
ಪಾಕ್ನ ಕಾಬೂಲ್‌ನ ಹೋಟೆಲ್‌ನಲ್ಲಿ ಭೀಕರ ಸ್ಫೋಟ: 7 ಮಂದಿ ಸಾವು, ಚೀನಾದ ಪ್ರಜೆಗಳಿಗೆ ಗಾಯ
ಘಟನೆಯಲ್ಲಿ ಇಬ್ಬರು ಚೀನಾ ಪ್ರಜೆಗಳು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಚೀನಾದ ಅಧಿಕೃತ ಸುದ್ದಿ ಸಂಸ್ಥೆ 'ಕ್ಸಿನ್ಹುವಾ' (Xinhua) ವರದಿ ಮಾಡಿದೆ. ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಗಳಿವೆ.
ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನ ಹೃದಯಭಾಗದಲ್ಲಿರುವ ಹೋಟೆಲ್‌ವೊಂದರಲ್ಲಿ ಸೋಮವಾರ (ಜ.19) ಸಂಭವಿಸಿದ ಭೀಕರ ಸ್ಫೋಟದಲ್ಲಿ ಕನಿಷ್ಠ ಏಳು ಮಂದಿ ಮೃತಪಟ್ಟಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತಪಟ್ಟವರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾಬೂಲ್‌ನ ಪ್ರಮುಖ ವಾಣಿಜ್ಯ ಪ್ರದೇಶ ಮತ್ತು ರಾಯಭಾರ ಕಚೇರಿಗಳಿರುವ 'ಶಹರ್-ಎ-ನವ್' ಜಿಲ್ಲೆಯಲ್ಲಿರುವ ಹೋಟೆಲ್ ಒಂದರಲ್ಲಿ ಈ ಸ್ಫೋಟ ಸಂಭವಿಸಿದೆ. ಈ ಹೋಟೆಲ್ ವಿದೇಶಿಯರು ಮತ್ತು ಉದ್ಯಮಿಗಳಿಂದ ತುಂಬಿರುತ್ತಿತ್ತು ಎನ್ನಲಾಗಿದೆ.
ಏಳು ಮಂದಿ ಸಾವು
ಇಟಲಿ ಮೂಲದ ಎನ್‌ಜಿಒ (NGO) 'ಎಮರ್ಜೆನ್ಸಿ' ನಡೆಸುತ್ತಿರುವ ಸರ್ಜಿಕಲ್ ಸೆಂಟರ್‌ಗೆ ಸ್ಫೋಟದ ನಂತರ 20 ಸಂತ್ರಸ್ತರನ್ನು ಕರೆತರಲಾಗಿತ್ತು. "ಆಸ್ಪತ್ರೆಗೆ ಕರೆತರುವಷ್ಟರಲ್ಲೇ ಏಳು ಮಂದಿ ಮೃತಪಟ್ಟಿದ್ದರು. ಗಾಯಾಳುಗಳಲ್ಲಿ ನಾಲ್ವರು ಮಹಿಳೆಯರು ಮತ್ತು ಒಬ್ಬ ಮಗು ಸೇರಿದೆ. ಗಾಯಾಳುಗಳು ತೀವ್ರ ಸ್ವರೂಪದ ಸುಟ್ಟ ಗಾಯಗಳು ಮತ್ತು ಜಜ್ಜಿದ ಗಾಯಗಳಿಂದ ನರಳುತ್ತಿದ್ದಾರೆ," ಎಂದು ಸಂಸ್ಥೆಯ ಅಫ್ಘಾನಿಸ್ತಾನದ ನಿರ್ದೇಶಕ ಡಿಜನ್ ಪ್ಯಾನಿಕ್ ತಿಳಿಸಿದ್ದಾರೆ.
ಚೀನಾ ಪ್ರಜೆಗಳಿಗೆ ಗಾಯ
ಘಟನೆಯಲ್ಲಿ ಇಬ್ಬರು ಚೀನಾ ಪ್ರಜೆಗಳು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಚೀನಾದ ಅಧಿಕೃತ ಸುದ್ದಿ ಸಂಸ್ಥೆ 'ಕ್ಸಿನ್ಹುವಾ' (Xinhua) ವರದಿ ಮಾಡಿದೆ. ಸ್ಫೋಟ ಸಂಭವಿಸಿದ ಕಟ್ಟಡದಲ್ಲಿ ಚೀನಾ ಮೂಲದ ರೆಸ್ಟೋರೆಂಟ್ ಕೂಡ ಕಾರ್ಯನಿರ್ವಹಿಸುತ್ತಿತ್ತು ಎನ್ನಲಾಗಿದೆ. ಘಟನೆಯಲ್ಲಿ ಅಫ್ಘಾನ್ ಭದ್ರತಾ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದಾರೆ.
ಸ್ಫೋಟದ ಹೊಣೆ ಯಾರೂ ಹೊತ್ತಿಲ್ಲ
ಈ ದಾಳಿಯ ಹೊಣೆಯನ್ನು ಈವರೆಗೂ ಯಾವುದೇ ಉಗ್ರಗಾಮಿ ಸಂಘಟನೆ ಹೊತ್ತುಕೊಂಡಿಲ್ಲ. 2021ರಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿ ಭದ್ರತೆಯನ್ನು ಹೆಚ್ಚಿಸುವುದಾಗಿ ಹೇಳಿದ್ದರೂ, ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರಗಾಮಿಗಳು ಆಗಾಗ ಇಂತಹ ದಾಳಿಗಳನ್ನು ನಡೆಸುತ್ತಲೇ ಬಂದಿದ್ದಾರೆ.
ಸ್ಥಳೀಯ ಟಿವಿ ವಾಹಿನಿ 'ಟೋಲೋ ನ್ಯೂಸ್' (Tolo News) ಪ್ರಸಾರ ಮಾಡಿದ ದೃಶ್ಯಾವಳಿಗಳಲ್ಲಿ, ಸ್ಫೋಟದ ನಂತರ ರಸ್ತೆಯುದ್ದಕ್ಕೂ ದಟ್ಟ ಹೊಗೆ ಮತ್ತು ಧೂಳು ಆವರಿಸಿರುವುದು ಕಂಡುಬಂದಿದೆ. ಜನರು ಪ್ರಾಣಭಯದಿಂದ ಓಡುತ್ತಿರುವ ದೃಶ್ಯಗಳು ಸೆರೆಯಾಗಿವೆ. ಅಗ್ನಿಶಾಮಕ ದಳದ ಸಿಬ್ಬಂದಿ ಅವಶೇಷಗಳನ್ನು ತೆರವುಗೊಳಿಸುತ್ತಿದ್ದು, ಪೊಲೀಸರು ಇಡೀ ಪ್ರದೇಶವನ್ನು ಸುತ್ತುವರಿದು ತನಿಖೆ ಆರಂಭಿಸಿದ್ದಾರೆ.
ಕಾಬೂಲ್ ಪೊಲೀಸರು ಮತ್ತು ಆಂತರಿಕ ಸಚಿವಾಲಯದ ವಕ್ತಾರ ಅಬ್ದುಲ್ ಮದೀನ್ ಖಾನಿ, "ಸ್ಫೋಟದ ಹಿಂದಿನ ಕಾರಣವನ್ನು ಇನ್ನೂ ಪತ್ತೆಹಚ್ಚಲಾಗುತ್ತಿದೆ. ತನಿಖಾ ತಂಡಗಳು ಸ್ಥಳದಲ್ಲಿ ಬೀಡುಬಿಟ್ಟಿವೆ," ಎಂದು ತಿಳಿಸಿದ್ದಾರೆ.

