
ಲಿಬಿಯಾದ ಮಾಜಿ ಸರ್ವಾಧಿಕಾರಿ ಗಡಾಫಿ ಪುತ್ರನ ಬರ್ಬರ ಹತ್ಯೆ
ಲಿಬಿಯಾದ ಮಾಜಿ ಸರ್ವಾಧಿಕಾರಿ ಮುಅಮ್ಮರ್ ಗಡ್ಡಾಫಿ ಪುತ್ರ ಸೈಫ್ ಅಲ್-ಇಸ್ಲಾಂ ಜಿಂಟಾನ್ ನಗರದ ತಮ್ಮ ನಿವಾಸದಲ್ಲಿ ಹತ್ಯೆಯಾಗಿದ್ದಾರೆ.
ಲಿಬಿಯಾದ ದಶಕಗಳ ಕಾಲದ ಸರ್ವಾಧಿಕಾರಿ ಮುಅಮ್ಮರ್ ಗಡಾಫಿಯ ಪುತ್ರ ಮತ್ತು ಆ ದೇಶದ ರಾಜಕೀಯ ಭವಿಷ್ಯದ ಆಶಾಕಿರಣವೆಂದೇ ನಂಬಲಾಗಿದ್ದ ಸೈಫ್ ಅಲ್-ಇಸ್ಲಾಂ ಗಡಾಫಿ (53) ಜಿಂಟಾನ್ ನಗರದಲ್ಲಿ ಮಂಗಳವಾರ ಹತ್ಯೆಯಾಗಿದ್ದಾರೆ. ಅವರ ಹತ್ಯೆಯೊಂದಿಗೆ ಲಿಬಿಯಾದ ರಾಜಕಾರಣದಲ್ಲಿ ದೊಡ್ಡ ಸಂಚಲನ ಉಂಟಾಗಿದೆ. ಜಿಂಟಾನ್ ನಗರದ ತಮ್ಮ ನಿವಾಸದಲ್ಲಿ ಮಂಗಳವಾರ ನಡೆದ ವ್ಯವಸ್ಥಿತ ದಾಳಿಯಲ್ಲಿ ನಾಲ್ವರು ಶಸ್ತ್ರಸಜ್ಜಿತ ಹಂತಕರು ಇವರನ್ನು ಗುಂಡಿಕ್ಕಿ ಕೊಂದಿದ್ದಾರೆ. 2011ರ ಕ್ರಾಂತಿಯ ನಂತರ ನಾಪತ್ತೆಯಾಗಿದ್ದ ಸೈಫ್, ಇತ್ತೀಚಿನ ವರ್ಷಗಳಲ್ಲಿ ಮತ್ತೆ ರಾಜಕೀಯವಾಗಿ ಸಕ್ರಿಯರಾಗಲು ಪ್ರಯತ್ನಿಸುತ್ತಿದ್ದಾಗಲೇ ಈ ದುರಂತ ಸಂಭವಿಸಿದೆ.
ಹತ್ಯೆ ಹಿನ್ನೆಲೆ
ಸೈಫ್ ಅಲ್-ಇಸ್ಲಾಂ ಅವರ ಫ್ರೆಂಚ್ ವಕೀಲ ಮಾರ್ಸೆಲ್ ಸೆಕಾಲ್ಡಿ ತಿಳಿಸಿರುವಂತೆ, ಲಿಬಿಯಾದ ಪಶ್ಚಿಮ ನಗರವಾದ ಜಿಂಟಾನ್‌ನಲ್ಲಿರುವ ಅವರ ನಿವಾಸಕ್ಕೆ ನಾಲ್ವರು ಶಸ್ತ್ರಸಜ್ಜಿತ ದುಷ್ಕರ್ಮಿಗಳು ನುಗ್ಗಿ ಈ ಕೃತ್ಯ ಎಸಗಿದ್ದಾರೆ. ಮನೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಮೊದಲು ನಿಷ್ಕ್ರಿಯಗೊಳಿಸಿದ ದುಷ್ಕರ್ಮಿಗಳು, ನಂತರ ಅವರನ್ನು ಹತ್ಯೆ ಮಾಡಿ ಪರಾರಿಯಾಗಿದ್ದಾರೆ ಎಂದು ಅವರ ಸಲಹೆಗಾರ ಅಬ್ದುಲ್ಲಾ ಓತ್ಮನ್ ಅಬ್ದುರ್ರಹೀಮ್ ಮಾಹಿತಿ ನೀಡಿದ್ದಾರೆ.
ಭದ್ರತೆಯ ಎಚ್ಚರಿಕೆ
ಸೈಫ್ ಅವರಿಗೆ ಕೆಲವು ದಿನಗಳ ಹಿಂದೆಯೇ ಭದ್ರತೆಯ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು. ಗಡಾಫಿ ಬುಡಕಟ್ಟು ಜನಾಂಗದ ಮುಖ್ಯಸ್ಥರು ಸೈಫ್ ಅವರಿಗೆ ಕರೆ ಮಾಡಿ, ಅವರ ರಕ್ಷಣೆಗಾಗಿ ಹೆಚ್ಚಿನ ಜನರನ್ನು ಕಳುಹಿಸುವುದಾಗಿ ತಿಳಿಸಿದ್ದರು. ಆದರೆ ಸೈಫ್ ಈ ಪ್ರಸ್ತಾಪವನ್ನು ನಿರಾಕರಿಸಿದ್ದರು ಎಂದು ತಿಳಿದುಬಂದಿದೆ.
ರಾಜಕೀಯ ಹಿನ್ನೆಲೆ
ಮುಅಮ್ಮರ್ ಗಡಾಫಿಯ ಆಳ್ವಿಕೆಯ ಕಾಲದಲ್ಲಿ ಸೈಫ್ ಅವರನ್ನು ಮುಂದಿನ ಉತ್ತರಾಧಿಕಾರಿ ಎಂದೇ ಬಿಂಬಿಸಲಾಗಿತ್ತು. ಅವರು ಯಾವುದೇ ಅಧಿಕೃತ ಹುದ್ದೆ ಹೊಂದಿರದಿದ್ದರೂ, ಲಿಬಿಯಾದ 'ವಾಸ್ತವಿಕ ಪ್ರಧಾನ ಮಂತ್ರಿ' (De facto Prime Minister) ಎಂದು ಗುರುತಿಸಲ್ಪಟ್ಟಿದ್ದರು.
ಆರಂಭದಲ್ಲಿ ಅವರು ಒಬ್ಬ ಮೃದುಧೋರಣೆಯ ಸುಧಾರಕ ಎಂಬ ಇಮೇಜ್ ಹೊಂದಿದ್ದರು. ಆದರೆ 2011ರ ಅರಬ್ ಸ್ಪ್ರಿಂಗ್ ಕ್ರಾಂತಿಯ ಸಮಯದಲ್ಲಿ ತಮ್ಮ ತಂದೆಯ ವಿರುದ್ಧ ಹೋರಾಡಿದವರ ವಿರುದ್ಧ "ರಕ್ತದ ನದಿಗಳನ್ನು ಹರಿಸುವುದಾಗಿ" ಎಚ್ಚರಿಕೆ ನೀಡಿದ ನಂತರ ಅವರ ಮೇಲಿದ್ದ ಗೌರವ ಜನರಿಗೆ ಕಡಿಮೆ ಆಗಿತ್ತು. ಮಾನವೀಯತೆಯ ವಿರುದ್ಧದ ಅಪರಾಧಗಳ ಆರೋಪದ ಮೇಲೆ ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯವು ಅವರ ವಿರುದ್ಧ ಬಂಧನ ವಾರಂಟ್ ಹೊರಡಿಸಿತ್ತು.
2011ರ ದಂಗೆಯ ನಂತರ ಸುಮಾರು ವರ್ಷಗಳ ಕಾಲ ತೆರೆಯ ಮರೆಗೆ ಸರಿದಿದ್ದ ಅವರು, 2021ರಲ್ಲಿ ಲಿಬಿಯಾದ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದ್ದರು. ಆದರೆ ಆ ಚುನಾವಣೆಗಳು ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದ್ದವು.

