
ಅಫ್ಘಾನಿಸ್ತಾನ-ಪಾಕಿಸ್ತಾನ ಗಡಿ ಸಂಘರ್ಷ ತೀವ್ರ: ಕಾಬೂಲ್ ಮೇಲೆ ವೈಮಾನಿಕ ದಾಳಿ, 55 ಪಾಕ್ ಸೈನಿಕರ ಸಾವು?
ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ನಡುವೆ ಗಡಿ ಸಂಘರ್ಷ ತೀವ್ರಗೊಂಡಿದೆ. ತಾಲಿಬಾನ್ ಪಡೆಗಳ ದಾಳಿಯಲ್ಲಿ 55 ಪಾಕ್ ಸೈನಿಕರು ಸಾವು ಎಂದು ವರದಿಯಾಗಿದೆ.
ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ನಡುವಿನ ಗಡಿ ಸಂಘರ್ಷ ಶುಕ್ರವಾರ ತಾರಕಕ್ಕೇರಿದೆ. ಅಫ್ಘಾನ್ ರಾಜಧಾನಿ ಕಾಬೂಲ್ ಮೇಲೆ ಪಾಕಿಸ್ತಾನ ವಾಯುಪಡೆ ಭೀಕರ ವೈಮಾನಿಕ ದಾಳಿ ನಡೆಸಿದೆ. ತಾಲಿಬಾನ್ ಪಡೆಗಳು ಪಾಕಿಸ್ತಾನದ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿ 55 ಸೈನಿಕರನ್ನು ಕೊಂದ ಬೆನ್ನಲ್ಲೇ ಈ ಪ್ರತಿಕಾರ ನಡೆದಿದ್ದು, ಉಭಯ ದೇಶಗಳ ನಡುವಿನ ಸಂಬಂಧ ಸಂಪೂರ್ಣ ಹದಗೆಟ್ಟಿದೆ. ಡ್ಯುರಾಂಡ್ ಲೈನ್ ಗಡಿ ಭಾಗದಲ್ಲಿ ನಡೆದ ಈ ಭೀಕರ ಕಾಳಗದಿಂದಾಗಿ ಇಡೀ ದಕ್ಷಿಣ ಏಷ್ಯಾದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಘಟನೆಯ ಹಿನ್ನೆಲೆ
ಅಫ್ಘಾನಿಸ್ತಾನದ ರಕ್ಷಣಾ ಸಚಿವಾಲಯದ ಪ್ರಕಾರ, ಕಳೆದ ಭಾನುವಾರ ಪಾಕಿಸ್ತಾನವು ಅಫ್ಘಾನ್ ಗಡಿಯೊಳಗೆ ನುಗ್ಗಿ ಮಹಿಳೆಯರು ಮತ್ತು ಮಕ್ಕಳನ್ನು ಕೊಂದಿದ್ದಕ್ಕೆ ಪ್ರತಿಯಾಗಿ ಗುರುವಾರ ರಾತ್ರಿ 8 ಗಂಟೆಗೆ 'ಪ್ರತಿಕಾರ ಕಾರ್ಯಾಚರಣೆ' ಆರಂಭಿಸಲಾಯಿತು. ಡ್ಯುರಾಂಡ್ ಲೈನ್ ಉದ್ದಕ್ಕೂ ನಡೆದ ನಾಲ್ಕು ಗಂಟೆಗಳ ಭೀಕರ ಕಾಳಗದಲ್ಲಿ ಪಾಕಿಸ್ತಾನದ 2 ಸೇನಾ ನೆಲೆಗಳು ಮತ್ತು 19 ಚೆಕ್‌ಪೋಸ್ಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಾಲಿಬಾನ್ ವಕ್ತಾರ ಜಬಿವುಲ್ಲಾ ಮುಜಾಹಿದ್ ತಿಳಿಸಿದ್ದಾರೆ. ಈ ಸಂಘರ್ಷದಲ್ಲಿ 55 ಪಾಕ್ ಸೈನಿಕರು ಸಾವನ್ನಪ್ಪಿದ್ದಾರೆ, ಹಲವರನ್ನು ಜೀವಂತವಾಗಿ ಸೆರೆಹಿಡಿಯಲಾಗಿದೆ ಮತ್ತು ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಫ್ಘಾನ್ ಸರ್ಕಾರ ಹೇಳಿಕೊಂಡಿದೆ.
ಪಾಕಿಸ್ತಾನದ ಸ್ಪಷ್ಟನೆ ಮತ್ತು ವೈಮಾನಿಕ ದಾಳಿ
ಪಾಕಿಸ್ತಾನವು ಅಫ್ಘಾನಿಸ್ತಾನದ ಈ ಎಲ್ಲಾ ಹಕ್ಕುಗಳನ್ನು ಬಲವಾಗಿ ತಳ್ಳಿಹಾಕಿದೆ. ಅಫ್ಘಾನ್ ಪಡೆಗಳೇ ಅಪ್ರಚೋದಿತ ಗುಂಡಿನ ದಾಳಿ ಆರಂಭಿಸಿವೆ ಎಂದು ಆರೋಪಿಸಿರುವ ಪಾಕಿಸ್ತಾನ, ತನ್ನ ಕೇವಲ ಇಬ್ಬರು ಸೈನಿಕರು ಹುತಾತ್ಮರಾಗಿದ್ದಾರೆ ಮತ್ತು ಪ್ರತಿಯಾಗಿ ನಡೆಸಿದ ದಾಳಿಯಲ್ಲಿ 36 ಅಫ್ಘಾನ್ ಹೋರಾಟಗಾರರು ಹತರಾಗಿದ್ದಾರೆ ಎಂದು ತಿಳಿಸಿದೆ. ಶುಕ್ರವಾರ ಮುಂಜಾನೆ ಕಾಬೂಲ್, ಕಂದಹಾರ್ ಮತ್ತು ಪಕ್ತಿಯಾ ಪ್ರಾಂತ್ಯಗಳ ಮೇಲೆ ಪಾಕ್ ವಾಯುಪಡೆ ಬಾಂಬ್ ದಾಳಿ ನಡೆಸಿದ್ದು, ದೇಶದ ಸಾರ್ವಭೌಮತ್ವದ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎಂದು ಪಾಕ್ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಎಚ್ಚರಿಸಿದ್ದಾರೆ.
ಗಡಿಯಲ್ಲಿ ಆತಂಕದ ವಾತಾವರಣ
ಉಭಯ ದೇಶಗಳ ನಡುವಿನ ಪ್ರಮುಖ ವ್ಯಾಪಾರ ಮಾರ್ಗವಾದ 'ತೋರ್ಖಾಮ್' ಗಡಿ ಭಾಗದಲ್ಲೂ ಸಂಘರ್ಷ ಹರಡಿದ್ದು, ಸಾವಿರಾರು ಜನರು ಸುರಕ್ಷಿತ ಸ್ಥಳಗಳಿಗೆ ವಲಸೆ ಹೋಗುತ್ತಿದ್ದಾರೆ. ಅಫ್ಘಾನಿಸ್ತಾನದ ನಿರಾಶ್ರಿತರ ಶಿಬಿರಗಳ ಮೇಲೆ ಪಾಕಿಸ್ತಾನ ಕ್ಷಿಪಣಿ ದಾಳಿ ನಡೆಸಿದ್ದರಿಂದ ಮಹಿಳೆಯರು ಮತ್ತು ಮಕ್ಕಳು ಸೇರಿ 13 ನಾಗರಿಕರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಸದ್ಯಕ್ಕೆ ಉಭಯ ದೇಶಗಳ ನಡುವೆ ಕದನ ವಿರಾಮ ಏರ್ಪಡಿಸುವ ಪ್ರಯತ್ನಗಳು ವಿಫಲವಾಗಿದ್ದು, ಗಡಿಯಲ್ಲಿ ಯುದ್ಧದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

