Strait of Hormuz almost closed: India turns to Russia despite US warning to avoid oil crisis
x

ಸಾಂದರ್ಭಿಕ ಚಿತ್ರ

ತೈಲ ಬಿಕ್ಕಟ್ಟು ತಪ್ಪಿಸಲು ಅಮೆರಿಕದ ಎಚ್ಚರಿಕೆ ಲೆಕ್ಕಿಸದೆ ರಷ್ಯಾದತ್ತ ಮುಖಮಾಡಿದ ಭಾರತ

ಭಾರತೀಯ ತೈಲ ಸಂಸ್ಕರಣಾ ಕಂಪನಿಗಳು ಪಾಶ್ಚಿಮಾತ್ಯ ದೇಶಗಳ ರಾಜತಾಂತ್ರಿಕ ಒತ್ತಡವನ್ನು ಬದಿಗೊತ್ತಿ, ದೇಶದ ಇಂಧನ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಿವೆ.


Click the Play button to hear this message in audio format

ಪಶ್ಚಿಮ ಏಷ್ಯಾದಲ್ಲಿ ಉಲ್ಬಣಿಸಿರುವ ಬಿಕ್ಕಟ್ಟು ಮತ್ತು ಹಾರ್ಮುಜ್ ಜಲಸಂಧಿ ಬಹುತೇಕ ಬಂದ್ ಆಗಿರುವ ಹಿನ್ನೆಲೆಯಲ್ಲಿ ಭಾರತವು ತನ್ನ ಇಂಧನ ಭದ್ರತೆಗಾಗಿ ಮತ್ತೆ ರಷ್ಯಾ ಕಚ್ಚಾ ತೈಲದ ಮೊರೆಹೋಗಿದೆ. ಅಮೆರಿಕದ ವ್ಯಾಪಾರ ಸುಂಕದ (Tariffs) ಬೆದರಿಕೆಯ ನಡುವೆಯೂ, ಸಂಭಾವ್ಯ ದೇಶೀಯ ಇಂಧನ ಬಿಕ್ಕಟ್ಟನ್ನು ತಪ್ಪಿಸಲು ದೆಹಲಿಯು ದಿಟ್ಟ ಹೆಜ್ಜೆ ಇಟ್ಟಿದ್ದು, ಪೂರ್ವ ಏಷ್ಯಾದತ್ತ ಸಾಗುತ್ತಿದ್ದ ರಷ್ಯಾದ ಕಚ್ಚಾ ತೈಲ ತುಂಬಿದ್ದ ಬೃಹತ್ ಟ್ಯಾಂಕರ್‌ಗಳನ್ನು ಭಾರತದ ಬಂದರುಗಳತ್ತ ತಿರುಗಿಸಲಾಗಿದೆ.

ಭಾರತವು ತನ್ನ ಕಚ್ಚಾ ತೈಲದ ಶೇಕಡಾ 88ರಷ್ಟು ಮತ್ತು ನೈಸರ್ಗಿಕ ಅನಿಲದ ಶೇಕಡಾ 50ರಷ್ಟು ಅಗತ್ಯಗಳಿಗಾಗಿ ಆಮದನ್ನೇ ಅವಲಂಬಿಸಿದೆ. ಈ ಆಮದು ಪ್ರಕ್ರಿಯೆಯು ಪ್ರಮುಖವಾಗಿ ಪರ್ಷಿಯನ್ ಕೊಲ್ಲಿ ಮತ್ತು ಒಮನ್ ಕೊಲ್ಲಿಯ ನಡುವಿನ 'ಹಾರ್ಮುಜ್ ಜಲಸಂಧಿ'ಯ (Strait of Hormuz) ಮೂಲಕವೇ ಸಾಗಬೇಕು. ಆದರೆ ಇರಾನ್-ಇಸ್ರೇಲ್-ಅಮೆರಿಕ ಸಂಘರ್ಷದಿಂದಾಗಿ ಇರಾನ್ ಈ ಜಲಸಂಧಿಯನ್ನು ಬಹುತೇಕ ನಿರ್ಬಂಧಿಸಿದೆ. ಇದರಿಂದಾಗಿ ಮಧ್ಯಪ್ರಾಚ್ಯದ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಜಾಗತಿಕ ತೈಲ ಬೆಲೆಗಳು ಗಣನೀಯವಾಗಿ ಏರಿಕೆಯಾಗಿವೆ. ಈ ಪರಿಸ್ಥಿತಿಯನ್ನು ನಿಭಾಯಿಸಲು ಭಾರತೀಯ ತೈಲ ಸಂಸ್ಕರಣಾ ಕಂಪನಿಗಳು ಪಾಶ್ಚಿಮಾತ್ಯ ದೇಶಗಳ ರಾಜತಾಂತ್ರಿಕ ಒತ್ತಡವನ್ನು ಬದಿಗೊತ್ತಿ, ದೇಶದ ಇಂಧನ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಿವೆ.

ಈ ಕುರಿತು ಪ್ರತಿಕ್ರಿಯಿಸಿರುವ ರಾಯಭಾರಿ ಡೆನಿಸ್ ಅಲಿಪೊವ್, ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಭಾರತಕ್ಕೆ ಕಚ್ಚಾ ತೈಲ ಪೂರೈಸಲು ರಷ್ಯಾ ಸದಾ ಮುಕ್ತವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಭಾರತದತ್ತ ಮುಖಮಾಡಿದ ಮೂರು ಬೃಹತ್ ಟ್ಯಾಂಕರ್‌ಗಳು

ಹಡಗುಗಳ ಚಲನವಲನವನ್ನು ಟ್ರ್ಯಾಕ್ ಮಾಡುವ ಕೆಪ್ಲರ್ ಮತ್ತು ವೊರ್ಟೆಕ್ಸಾ ದತ್ತಾಂಶಗಳ ಪ್ರಕಾರ, ಪೂರ್ವ ಏಷ್ಯಾದತ್ತ ಸಾಗುತ್ತಿದ್ದ ಒಟ್ಟು 1.4 ದಶಲಕ್ಷ ಬ್ಯಾರೆಲ್ 'ಯುರಲ್ಸ್' (Urals) ಕಚ್ಚಾ ತೈಲ ತುಂಬಿದ್ದ ಟ್ಯಾಂಕರ್‌ಗಳು ಇದೀಗ ಭಾರತದತ್ತ ಮುಖಮಾಡಿವೆ. 7.30 ಲಕ್ಷ ಬ್ಯಾರೆಲ್ ತೈಲ ಹೊತ್ತಿರುವ 'ಒಡುನೆ' (Odune) ಹಡಗು ಈಗಾಗಲೇ ಒಡಿಶಾದ ಪಾರದೀಪ್ ಬಂದರು ತಲುಪಿದೆ. 7 ಲಕ್ಷಕ್ಕೂ ಅಧಿಕ ಬ್ಯಾರೆಲ್ ತೈಲವನ್ನು ಸಾಗಿಸುತ್ತಿರುವ 'ಮಟಾರಿ' (Matari) ಟ್ಯಾಂಕರ್ ಗುಜರಾತ್‌ನ ವಾಡಿನಾರ್ ಬಂದರಿಗೆ ಗುರುವಾರ ಬಂದಿಳಿಯಲಿದೆ. ಇದರ ಜೊತೆಗೆ ಸಿಂಗಾಪುರದತ್ತ ಸಾಗುತ್ತಿದ್ದ 7.30 ಲಕ್ಷ ಬ್ಯಾರೆಲ್ ಸಾಮರ್ಥ್ಯದ 'ಇಂದ್ರಿ' (Indri) ಎಂಬ ಮತ್ತೊಂದು ಹಡಗು ಕೂಡ ದಿಢೀರ್ ಆಗಿ ಅರಬ್ಬಿ ಸಮುದ್ರದ ಮೂಲಕ ಭಾರತದತ್ತ ತಿರುಗಿದೆ. ವಿಶೇಷವೆಂದರೆ, ಈ ಮೂರೂ ಹಡಗುಗಳ ಮೇಲೆ ಕಳೆದ ವರ್ಷ ಬ್ರಿಟನ್ ಮತ್ತು ಐರೋಪ್ಯ ಒಕ್ಕೂಟವು ನಿರ್ಬಂಧ ವಿಧಿಸಿದ್ದವು.

ಟ್ರಂಪ್ ಸುಂಕದ ಬೆದರಿಕೆ ವರ್ಸಸ್ ಭಾರತದ ಹಿತಾಸಕ್ತಿ

ಭಾರತದ ಈ ನಡೆಯು ಅಮೆರಿಕದ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆಯಿದೆ. ಕಳೆದ ತಿಂಗಳಷ್ಟೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದೊಂದಿಗಿನ ವ್ಯಾಪಾರ ಒಪ್ಪಂದದ ವೇಳೆ, ರಷ್ಯಾದಿಂದ ಕಚ್ಚಾ ತೈಲ ಖರೀದಿಸದಿರಲು ನವದೆಹಲಿ ಸಮ್ಮತಿಸಿದೆ ಎಂದು ಹೇಳಿದ್ದರು. ಅಲ್ಲದೆ, ರಷ್ಯಾ ತೈಲ ಖರೀದಿಯ ಹಿನ್ನೆಲೆಯಲ್ಲಿ ಕಳೆದ ಆಗಸ್ಟ್‌ನಲ್ಲಿ ಭಾರತದ ಮೇಲೆ ವಿಧಿಸಲಾಗಿದ್ದ ಶೇ. 25ರಷ್ಟು ಹೆಚ್ಚುವರಿ ಸುಂಕವನ್ನು ಟ್ರಂಪ್ ಆಡಳಿತ ಹಿಂಪಡೆದಿತ್ತು. ಒಂದು ವೇಳೆ ಭಾರತ ಮತ್ತೆ ರಷ್ಯಾದಿಂದ ತೈಲ ಖರೀದಿಸಿದರೆ, ಈ ಸುಂಕವನ್ನು ಮರುಹೇರಿಕೆ ಮಾಡುವ ಎಚ್ಚರಿಕೆಯನ್ನೂ ನೀಡಲಾಗಿತ್ತು. ಆದರೆ, ರಾಷ್ಟ್ರೀಯ ಹಿತಾಸಕ್ತಿಯೇ ನಮಗೆ ಅಂತಿಮ ಎಂದು ಪ್ರತಿಪಾದಿಸಿರುವ ಭಾರತ, ಪೂರೈಕೆ ಸರಪಳಿಯಲ್ಲಿನ ಅಸ್ಥಿರತೆಯನ್ನು ತಪ್ಪಿಸಲು ಲಭ್ಯವಿರುವ ಎಲ್ಲ ಮೂಲಗಳಿಂದಲೂ ತೈಲ ಖರೀದಿಸುವ ತನ್ನ ಸ್ಪಷ್ಟ ನಿಲುವಿಗೆ ಬದ್ಧವಾಗಿದೆ.

Read More
Next Story