
Iran-Israel War|ಇರಾನ್ ನೆರೆಹೊರೆಯ ರಾಷ್ಟ್ರಗಳ ಮೇಲೆ ಏಕೆ ದಾಳಿ ಮಾಡುತ್ತಿದೆ?
ಆಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯ ನಂತರ ಇರಾನ್ ಅತ್ಯಂತ ಉಗ್ರ ರೂಪ ತಾಳಿದ್ದು, ತನ್ನ ಪ್ರತೀಕಾರದ ಭಾಗವಾಗಿ ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಪ್ರಮುಖ ಸೇನಾ ನೆಲೆಗಳ ಮೇಲೆ ಕ್ಷಿಪಣಿ ಮಳೆಗರೆದಿದೆ.
ಇರಾನ್‌ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಹತ್ಯೆಯ ನಂತರ ಮಧ್ಯಪ್ರಾಚ್ಯದಲ್ಲಿ ಯುದ್ಧದ ವಾತಾವರಣ ದಟ್ಟವಾಗಿದೆ. ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಅವರು ಒಂದು ತಿಂಗಳ ಹಿಂದೆಯೇ ನೀಡಿದ್ದ ಎಚ್ಚರಿಕೆಯಂತೆ, ಈಗ ಇರಾನ್ ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಪ್ರಮುಖ ಸೇನಾ ನೆಲೆಗಳ ಮೇಲೆ ಭೀಕರ ದಾಳಿ ಆರಂಭಿಸಿದೆ.
ಗಲ್ಫ್ ರಾಷ್ಟ್ರಗಳ ಮೇಲೆ ಇರಾನ್ ಪ್ರತೀಕಾರ
ಶನಿವಾರ (ಫೆಬ್ರವರಿ 28) ಆರಂಭವಾದ ಈ ಜಂಟಿ ದಾಳಿಗೆ ಪ್ರತಿಯಾಗಿ ಇರಾನ್, ಅಮೆರಿಕದ ಸೇನಾ ನೆಲೆಗಳನ್ನು ಹೊಂದಿರುವ ಬಹ್ರೇನ್, ಜೋರ್ಡಾನ್, ಕುವೈತ್, ಕತಾರ್ ಮತ್ತು ಇರಾಕ್ ರಾಷ್ಟ್ರಗಳ ಮೇಲೆ ಕ್ಷಿಪಣಿಗಳನ್ನು ಉಡಾಯಿಸಿದೆ. ಭಾನುವಾರವೂ ಈ ದಾಳಿ ಮುಂದುವರಿದಿದ್ದು, ದುಬೈ, ದೋಹಾ ಮತ್ತು ಮನಾಮಾದಲ್ಲಿ ಭಾರಿ ಸ್ಫೋಟದ ಶಬ್ದಗಳು ಕೇಳಿಬಂದಿವೆ.
ತಟಸ್ಥ ರಾಷ್ಟ್ರವೆಂದೇ ಕರೆಸಿಕೊಳ್ಳುವ ಓಮನ್ ಕೂಡ ಇರಾನ್‌ನ ಡ್ರೋನ್ ದಾಳಿಯಿಂದ ಬಜಾವಾಗಿಲ್ಲ. ಅಲ್ಲಿನ ಬಂದರು ಮತ್ತು ತೈಲ ಟ್ಯಾಂಕರ್ ಮೇಲೆ ದಾಳಿ ನಡೆದಿದೆ ಎಂದು ವರದಿಯಾಗಿದೆ. ಅಮೆರಿಕದ ಅಧಿಕೃತ ಸೇನಾ ನೆಲೆ ಇಲ್ಲದಿದ್ದರೂ, ವಾಣಿಜ್ಯ ನಗರಿ ದುಬೈ ಮೇಲೆ ದಾಳಿ ನಡೆದಿದ್ದು, ಕೆಲವು ಪ್ರಮುಖ ಕಟ್ಟಡಗಳಿಗೆ ಹಾನಿಯಾಗಿದೆ.
ಇರಾನ್ ಗುರಿಯಾಗಿಸಿರುವ ಪ್ರಮುಖ ಸೇನಾ ನೆಲೆಗಳು
• ಕತಾರ್: ಅಮೆರಿಕದ ಅತಿ ದೊಡ್ಡ ಸೇನಾ ನೆಲೆ, ಇಲ್ಲಿ 10,000ಕ್ಕೂ ಹೆಚ್ಚು ಸೈನಿಕರಿದ್ದಾರೆ.
• ಬಹ್ರೇನ್: ಅಮೆರಿಕದ ನೌಕಾಪಡೆಯ 'ಫಿಫ್ತ್ ಫ್ಲೀಟ್'ನ ಪ್ರಧಾನ ಕಚೇರಿ ಇಲ್ಲಿದೆ.
• ಕುವೈತ್: ಇರಾಕ್ ಗಡಿ ಸಮೀಪವಿರುವ ಅಮೆರಿಕದ ಭೂಸೇನೆಯ ಪ್ರಮುಖ ನೆಲೆಗಳು.
• ಯುಎಇ: ಅಬುಧಾಬಿಯ ದಕ್ಷಿಣಕ್ಕಿರುವ ಈ ನೆಲೆಯು ಅಮೆರಿಕದ ವಿಮಾನಗಳ ಪ್ರಮುಖ ಕೇಂದ್ರವಾಗಿದೆ.
• ಸೌದಿ ಅರೇಬಿಯಾ: ಪ್ರಿನ್ಸ್ ಸುಲ್ತಾನ್ ವಾಯುನೆಲೆಯಲ್ಲಿರುವ ಅಮೆರಿಕದ ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳನ್ನು ಗುರಿಯಾಗಿಸಲಾಗಿದೆ.
'ನಿಮ್ಮ ಯುದ್ಧ ನೆರೆಹೊರೆಯವರೊಂದಿಗಲ್ಲ': ಯುಎಇ ಕಿಡಿ
ಇರಾನ್‌ನ ಈ ದಾಳಿಗಳ ಬಗ್ಗೆ ಯುಎಇ (UAE) ಕಠಿಣ ಪ್ರತಿಕ್ರಿಯೆ ನೀಡಿದೆ. ಯುಎಇ ಅಧ್ಯಕ್ಷರ ರಾಜತಾಂತ್ರಿಕ ಸಲಹೆಗಾರ ಅನ್ವರ್ ಗರ್ಗಾಶ್, “ಇರಾನ್ ತನ್ನ ವಿವೇಕ ಕಳೆದುಕೊಳ್ಳಬಾರದು. ನಿಮ್ಮ ಯುದ್ಧವು ನಿಮ್ಮ ನೆರೆಹೊರೆಯವರ ವಿರುದ್ಧವಲ್ಲ. ಇಂತಹ ಕೃತ್ಯಗಳು ಇರಾನ್ ಅನ್ನು ಜಗತ್ತಿನಲ್ಲಿ ಮತ್ತಷ್ಟು ಒಂಟಿಯಾಗಿಸುತ್ತವೆ," ಎಂದು ಎಚ್ಚರಿಸಿದ್ದಾರೆ.
ಭಾರತದ ಮೇಲೆ ಪರಿಣಾಮ?
ದುಬೈ ಮತ್ತು ಕತಾರ್‌ನಂತಹ ನಗರಗಳಲ್ಲಿ ಲಕ್ಷಾಂತರ ಭಾರತೀಯರು ನೆಲೆಸಿದ್ದಾರೆ. ಈ ನಗರಗಳ ಮೇಲೆ ದಾಳಿ ನಡೆಯುತ್ತಿರುವುದು ಭಾರತಕ್ಕೆ ದೊಡ್ಡ ಕಳವಳ ತಂದಿದೆ. ಅಲ್ಲದೇ, ಜಬೆಲ್ ಅಲಿ ಬಂದರಿನಂತಹ ಪ್ರಮುಖ ವಾಣಿಜ್ಯ ಕೇಂದ್ರಗಳ ಮೇಲೆ ದಾಳಿಯಾಗುತ್ತಿರುವುದರಿಂದ ಜಾಗತಿಕ ವ್ಯಾಪಾರಕ್ಕೆ ಹೊಡೆತ ಬೀಳಲಿದೆ.

