
ಅಮೆರಿಕದಿಂದ ನಿರ್ಬಂಧ ಸಡಿಲಿಕೆ: ಇರಾನ್ ಕಚ್ಚಾ ತೈಲ ಖರೀದಿಗೆ ಒಲವು ತೋರಿದ ಭಾರತೀಯ ಕಂಪನಿಗಳು
ಏಷ್ಯಾದ ಇತರ ಪ್ರಮುಖ ಸಂಸ್ಕರಣಾಗಾರರಿಗೆ ಹೋಲಿಸಿದರೆ ಕಡಿಮೆ ಕಚ್ಚಾ ತೈಲ ಸಂಗ್ರಹವನ್ನು ಹೊಂದಿರುವ ಭಾರತೀಯ ಕಂಪನಿಗಳು, ಈ ಹಿಂದೆ ರಷ್ಯಾದ ಮೇಲಿನ ನಿರ್ಬಂಧ ಸಡಿಲಿಕೆಯಾದಾಗಲೂ ತಕ್ಷಣವೇ ತೈಲ ಖರೀದಿಗೆ ಮುಂದಾಗಿದ್ದವು.
ಇರಾನ್‌ನ ಕಚ್ಚಾ ತೈಲದ ಮೇಲಿನ ನಿರ್ಬಂಧಗಳನ್ನು ಅಮೆರಿಕದ ಡೊನಾಲ್ಡ್ ಟ್ರಂಪ್ ಆಡಳಿತವು ತಾತ್ಕಾಲಿಕವಾಗಿ ಸಡಿಲಗೊಳಿಸಿರುವ ಬೆನ್ನಲ್ಲೇ, ಭಾರತೀಯ ತೈಲ ಸಂಸ್ಕರಣಾಗಾರರು ಟೆಹ್ರಾನ್‌ನಿಂದ ಕಚ್ಚಾ ತೈಲ ಖರೀದಿಸಲು ಮುಂದಾಗಿದ್ದಾರೆ. ರಾಯಿಟರ್ಸ್ ವರದಿಯ ಪ್ರಕಾರ, ಭಾರತೀಯ ಸಂಸ್ಕರಣಾ ವಲಯದ ಮೂಲಗಳು ಇರಾನ್ ತೈಲ ಖರೀದಿಸಲು ಸಿದ್ಧವಾಗಿವೆ. ಆದರೆ, ಪಾವತಿ ನಿಯಮಗಳು ಸೇರಿದಂತೆ ಹಲವು ಮಹತ್ವದ ವಿಷಯಗಳ ಬಗ್ಗೆ ಭಾರತ ಸರ್ಕಾರದ ಅಧಿಕೃತ ಸೂಚನೆ ಹಾಗೂ ಅಮೆರಿಕದ ಸ್ಪಷ್ಟನೆಗಾಗಿ ಕಾದು ಕುಳಿತಿವೆ.
ಏಷ್ಯಾದ ಇತರ ಪ್ರಮುಖ ಸಂಸ್ಕರಣಾಗಾರರಿಗೆ ಹೋಲಿಸಿದರೆ ಕಡಿಮೆ ಕಚ್ಚಾ ತೈಲ ಸಂಗ್ರಹವನ್ನು ಹೊಂದಿರುವ ಭಾರತೀಯ ಕಂಪನಿಗಳು, ಈ ಹಿಂದೆ ರಷ್ಯಾದ ಮೇಲಿನ ನಿರ್ಬಂಧ ಸಡಿಲಿಕೆಯಾದಾಗಲೂ ತಕ್ಷಣವೇ ತೈಲ ಖರೀದಿಗೆ ಮುಂದಾಗಿದ್ದವು. ಈಗ ಏಷ್ಯಾದ ಇತರ ದೇಶಗಳೂ ಸಹ ಇರಾನ್ ಕಚ್ಚಾ ತೈಲ ಖರೀದಿಯ ಸಾಧ್ಯತೆಗಳನ್ನು ಪರಿಶೀಲಿಸುತ್ತಿವೆ.
30 ದಿನಗಳ ತಾತ್ಕಾಲಿಕ ವಿನಾಯಿತಿ ಮತ್ತು ಷರತ್ತುಗಳು
ಈಗಾಗಲೇ ಸಾಗಣೆಯಲ್ಲಿರುವ ಇರಾನ್ ತೈಲ ಖರೀದಿಗೆ ಅಮೆರಿಕ ಶುಕ್ರವಾರ 30 ದಿನಗಳ ತಾತ್ಕಾಲಿಕ ವಿನಾಯಿತಿಯನ್ನು ಪ್ರಕಟಿಸಿದೆ ಎಂದು ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸ್ಸೆನ್ಟ್ ತಿಳಿಸಿದ್ದಾರೆ. ವಿದೇಶಿ ಆಸ್ತಿ ನಿಯಂತ್ರಣ ಕಚೇರಿಯ (OFAC) ಮಾಹಿತಿ ಪ್ರಕಾರ, ಮಾರ್ಚ್ 20 ಅಥವಾ ಅದಕ್ಕೂ ಮೊದಲು ಹಡಗುಗಳಿಗೆ ಲೋಡ್ ಮಾಡಲಾದ ಮತ್ತು ಏಪ್ರಿಲ್ 19 ರೊಳಗೆ ಡಿಸ್ಚಾರ್ಜ್ ಆಗುವ ಕಚ್ಚಾ ತೈಲಕ್ಕೆ ಮಾತ್ರ ಈ ವಿನಾಯಿತಿ ಅನ್ವಯಿಸುತ್ತದೆ. ಯುದ್ಧ ಪ್ರಾರಂಭವಾದಾಗಿನಿಂದ ತೈಲ ಪೂರೈಕೆಯ ಮೇಲಿನ ನಿರ್ಬಂಧಗಳನ್ನು ವಾಷಿಂಗ್ಟನ್ ಸಡಿಲಿಸುತ್ತಿರುವುದು ಇದು ಮೂರನೇ ಬಾರಿಯಾಗಿದೆ.
ಸಮುದ್ರದಲ್ಲಿ ಬೃಹತ್ ಪ್ರಮಾಣದ ಕಚ್ಚಾ ತೈಲ ಸಂಗ್ರಹ
ಕಚ್ಚಾ ತೈಲ ಮಾರುಕಟ್ಟೆಯ ದತ್ತಾಂಶ ವಿಶ್ಲೇಷಣಾ ಸಂಸ್ಥೆ ಕೆಪ್ಲರ್‌ನ ಹಿರಿಯ ವ್ಯವಸ್ಥಾಪಕ ಎಮ್ಯಾನುಯೆಲ್ ಬೆಲೊಸ್ಟ್ರಿನೊ ಅವರ ಪ್ರಕಾರ, ಪ್ರಸ್ತುತ ಮಧ್ಯಪ್ರಾಚ್ಯ ಕೊಲ್ಲಿಯಿಂದ ಚೀನಾದ ಕರಾವಳಿಯವರೆಗಿನ ಸಮುದ್ರದ ಹಡಗುಗಳಲ್ಲಿ ಅಂದಾಜು 170 ಮಿಲಿಯನ್ ಬ್ಯಾರೆಲ್‌ಗಳಷ್ಟು ಇರಾನ್ ಕಚ್ಚಾ ತೈಲವು ಸಾಗಣೆಯಲ್ಲಿದೆ. ಎನರ್ಜಿ ಆಸ್ಪೆಕ್ಟ್ಸ್ ಸಂಸ್ಥೆಯು ಈ ಪ್ರಮಾಣವನ್ನು 130 ರಿಂದ 140 ಮಿಲಿಯನ್ ಬ್ಯಾರೆಲ್‌ಗಳು ಎಂದು ಅಂದಾಜಿಸಿದೆ. ಏಷ್ಯಾ ಖಂಡವು ತನ್ನ ಶೇ 60ರಷ್ಟು ಕಚ್ಚಾ ತೈಲ ಆಮದಿಗಾಗಿ ಮಧ್ಯಪ್ರಾಚ್ಯವನ್ನೇ ಅವಲಂಬಿಸಿದೆ. ಇತ್ತೀಚೆಗೆ ಹಾರ್ಮುಜ್ ಜಲಸಂಧಿಯ ಮುಚ್ಚುವ ಭೀತಿಯಿಂದಾಗಿ ಪೂರೈಕೆಯಲ್ಲಿ ವ್ಯತ್ಯಯವಾಗಿ, ಏಷ್ಯಾದಾದ್ಯಂತ ಸಂಸ್ಕರಣಾಗಾರರು ತಮ್ಮ ಕಾರ್ಯಾಚರಣೆಗಳನ್ನು ಕಡಿತಗೊಳಿಸುವಂತಾಗಿತ್ತು.
ಪಾವತಿ ವ್ಯವಸ್ಥೆ ಹಾಗೂ ವ್ಯಾಪಾರದ ಸವಾಲುಗಳು
ಇರಾನ್‌ನ ಪರಮಾಣು ಕಾರ್ಯಕ್ರಮವನ್ನು ವಿರೋಧಿಸಿ 2018ರಲ್ಲಿ ಟ್ರಂಪ್ ಆಡಳಿತವು ನಿರ್ಬಂಧಗಳನ್ನು ಮರುಹೇರಿತು. ಅಂದಿನಿಂದ ಚೀನಾ ದೇಶವು ಇರಾನ್ ತೈಲದ ಪ್ರಮುಖ ಖರೀದಿದಾರನಾಗಿ ಹೊರಹೊಮ್ಮಿದ್ದು, ಕಳೆದ ವರ್ಷ ನಿತ್ಯ 1.38 ಮಿಲಿಯನ್ ಬ್ಯಾರೆಲ್‌ಗಳನ್ನು ಆಮದು ಮಾಡಿಕೊಂಡಿದೆ. ಇತರ ದೇಶಗಳು ಹಿಂದೇಟು ಹಾಕಿದಾಗ, ಚೀನಾವು ಭಾರಿ ರಿಯಾಯಿತಿ ದರದಲ್ಲಿ ಈ ತೈಲವನ್ನು ಖರೀದಿಸುತ್ತಿತ್ತು. ಇದೀಗ ನಿರ್ಬಂಧ ಸಡಿಲಿಕೆಯಾಗಿದ್ದರೂ, ಪಾವತಿ ಕಾರ್ಯವಿಧಾನಗಳು, ಬ್ಯಾಂಕಿಂಗ್ ನಿಯಮಾವಳಿಗಳು ಹಾಗೂ ಹಳೆಯ ಹಡಗುಗಳ (ಶ್ಯಾಡೋ ಫ್ಲೀಟ್) ಮೂಲಕ ತೈಲ ಸಾಗಣೆ ಮಾಡುತ್ತಿರುವುದು ವ್ಯಾಪಾರಿಗಳಿಗೆ ಪ್ರಮುಖ ಸವಾಲಾಗಿ ಪರಿಣಮಿಸಿದೆ. 2018ಕ್ಕೂ ಮುನ್ನ ಭಾರತ, ದಕ್ಷಿಣ ಕೊರಿಯಾ, ಜಪಾನ್, ಇಟಲಿ, ಗ್ರೀಸ್, ತೈವಾನ್ ಮತ್ತು ಟರ್ಕಿ ದೇಶಗಳು ಇರಾನ್ ಕಚ್ಚಾ ತೈಲದ ಪ್ರಮುಖ ಆಮದುದಾರರಾಗಿದ್ದವು.

