
ಟ್ರಂಪ್ ನೇತೃತ್ವದ 'ಗಾಜಾ ಶಾಂತಿ ಮಂಡಳಿ'ಗೆ ಭಾರತ, ಪಾಕಿಸ್ತಾನಕ್ಕೆ ಆಹ್ವಾನ: ಸದಸ್ಯತ್ವಕ್ಕೆ 1 ಶತಕೋಟಿ ಡಾಲರ್ !
ಗಾಜಾದ ಪುನರ್ನಿಮಾಣ ಮತ್ತು ಜಾಗತಿಕ ಸಂಘರ್ಷಗಳ ಇತ್ಯರ್ಥಕ್ಕಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರೂಪಿಸಿರುವ ನೂತನ 'ಬೋರ್ಡ್ ಆಫ್ ಪೀಸ್' (ಶಾಂತಿ ಮಂಡಳಿ) ಸೇರಲು ಭಾರತ ಮತ್ತು ಪಾಕಿಸ್ತಾನ ಸೇರಿದಂತೆ ಹಲವು ರಾಷ್ಟ್ರಗಳಿಗೆ ಆಹ್ವಾನ ನೀಡಲಾಗಿದೆ.
ಗಾಜಾ ಪಟ್ಟಿಯಲ್ಲಿ ಶಾಂತಿ ಸ್ಥಾಪನೆ ಹಾಗೂ ಅಭಿವೃದ್ಧಿಯ ಮೇಲ್ವಿಚಾರಣೆಗಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರೂಪಿಸಿರುವ 'ಬೋರ್ಡ್ ಆಫ್ ಪೀಸ್' (Board of Peace) ಸೇರ್ಪಡೆಗೊಳ್ಳಲು ಭಾರತಕ್ಕೆ ಅಧಿಕೃತ ಆಹ್ವಾನ ಬಂದಿದೆ ಎಂದು ಮೂಲಗಳು ತಿಳಿಸಿವೆ. ಕುತೂಹಲಕಾರಿ ಸಂಗತಿಯೆಂದರೆ, ಭಾರತದೊಂದಿಗೆ ಪಾಕಿಸ್ತಾನಕ್ಕೂ ಈ ಮಂಡಳಿಯ ಭಾಗವಾಗಲು ಆಹ್ವಾನ ನೀಡಲಾಗಿದೆ.
ಟ್ರಂಪ್ ಅವರ ಈ ಹೊಸ ನಡೆ ಕೇವಲ ಗಾಜಾಕ್ಕೆ ಸೀಮಿತವಾಗಿಲ್ಲ. ಇದು ವಿಶ್ವಸಂಸ್ಥೆಗೆ ಪರ್ಯಾಯವಾಗಿ ಜಾಗತಿಕ ಸಂಘರ್ಷಗಳನ್ನು ಬಗೆಹರಿಸುವ ಹೊಸ ವೇದಿಕೆಯಾಗಿ ಹೊರಹೊಮ್ಮುವ ಸಾಧ್ಯತೆಯಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಯಾವ್ಯಾವ ದೇಶಗಳಿಗೆ ಆಹ್ವಾನ?
ಭಾನುವಾರ (ಜ.18) ಲಭ್ಯವಾದ ಮಾಹಿತಿಯ ಪ್ರಕಾರ, ಭಾರತದ ಜೊತೆಗೆ ಹಂಗೇರಿ, ಜೋರ್ಡಾನ್, ಗ್ರೀಸ್, ಸೈಪ್ರಸ್ ಮತ್ತು ಪಾಕಿಸ್ತಾನ ಕೂಡ ತಮಗೆ ಆಹ್ವಾನ ಬಂದಿರುವುದನ್ನು ದೃಢಪಡಿಸಿವೆ. ಇದಕ್ಕೂ ಮುನ್ನ ಕೆನಡಾ, ಟರ್ಕಿ, ಈಜಿಪ್ಟ್, ಪರಾಗ್ವೆ, ಅರ್ಜೆಂಟೀನಾ ಮತ್ತು ಅಲ್ಬೇನಿಯಾ ದೇಶಗಳಿಗೆ ಆಹ್ವಾನ ನೀಡಲಾಗಿತ್ತು.
ಟ್ರಂಪ್ ಅವರ ಕಟ್ಟಾ ಬೆಂಬಲಿಗ ಎಂದೇ ಗುರುತಿಸಿಕೊಂಡಿರುವ ಹಂಗೇರಿಯ ಪ್ರಧಾನಿ ವಿಕ್ಟರ್ ಓರ್ಬನ್ ಈಗಾಗಲೇ ಆಹ್ವಾನವನ್ನು ಸ್ವೀಕರಿಸಿದ್ದಾರೆ ಎಂದು ಅಲ್ಲಿನ ವಿದೇಶಾಂಗ ಸಚಿವ ಪೀಟರ್ ಸ್ಜಿಜಾರ್ಟೊ ತಿಳಿಸಿದ್ದಾರೆ. ಸ್ವಿಟ್ಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆಯಲಿರುವ ವಿಶ್ವ ಆರ್ಥಿಕ ವೇದಿಕೆಯ (WEF) ಸಭೆಯಲ್ಲಿ ಅಮೆರಿಕ ಅಧಿಕೃತ ಸದಸ್ಯರ ಪಟ್ಟಿಯನ್ನು ಪ್ರಕಟಿಸುವ ಸಾಧ್ಯತೆಯಿದೆ.
ಟ್ರಂಪ್ ಅವರ 20 ಅಂಶಗಳ ಯೋಜನೆ
ಕಳೆದ ಅಕ್ಟೋಬರ್‌ನಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆದ ಕದನ ವಿರಾಮ ಒಪ್ಪಂದದ ಎರಡನೇ ಹಂತದ ಭಾಗವಾಗಿ ಟ್ರಂಪ್ ಈ ಮಂಡಳಿಯನ್ನು ಘೋಷಿಸಿದ್ದರು. ಎರಡು ವರ್ಷಗಳ ಯುದ್ಧದಿಂದ ಜರ್ಜರಿತವಾಗಿರುವ ಗಾಜಾದ ಪುನರ್ನಿಮಾಣ ಮತ್ತು ಆಡಳಿತದ ಮೇಲ್ವಿಚಾರಣೆ ಈ ಮಂಡಳಿಯ ಪ್ರಮುಖ ಉದ್ದೇಶ.
ಗಾಜಾವನ್ನು ಭಯೋತ್ಪಾದನೆ ಮುಕ್ತ ವಲಯವನ್ನಾಗಿ ಮಾಡುವುದು ಅಂತರರಾಷ್ಟ್ರೀಯ ಸಂಪನ್ಮೂಲಗಳ ಕ್ರೋಢೀಕರಣ ಮತ್ತು ಗಾಜಾ ಸಂಘರ್ಷದಿಂದ ಶಾಂತಿಯತ್ತ ಸಾಗುವ ಪ್ರಕ್ರಿಯೆಯ ಹೊಣೆಗಾರಿಕೆ.
ಕಾರ್ಯಕಾರಿ ಮಂಡಳಿಯಲ್ಲಿ ಯಾರಿದ್ದಾರೆ?
'ಬೋರ್ಡ್ ಆಫ್ ಪೀಸ್'ನ ದೈನಂದಿನ ಕಾರ್ಯಚಟುವಟಿಕೆಗಳನ್ನು ನೋಡಿಕೊಳ್ಳಲು ಶ್ವೇತಭವನವು ಪ್ರತ್ಯೇಕ ಕಾರ್ಯಕಾರಿ ಮಂಡಳಿಯನ್ನು ರಚಿಸಿದೆ. ಇದರಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ, ಬ್ರಿಟನ್ ಮಾಜಿ ಪ್ರಧಾನಿ ಟೋನಿ ಬ್ಲೇರ್, ಟ್ರಂಪ್ ಅಳಿಯ ಜ್ಯಾರೆಡ್ ಕುಶ್ನರ್ ಮತ್ತು ವಿಶ್ವಬ್ಯಾಂಕ್ ಅಧ್ಯಕ್ಷ ಅಜಯ್ ಬಂಗಾ ಅವರಂತಹ ಪ್ರಮುಖರಿದ್ದಾರೆ. ಈ ಸಮಿತಿಯು 'ಗಾಜಾ ಆಡಳಿತದ ರಾಷ್ಟ್ರೀಯ ಸಮಿತಿ'ಯ (NCAG) ಮೇಲ್ವಿಚಾರಣೆ ನಡೆಸಲಿದೆ.
ವಿಶ್ವಸಂಸ್ಥೆಗೆ ಸೆಡ್ಡು ಹೊಡೆಯಲಿದೆಯೇ ಟ್ರಂಪ್ ಮಂಡಳಿ?
ಅರ್ಜೆಂಟೀನಾ ಅಧ್ಯಕ್ಷ ಜೇವಿಯರ್ ಮೈಲಿ ಅವರಿಗೆ ಟ್ರಂಪ್ ಬರೆದ ಪತ್ರವು ಈ ಮಂಡಳಿಯ ವ್ಯಾಪ್ತಿ ಗಾಜಾಕ್ಕಿಂತ ಹಿರಿದು ಎಂಬುದನ್ನು ಸ್ಪಷ್ಟಪಡಿಸಿದೆ. "ಜಾಗತಿಕ ಸಂಘರ್ಷಗಳನ್ನು ಬಗೆಹರಿಸಲು ಇದೊಂದು ದಿಟ್ಟ ಹೊಸ ಪ್ರಯತ್ನ" ಎಂದು ಟ್ರಂಪ್ ಉಲ್ಲೇಖಿಸಿದ್ದಾರೆ. "ದೀರ್ಘಕಾಲೀನ ಶಾಂತಿಗಾಗಿ ವಿಫಲವಾಗಿರುವ ಹಳೆಯ ಸಂಸ್ಥೆಗಳನ್ನು (ಪರೋಕ್ಷವಾಗಿ ವಿಶ್ವಸಂಸ್ಥೆ) ಬಿಟ್ಟು ಪ್ರಾಯೋಗಿಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಧೈರ್ಯ ಬೇಕಿದೆ" ಎಂದು ಮಂಡಳಿಯ ನಿಯಮಾವಳಿಯಲ್ಲಿ ಹೇಳಲಾಗಿದೆ.
ಸದಸ್ಯತ್ವಕ್ಕೆ 1 ಬಿಲಿಯನ್ ಡಾಲರ್ ಶುಲ್ಕ!
ಅಸೋಸಿಯೇಟೆಡ್ ಪ್ರೆಸ್ (AP) ವರದಿಯ ಪ್ರಕಾರ, ಈ ಮಂಡಳಿಯಲ್ಲಿ ಕಾಯಂ ಸದಸ್ಯತ್ವ ಪಡೆಯಲು ರಾಷ್ಟ್ರಗಳು 1 ಶತಕೋಟಿ ಅಮೆರಿಕನ್ ಡಾಲರ್ (ಸುಮಾರು 8,300 ಕೋಟಿ ರೂ.) ದೇಣಿಗೆ ನೀಡಬೇಕಾಗುತ್ತದೆ. ಈ ಹಣವನ್ನು ಗಾಜಾ ಮರುನಿರ್ಮಾಣಕ್ಕೆ ಬಳಸಲಾಗುವುದು. ಹಣ ನೀಡದಿದ್ದರೆ ಕೇವಲ ಮೂರು ವರ್ಷಗಳ ಅವಧಿಗೆ ತಾತ್ಕಾಲಿಕ ಸದಸ್ಯತ್ವ ಸಿಗಲಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಗಾಜಾ ಯುದ್ಧವನ್ನು ನಿಲ್ಲಿಸುವಲ್ಲಿ ವಿಫಲವಾಗಿದೆ ಎಂಬ ಟೀಕೆಗಳ ನಡುವೆ, ಟ್ರಂಪ್ ಅವರ ಈ ನಡೆ ಹೊಸ ಜಾಗತಿಕ ರಾಜಕೀಯ ಸಮೀಕರಣಗಳಿಗೆ ಮುನ್ನುಡಿ ಬರೆಯುವ ಸಾಧ್ಯತೆಯಿದೆ.

