ.
ತಮಿಳುನಾಡು ಉಪಮುಖ್ಯಮಂತ್ರಿ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರು ಸಂಸ್ಕೃತವನ್ನು "ಮೃತ ಭಾಷೆ" ಎಂದು ಕರೆದಿರುವುದು ರಾಜಕೀಯ ವಲಯದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದೆ. ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ, ಉದಯನಿಧಿ ಅವರನ್ನು "ಅರಾಜಕತೆ ಮತ್ತು ವಿಭಜನೆಯ ಸಂಕೇತ" ಎಂದು ಜರಿದಿದೆ.
ಶುಕ್ರವಾರ (ನವೆಂಬರ್ 21) ಚೆನ್ನೈನಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ್ದ ಉದಯನಿಧಿ ಸ್ಟಾಲಿನ್, ಕೇಂದ್ರ ಸರ್ಕಾರದ ಅನುದಾನ ಹಂಚಿಕೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. "ಶಾಸ್ತ್ರೀಯ ಭಾಷೆಯಾದ ತಮಿಳಿನ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಕೇವಲ 150 ಕೋಟಿ ರೂ. ನೀಡಿದೆ. ಆದರೆ, ಒಂದು ಮೃತ ಭಾಷೆಯಾಗಿರುವ ಸಂಸ್ಕೃತಕ್ಕೆ ಬರೋಬ್ಬರಿ 2,400 ಕೋಟಿ ರೂ. ನೀಡುತ್ತಿದೆ," ಎಂದು ಅವರು ಕೇಂದ್ರವನ್ನು ಟೀಕಿಸಿದ್ದರು.
ಬಿಜೆಪಿ ಆಕ್ರೋಶ
ಉದಯನಿಧಿ ಅವರ ಈ ಹೇಳಿಕೆಗೆ ಶನಿವಾರ ದೆಹಲಿಯಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ, "ಉದಯನಿಧಿ ಸ್ಟಾಲಿನ್ ಅವರು ಹಿಂದೂಗಳ ಮೇಲಿನ ದ್ವೇಷಕ್ಕೆ ಹೆಸರಾಗಿದ್ದಾರೆ," ಎಂದು ಕಿಡಿಕಾರಿದ್ದಾರೆ.
"ಹಿಂದೊಮ್ಮೆ ಅವರು ಸನಾತನ ಧರ್ಮವನ್ನು ಡೆಂಗ್ಯೂ ಮತ್ತು ಮಲೇರಿಯಾಗೆ ಹೋಲಿಸಿ ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದರು. ಈಗ ಮತ್ತೊಮ್ಮೆ ಹಿಂದೂ ಸಂಸ್ಕೃತಿಯ ತಳಹದಿಯಾದ ಸಂಸ್ಕೃತವನ್ನು ಮೃತ ಭಾಷೆ ಎಂದು ಕರೆಯುವ ಮೂಲಕ ತಮ್ಮ ಕೀಳು ಅಭಿರುಚಿಯನ್ನು ಪ್ರದರ್ಶಿಸಿದ್ದಾರೆ," ಎಂದು ಭಾಟಿಯಾ ವಾಗ್ದಾಳಿ ನಡೆಸಿದರು.
"ಅರಾಜಕತೆಯ ಪರ್ಯಾಯ ಪದ"
ಪ್ರಧಾನಿ ನರೇಂದ್ರ ಮೋದಿ ಅವರನ್ನು "ಏಕತೆಯ ಸಂಕೇತ" ಎಂದು ಬಣ್ಣಿಸಿದ ಭಾಟಿಯಾ, "ಮೋದಿಜಿ ಅಭಿವೃದ್ಧಿ ಮತ್ತು ಸಕಾರಾತ್ಮಕ ರಾಜಕೀಯದ ಮೂಲಕ ದೇಶವನ್ನು ಒಗ್ಗೂಡಿಸುತ್ತಿದ್ದರೆ, ಉದಯನಿಧಿ ಅವರು ಸಮಾಜದಲ್ಲಿ ದ್ವೇಷ ಹರಡುವ ಮೂಲಕ ಅರಾಜಕತೆ ಮತ್ತು ವಿಭಜನೆಯ ಪರ್ಯಾಯ ಪದವಾಗಿದ್ದಾರೆ," ಎಂದು ಆರೋಪಿಸಿದರು.
"ಸಂಸ್ಕೃತ ಕೇವಲ ಒಂದು ಭಾಷೆಯಲ್ಲ, ಅದು ನಮ್ಮ ಸಂಸ್ಕೃತಿ, ಧಾರ್ಮಿಕ ಗ್ರಂಥಗಳು ಮತ್ತು ಕೋಟ್ಯಂತರ ಹಿಂದೂಗಳ ನಂಬಿಕೆಯ ತಳಹದಿಯಾಗಿದೆ. ಸುಪ್ರೀಂ ಕೋರ್ಟ್ ಈಗಾಗಲೇ ಇಂತಹ ಅಸಂಬದ್ಧ ಹೇಳಿಕೆ ನೀಡದಂತೆ ಡಿಎಂಕೆ ನಾಯಕರಿಗೆ ಎಚ್ಚರಿಕೆ ನೀಡಿದ್ದರೂ, ಅವರು ಪದೇ ಪದೇ ಹಿಂದೂಗಳ ಭಾವನೆಗಳನ್ನು ಕೆರಳಿಸುವ ಕೆಲಸ ಮಾಡುತ್ತಿದ್ದಾರೆ," ಎಂದು ಭಾಟಿಯಾ ಆಕ್ರೋಶ ವ್ಯಕ್ತಪಡಿಸಿದರು.

