
ಅಮೆರಿಕ-ಇರಾನ್ ನಡುವೆ 2 ವಾರಗಳ ಕದನ ವಿರಾಮ: ಹಾರ್ಮುಜ್ ಜಲಸಂಧಿ ಓಪನ್
ಶಾಂತಿ ಸ್ಥಾಪನೆಗಾಗಿ ಇರಾನ್ 10 ಅಂಶಗಳ ಪ್ರಸ್ತಾವನೆಯನ್ನು ಮುಂದಿಟ್ಟಿದ್ದು, ಅದರ ಪ್ರಕಾರ ಅಮೆರಿಕದ ಮಾತುಕತೆ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ಐದು ವಾರಗಳಿಂದ ಇಡೀ ಜಗತ್ತನ್ನೇ ಆತಂಕಕ್ಕೆ ದೂಡಿದ್ದ ಅಮೆರಿಕ ಹಾಗೂ ಇರಾನ್ ನಡುವಿನ ಕದನಕ್ಕೆ ಕೊನೆಗೂ ತಾತ್ಕಾಲಿಕ ವಿರಾಮ ಸಿಕ್ಕಿದೆ. ಇರಾನ್ ಮೇಲೆ ನಿರ್ಣಾಯಕ ಮತ್ತು ವಿನಾಶಕಾರಿ ದಾಳಿ ನಡೆಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದ ಡೆಡ್‌ಲೈನ್ ಮುಕ್ತಾಯಗೊಳ್ಳಲು ಕೇವಲ ಎರಡು ಗಂಟೆ ಬಾಕಿ ಇರುವಾಗ ಉಭಯ ರಾಷ್ಟ್ರಗಳು ಎರಡು ವಾರಗಳ ಕದನ ವಿರಾಮಕ್ಕೆ ಸಮ್ಮತಿಸಿವೆ.
ಜಾಗತಿಕ ತೈಲ ಪೂರೈಕೆಯ ಪ್ರಮುಖ ಕೇಂದ್ರವಾಗಿರುವ ಮತ್ತು ಯುದ್ಧದ ಕಾರಣದಿಂದ ಬಂದ್ ಆಗಿದ್ದ 'ಹಾರ್ಮುಜ್ ಜಲಸಂಧಿ'ಯನ್ನು ತಕ್ಷಣವೇ ಹಾಗೂ ಸುರಕ್ಷಿತವಾಗಿ ತೆರೆಯಲು ಇರಾನ್ ಒಪ್ಪಿಕೊಂಡಿದೆ. ಇದರ ಬೆನ್ನಲ್ಲೇ, ಇರಾನ್ ನೀಡಿರುವ 10 ಅಂಶಗಳ ಪ್ರಸ್ತಾವನೆಯ ಆಧಾರದ ಮೇಲೆ ಶಾಂತಿ ಮಾತುಕತೆ ನಡೆಸಲು ಅಮೆರಿಕ ಸಿದ್ಧತೆ ನಡೆಸಿದೆ.
ಕದನ ವಿರಾಮದಲ್ಲಿ ಪಾಕಿಸ್ತಾನದ ಪಾತ್ರವೇನು?
ಈ ಕದನ ವಿರಾಮ ಒಪ್ಪಂದದಲ್ಲಿ ಪಾಕಿಸ್ತಾನ ನಿರ್ಣಾಯಕ ಪಾತ್ರ ವಹಿಸಿದೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರು ಅಮೆರಿಕ ಮತ್ತು ಇರಾನ್ ನಡುವೆ ತೆರೆಮರೆಯ ಮಾತುಕತೆಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಟ್ರಂಪ್ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ ಪಾಕ್ ನಾಯಕರು, ಬಾಂಬ್ ದಾಳಿಯ ನಿರ್ಧಾರವನ್ನು ಸ್ಥಗಿತಗೊಳಿಸುವಂತೆ ಮನವಿ ಮಾಡಿದರು. ಈ ಮನವಿಗೆ ಸ್ಪಂದಿಸಿದ ಟ್ರಂಪ್, ಎರಡು ವಾರಗಳ ಮಟ್ಟಿಗೆ ದಾಳಿಯನ್ನು ತಡೆಹಿಡಿದಿದ್ದಾರೆ.
ಟ್ರಂಪ್ ಘೋಷಣೆ: ಏನಿದೆ ಒಪ್ಪಂದದಲ್ಲಿ?
ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಡೊನಾಲ್ಡ್ ಟ್ರಂಪ್, "ಪಾಕಿಸ್ತಾನದ ನಾಯಕರೊಂದಿಗಿನ ಮಾತುಕತೆಯ ಆಧಾರದ ಮೇಲೆ ಹಾಗೂ ಇರಾನ್ ಹಾರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಮತ್ತು ಸುರಕ್ಷಿತವಾಗಿ ತೆರೆಯಲು ಒಪ್ಪಿಕೊಂಡಿರುವುದಕ್ಕೆ ಪ್ರತಿಯಾಗಿ, ನಾನು ಇರಾನ್ ಮೇಲಿನ ಬಾಂಬ್ ದಾಳಿಯನ್ನು ಎರಡು ವಾರಗಳ ಅವಧಿಗೆ ಅಮಾನತುಗೊಳಿಸಲು ಒಪ್ಪುತ್ತೇನೆ" ಎಂದು ಸ್ಪಷ್ಟಪಡಿಸಿದ್ದಾರೆ.
"ಇದು ಉಭಯಪಕ್ಷೀಯ ಕದನ ವಿರಾಮವಾಗಿದೆ. ನಾವು ಈಗಾಗಲೇ ನಮ್ಮ ಎಲ್ಲಾ ಮಿಲಿಟರಿ ಉದ್ದೇಶಗಳನ್ನು ಸಾಧಿಸಿದ್ದೇವೆ ಮತ್ತು ಮಧ್ಯಪ್ರಾಚ್ಯದಲ್ಲಿ ದೀರ್ಘಕಾಲೀನ ಶಾಂತಿ ಸ್ಥಾಪಿಸುವ ಒಪ್ಪಂದದ ಸನಿಹದಲ್ಲಿದ್ದೇವೆ. ಇರಾನ್‌ನ 10 ಅಂಶಗಳ ಪ್ರಸ್ತಾವನೆಯು ಮಾತುಕತೆಗೆ ಪೂರಕ ಆಧಾರವಾಗಿದೆ ಎಂದು ನಾವು ನಂಬುತ್ತೇವೆ. ಈ ಎರಡು ವಾರಗಳ ಕಾಲಾವಕಾಶವು ಶಾಂತಿ ಒಪ್ಪಂದವನ್ನು ಅಂತಿಮಗೊಳಿಸಲು ನೆರವಾಗಲಿದೆ" ಎಂದು ಅವರು ವಿವರಿಸಿದ್ದಾರೆ.
ಇರಾನ್ ಮುಂದಿಟ್ಟಿರುವ 10 ಬೇಡಿಕೆಗಳೇನು?
ಶಾಂತಿ ಸ್ಥಾಪನೆಗಾಗಿ ಇರಾನ್ 10 ಅಂಶಗಳ ಪ್ರಸ್ತಾವನೆಯನ್ನು ಮುಂದಿಟ್ಟಿದ್ದು, ಅದರಲ್ಲಿರುವ ಪ್ರಮುಖ ಬೇಡಿಕೆಗಳು ಹೀಗಿವೆ...
- ಪರಸ್ಪರ ಆಕ್ರಮಣ ಮಾಡದಿರುವ ಬಗ್ಗೆ ಖಾತರಿ
- ಹಾರ್ಮುಜ್ ಜಲಸಂಧಿ ಮೇಲೆ ಇರಾನ್ ನಿಯಂತ್ರಣದ ಮುಂದುವರಿಕೆ
- ಯುರೇನಿಯಂ ಪುಷ್ಟೀಕರಣದ ಹಕ್ಕುಗಳ ಸ್ವೀಕಾರ
- ಎಲ್ಲಾ ಪ್ರಾಥಮಿಕ ಮತ್ತು ದ್ವಿತೀಯ ನಿರ್ಬಂಧಗಳ ಸಂಪೂರ್ಣ ತೆರವು
- ವಿಶ್ವಸಂಸ್ಥೆ ಭದ್ರತಾ ಮಂಡಳಿ (UNSC) ಹಾಗೂ IAEA ನಿರ್ಣಯಗಳ ರದ್ದು
- ಜಲಸಂಧಿ ಆದಾಯವನ್ನು ಯುದ್ಧ-ಪೀಡಿತ ಮೂಲಸೌಕರ್ಯಗಳ ಮರುನಿರ್ಮಾಣಕ್ಕೆ ಬಳಸುವುದು
- ಯುದ್ಧ ನಷ್ಟಕ್ಕೆ ಅಮೆರಿಕದಿಂದ ಪರಿಹಾರ ಪಾವತಿ
- ಮಧ್ಯಪ್ರಾಚ್ಯದಿಂದ ಅಮೆರಿಕ ಯುದ್ಧ ಪಡೆಗಳ ವಾಪಸಾತಿ
- ಎಲ್ಲಾ ರಂಗಗಳಲ್ಲಿ ಯುದ್ಧದ ತಕ್ಷಣದ ನಿಲುಗಡೆ
- ಲೆಬನಾನ್ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯ ಅಂತ್ಯ

