
ಇರಾನ್‌ನಲ್ಲಿ ಹಿಂಸಾಚಾರ; ಅಮೆರಿಕದ ಸೇನಾ ದಾಳಿ ಸಾಧ್ಯತೆ; ಮಧ್ಯ ಪ್ರಾಚ್ಯದಲ್ಲಿ ಯುದ್ಧ ಭೀತಿ
ಇಸ್ರೇಲ್ ತನ್ನ ಭದ್ರತಾ ಪಡೆಗಳನ್ನು ತೀವ್ರ ನಿಗಾದಲ್ಲಿರಿಸಿದೆ. ಇರಾನ್‌ನಲ್ಲಿ ಪ್ರತಿಭಟನಾಕಾರರ ಮೇಲೆ ನಡೆಯುತ್ತಿರುವ ದಮನಕಾರಿ ನೀತಿಯಿಂದಾಗಿ ಇದುವರೆಗೆ 100ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು.
ಇರಾನ್‌ನಲ್ಲಿ ನಡೆಯುತ್ತಿರುವ ಬೃಹತ್ ಸರ್ಕಾರ ವಿರೋಧಿ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿದ್ದು, ಈ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧ ಸೇನಾ ಕ್ರಮ ಕೈಗೊಳ್ಳುವ ಸುಳಿವು ನೀಡಿದ್ದಾರೆ. ಅಮೆರಿಕದ ಈ ಸಂಭಾವ್ಯ ಮಿಲಿಟರಿ ಕಾರ್ಯಾಚರಣೆಯ ಮುನ್ಸೂಚನೆಯಿಂದಾಗಿ ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ ಎದುರಾಗಿದೆ.
ಇಸ್ರೇಲ್ ತನ್ನ ಭದ್ರತಾ ಪಡೆಗಳನ್ನು ತೀವ್ರ ನಿಗಾದಲ್ಲಿರಿಸಿದೆ. ಇರಾನ್‌ನಲ್ಲಿ ಪ್ರತಿಭಟನಾಕಾರರ ಮೇಲೆ ನಡೆಯುತ್ತಿರುವ ದಮನಕಾರಿ ನೀತಿಯಿಂದಾಗಿ ಇದುವರೆಗೆ 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಪರಿಸ್ಥಿತಿ ನಿಯಂತ್ರಣ ಮೀರುತ್ತಿದೆ.
ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿರುವ ಪ್ರಕಾರ, ಅಮೆರಿಕ ಅಧ್ಯಕ್ಷ ಟ್ರಂಪ್ ಅವರಿಗೆ ಇರಾನ್ ಮೇಲಿನ ವಿವಿಧ ಸೇನಾ ಆಯ್ಕೆಗಳ ಕುರಿತು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪ್ರತಿಭಟನೆಗಳನ್ನು ಹತ್ತಿಕ್ಕಲು ಇರಾನ್ ಸರ್ಕಾರ ನಡೆಸುತ್ತಿರುವ ಹಿಂಸಾಚಾರಕ್ಕೆ ಪ್ರತಿಯಾಗಿ, ತಹ್ರಾನ್‌ನಲ್ಲಿರುವ ಆಯಕಟ್ಟಿನ ಭದ್ರತಾ ಕೇಂದ್ರಗಳ ಮೇಲೆ ಸೀಮಿತ ವೈಮಾನಿಕ ದಾಳಿ ನಡೆಸುವ ಕುರಿತು ಗಂಭೀರ ಚಿಂತನೆ ನಡೆದಿದೆ. ಈ ಬೆಳವಣಿಗೆಗಳ ಬೆನ್ನಲ್ಲೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಶನಿವಾರ ದೂರವಾಣಿ ಮೂಲಕ ಚರ್ಚೆ ನಡೆಸಿದ್ದು, ಇರಾನ್ ಮೇಲಿನ ಸಂಭಾವ್ಯ ಅಮೆರಿಕನ್ ಹಸ್ತಕ್ಷೇಪದ ಬಗ್ಗೆ ಸಮಾಲೋಚಿಸಿದ್ದಾರೆ ಎಂದು ತಿಳಿದುಬಂದಿದೆ.
ಸರ್ವೋಚ್ಛ ನಾಯಕನ ಖಮೇನಿ ವಿರುದ್ಧ ಪ್ರತಿಭಟನೆ ಜೋರು
ಕಳೆದ ಡಿಸೆಂಬರ್ 28 ರಿಂದ ಆರ್ಥಿಕ ಬಿಕ್ಕಟ್ಟು ಮತ್ತು ಹಣದುಬ್ಬರದ ವಿರುದ್ಧ ಇರಾನ್‌ನಲ್ಲಿ ಆರಂಭವಾದ ಪ್ರತಿಭಟನೆಗಳು ಈಗ ಇಡೀ ದೇಶಕ್ಕೆ ವ್ಯಾಪಿಸಿವೆ. ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಆಡಳಿತದ ವಿರುದ್ಧ ಜನರು ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪ್ರತಿಭಟನಾಕಾರರನ್ನು 'ದೇವರ ಶತ್ರುಗಳು' ಎಂದು ಕರೆದಿರುವ ಇರಾನ್ ಅಟಾರ್ನಿ ಜನರಲ್, ಅವರಿಗೆ ಮರಣದಂಡನೆ ವಿಧಿಸುವ ಎಚ್ಚರಿಕೆ ನೀಡಿದ್ದಾರೆ. ಮಾನವ ಹಕ್ಕುಗಳ ಸಂಘಟನೆಗಳ ಪ್ರಕಾರ, ಕನಿಷ್ಠ 116 ಮಂದಿ ಪೊಲೀಸರ ಗುಂಡಿಗೆ ಬಲಿಯಾಗಿದ್ದು, 2,300ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಇಡೀ ದೇಶದಲ್ಲಿ ಇಂಟರ್ನೆಟ್ ಸಂಪರ್ಕವನ್ನು ಕಡಿತಗೊಳಿಸಲಾಗಿದ್ದು, ಮಾಹಿತಿ ಹೊರಬರದಂತೆ ಇರಾನ್ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗಾಗಲೇ ಇರಾನ್ ನಾಯಕರಿಗೆ ಎಚ್ಚರಿಕೆ ನೀಡಿದ್ದು, "ನಾವು ಅವರಿಗೆ ಎಲ್ಲಿ ಹೊಡೆಯಬೇಕೋ ಅಲ್ಲಿ ಬಲವಾಗಿ ಹೊಡೆಯುತ್ತೇವೆ" ಎಂದು ಗುಡುಗಿದ್ದಾರೆ. ಆದರೆ, ಈ ಬಾರಿ ಭೂಸೇನೆಯನ್ನು ಬಳಸುವ ಉದ್ದೇಶವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಆರು ತಿಂಗಳ ಹಿಂದೆಯಷ್ಟೇ ಅಮೆರಿಕ 'ಮಿಡ್‌ನೈಟ್ ಹ್ಯಾಮರ್' ಕಾರ್ಯಾಚರಣೆಯ ಮೂಲಕ ಇರಾನ್‌ನ ಮೂರು ಪರಮಾಣು ಕೇಂದ್ರಗಳ ಮೇಲೆ ದಾಳಿ ನಡೆಸಿತ್ತು. ಸದ್ಯ ಲಂಡನ್, ಪ್ಯಾರಿಸ್ ಮತ್ತು ಬರ್ಲಿನ್‌ನಂತಹ ಪ್ರಮುಖ ನಗರಗಳಲ್ಲೂ ಇರಾನ್ ಸರ್ಕಾರದ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿದ್ದು, ಪರಿಸ್ಥಿತಿ ಜಾಗತಿಕ ಮಟ್ಟದಲ್ಲಿ ಉದ್ವಿಗ್ನಗೊಂಡಿದೆ. ಅಮೆರಿಕದ ಯಾವುದೇ ಸೇನಾ ಕ್ರಮವು ಇಡೀ ಮಧ್ಯಪ್ರಾಚ್ಯ ಪ್ರದೇಶದಲ್ಲಿ ದೊಡ್ಡ ಮಟ್ಟದ ಯುದ್ಧಕ್ಕೆ ಕಾರಣವಾಗಬಹುದು ಎಂಬ ಆತಂಕವನ್ನು ರಾಜತಾಂತ್ರಿಕ ತಜ್ಞರು ವ್ಯಕ್ತಪಡಿಸಿದ್ದಾರೆ.

