
Iran-Israel War| ಖಮೇನಿ ಹತ್ಯೆಗೆ ಇರಾನ್ ಪ್ರತಿಕಾರ: ಭಾರತೀಯರಿದ್ದ ತೈಲ ಟ್ಯಾಂಕರ್ ಮೇಲೆ ಭೀಕರ ದಾಳಿ!
Ayatollah Ali Khamenei|ಇರಾನ್ ಪರಮೋಚ್ಚ ನಾಯಕ ಖಮೇನಿ ಹತ್ಯೆಯ ಬೆನ್ನಲ್ಲೇ ಒಮಾನ್‌ನ ಸ್ಟ್ರೈಟ್ ಆಫ್ ಹಾರ್ಮುಜ್‌ನಲ್ಲಿ ತೈಲ ಟ್ಯಾಂಕರ್ 'ಸ್ಕೈಲೈಟ್' ಮೇಲೆ ಇರಾನ್ ದಾಳಿ ನಡೆಸಿದೆ.
ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಹತ್ಯೆಯಾದ ಬೆನ್ನಲ್ಲೇ ಇರಾನ್ ಕೆರಳಿದೆ. ತನ್ನ ಸಂಪೂರ್ಣ ಶಕ್ತಿಯೊಂದಿಗೆ ಪ್ರತಿಕಾರಕ್ಕೆ ಇಳಿದಿರುವ ಇರಾನ್ ಸೇನೆಯು, ಒಮಾನ್‌ನ ಮುಸಂದಮ್ ಪೆನಿನ್ಸುಲಾ ಬಳಿ ಸಂಚರಿಸುತ್ತಿದ್ದ ಪಲಾವ್ ಧ್ವಜದ 'ಸ್ಕೈಲೈಟ್' ಎಂಬ ತೈಲ ಟ್ಯಾಂಕರ್ ಅನ್ನು ಗುರಿಯಾಗಿಸಿ ದಾಳಿ ಮಾಡಿದೆ. ಈ ದಾಳಿಯಲ್ಲಿ ಕನಿಷ್ಠ ನಾಲ್ವರು ನಾವಿಕರು ಗಾಯಗೊಂಡಿದ್ದಾರೆ ಎಂದು ಒಮಾನ್‌ನ ಕಡಲ ಭದ್ರತಾ ಕೇಂದ್ರ (MSC) ದೃಢಪಡಿಸಿದೆ.
ಭಾರತೀಯ ನಾವಿಕರಿಗೆ ಗಾಯ
ಈ ತೈಲ ಟ್ಯಾಂಕರ್‌ನಲ್ಲಿ ಒಟ್ಟು 20 ಮಂದಿ ಸಿಬ್ಬಂದಿ ಇದ್ದು, ಅವರಲ್ಲಿ 15 ಮಂದಿ ಭಾರತೀಯರು ಮತ್ತು 5 ಮಂದಿ ಇರಾನಿಯನ್ನರು ಇದ್ದಾರೆ ಎಂದು ತಿಳಿದುಬಂದಿದೆ. ಒಮಾನ್‌ನ ದುಕ್ಮ್ (Duqm) ಬಂದರಿನ ಮೇಲೆ ನಡೆದ ಡ್ರೋನ್ ದಾಳಿಯ ಬೆನ್ನಲ್ಲೇ ಈ ಕಡಲ ಮಾರ್ಗದ ದಾಳಿ ಸಂಭವಿಸಿರುವುದು ಇಡೀ ಗಲ್ಫ್ ಪ್ರದೇಶದಲ್ಲಿ ಯುದ್ಧದ ಭೀತಿಯನ್ನು ಹೆಚ್ಚಿಸಿದೆ.
ಜಾಗತಿಕ ತೈಲ ಮಾರ್ಗಕ್ಕೆ ಕುತ್ತು:
ಸ್ಟ್ರೈಟ್ ಆಫ್ ಹಾರ್ಮುಜ್ ವಿಶ್ವದ ಅತ್ಯಂತ ಸೂಕ್ಷ್ಮ ಮತ್ತು ಪ್ರಮುಖ ಕಡಲ ಸಂವಹನ ಕೇಂದ್ರವಾಗಿದೆ (Chokepoint). ವಿಶ್ವದ ಬಹುಪಾಲು ತೈಲ ಸರಬರಾಜು ಇದೇ ಮಾರ್ಗದ ಮೂಲಕ ನಡೆಯುತ್ತದೆ. ಇರಾನ್ ಮತ್ತು ಅಮೆರಿಕ-ಇಸ್ರೇಲ್ ನಡುವಿನ ಈ ಹೊಸ ಯುದ್ಧದಲ್ಲಿ ಒಮಾನ್ ಮೊದಲ ಬಾರಿಗೆ ನೇರವಾಗಿ ಸಿಲುಕಿಕೊಂಡಂತಾಗಿದ್ದು, ಅಂತರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಭಾರೀ ಏರುಪೇರಾಗುವ ಸಾಧ್ಯತೆಯಿದೆ.

