ಪಶ್ಚಿಮ ಏಷ್ಯಾ ಬಿಕ್ಕಟ್ಟು: ಅಮೆರಿಕ-ಇರಾನ್ ಕದನ ವಿರಾಮ ಸ್ವಾಗತಿಸಿದ ಭಾರತ
x

ಪಶ್ಚಿಮ ಏಷ್ಯಾ ಬಿಕ್ಕಟ್ಟು: ಅಮೆರಿಕ-ಇರಾನ್ ಕದನ ವಿರಾಮ ಸ್ವಾಗತಿಸಿದ ಭಾರತ

ನಾವು ಈ ಹಿಂದಿನಿಂದಲೂ ಪ್ರತಿಪಾದಿಸಿದಂತೆ, ಯಾವುದೇ ಸಂಘರ್ಷವನ್ನು ಶೀಘ್ರವಾಗಿ ಕೊನೆಗೊಳಿಸಲು ಉದ್ವಿಗ್ನತೆ ಶಮನ, ನಿರಂತರ ಸಂವಾದ ಮತ್ತು ರಾಜತಾಂತ್ರಿಕ ಮಾತುಕತೆ ಅತ್ಯಗತ್ಯ ಎಂದು ವಿದೇಶಾಂಗ ಇಲಾಖೆ ಹೇಳಿದೆ.


Click the Play button to hear this message in audio format

ಪಶ್ಚಿಮ ಏಷ್ಯಾದಲ್ಲಿ ಉಲ್ಬಣಗೊಂಡಿದ್ದ ಯುದ್ಧದ ಭೀತಿಯ ನಡುವೆ ಅಮೆರಿಕ ಮತ್ತು ಇರಾನ್ ಎರಡು ವಾರಗಳ ಕದನ ವಿರಾಮಕ್ಕೆ (Ceasefire) ಒಪ್ಪಿಗೆ ಸೂಚಿಸಿದ್ದು, ಈ ನಿರ್ಧಾರವನ್ನು ಭಾರತ ಸ್ವಾಗತಿಸಿದೆ. ಉಭಯ ದೇಶಗಳ ಈ ನಡೆಯಿಂದ ಪಶ್ಚಿಮ ಏಷ್ಯಾದಲ್ಲಿ ಶಾಶ್ವತ ಶಾಂತಿ ನೆಲೆಸಲು ಮತ್ತು ಜಾಗತಿಕ ವಾಣಿಜ್ಯ ಚಟುವಟಿಕೆಗಳು ಸುಗಮಗೊಳ್ಳಲು ಹಾದಿ ಸುಗಮವಾಗಲಿದೆ ಎಂದು ಭಾರತ ವಿಶ್ವಾಸ ವ್ಯಕ್ತಪಡಿಸಿದೆ.

ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಬುಧವಾರ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, "ಅಮೆರಿಕ ಮತ್ತು ಇರಾನ್ ನಡುವಿನ ಕದನ ವಿರಾಮ ಘೋಷಣೆಯನ್ನು ನಾವು ಸ್ವಾಗತಿಸುತ್ತೇವೆ. ಈ ಸಂಘರ್ಷದಿಂದ ಈಗಾಗಲೇ ಸಾರ್ವಜನಿಕರಿಗೆ ಅಪಾರ ಸಂಕಷ್ಟ ಎದುರಾಗಿದೆ. ಜೊತೆಗೆ ಜಾಗತಿಕ ಇಂಧನ ಪೂರೈಕೆ ಮತ್ತು ವ್ಯಾಪಾರ ಜಾಲಗಳು ಅಸ್ತವ್ಯಸ್ತಗೊಂಡಿವೆ" ಎಂದು ಕಳವಳ ವ್ಯಕ್ತಪಡಿಸಿದೆ.

ಮುಂದುವರಿದು, "ನಾವು ಈ ಹಿಂದಿನಿಂದಲೂ ಪ್ರತಿಪಾದಿಸಿದಂತೆ, ಯಾವುದೇ ಸಂಘರ್ಷವನ್ನು ಶೀಘ್ರವಾಗಿ ಕೊನೆಗೊಳಿಸಲು ಉದ್ವಿಗ್ನತೆ ಶಮನ, ನಿರಂತರ ಸಂವಾದ ಮತ್ತು ರಾಜತಾಂತ್ರಿಕ ಮಾತುಕತೆ ಅತ್ಯಗತ್ಯ. ಈ ಕದನ ವಿರಾಮದಿಂದ ಪಶ್ಚಿಮ ಏಷ್ಯಾದಲ್ಲಿ ಶಾಶ್ವತ ಶಾಂತಿ ನೆಲೆಸಲು ಕಾರಣವಾಗಲಿದೆ ಎಂದು ನಂಬಿದ್ದೇವೆ" ಎಂದು ಸಚಿವಾಲಯ ತಿಳಿಸಿದೆ.

ಹಾರ್ಮುಜ್ ಜಲಸಂಧಿ ಮುಕ್ತ

ಅಮೆರಿಕ ಮತ್ತು ಇರಾನ್ ನಡುವಿನ ಕದನ ವಿರಾಮ ಒಪ್ಪಂದದ ಪ್ರಮುಖ ಷರತ್ತಿನಂತೆ, ಇರಾನ್ 'ಹಾರ್ಮುಜ್ ಜಲಸಂಧಿ'ಯನ್ನು ಹಡಗು ಸಂಚಾರಕ್ಕೆ ಮುಕ್ತಗೊಳಿಸಲು ಒಪ್ಪಿಕೊಂಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಭಾರತ, "ಹಾರ್ಮುಜ್ ಜಲಸಂಧಿಯ ಮೂಲಕ ಇನ್ನುಮುಂದೆ ಅಡೆತಡೆಯಿಲ್ಲದ ನೌಕಾ ಸಂಚಾರ ನಡೆಯಲಿದೆ ಮತ್ತು ಜಾಗತಿಕ ವಾಣಿಜ್ಯ ಹರಿವು ಮೊದಲಿನಂತೆಯೇ ಮುಂದುವರಿಯುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ" ಎಂದು ಹೇಳಿದೆ.

ಪಶ್ಚಿಮ ಏಷ್ಯಾದಲ್ಲಿನ ಈ ಸಂಘರ್ಷವು ಜಾಗತಿಕ ಇಂಧನ ಮಾರುಕಟ್ಟೆ, ವಿಶೇಷವಾಗಿ ಕಚ್ಚಾ ತೈಲ ಪೂರೈಕೆಯ ಮೇಲೆ ತೀವ್ರ ಪರಿಣಾಮ ಬೀರುವ ಆತಂಕ ಸೃಷ್ಟಿಸಿತ್ತು. ಇದೀಗ ಕದನ ವಿರಾಮದಿಂದಾಗಿ ಜಾಗತಿಕ ಆರ್ಥಿಕತೆಗೂ ಕೊಂಚ ನಿರಾಳತೆ ಸಿಕ್ಕಂತಾಗಿದೆ. ಈ ಬೆಳವಣಿಗೆಯು ಯುದ್ಧ ಪೀಡಿತ ಪ್ರದೇಶದಲ್ಲಿ ಶಾಂತಿ ಸ್ಥಾಪನೆಗೆ ಭಾರತ ನೀಡುತ್ತಿರುವ ನಿರಂತರ ಅಂತರರಾಷ್ಟ್ರೀಯ ಬೆಂಬಲವನ್ನು ಪ್ರತಿಬಿಂಬಿಸುತ್ತದೆ.

Read More
Next Story