
ʻಜೀರೋ ಮನಿ… ಜೀರೋ ಆಯಿಲ್ʼ ಕ್ಯೂಬಾಕ್ಕೆ ಡೊನಾಲ್ಡ್ ಟ್ರಂಪ್ ಖಡಕ್ ವಾರ್ನಿಂಗ್
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕ್ಯೂಬಾ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. ವೆನೆಜುವೆಲಾದಿಂದ ಸಿಗುತ್ತಿದ್ದ ತೈಲ ಮತ್ತು ಹಣಕ್ಕೆ ಬ್ರೇಕ್ ಹಾಕಿರುವ ಟ್ರಂಪ್, ಕ್ಯೂಬಾಕ್ಕೆ ನೀಡಿದ ಅಂತಿಮ ಎಚ್ಚರಿಕೆ ನೀಡಿದ್ದಾರೆ.
ದಶಕಗಳಿಂದ ಅಮೆರಿಕದ ವಿರೋಧಿ ಪಾಳಯದಲ್ಲಿ ಗುರುತಿಸಿಕೊಂಡಿದ್ದ ಲ್ಯಾಟಿನ್ ಅಮೆರಿಕದ ದೇಶಗಳಾದ ಕ್ಯೂಬಾ ಮತ್ತು ವೆನೆಜುವೆಲಾ ವಿರುದ್ಧ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಯುದ್ಧಕ್ಕೆ ಸನ್ನದ್ಧರಾದಂತಿದ್ದಾರೆ. ಇತ್ತೀಚೆಗಷ್ಟೇ ಅಮೆರಿಕ ಸೇನೆಯು ವೆನೆಜುವೆಲಾದಲ್ಲಿ ನಡೆಸಿದ ಮಿಂಚಿನ ಕಾರ್ಯಾಚರಣೆಯ ನಂತರ, ಟ್ರಂಪ್ ದೃಷ್ಟಿ ಇದೀಗ ಕ್ಯೂಬಾದ ಮೇಲೆ ಬಿದ್ದಿದೆ.ಕ್ಯೂಬಾವು ಹಲವು ವರ್ಷಗಳಿಂದ ವೆನೆಜುವೆಲಾದಿಂದ ಪಡೆಯುತ್ತಿದ್ದ ತೈಲ ಮತ್ತು ಹಣದ ಮೇಲೆ ಬದುಕುತ್ತಿತ್ತು, ಆದರೆ ಇನ್ನು ಮುಂದೆ ಅದು ಸಾಧ್ಯವಿಲ್ಲ. ಹೀಗಾಗಿ ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಳ್ಳುವಂತೆ ಟ್ರಂಪ್ ಅಂತಿಮ ಎಚ್ಚರಿಕೆ ನೀಡಿದ್ದಾರೆ.
ಟ್ರಂಪ್ ಅವರ ಖಡಕ್ ಎಚ್ಚರಿಕೆ
ತಮ್ಮ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ 'ಟ್ರುತ್ ಸೋಶಿಯಲ್'ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಟ್ರಂಪ್, "ಕ್ಯೂಬಾಕ್ಕೆ ಇನ್ನು ಮುಂದೆ ಯಾವುದೇ ಹಣ ಅಥವಾ ತೈಲ ಪೂರೈಕೆಯಾಗುವುದಿಲ್ಲ - ಶೂನ್ಯ! ಸಮಯ ಮೀರುವ ಮುನ್ನ ಅವರು ಒಪ್ಪಂದ ಮಾಡಿಕೊಳ್ಳುವುದು ಒಳಿತು ಎಂದು ನಾನು ಸೂಚಿಸುತ್ತೇನೆ," ಎಂದು ಎಚ್ಚರಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ಪೋಸ್ಟ್
ವೆನೆಜುವೆಲಾ ರಕ್ಷಣೆ ಈಗ ಅಮೆರಿಕ ಪಾಲು
ವೆನೆಜುವೆಲಾಕ್ಕೆ ಇನ್ನು ಮುಂದೆ ಕ್ಯೂಬಾದಂತಹ "ಗೂಂಡಾಗಳ" ರಕ್ಷಣೆ ಅಗತ್ಯವಿಲ್ಲ. ಈಗ ವೆನೆಜುವೆಲಾವನ್ನು ವಿಶ್ವದ ಅತ್ಯಂತ ಶಕ್ತಿಶಾಲಿ ಮಿಲಿಟರಿ ಹೊಂದಿರುವ ಅಮೆರಿಕ ದೇಶವು ರಕ್ಷಿಸಲಿದೆ ಎಂದು ಟ್ರಂಪ್ ಘೋಷಿಸಿದ್ದಾರೆ. ಇದೇ ವೇಳೆ, "ಮಾರ್ಕೊ ರೂಬಿಯೋ ಕ್ಯೂಬಾದ ಅಧ್ಯಕ್ಷರಾಗಲಿದ್ದಾರೆ" ಎಂಬ ಪೋಸ್ಟ್ ಅನ್ನು ಹಂಚಿಕೊಂಡ ಟ್ರಂಪ್, "ಇದು ಕೇಳಲು ಚೆನ್ನಾಗಿದೆ!" ಎಂದು ಕಾಮೆಂಟ್ ಮಾಡಿದ್ದಾರೆ.
ಕ್ಯೂಬಾ ಅಧ್ಯಕ್ಷರ ತಿರುಗೇಟು
ಟ್ರಂಪ್ ಅವರ ಈ ಬೆದರಿಕೆಗೆ ಕ್ಯೂಬಾ ಅಧ್ಯಕ್ಷ ಮಿಗುಯೆಲ್ ಡಿಯಾಜ್-ಕಾನೆಲ್ ಬರ್ಮುಡೆಜ್ ಅವರು ಎಕ್ಸ್ (X) ಮೂಲಕ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. "ಮಾನವ ಜೀವಗಳನ್ನೂ ವ್ಯವಹಾರವಾಗಿ ನೋಡುವವರಿಗೆ ಕ್ಯೂಬಾದತ್ತ ಬೆರಳು ತೋರಿಸುವ ನೈತಿಕ ಹಕ್ಕಿಲ್ಲ. ಕಳೆದ ಆರು ದಶಕಗಳಿಂದ ಅಮೆರಿಕಾವು ಹೇರಿರುವ ದಬ್ಬಾಳಿಕೆಯ ಕ್ರಮಗಳಿಂದಾಗಿ ನಾವು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದೇವೆ," ಎಂದು ಅವರು ಕಿಡಿಕಾರಿದ್ದಾರೆ. ಕ್ಯೂಬಾ ಸ್ವತಂತ್ರ ದೇಶವಾಗಿದ್ದು, ಕೊನೆಯ ಹನಿ ರಕ್ತದವರೆಗೂ ಮಾತೃಭೂಮಿಯನ್ನು ರಕ್ಷಿಸಲು ಸಿದ್ಧವಾಗಿದೆ ಎಂದು ಅವರು ಹೇಳಿದ್ದಾರೆ.
ವೆನೆಜುವೆಲಾದಲ್ಲಿ ರಾಜಕೀಯ ಕೈದಿಗಳ ಬಿಡುಗಡೆ
ಅಮೆರಿಕ ಪಡೆಗಳಿಂದ ವೆನೆಜುವೆಲಾದ ಅಧ್ಯಕ್ಷರು ಸೆರೆಯಾದ ಒಂದು ವಾರದ ನಂತರ, ಅಲ್ಲಿನ ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡುವ ಪ್ರಕ್ರಿಯೆ ಆರಂಭವಾಗಿದೆ. ವಿರೋಧ ಪಕ್ಷದ ನಾಯಕಿ ಮಾರಿಯಾ ಕೊರಿನಾ ಮಚಾಡೊ ಅವರ ಪಕ್ಷದ ನಾಯಕರೂ ಸೇರಿದಂತೆ ಹಲವರನ್ನು ಬಿಡುಗಡೆ ಮಾಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಟ್ರಂಪ್, "ಅಮೆರಿಕ ಬಂದು ಮಾಡಬೇಕಾದದ್ದನ್ನು ಮಾಡಿದ್ದರಿಂದ ನೀವು ಅದೃಷ್ಟವಂತರು ಎಂಬುದನ್ನು ಕೈದಿಗಳು ನೆನಪಿಟ್ಟುಕೊಳ್ಳಲಿ," ಎಂದು ಬರೆದಿದ್ದಾರೆ.

