ದುಬೈ ಏರ್ ಶೋನಲ್ಲಿ ದುರಂತ: ಭಾರತದ ಹೆಮ್ಮೆಯ ತೇಜಸ್ ಯುದ್ಧವಿಮಾನ ಪತನ, ಪೈಲಟ್ ಸಾವು
x

ದುಬೈ ಏರ್ ಶೋನಲ್ಲಿ ದುರಂತ: ಭಾರತದ ಹೆಮ್ಮೆಯ ತೇಜಸ್ ಯುದ್ಧವಿಮಾನ ಪತನ, ಪೈಲಟ್ ಸಾವು

ಸ್ಥಳೀಯ ಕಾಲಮಾನ ಮಧ್ಯಾಹ್ನ 2.10ರ ಸುಮಾರಿಗೆ ಈ ದುರ್ಘಟನೆಯು ಸಂಭವಿಸಿದ್ದು, ಪ್ರದರ್ಶನ ವೀಕ್ಷಿಸುತ್ತಿದ್ದ ಸಾವಿರಾರು ಕಣ್ಣುಗಳ ಮುಂದೆಯೇ ವಿಮಾನವು ಬೆಂಕಿಯ ಉಂಡೆಯಾಗಿ ನೆಲಕ್ಕಪ್ಪಳಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.


ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದ ದುಬೈ ಏರ್ ಶೋನಲ್ಲಿ ಶುಕ್ರವಾರ ಮಧ್ಯಾಹ್ನ ಆಘಾತಕಾರಿ ಘಟನೆಯೊಂದು ನಡೆದಿದೆ. ಭಾರತೀಯ ವಾಯುಪಡೆಯ (ಐಎಎಫ್) ಹೆಮ್ಮೆಯ ಲಘು ಯುದ್ಧವಿಮಾನ 'ತೇಜಸ್', ವೈಮಾನಿಕ ಪ್ರದರ್ಶನದ ವೇಳೆ ಪತನಗೊಂಡು ಪೈಲಟ್ ಮೃತಪಟ್ಟಿದ್ದಾರೆ.

ಸ್ಥಳೀಯ ಕಾಲಮಾನ ಮಧ್ಯಾಹ್ನ 2.10ರ ಸುಮಾರಿಗೆ ಈ ದುರ್ಘಟನೆಯು ಸಂಭವಿಸಿದ್ದು, ಪ್ರದರ್ಶನ ವೀಕ್ಷಿಸುತ್ತಿದ್ದ ಸಾವಿರಾರು ಕಣ್ಣುಗಳ ಮುಂದೆಯೇ ವಿಮಾನವು ಬೆಂಕಿಯ ಉಂಡೆಯಾಗಿ ನೆಲಕ್ಕಪ್ಪಳಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಜಗತ್ತಿನ ಅತ್ಯಂತ ಪ್ರತಿಷ್ಠಿತ ವೈಮಾನಿಕ ಪ್ರದರ್ಶನಗಳಲ್ಲಿ ಒಂದಾದ ದ್ವೈವಾರ್ಷಿಕ ದುಬೈ ಏರ್ ಶೋ, ಎಮಿರೇಟ್ಸ್ ಮತ್ತು ಫ್ಲೈದುಬೈ ನಂತಹ ಸಂಸ್ಥೆಗಳಿಂದ ಶತಕೋಟಿ ಡಾಲರ್ ಮೌಲ್ಯದ ಒಪ್ಪಂದಗಳಿಗೆ ಸಾಕ್ಷಿಯಾಗಿ ಸಂಭ್ರಮದಲ್ಲಿತ್ತು. ಆದರೆ, ಶುಕ್ರವಾರದ ಮಧ್ಯಾಹ್ನ ಭಾರತೀಯ ವಾಯುಪಡೆಯ ಪಾಲಿಗೆ ಕರಾಳವಾಗಿ ಪರಿಣಮಿಸಿತು. ಪ್ರದರ್ಶನದ ಭಾಗವಾಗಿ ತೇಜಸ್ ವಿಮಾನವು ಆಗಸದಲ್ಲಿ ಸಾಹಸಮಯ ಕಸರತ್ತುಗಳನ್ನು ಪ್ರದರ್ಶಿಸುತ್ತಿದ್ದಾಗ, ಹಠಾತ್ತನೆ ನಿಯಂತ್ರಣ ತಪ್ಪಿ ಅಲ್ ಮಕ್ತುಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ಪತನಗೊಂಡಿತು. ಕ್ಷಣಾರ್ಧದಲ್ಲಿ ದಟ್ಟವಾದ ಕಪ್ಪು ಹೊಗೆ ಆಕಾಶವನ್ನೇ ಆವರಿಸಿತು ಎಂದು ವರದಿಗಳು ತಿಳಿಸಿವೆ.

ಘಟನೆಯ ಕುರಿತು ಭಾರತೀಯ ವಾಯುಪಡೆಯು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ಪೈಲಟ್ ಸಾವನ್ನಪ್ಪಿರುವುದನ್ನು ಖಚಿತಪಡಿಸಿದೆ. "ದುಬೈ ಏರ್ ಶೋನಲ್ಲಿ ವೈಮಾನಿಕ ಪ್ರದರ್ಶನದ ವೇಳೆ ಐಎಎಫ್ ತೇಜಸ್ ವಿಮಾನ ಅಪಘಾತಕ್ಕೀಡಾಗಿದೆ. ದುರದೃಷ್ಟವಶಾತ್, ಈ ಘಟನೆಯಲ್ಲಿ ಪೈಲಟ್ ತೀವ್ರವಾಗಿ ಗಾಯಗೊಂಡು ಹುತಾತ್ಮರಾಗಿದ್ದಾರೆ. ಈ ಕಷ್ಟದ ಸಮಯದಲ್ಲಿ ಭಾರತೀಯ ವಾಯುಪಡೆಯು ಮೃತ ಪೈಲಟ್ ಕುಟುಂಬದೊಂದಿಗೆ ದೃಢವಾಗಿ ನಿಲ್ಲುತ್ತದೆ," ಎಂದು ಐಎಎಫ್ ಸಂತಾಪ ಸೂಚಿಸಿದೆ. ಅಪಘಾತದ ನಿಖರ ಕಾರಣವನ್ನು ಪತ್ತೆಹಚ್ಚಲು ತನಿಖಾ ಆಯೋಗವನ್ನು (Court of Inquiry) ರಚಿಸಲಾಗಿದೆ ಎಂದೂ ಅದು ಸ್ಪಷ್ಟಪಡಿಸಿದೆ.

ತಾಂತ್ರಿಕ ಕಾರಣಗಳೇನು?

ಮೂಲಗಳ ಪ್ರಕಾರ, 'ನೆಗೆಟಿವ್ ಜಿ-ಫೋರ್ಸ್' (Negative G-Force) ತಿರುವಿನಿಂದ ವಿಮಾನವನ್ನು ಸರಿದಾರಿಗೆ ತರಲು ಪೈಲಟ್ ವಿಫಲರಾದ್ದೇ ಈ ದುರಂತಕ್ಕೆ ಕಾರಣ ಎನ್ನಲಾಗಿದೆ. ನೆಗೆಟಿವ್ ಜಿ-ಫೋರ್ಸ್ ಎಂಬುದು ಗುರುತ್ವಾಕರ್ಷಣೆಗೆ ವಿರುದ್ಧ ದಿಕ್ಕಿನಲ್ಲಿ ಉಂಟಾಗುವ ಒತ್ತಡವಾಗಿದ್ದು, ಅತಿವೇಗದ ವೈಮಾನಿಕ ಕಸರತ್ತುಗಳ ವೇಳೆ ಇದು ಪೈಲಟ್ ಮತ್ತು ವಿಮಾನದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋಗಳಲ್ಲಿ, ವಿಮಾನವು ಕಸರತ್ತು ನಡೆಸುತ್ತಿರುವಾಗಲೇ ಎತ್ತರವನ್ನು ಕಳೆದುಕೊಂಡು ವೇಗವಾಗಿ ಕೆಳಗೆ ಬೀಳುತ್ತಿರುವುದು ಮತ್ತು ನಂತರ ಬೆಂಕಿಗೆ ಆಹುತಿಯಾಗುತ್ತಿರುವುದು ಸೆರೆಯಾಗಿದೆ.

ಎಚ್​​ಎಎಲ್​ ನಿರ್ಮಿತ ವಿಮಾನ

ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಅಭಿವೃದ್ಧಿಪಡಿಸಿದ ತೇಜಸ್, 4.5ನೇ ತಲೆಮಾರಿನ ಮಲ್ಟಿ-ರೋಲ್ ಯುದ್ಧವಿಮಾನವಾಗಿದ್ದು, ತನ್ನ ವರ್ಗದಲ್ಲೇ ಅತ್ಯಂತ ಹಗುರ ಮತ್ತು ಚಿಕ್ಕ ಗಾತ್ರದ ವಿಮಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು ವಾಯು ರಕ್ಷಣೆ, ಆಕ್ರಮಣಕಾರಿ ವಾಯು ಬೆಂಬಲ ಮತ್ತು ಹತ್ತಿರದ ಕಾದಾಟದ ಕಾರ್ಯಾಚರಣೆಗಳಿಗೆ ಹೆಸರಾಗಿದೆ. ವಿಶೇಷವೆಂದರೆ, ತೇಜಸ್ ವಿಮಾನದಲ್ಲಿ ಮಾರ್ಟಿನ್-ಬೇಕರ್ ಅವರ 'ಜೀರೋ-ಜೀರೋ' ಎಜೆಕ್ಷನ್ ಸೀಟ್ ವ್ಯವಸ್ಥೆಯಿದ್ದು, ಇದು ಶೂನ್ಯ ಎತ್ತರ ಮತ್ತು ಶೂನ್ಯ ವೇಗದಲ್ಲಿಯೂ ಪೈಲಟ್ ಸುರಕ್ಷಿತವಾಗಿ ಹೊರಬರಲು ಸಹಾಯ ಮಾಡುತ್ತದೆ. ಆದರೆ, ಈ ನಿರ್ದಿಷ್ಟ ಸನ್ನಿವೇಶದಲ್ಲಿ ಪೈಲಟ್‌ಗೆ ಈ ವ್ಯವಸ್ಥೆಯನ್ನು ಬಳಸಿಕೊಳ್ಳಲು ಸಾಧ್ಯವಾಯಿತೇ ಅಥವಾ ತಾಂತ್ರಿಕ ವೈಫಲ್ಯ ಎದುರಾಯಿತೇ ಎಂಬುದು ತನಿಖೆಯಿಂದಷ್ಟೇ ಹೊರಬರಬೇಕಿದೆ.

ತೇಜಸ್ ಇತಿಹಾಸದಲ್ಲಿ ಎರಡನೇ ಆಘಾತ

ಭಾರತೀಯ ವಾಯುಪಡೆಯ ಆಧುನೀಕರಣ ಮತ್ತು ಸ್ವದೇಶಿ ನಿರ್ಮಿತ ರಕ್ಷಣಾ ಸಾಮಗ್ರಿಗಳಿಗೆ ಆದ್ಯತೆ ನೀಡುವ ಸರ್ಕಾರದ ಮಹತ್ವಾಕಾಂಕ್ಷೆಯ ಪ್ರತೀಕವಾಗಿರುವ ತೇಜಸ್ ಯೋಜನೆಗೆ ಇದು ಅಲ್ಪಾವಧಿಯಲ್ಲಿ ಎದುರಾದ ಎರಡನೇ ದೊಡ್ಡ ಆಘಾತವಾಗಿದೆ. ಇದಕ್ಕೂ ಮುನ್ನ, 2024ರ ಮಾರ್ಚ್‌ನಲ್ಲಿ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ತೇಜಸ್ ವಿಮಾನ ಪತನಗೊಂಡಿತ್ತು. 2001ರಲ್ಲಿ ಮೊದಲ ಹಾರಾಟ ನಡೆಸಿದ ನಂತರ 23 ವರ್ಷಗಳ ಇತಿಹಾಸದಲ್ಲಿ ಅದು ತೇಜಸ್‌ನ ಮೊದಲ ಪತನವಾಗಿತ್ತು. ಅಂದು ಪೈಲಟ್ ಸುರಕ್ಷಿತವಾಗಿ ಪ್ಯಾರಾಚೂಟ್ ಮೂಲಕ ಹೊರಬಂದಿದ್ದರು.

ಇತ್ತೀಚೆಗಷ್ಟೇ ಕೇಂದ್ರ ಸರ್ಕಾರವು ಎಚ್‌ಎಎಲ್ ಜೊತೆಗೆ 97 ಹೆಚ್ಚುವರಿ ತೇಜಸ್ ಯುದ್ಧವಿಮಾನಗಳ ಖರೀದಿಗಾಗಿ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿತ್ತು. 2027ರಿಂದ ಇದರ ವಿತರಣೆ ಆರಂಭವಾಗುವ ನಿರೀಕ್ಷೆಯಿದೆ. ಇದಲ್ಲದೆ, 2021ರ ಒಪ್ಪಂದದ ಅಡಿಯಲ್ಲಿ 83 ತೇಜಸ್ ಮಾರ್ಕ್-1ಎ ವಿಮಾನಗಳ ಖರೀದಿಗೂ ಸರ್ಕಾರ ಬದ್ಧವಾಗಿದೆ.

Read More
Next Story