ಲಿಬಿಯಾ ಸೇನಾ ಮುಖ್ಯಸ್ಥರನ್ನು ಹೊತ್ತೊಯ್ಯುತ್ತಿದ್ದ ವಿಮಾನ ಪತನ; ಐವರು ಅಧಿಕಾರಿಗಳ ದುರ್ಮರಣ
x
ವಿಮಾನ ಅಪಘಾತದಲ್ಲಿ ಮೃತಪಟ್ಟ ಜನ್ ಮೊಹಮ್ಮದ್ ಅಲಿ ಅಹ್ಮದ್ ಅಲ್-ಹದ್ದಾದ್

ಲಿಬಿಯಾ ಸೇನಾ ಮುಖ್ಯಸ್ಥರನ್ನು ಹೊತ್ತೊಯ್ಯುತ್ತಿದ್ದ ವಿಮಾನ ಪತನ; ಐವರು ಅಧಿಕಾರಿಗಳ ದುರ್ಮರಣ

ಟರ್ಕಿಯ ಅಂಕಾರಾದಲ್ಲಿ ಲಿಬಿಯಾ ಸೇನಾ ಮುಖ್ಯಸ್ಥ ಜನ್ ಮೊಹಮ್ಮದ್ ಅಲಿ ಅಹ್ಮದ್ ಅಲ್-ಹದ್ದಾದ್ ಮತ್ತು ನಾಲ್ವರು ಹಿರಿಯ ಅಧಿಕಾರಿಗಳು ಪ್ರಯಾಣಿಸುತ್ತಿದ್ದ ವಿಮಾನ ಪತನಗೊಂಡು ಭೀಕರ ದುರಂತ ಸಂಭವಿಸಿದೆ.


Click the Play button to hear this message in audio format

ಟರ್ಕಿಯ ರಾಜಧಾನಿ ಅಂಕಾರಾದಿಂದ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಲಿಬಿಯಾ ಸೇನಾ ಮುಖ್ಯಸ್ಥರನ್ನು ಹೊತ್ತೊಯ್ಯುತ್ತಿದ್ದ ಖಾಸಗಿ ಜೆಟ್ ವಿಮಾನವೊಂದು ಪತನಗೊಂಡಿದೆ. ಮಂಗಳವಾರ ರಾತ್ರಿ ನಡೆದ ಈ ದುರಂತದಲ್ಲಿ ವಿಮಾನದಲ್ಲಿದ್ದ ಲಿಬಿಯಾದ ಸೇನಾ ಮುಖ್ಯಸ್ಥರ ಜನ್ ಮೊಹಮ್ಮದ್ ಅಲಿ ಅಹ್ಮದ್ ಅಲ್-ಹದ್ದಾದ್ ಮತ್ತು ನಾಲ್ವರು ಹಿರಿಯ ಸೇನಾ ಅಧಿಕಾರಿಗಳು ಸೇರಿದಂತೆ ಎಲ್ಲರೂ ಸಾವನ್ನಪ್ಪಿದ್ದಾರೆ ಎಂದು ಲಿಬಿಯಾ ಅಧಿಕಾರಿಗಳು ದೃಢಪಡಿಸಿದ್ದಾರೆ.

ತಾಂತ್ರಿಕ ದೋಷವೇ ಕಾರಣ

ಫಾಲ್ಕನ್ 50 ಮಾದರಿಯ ಈ ಬಿಸಿನೆಸ್ ಜೆಟ್ ವಿಮಾನವು ತಾಂತ್ರಿಕ ದೋಷದಿಂದಾಗಿ ಪತನಗೊಂಡಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಲಿಬಿಯಾ ಪ್ರಧಾನಿ ಅಬ್ದುಲ್-ಹಮೀದ್ ದ್ಬೇಬಾ ಅವರು ಫೇಸ್‌ಬುಕ್ ಮೂಲಕ ಈ "ದುರಂತ ಅಪಘಾತ"ವನ್ನು ಖಚಿತಪಡಿಸಿದ್ದು, ಇದು ಲಿಬಿಯಾ ದೇಶಕ್ಕೆ ಸಂಭವಿಸಿದ ದೊಡ್ಡ ನಷ್ಟ ಎಂದು ಸಂತಾಪ ಸೂಚಿಸಿದ್ದಾರೆ.

ವಿಮಾನ ದುರಂತದ ವಿಡಿಯೊ



ದುರ್ಮರಣಕ್ಕೀಡಾದ ಪ್ರಮುಖ ಅಧಿಕಾರಿಗಳು

ಲಿಬಿಯಾದ ಉನ್ನತ ಸೇನಾ ಕಮಾಂಡರ್ ಜನ್ ಮೊಹಮ್ಮದ್ ಅಲಿ ಅಹ್ಮದ್ ಅಲ್-ಹದ್ದಾದ್, ಲಿಬಿಯಾ ಭೂಸೇನೆಯ ಮುಖ್ಯಸ್ಥ ಜನ್ ಅಲ್-ಫಿತುರಿ ಗ್ರೈಬಿಲ್, ಸೇನಾ ಉತ್ಪಾದನಾ ಪ್ರಾಧಿಕಾರದ ಮುಖ್ಯಸ್ಥ ಬ್ರಿಗೇಡಿಯರ್ ಜನ್ ಮಹಮೂದ್ ಅಲ್-ಕಟಾವಿ, ಚೀಫ್ ಆಫ್ ಸ್ಟಾಫ್ ಸಲಹೆಗಾರ ಮೊಹಮ್ಮದ್ ಅಲ್-ಅಸಾವಿ ದಿಯಾಬ್ ಹಾಗೂ ಛಾಯಾಗ್ರಾಹಕ ಮೊಹಮ್ಮದ್ ಒಮರ್ ಅಹ್ಮದ್ ಮಹಜೂಬ್.

ಘಟನೆಯ ವಿವರ

ಅಂಕಾರಾದ ಎಸೆನ್ಬೋಗಾ ವಿಮಾನ ನಿಲ್ದಾಣದಿಂದ ರಾತ್ರಿ 8:30ಕ್ಕೆ ವಿಮಾನವು ಲಿಬಿಯಾದತ್ತ ಪ್ರಯಾಣ ಬೆಳೆಸಿತ್ತು. ಟೇಕ್ ಆಫ್ ಆದ 40 ನಿಮಿಷಗಳ ನಂತರ ಸಂಪರ್ಕ ಕಡಿದುಹೋಗಿದೆ. ಅಂಕಾರಾದಿಂದ ದಕ್ಷಿಣಕ್ಕೆ ಸುಮಾರು 70 ಕಿಲೋಮೀಟರ್ ದೂರದಲ್ಲಿರುವ ಹೈಮಾನಾ ಜಿಲ್ಲೆಯ ಕೆಸಿಕ್ಕವಾಕ್ ಗ್ರಾಮದ ಬಳಿ ವಿಮಾನದ ಅವಶೇಷಗಳು ಪತ್ತೆಯಾಗಿವೆ. ವಿಮಾನವು ಪತನಗೊಳ್ಳುವ ಮೊದಲು ತುರ್ತು ಸಂದೇಶ ರವಾನಿಸಿತ್ತು ಮತ್ತು ಸ್ಫೋಟಗೊಳ್ಳುವ ದೃಶ್ಯಗಳು ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ರಕ್ಷಣಾ ಮಾತುಕತೆಗಾಗಿ ಆಗಮಿಸಿದ್ದ ನಿಯೋಗ

ಎರಡು ದೇಶಗಳ ನಡುವಿನ ಸೇನಾ ಸಹಕಾರವನ್ನು ಹೆಚ್ಚಿಸುವ ಉದ್ದೇಶದಿಂದ ಉನ್ನತ ಮಟ್ಟದ ರಕ್ಷಣಾ ಮಾತುಕತೆಗಾಗಿ ಈ ನಿಯೋಗವು ಅಂಕಾರಾಕ್ಕೆ ಬಂದಿತ್ತು. ಅಲ್-ಹದ್ದಾದ್ ಅವರು ಟರ್ಕಿ ರಕ್ಷಣಾ ಸಚಿವ ಯಾಸರ್ ಗುಲರ್ ಅವರೊಂದಿಗೆ ಸಭೆ ನಡೆಸಿದ್ದರು. ಪ್ರಸ್ತುತ ಟರ್ಕಿ ಸರ್ಕಾರವು ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದೆ.

Read More
Next Story