US-Iran Peace Talks| ದಶಕಗಳ ದ್ವೇಷಕ್ಕೆ ಅಂತ್ಯ ಹಾಡುತ್ತಾ ಇರಾನ್-ಅಮೆರಿಕ? ಪಾಕಿಸ್ತಾನದಲ್ಲಿ ಇಂದಿನಿಂದ ಹೈವೋಲ್ಟೇಜ್ ಶಾಂತಿ ಮಾತುಕತೆ!
x
ಅಮೆರಿಕದೊಂದಿಗೆ ಶಾಂತಿ ಮಾತುಕತೆ ನಡೆಸಲು ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಕರ್ ಖಲಿಬಾಫ್ ನೇತೃತ್ವದ ಉನ್ನತ ಮಟ್ಟದ ನಿಯೋಗ ಪಾಕಿಸ್ತಾನದ ಇಸ್ಲಾಮಾಬಾದ್‌ಗೆ ಆಗಮಿಸಿತು.

US-Iran Peace Talks| ದಶಕಗಳ ದ್ವೇಷಕ್ಕೆ ಅಂತ್ಯ ಹಾಡುತ್ತಾ ಇರಾನ್-ಅಮೆರಿಕ? ಪಾಕಿಸ್ತಾನದಲ್ಲಿ ಇಂದಿನಿಂದ ಹೈವೋಲ್ಟೇಜ್ ಶಾಂತಿ ಮಾತುಕತೆ!

1979ರ ನಂತರ ಅಮೆರಿಕ ಮತ್ತು ಇರಾನ್ ನಡುವಿನ ಅತ್ಯಂತ ದೊಡ್ಡ ಮಟ್ಟದ ಮಾತುಕತೆ ಪಾಕಿಸ್ತಾನದಲ್ಲಿ ನಡೆಯುತ್ತಿದೆ. ಆದರೆ ಎರಡೂ ದೇಶಗಳ ನಡುವಿನ ಭಿನ್ನಾಭಿಪ್ರಾಯಗಳು ಇನ್ನೂ ಜೀವಂತವಾಗಿವೆ.


Click the Play button to hear this message in audio format

ದಶಕಗಳಿಂದ ಪರಸ್ಪರ ಶತ್ರುಗಳಂತೆ ಕಾದಾಡುತ್ತಿರುವ ಇರಾನ್ ಮತ್ತು ಅಮೆರಿಕ ಈಗ ಸಂಧಾನದ ಹಾದಿಗೆ ಬಂದಿವೆ. ಸಂಘರ್ಷಕ್ಕೆ ಅಂತ್ಯ ಹಾಡುವ ನಿಟ್ಟಿನಲ್ಲಿ ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಡೆಯಲಿರುವ ಮಹತ್ವದ ಶಾಂತಿ ಮಾತುಕತೆಯಲ್ಲಿ ಭಾಗವಹಿಸಲು ಉಭಯ ದೇಶಗಳ ಉನ್ನತ ಮಟ್ಟದ ನಿಯೋಗಗಳು ಶುಕ್ರವಾರ ಆಗಮಿಸಿವೆ.

ಇರಾನ್ ನಿಯೋಗದ ಪ್ರಮುಖರು

ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಕರ್ ಖಲಿಬಾಫ್ ನೇತೃತ್ವದಲ್ಲಿ ಇರಾನ್ ನಿಯೋಗ ಬಂದಿಳಿದಿದೆ. ಈ ತಂಡದಲ್ಲಿ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘಚಿ, ರಕ್ಷಣಾ ಮಂಡಳಿಯ ಕಾರ್ಯದರ್ಶಿ ಅಲಿ ಅಕ್ಬರ್ ಅಹ್ಮದಿಯಾನ್ ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರ್ ಅಬ್ದುಲ್ನಾಸರ್ ಹೆಮ್ಮತಿ ಸೇರಿದಂತೆ ರಾಜಕೀಯ ಹಾಗೂ ಮಿಲಿಟರಿ ವಲಯದ ಪ್ರಮುಖರು ಇದ್ದಾರೆ.

ಅಮೆರಿಕ ತಂಡದ ನೇತೃತ್ವ ವಹಿಸಿದ ಜೆ.ಡಿ ವ್ಯಾನ್ಸ್

ಅಮೆರಿಕದ ಪರವಾಗಿ ಉಪಾಧ್ಯಕ್ಷ ಜೆ.ಡಿ ವ್ಯಾನ್ಸ್ (JD Vance) ನೇತೃತ್ವದ ತಂಡ ಇಸ್ಲಾಮಾಬಾದ್‌ಗೆ ಆಗಮಿಸಿದೆ. ಈ ತಂಡದಲ್ಲಿ ವಿಶೇಷ ಪ್ರತಿನಿಧಿ ಸ್ಟೀವ್ ವಿಟ್ಕೋಫ್ ಮತ್ತು ಜ್ಯಾರೆಡ್ ಕುಶ್ನರ್ ಕೂಡ ಇದ್ದಾರೆ. 1979ರ ಇಸ್ಲಾಮಿಕ್ ಕ್ರಾಂತಿಯ ನಂತರ ಉಭಯ ದೇಶಗಳ ನಡುವೆ ನಡೆಯುತ್ತಿರುವ ಅತ್ಯಂತ ಉನ್ನತ ಮಟ್ಟದ ಮುಖಾಮುಖಿ ಇದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇರಾನ್ ಮುಂದಿಟ್ಟಿರುವ ಕಠಿಣ ಷರತ್ತುಗಳು

ಮಾತುಕತೆ ಆರಂಭವಾಗುವ ಮೊದಲೇ ಇರಾನ್ ತನ್ನ ಹಠ, ಬೇಡಿಕೆಯನ್ನು ಬಿಗಿಗೊಳಿಸಿದೆ. ಅಮೆರಿಕ ಹೇರಿರುವ ಆರ್ಥಿಕ ನಿರ್ಬಂಧಗಳನ್ನು ಸಂಪೂರ್ಣವಾಗಿ ತೆಗೆದುಹಾಕಬೇಕು ಎಂಬುದು ಇರಾನ್‌ನ ಮೊದಲ ಆಗ್ರಹವಾಗಿದೆ. ವಿದೇಶಗಳಲ್ಲಿ ಸ್ಥಗಿತಗೊಳಿಸಲಾದ ಇರಾನ್ ಆಸ್ತಿಗಳನ್ನು ಬಿಡುಗಡೆ ಮಾಡಬೇಕು. ಅಲ್ಲದೇ ಇಸ್ರೇಲ್ ನಡೆಸುತ್ತಿರುವ ದಾಳಿಗಳು ಕೇವಲ ಇರಾನ್ ಮೇಲೆ ಮಾತ್ರವಲ್ಲದೆ, ಲೆಬನಾನ್‌ನ ಹಿಜ್ಬುಲ್ಲಾ ಮೇಲೂ ನಿಲ್ಲಬೇಕು ಎಂದು ಇರಾನ್ ಆಗ್ರಹಿಸಿದೆ.

ಅಮೆರಿಕದ ನಿರೀಕ್ಷೆಗಳೇನು?

ಇತ್ತ ಅಮೆರಿಕ ಕೂಡ ಇರಾನ್ ಮುಂದೆ ಕಠಿಣ ಬೇಡಿಕೆಗಳನ್ನು ಇಟ್ಟಿದೆ. ಇರಾನ್ ತನ್ನ ಯುರೇನಿಯಂ ದಾಸ್ತಾನುಗಳನ್ನು ಒಪ್ಪಿಸಬೇಕು, ಕ್ಷಿಪಣಿ ಅಭಿವೃದ್ಧಿ ನಿಲ್ಲಿಸಬೇಕು ಮತ್ತು ಇರಾನ್ ಜೈಲಿನಲ್ಲಿರುವ ಅಮೆರಿಕದ ಪ್ರಜೆಗಳನ್ನು ಬಿಡುಗಡೆ ಮಾಡಬೇಕು ಎಂಬುದು ಶ್ವೇತಭವನದ ಒತ್ತಾಯವಾಗಿದೆ. ಅಲ್ಲದೆ, ಜಾಗತಿಕವಾಗಿ ತೈಲ ಪೂರೈಕೆಗೆ ಪ್ರಮುಖವಾಗಿರುವ ಹಾರ್ಮುಜ್ ಜಲಸಂಧಿಯನ್ನು (Strait of Hormuz) ಸುಗಮ ಸಂಚಾರಕ್ಕೆ ಮುಕ್ತಗೊಳಿಸಬೇಕು ಎಂದು ಅಮೆರಿಕ ಬಯಸುತ್ತಿದೆ.

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶಾಂತಿ ಮಾತುಕತೆಗೆ ಒಲವು ತೋರಿದ್ದರೂ, ಶ್ವೇತಭವನದ ಅಧಿಕಾರಿಗಳು ಮಾತ್ರ ಈ ಮಾತುಕತೆಯಿಂದ ತಕ್ಷಣಕ್ಕೆ ಯಾವುದೇ ದೊಡ್ಡ ಬದಲಾವಣೆಯಾಗುವ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಹಳೆಯ ದ್ವೇಷ ಮತ್ತು ಇತ್ತೀಚಿನ ದಾಳಿಗಳಿಂದಾಗಿ ಉಭಯ ದೇಶಗಳ ನಡುವೆ ನಂಬಿಕೆಯ ಕೊರತೆ ಎದ್ದು ಕಾಣುತ್ತಿದೆ. ಆದರೂ, ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ನಡೆಯುತ್ತಿರುವ ಈ ಸಭೆಯು ಮಧ್ಯಪ್ರಾಚ್ಯದ ಭವಿಷ್ಯವನ್ನು ನಿರ್ಧರಿಸುವಲ್ಲಿ ನಿರ್ಣಾಯಕವಾಗಲಿದೆ.

Read More
Next Story