Kabul Hospital Airstrike|ಕಾಬೂಲ್‌ ಆಸ್ಪತ್ರೆ ಮೇಲೆ ಪಾಕ್‌ ಭೀಕರ ವೈಮಾನಿಕ ದಾಳಿ: 400ಕ್ಕೂ ಹೆಚ್ಚು ಜನರ ಸಾವು!
x
ಕಾಬೂಲ್‌ ಆಸ್ಪತ್ರೆ ಮೇಲೆ ಪಾಕ್‌ ಭೀಕರ ವೈಮಾನಿಕ ದಾಳಿ

Kabul Hospital Airstrike|ಕಾಬೂಲ್‌ ಆಸ್ಪತ್ರೆ ಮೇಲೆ ಪಾಕ್‌ ಭೀಕರ ವೈಮಾನಿಕ ದಾಳಿ: 400ಕ್ಕೂ ಹೆಚ್ಚು ಜನರ ಸಾವು!

ಅಫ್ಘಾನಿಸ್ತಾನದ ಕಾಬೂಲ್‌ನಲ್ಲಿರುವ ಆಸ್ಪತ್ರೆಯ ಮೇಲೆ ಪಾಕಿಸ್ತಾನ ನಡೆಸಿದ ಭೀಕರ ವೈಮಾನಿಕ ದಾಳಿಯಲ್ಲಿ 400 ಜನರು ಮೃತಪಟ್ಟಿದ್ದಾರೆ.


ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿರುವ ಆಸ್ಪತ್ರೆಯೊಂದರ ಮೇಲೆ ಪಾಕಿಸ್ತಾನ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 400 ಜನರು ಸಾವನ್ನಪ್ಪಿದ್ದಾರೆ ಮತ್ತು 250 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ತಾಲಿಬಾನ್ ವಕ್ತಾರರು ಮಂಗಳವಾರ ಮುಂಜಾನೆ ತಿಳಿಸಿದ್ದಾರೆ. ಈ ಭೀಕರ ದಾಳಿಯಿಂದಾಗಿ ಆಸ್ಪತ್ರೆಯ ದೊಡ್ಡ ಭಾಗವು ಧ್ವಂಸಗೊಂಡಿದ್ದು, ಅವಶೇಷಗಳ ಅಡಿಯಲ್ಲಿ ಇನ್ನೂ ಅನೇಕರು ಸಿಲುಕಿರುವ ಸಾಧ್ಯತೆ ಇರುವುದರಿಂದ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಆತಂಕ ಎದುರಾಗಿದೆ.

ದಾಳಿಯ ವಿವರ ಮತ್ತು ಆರೋಪ-ಪ್ರತ್ಯಾರೋಪ

ತಾಲಿಬಾನ್ ಸರ್ಕಾರದ ಪ್ರಕಾರ, ಪಾಕಿಸ್ತಾನಿ ಸೇನೆಯು ಕಾಬೂಲ್‌ನ 9ನೇ ಪೊಲೀಸ್ ಜಿಲ್ಲೆಯಲ್ಲಿರುವ ಮಾದಕ ವ್ಯಸನಿಗಳ ಪುನರ್ವಸತಿ ಕೇಂದ್ರ ಅಥವಾ ಚಿಕಿತ್ಸಾ ಆಸ್ಪತ್ರೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. "ಪಾಕಿಸ್ತಾನದ ಸೇನಾ ಆಡಳಿತವು ಮತ್ತೊಮ್ಮೆ ಅಫ್ಘಾನಿಸ್ತಾನದ ವಾಯುಪ್ರದೇಶವನ್ನು ಉಲ್ಲಂಘಿಸಿದೆ. ಚಿಕಿತ್ಸೆ ಪಡೆಯುತ್ತಿದ್ದ ಅಮಾಯಕರನ್ನು ಗುರಿಯಾಗಿಸಿ ನಡೆಸಿದ ಈ ಕೃತ್ಯವು ಮಾನವಕುಲದ ವಿರುದ್ಧದ ಅಪರಾಧವಾಗಿದೆ" ಎಂದು ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಫ್ಘಾನ್ ಸರ್ಕಾರದ ಈ ಆರೋಪಗಳನ್ನು ಪಾಕಿಸ್ತಾನ ತಳ್ಳಿಹಾಕಿದೆ. ತಾವು ಯಾವುದೇ ಆಸ್ಪತ್ರೆಯನ್ನು ಗುರಿಯಾಗಿಸಿಕೊಂಡಿಲ್ಲ ಮತ್ತು ಈ ಆರೋಪಗಳು ಆಧಾರರಹಿತ ಎಂದು ಪಾಕಿಸ್ತಾನ ಹೇಳಿದೆ.

ವಿಡಿಯೋ ಹಂಚಿಕೊಂಡ ಮೊಹಮ್ಮದ್ ನಬಿ

ಅಫ್ಘಾನಿಸ್ತಾನದ ಖ್ಯಾತ ಕ್ರಿಕೆಟಿಗ ಮೊಹಮ್ಮದ್ ನಬಿ ಅವರು ಈ ಘಟನೆಯ ವಿಡಿಯೋವನ್ನು ಹಂಚಿಕೊಂಡಿದ್ದು, ವಿಶ್ವದ ಗಮನ ಸೆಳೆದಿದ್ದಾರೆ. "ರಂಜಾನ್‌ನ 28ನೇ ಪವಿತ್ರ ರಾತ್ರಿಯಂದು ಯುವಕರ ಮಾರಣಹೋಮ ನಡೆದಿದೆ. ಆಸ್ಪತ್ರೆಯ ಗೇಟ್ ಬಳಿ ತಾಯಂದಿರು ತಮ್ಮ ಮಕ್ಕಳ ಹೆಸರನ್ನು ಕೂಗುತ್ತಾ ಅಳುತ್ತಿದ್ದಾರೆ. ಆಸ್ಪತ್ರೆಯಲ್ಲಿ ಸಾವು-ನೋವಿನ ಜೊತೆಗೆ ಜನರ ಭರವಸೆಯೂ ಮಣ್ಣಾಗಿದೆ" ಎಂದು ಅವರು ಕಣ್ಣೀರು ಹಾಕಿದ್ದಾರೆ.

ವಿಶ್ವಸಂಸ್ಥೆಯ ಹಸ್ತಕ್ಷೇಪ: ಇದೇ ಸಂದರ್ಭದಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಅಫ್ಘಾನಿಸ್ತಾನದಲ್ಲಿ ಭಯೋತ್ಪಾದನೆ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಅಫ್ಘಾನ್ ನೆಲವನ್ನು ಬಳಸಿಕೊಂಡು ಪಾಕಿಸ್ತಾನದ ಮೇಲೆ ದಾಳಿ ನಡೆಸುತ್ತಿರುವ ಉಗ್ರಗಾಮಿಗಳನ್ನು ಹತ್ತಿಕ್ಕುವಂತೆ ತಾಲಿಬಾನ್ ಸರ್ಕಾರಕ್ಕೆ ಸೂಚಿಸಿದೆ.

ಸಂಘರ್ಷಕ್ಕೆ ಕಾರಣವಾದ ಗಡಿ ವಿವಾದ

ಕಳೆದ ಮೂರು ವಾರಗಳಿಂದ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ನಡುವೆ ಗಡಿ ಸಂಘರ್ಷ ತಾರಕಕ್ಕೇರಿದೆ. ಈ ವೈಮಾನಿಕ ದಾಳಿಗೂ ಕೆಲವು ಗಂಟೆಗಳ ಮೊದಲು ಉಭಯ ದೇಶಗಳ ಗಡಿಯಲ್ಲಿ ಗುಂಡಿನ ಚಕಮಕಿ ನಡೆದಿತ್ತು. ಇದರಲ್ಲಿ ನಾಲ್ವರು ಅಫ್ಘಾನ್ ನಾಗರಿಕರು ಸಾವನ್ನಪ್ಪಿದ್ದರು. 2021ರಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ ಉಭಯ ರಾಷ್ಟ್ರಗಳ ನಡುವೆ ನಡೆಯುತ್ತಿರುವ ಅತ್ಯಂತ ಭೀಕರ ಸಂಘರ್ಷ ಇದಾಗಿದೆ ಎಂದು ವರದಿಗಳು ತಿಳಿಸಿವೆ.

Read More
Next Story