
ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ತ್ರಿ ಶೋಕ ಪುಸ್ತಕಕ್ಕೆ ಸಹಿ ಹಾಕಿದರು.
ಖಮೇನಿ ಹತ್ಯೆಗೆ ಕೊನೆಗೂ ಭಾರತದ ಸಂತಾಪ: ವಿದೇಶಾಂಗ ಸಚಿವ ಜೈಶಂಕರ್-ಅರಗ್ಚಿ ಮಾತುಕತೆ
ನವದೆಹಲಿಯಲ್ಲಿರುವ ಇರಾನ್ ರಾಯಭಾರ ಕಚೇರಿಗೆ ಭೇಟಿ ನೀಡಿದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ತ್ರಿ ಅವರು ಸರ್ಕಾರದ ಪರವಾಗಿ ಶೋಕ ಪುಸ್ತಕಕ್ಕೆ (Condolence book) ಸಹಿ ಹಾಕಿದ್ದಾರೆ.
ಇರಾನ್‌ನ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯ ಬಳಿಕ ಐದು ದಿನಗಳ ಕಾಲ ಮೌನ ವಹಿಸಿದ್ದ ಭಾರತ, ಕೊನೆಗೂ ಗುರುವಾರ ಅಧಿಕೃತವಾಗಿ ಸಂತಾಪ ಸೂಚಿಸಿದೆ. ಫೆಬ್ರವರಿ 28ರಂದು ನಡೆದ ಅಮೆರಿಕ-ಇಸ್ರೇಲ್ ಜಂಟಿ ವೈಮಾನಿಕ ದಾಳಿಯಲ್ಲಿ ಖಮೇನಿ ಮೃತಪಟ್ಟಿದ್ದರು. ಈ ಘಟನೆಗೆ ಭಾರತದ ಆರಂಭಿಕ ಮೌನ ತೀವ್ರ ಟೀಕೆಗೆ ಗುರಿಯಾಗಿದ್ದ ಬೆನ್ನಲ್ಲೇ, ನವದೆಹಲಿಯಲ್ಲಿರುವ ಇರಾನ್ ರಾಯಭಾರ ಕಚೇರಿಗೆ ಭೇಟಿ ನೀಡಿದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ತ್ರಿ ಅವರು ಸರ್ಕಾರದ ಪರವಾಗಿ ಶೋಕ ಪುಸ್ತಕಕ್ಕೆ (Condolence book) ಸಹಿ ಹಾಕಿದ್ದಾರೆ.
ಭಾರತದ ಸ್ಪಷ್ಟ ರಾಜತಾಂತ್ರಿಕ ಸಂದೇಶ
ವಿಕ್ರಮ್ ಮಿಸ್ತ್ರಿ ಅವರು ಭಾರತದಲ್ಲಿರುವ ಇರಾನ್ ರಾಯಭಾರಿ ಮೊಹಮ್ಮದ್ ಫತಲಿ ಅವರನ್ನೂ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯವು (MEA) ಈ ಭೇಟಿಯ ಛಾಯಾಚಿತ್ರಗಳನ್ನು ಬಿಡುಗಡೆ ಮಾಡುವ ಮೂಲಕ, ಖಮೇನಿ ಅವರ ಅಗಲಿಕೆಯನ್ನು ಭಾರತವು ಅಧಿಕೃತವಾಗಿ ಒಪ್ಪಿಕೊಂಡ ಸ್ಪಷ್ಟ ಸಂದೇಶವನ್ನು ರವಾನಿಸಿದೆ.
ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಇರಾನ್ ವಿದೇಶಾಂಗ ಸಚಿವ ಸೈಯದ್ ಅಬ್ಬಾಸ್ ಅರಗ್ಚಿ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. "ಗುರುವಾರ ಮಧ್ಯಾಹ್ನ ಇರಾನ್ ವಿದೇಶಾಂಗ ಸಚಿವ ಸೈಯದ್ ಅಬ್ಬಾಸ್ ಅರಗ್ಚಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದೇನೆ," ಎಂದು ಜೈಶಂಕರ್ ಎಕ್ಸ್‌ನಲ್ಲಿ (X) ಪೋಸ್ಟ್ ಮಾಡಿದ್ದಾರೆ. ಆದರೆ, ಮಾತುಕತೆಯ ವಿವರಗಳನ್ನು ಬಹಿರಂಗಪಡಿಸಿಲ್ಲ.
ಪ್ರಧಾನಿ ಮೋದಿಯಿಂದ ಶಾಂತಿಯ ಮಂತ್ರ
ಪಶ್ಚಿಮ ಏಷ್ಯಾದಲ್ಲಿ ಉಲ್ಬಣಿಸಿರುವ ಬಿಕ್ಕಟ್ಟಿನ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ನಾಯಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿರುವ ಬಗ್ಗೆ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, "ಪಶ್ಚಿಮ ಏಷ್ಯಾದಲ್ಲಿನ ಪ್ರಸ್ತುತ ಪರಿಸ್ಥಿತಿ ಮತ್ತು ಸಂವಾದ ಹಾಗೂ ರಾಜತಾಂತ್ರಿಕತೆಯ ಅಗತ್ಯದ ಬಗ್ಗೆ ನಮ್ಮ ಕಳವಳಗಳನ್ನು ಹಂಚಿಕೊಂಡೆವು. ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ಜಂಟಿ ಪ್ರಯತ್ನ ಮುಂದುವರಿಸಲಿದ್ದೇವೆ," ಎಂದು ತಿಳಿಸಿದ್ದಾರೆ.
ಇದಕ್ಕೂ ಮುನ್ನ, ಫಿನ್‌ಲ್ಯಾಂಡ್ ಅಧ್ಯಕ್ಷ ಅಲೆಕ್ಸಾಂಡರ್ ಸ್ಟಬ್ ಅವರೊಂದಿಗಿನ ಜಂಟಿ ಪತ್ರಿಕಾಗೋಷ್ಠಿಯಲ್ಲೂ ಪ್ರಧಾನಿ ಮೋದಿ, ಯಾವುದೇ ಸಮಸ್ಯೆಗೂ ಮಿಲಿಟರಿ ಸಂಘರ್ಷವು ಪರಿಹಾರವಾಗಲು ಸಾಧ್ಯವಿಲ್ಲ. ಉಕ್ರೇನ್ ಆಗಿರಲಿ ಅಥವಾ ಪಶ್ಚಿಮ ಏಷ್ಯಾ ಆಗಿರಲಿ, ಶಾಂತಿ ಸ್ಥಾಪನೆಗೆ ಭಾರತ ಸದಾ ಬೆಂಬಲ ನೀಡಲಿದೆ ಎಂದು ಸ್ಪಷ್ಟಪಡಿಸಿದರು.
ಸಂವಾದ-ರಾಜತಾಂತ್ರಿಕತೆಗೆ ಭಾರತದ ನಿರಂತರ ಒತ್ತು
ಇರಾನ್-ಇಸ್ರೇಲ್ ಸಂಘರ್ಷದಲ್ಲಿ ಯಾವುದೇ ದೇಶವನ್ನು ನೇರವಾಗಿ ದೂಷಿಸದ ಭಾರತ, ಸಂವಾದ ಮತ್ತು ರಾಜತಾಂತ್ರಿಕತೆಯ ಮೂಲಕ ಪರಿಹಾರ ಕಂಡುಕೊಳ್ಳುವಂತೆ ನಿರಂತರವಾಗಿ ಪ್ರತಿಪಾದಿಸುತ್ತಿದೆ. ಗಲ್ಫ್ ರಾಷ್ಟ್ರಗಳಲ್ಲಿ ಸುಮಾರು 1 ಕೋಟಿಗೂ ಅಧಿಕ ಭಾರತೀಯರು ನೆಲೆಸಿದ್ದು, ಭಾರತ ತನ್ನ ಶೇ. 85ರಷ್ಟು ಕಚ್ಚಾ ತೈಲ ಅಗತ್ಯಗಳಿಗಾಗಿ ಈ ಪ್ರದೇಶವನ್ನೇ ಅವಲಂಬಿಸಿದೆ. ಹಾರ್ಮುಜ್ ಜಲಸಂಧಿ ಮುಚ್ಚುವಿಕೆ ಮತ್ತು ಕತಾರ್‌ನಿಂದ ಎಲ್‌ಎನ್‌ಜಿ (LNG) ಪೂರೈಕೆಯಲ್ಲಿನ ವ್ಯತ್ಯಯವು ಭಾರತದ ಕಳವಳವನ್ನು ಮತ್ತಷ್ಟು ಹೆಚ್ಚಿಸಿದೆ. "ಸಂಘರ್ಷವು ಶೀಘ್ರವಾಗಿ ಅಂತ್ಯಗೊಳ್ಳಬೇಕು. ಈಗಾಗಲೇ ಅನೇಕ ಜೀವಹಾನಿಯಾಗಿದ್ದು, ಈ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸುತ್ತೇವೆ," ಎಂದು ವಿದೇಶಾಂಗ ಸಚಿವಾಲಯವು ಈ ವಾರದ ಆರಂಭದಲ್ಲಿ ಬಿಡುಗಡೆ ಮಾಡಿದ್ದ ಹೇಳಿಕೆಯಲ್ಲಿ ತಿಳಿಸಿತ್ತು.

