ತೈಲ ಖರೀದಿ ನಿಲ್ಲಿಸಲು ಭಾರತ ಒಪ್ಪಿಲ್ಲ- ಟ್ರಂಪ್‌ ಹೇಳಿಕೆಗೆ ರಷ್ಯಾ ತಿರುಗೇಟು
x
ರಷ್ಯಾದ ವಿದೇಶಾಂಗ ಸಚಿವಾಲಯದ ವಕ್ತಾರೆ ಮರಿಯಾ ಜಖರೋವಾ

ತೈಲ ಖರೀದಿ ನಿಲ್ಲಿಸಲು ಭಾರತ ಒಪ್ಪಿಲ್ಲ- ಟ್ರಂಪ್‌ ಹೇಳಿಕೆಗೆ ರಷ್ಯಾ ತಿರುಗೇಟು

ರಷ್ಯಾದಿಂದ ತೈಲ ಆಮದು ನಿಲ್ಲಿಸಲು ಭಾರತ ಒಪ್ಪಿದೆ ಎಂಬ ಅಮೆರಿಕದ ಡೊನಾಲ್ಡ್ ಟ್ರಂಪ್ ಮತ್ತು ಮಾರ್ಕೊ ರೂಬಿಯೋ ಅವರ ಹೇಳಿಕೆಯನ್ನು ರಷ್ಯಾ ಅಧಿಕೃತವಾಗಿ ನಿರಾಕರಿಸಿದೆ.


ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಲು ಭಾರತ ಒಪ್ಪಿಗೆ ನೀಡಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಸರ್ಕಾರದ ಹೇಳಿಕೆಯನ್ನು ರಷ್ಯಾ ಬುಧವಾರ (ಫೆಬ್ರವರಿ 18) ಅಧಿಕೃತವಾಗಿ ತಳ್ಳಿಹಾಕಿದೆ. ಭಾರತವು ಅಂತಹ ಯಾವುದೇ ನಿರ್ಧಾರ ಕೈಗೊಂಡಿರುವ ಬಗ್ಗೆಅಧಿಕೃತ ಮಾಹಿತಿ ಇಲ್ಲ ಎಂದು ರಷ್ಯಾ ಸ್ಪಷ್ಟಪಡಿಸಿದೆ.

ಟ್ರಂಪ್ ಹೇಳಿಕೆಯಲ್ಲಿ ಹೊಸದೇನಿಲ್ಲ: ಮರಿಯಾ ಜಖರೋವಾ

ರಷ್ಯಾದ ವಿದೇಶಾಂಗ ಸಚಿವಾಲಯದ ವಕ್ತಾರೆ ಮರಿಯಾ ಜಖರೋವಾ ಅವರು ತಮ್ಮ ಸಾಪ್ತಾಹಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, "ರಷ್ಯಾದಿಂದ ಹೈಡ್ರೋಕಾರ್ಬನ್‌ಗಳನ್ನು ಖರೀದಿಸುವ ವಿಚಾರದಲ್ಲಿ ಭಾರತ ತನ್ನ ನಿಲುವನ್ನು ಬದಲಿಸಿಕೊಂಡಿದೆ ಎಂದು ನಂಬಲು ನಮಗೆ ಯಾವುದೇ ಕಾರಣವಿಲ್ಲ. ಉಭಯ ದೇಶಗಳ ನಡುವಿನ ತೈಲ ವ್ಯಾಪಾರವು ಪರಸ್ಪರ ಪ್ರಯೋಜನಕಾರಿಯಾಗಿದ್ದು, ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಸ್ಥಿರತೆಯನ್ನು ಕಾಪಾಡಲು ಇದು ಸಹಕಾರಿಯಾಗಿದೆ," ಎಂದು ತಿಳಿಸಿದರು.

ಅಲ್ಲದೆ, "ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ ಅವರ ಹೇಳಿಕೆಗಳಲ್ಲಿ ಹೊಸದೇನೂ ಇಲ್ಲ. ಸ್ವತಂತ್ರ ರಾಷ್ಟ್ರಗಳಿಗೆ ಆದೇಶ ನೀಡುವ ಹಕ್ಕು ತಮಗಿದೆ ಎಂದು ಅವರು ಭಾವಿಸಿದ್ದಾರೆ," ಎಂದು ಜಖರೋವಾ ವಾಗ್ದಾಳಿ ನಡೆಸಿದರು.

ಮೋದಿ-ಟ್ರಂಪ್ ಮಾತುಕತೆ ಮತ್ತು ಸುಂಕ ಕಡಿತ

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಟ್ರಂಪ್ ನಡುವೆ ನಡೆದ ದೂರವಾಣಿ ಸಂಭಾಷಣೆಯ ನಂತರ, ಭಾರತೀಯ ಸರಕುಗಳ ಮೇಲಿನ ಅಮೆರಿಕದ ಆಮದು ಸುಂಕವನ್ನು ಶೇ. 50ರಿಂದ ಶೇ. 18ಕ್ಕೆ ಇಳಿಸಲು ನಿರ್ಧರಿಸಲಾಗಿತ್ತು. ಕಳೆದ ವರ್ಷ ಆಗಸ್ಟ್‌ನಲ್ಲಿ ಭಾರತವು ರಷ್ಯಾದಿಂದ ತೈಲ ಖರೀದಿಸುತ್ತಿದೆ ಎಂಬ ಕಾರಣಕ್ಕೆ ಟ್ರಂಪ್ ಹೇರಿದ್ದ ಶೇ. 25ರಷ್ಟು ಹೆಚ್ಚುವರಿ 'ದಂಡ ಸುಂಕ'ವನ್ನು ರದ್ದುಗೊಳಿಸುವುದು ಸಹ ಈ ಒಪ್ಪಂದದ ಭಾಗವಾಗಿತ್ತು.

ಭಾರತದ ಮೌನ ಮತ್ತು 'ರಾಷ್ಟ್ರೀಯ ಹಿತಾಸಕ್ತಿ'

ಭಾರತವು ರಷ್ಯಾದ ತೈಲ ಆಮದನ್ನು ಸಂಪೂರ್ಣವಾಗಿ ನಿಲ್ಲಿಸಲಿದೆ ಎಂದು ಟ್ರಂಪ್ ಮತ್ತು ಮಾರ್ಕೊ ರೂಬಿಯೋ ಪದೇ ಪದೇ ಹೇಳಿಕೆ ನೀಡುತ್ತಿದ್ದಾರೆ. ಆದರೆ, ಈ ಬಗ್ಗೆ ಭಾರತ ಸರ್ಕಾರ ಈವರೆಗೆ ಯಾವುದೇ ಅಧಿಕೃತ ದೃಢೀಕರಣ ನೀಡಿಲ್ಲ ಅಥವಾ ಈ ಹೇಳಿಕೆಯನ್ನು ನಿರಾಕರಿಸಿಯೂ ಇಲ್ಲ. ಈ ಬಗ್ಗೆ ಮ್ಯೂನಿಚ್ ಭದ್ರತಾ ಸಮ್ಮೇಳನದಲ್ಲಿ ಮಾತನಾಡಿದ್ದ ವಿದೇಶಾಂಗ ಸಚಿವ ಎಸ್. ಜೈಶಂಕರ್, "ಭಾರತವು ತನ್ನ 'ರಾಜತಾಂತ್ರಿಕ ಸ್ವಾಯತ್ತತೆ'ಗೆ ಬದ್ಧವಾಗಿದೆ ಮತ್ತು ಇಂಧನ ಖರೀದಿ ವಿಷಯದಲ್ಲಿ ರಾಷ್ಟ್ರೀಯ ಹಿತಾಸಕ್ತಿಯೇ ನಮ್ಮ ಮೊದಲ ಆದ್ಯತೆ," ಎಂದು ಮಾರ್ಮಿಕವಾಗಿ ಉತ್ತರಿಸಿದ್ದರು.

ಅಮೆರಿಕದ 'ಬಲವಂತದ ತಂತ್ರ'ಕ್ಕೆ ರಷ್ಯಾ ಕಿಡಿ

ಭಾರತವು ರಷ್ಯಾದಿಂದ ತೈಲ ಪಡೆಯುವುದನ್ನು ತಡೆಯಲು ಅಮೆರಿಕವು ಸುಂಕಗಳು, ನಿರ್ಬಂಧಗಳು ಮತ್ತು ಬೆದರಿಕೆಗಳಂತಹ 'ಬಲವಂತದ' ಕ್ರಮಗಳನ್ನು ಬಳಸುತ್ತಿದೆ ಎಂದು ರಷ್ಯಾ ಆರೋಪಿಸಿದೆ. ಭಾರತದಂತಹ ಸ್ವತಂತ್ರ ರಾಷ್ಟ್ರಗಳ ಆರ್ಥಿಕ ನಿರ್ಧಾರಗಳಲ್ಲಿ ಹಸ್ತಕ್ಷೇಪ ಮಾಡುವುದನ್ನು ನಿಲ್ಲಿಸಬೇಕೆಂದು ಮಾಸ್ಕೋ ಆಗ್ರಹಿಸಿದೆ.

Read More
Next Story