ಇರಾನ್‌ನಲ್ಲಿ 500ಕ್ಕೂ ಹೆಚ್ಚು ಜನ ಬಲಿ: ಕಠಿಣ ಕ್ರಮಕ್ಕೆ ಮುಂದಾದ ಡೊನಾಲ್ಡ್ ಟ್ರಂಪ್‌
x
ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌

ಇರಾನ್‌ನಲ್ಲಿ 500ಕ್ಕೂ ಹೆಚ್ಚು ಜನ ಬಲಿ: ಕಠಿಣ ಕ್ರಮಕ್ಕೆ ಮುಂದಾದ ಡೊನಾಲ್ಡ್ ಟ್ರಂಪ್‌

ಇರಾನ್‌ನಲ್ಲಿ ಸರ್ಕಾರಿ ವಿರೋಧಿ ಪ್ರತಿಭಟನೆ ತೀವ್ರಗೊಂಡಿದೆ. ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧ ಕಠಿಣ ಮಿಲಿಟರಿ ಕ್ರಮದ ಸುಳಿವು ನೀಡಿದ್ದಾರೆ. ಇರಾನ್ ಪ್ರತಿಯಾಗಿ ಅಮೆರಿಕ ನೆಲೆಗಳ ಮೇಲೆ ದಾಳಿ ಮಾಡುವುದಾಗಿ ಬೆದರಿಸಿದೆ.


ಇರಾನ್‌ನಲ್ಲಿ ನಡೆಯುತ್ತಿರುವ ಬೃಹತ್ ಸರ್ಕಾರಿ ವಿರೋಧಿ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇರಾನ್‌ನಲ್ಲಿ ಪ್ರತಿಭಟನಾಕಾರರ ಮೇಲೆ ನಡೆಯುತ್ತಿರುವ ದಮನಕಾರಿ ಕ್ರಮಕ್ಕೆ ಪ್ರತಿಯಾಗಿ ಅಮೆರಿಕಾ ಕಠಿಣ ಕ್ರಮದ ಎಚ್ಚರಿಕೆ ನೀಡಿದ ಬೆನ್ನಲ್ಲೇ, ಇರಾನ್ ಮಾತುಕತೆಗೆ ಪ್ರಸ್ತಾವನೆ ಸಲ್ಲಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಟ್ರಂಪ್‌ ಹೇಳಿದ್ದೇನು?

ಏರ್ ಫೋರ್ಸ್ ಒನ್ ವಿಮಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, "ನನಗೆ ಪ್ರತಿ ಗಂಟೆಗೆ ಇರಾನ್ ಪರಿಸ್ಥಿತಿಯ ವರದಿ ಸಿಗುತ್ತಿದೆ. ನಾವು ಶೀಘ್ರದಲ್ಲೇ ಒಂದು ನಿರ್ಧಾರಕ್ಕೆ ಬರಲಿದ್ದೇವೆ," ಎಂದಿದ್ದಾರೆ. ಇರಾನ್‌ನ ಈ ಬಿಕ್ಕಟ್ಟನ್ನು ನಿಭಾಯಿಸಲು ಮಿಲಿಟರಿ ದಾಳಿ, ಸೈಬರ್ ಕಾರ್ಯಾಚರಣೆ ಅಥವಾ ಕಠಿಣ ಆರ್ಥಿಕ ನಿರ್ಬಂಧಗಳನ್ನು ಹೇರುವ ಸಾಧ್ಯತೆಗಳಿವೆ ಎನ್ನಲಾಗಿದೆ. ಅಲ್ಲದೆ, ಇರಾನ್‌ನಲ್ಲಿ ಸ್ಥಗಿತಗೊಂಡಿರುವ ಇಂಟರ್ನೆಟ್ ಸೇವೆಯನ್ನು ಪುನರಾರಂಭಿಸಲು ಎಲೋನ್ ಮಸ್ಕ್ ಅವರ ಸ್ಟಾರ್‌ಲಿಂಕ್ (Starlink) ಉಪಗ್ರಹ ಜಾಲವನ್ನು ಬಳಸುವ ಬಗ್ಗೆಯೂ ಟ್ರಂಪ್ ಸುಳಿವು ನೀಡಿದ್ದಾರೆ.

ಇರಾನ್‌ನಲ್ಲಿ 500ಕ್ಕೂ ಹೆಚ್ಚು ಸಾವು

ಕಳೆದ ಎರಡು ವಾರಗಳಿಂದ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ ಇದುವರೆಗೆ 500ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಮಾನವ ಹಕ್ಕುಗಳ ಸಂಘಟನೆ HRANA ಪ್ರಕಾರ, 490 ಪ್ರತಿಭಟನಾಕಾರರು ಮತ್ತು 48 ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ. ಸುಮಾರು 10,600 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.

ಇರಾನ್‌ನ ಪ್ರತಿರೋಧ ಮತ್ತು ಬೆದರಿಕೆ

ಒಂದು ವೇಳೆ ಅಮೆರಿಕ ಇರಾನ್ ಮೇಲೆ ದಾಳಿ ನಡೆಸಿದರೆ ಅಥವಾ ಪ್ರತಿಭಟನೆಗೆ ಬೆಂಬಲ ನೀಡಲು ಮುಂದಾದರೆ, ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಎಲ್ಲಾ ಮಿಲಿಟರಿ ನೆಲೆಗಳು, ಹಡಗುಗಳು ಮತ್ತು ಇಸ್ರೇಲ್ ಮೇಲೆ ದಾಳಿ ನಡೆಸುವುದಾಗಿ ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಕರ್ ಖಾಲಿಬಾಫ್ ಬೆದರಿಕೆ ಹಾಕಿದ್ದಾರೆ. "ಅಮೆರಿಕ ತಪ್ಪು ಲೆಕ್ಕಾಚಾರ ಮಾಡಬಾರದು" ಎಂದು ಅವರು ಎಚ್ಚರಿಸಿದ್ದಾರೆ.

ಪ್ರತಿಭಟನೆಯ ಹಿನ್ನೆಲೆ

ಡಿಸೆಂಬರ್ 28 ರಂದು ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಆರಂಭವಾದ ಈ ಪ್ರತಿಭಟನೆ, ಈಗ ಇರಾನ್‌ನ ಇಸ್ಲಾಮಿಕ್ ಆಡಳಿತದ ವಿರುದ್ಧದ ದೊಡ್ಡ ಬಂಡಾಯವಾಗಿ ಮಾರ್ಪಟ್ಟಿದೆ. 1979ರ ಕ್ರಾಂತಿಯ ನಂತರದ ಅತ್ಯಂತ ಗಂಭೀರ ಪ್ರತಿಭಟನೆ ಇದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇರಾನ್ ಸರ್ಕಾರವು ಈ ಪ್ರತಿಭಟನೆಗಳ ಹಿಂದೆ ಅಮೆರಿಕ ಮತ್ತು ಇಸ್ರೇಲ್ ಕೈವಾಡವಿದೆ ಎಂದು ಆರೋಪಿಸಿದೆ.

ವಿರೋಧ ಪಕ್ಷಗಳ ಮನವಿ

ಇರಾನ್‌ನ ಮಾಜಿ ರಾಜನ ಮಗ ರೆಜಾ ಪಹ್ಲವಿ, "ಅಧ್ಯಕ್ಷ ಟ್ರಂಪ್ ಅವರೇ, ನೀವು ಇರಾನಿನ ಜನರ ಬೆಂಬಲಕ್ಕೆ ನಿಲ್ಲಬೇಕು. ಒಬಾಮಾ ಮತ್ತು ಬೈಡನ್ ಅವರಂತೆ ನಮ್ಮನ್ನು ಕೈಬಿಡಬೇಡಿ. ಇರಾನ್ ಅನ್ನು ಮತ್ತೆ ಶ್ರೇಷ್ಠ ರಾಷ್ಟ್ರವನ್ನಾಗಿ ಮಾಡಲು ಸಹಾಯ ಮಾಡಿ," ಎಂದು ಫಾಕ್ಸ್ ನ್ಯೂಸ್ ಮೂಲಕ ವಿನಂತಿಸಿದ್ದಾರೆ.

ವಿಶ್ವಸಂಸ್ಥೆಯ ಕಳವಳ

ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರು ಇರಾನ್‌ನಲ್ಲಿ ನಡೆಯುತ್ತಿರುವ ಹಿಂಸಾಚಾರದ ವರದಿಗಳಿಂದ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕನ್ನು ಗೌರವಿಸಬೇಕು ಮತ್ತು ಸಂಯಮ ವಹಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

Read More
Next Story