
ಬಾಂಗ್ಲಾದಲ್ಲಿ ಮತ್ತೊಬ್ಬ ಹಿಂದೂ ಯುವಕನ ಹತ್ಯೆ; ಯಾರು ಈ ಅಮೃತ್ ಮೊಂಡಲ್?
ಬಾಂಗ್ಲಾದೇಶದ ರಾಜಬರಿ ಜಿಲ್ಲೆಯಲ್ಲಿ ಅಮೃತ್ ಮೊಂಡಲ್ ಎಂಬ ಹಿಂದೂ ವ್ಯಕ್ತಿಯನ್ನು ಗುಂಪೊಂದು ಹೊಡೆದು ಕೊಂದಿರುವ ಬಗ್ಗೆ ವರದಿಯಾಗಿದೆ. ಈತ ಸುಲಿಗೆಗೆ ಯತ್ನಿಸಿದ್ದ ಎಂಬ ಆರೋಪವೂ ಕೇಳಿಬಂದಿದೆ.
ವಿದ್ಯಾರ್ಥಿ ನಾಯಕ ಉಸ್ಮಾನ್ ಹಾದಿ ಹತ್ಯೆ ನಂತರ ಬಾಂಗ್ಲಾದೇಶದಲ್ಲಿ ಹಿಂಸಾಚಾರ ಮುಂದುವರಿದಿದೆ. ಉದ್ರಿಕ್ತ ಗುಂಪು ಹಿಂದೂಗಳನ್ನೇ ಗುರಿಯಾಗಿಸಿ ನಡೆಸುತ್ತಿರುವ ದಾಳಿ ಹೆಚ್ಚಾಗಿದೆ. ಕಳೆದ ವಾರವಷ್ಟೇ ಹಿಂದೂ ಯುವಕನನ್ನು ಬರ್ಬರವಾಗಿ ಹತ್ಯೆಗೈದು ಆತನ ಮೃತದೇಹವನ್ನು ಮರಕ್ಕೆ ಕಟ್ಟಿ ಸುಟ್ಟಿರುವ ಘಟನೆ ವರದಿಯಾಗಿತ್ತು. ಇದೀಗ ಇದರ ಬೆನ್ನಲ್ಲೇ ಮತ್ತೊಬ್ಬ ಹಿಂದೂ ಯುವಕನ್ನು ಹೊಡೆದು ಕೊಂದಿರುವ ಘಟನೆ ವರದಿಯಾಗಿದೆ. ಬಾಂಗ್ಲಾದೇಶದ ರಾಜಬರಿ ಜಿಲ್ಲೆಯಲ್ಲಿ ಹಣಕ್ಕಾಗಿ ಸುಲಿಗೆ ಮಾಡಲು ಬಂದಿದ್ದ ಎಂಬ ಆರೋಪದ ಮೇಲೆ ಹಿಂದೂ ವ್ಯಕ್ತಿಯೊಬ್ಬನನ್ನು ಸ್ಥಳೀಯರ ಗುಂಪು ಹೊಡೆದು ಕೊಂದಿದ್ದಾರೆ. ಮೃತನನ್ನು ಅದೇ ಗ್ರಾಮದ ನಿವಾಸಿ ಅಮೃತ್ ಮೊಂಡಲ್ (ಸಮ್ರಾಟ್) ಎಂದು ಗುರುತಿಸಲಾಗಿದೆ.
ಘಟನೆಯ ವಿವರ
'ದ ಡೈಲಿ ಸ್ಟಾರ್' ವರದಿಯ ಪ್ರಕಾರ, ಬುಧವಾರ ರಾತ್ರಿ 11 ಗಂಟೆ ಸುಮಾರಿಗೆ ಹೊಸೆಂದಾಂಗಾ ಗ್ರಾಮದ ಶಾಹಿದುಲ್ ಇಸ್ಲಾಂ ಎಂಬುವವರ ಮನೆಗೆ ಅಮೃತ್ ಮೊಂಡಲ್ ತನ್ನ ಸಹಚರರೊಂದಿಗೆ ತೆರಳಿದ್ದ. ಅಲ್ಲಿ ಹಣಕ್ಕಾಗಿ ಬೆದರಿಕೆ ಹಾಕಿದಾಗ, ಮನೆಯವರು ಕಿರುಚಾಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು ಅಮೃತ್‌ನನ್ನು ಹಿಡಿದು ಮನಬಂದಂತೆ ಥಳಿಸಿದ್ದಾರೆ. ಆತನ ಸಹಚರರು ಪರಾರಿಯಾಗಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಅಮೃತ್‌ನನ್ನು ಆಸ್ಪತ್ರೆಗೆ ದಾಖಲಿಸಿದರೂ ಸಹ, ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ.
ಯಾರು ಈ ಅಮೃತ್ ಮೊಂಡಲ್?
ಪೊಲೀಸರ ಪ್ರಕಾರ, ಅಮೃತ್ ಮೊಂಡಲ್ ಸ್ಥಳೀಯವಾಗಿ ಕ್ರಿಮಿನಲ್ ಗ್ಯಾಂಗ್ ನಡೆಸುತ್ತಿದ್ದ. ಆತನ ಮೇಲೆ ಕೊಲೆ ಸೇರಿದಂತೆ ಹಲವಾರು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು. ಆತ ತನ್ನದೇ ಹೆಸರಿನಲ್ಲಿ ಒಂದು ತಂಡವನ್ನು ಕಟ್ಟಿಕೊಂಡು ಸುಲಿಗೆ ಮತ್ತು ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿದ್ದ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಪೊಲೀಸರು ಅಮೃತ್‌ನ ಸಹಚರ ಮೊಹಮ್ಮದ್ ಸೆಲೀಮ್ ಎಂಬಾತನನ್ನು ಬಂಧಿಸಿದ್ದು, ಆತನಿಂದ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಬಾಂಗ್ಲಾದೇಶದಲ್ಲಿ ಮುಂದುವರಿದ ಹಿಂಸಾಚಾರ
ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ಹಿಂಸಾಚಾರ ಹೆಚ್ಚುತ್ತಿದ್ದು, ಬುಧವಾರ ನಡೆದ ಮತ್ತೊಂದು ಘಟನೆಯಲ್ಲಿ ಢಾಕಾದಲ್ಲಿ ಫ್ಲೈಓವರ್‌ನಿಂದ ಎಸೆಯಲಾದ ಬಾಂಬ್‌ಗೆ 20 ವರ್ಷದ ಯುವಕ ಬಲಿಯಾಗಿದ್ದಾನೆ. ಕಳೆದ ವಾರವಷ್ಟೇ ದೀಪು ಚಂದ್ರ ದಾಸ್ ಎಂಬ 27 ವರ್ಷದ ಯುವಕನನ್ನು ಮರಕ್ಕೆ ಕಟ್ಟಿ ಹಾಕಿ ಸಜೀವ ದಹನ ಮಾಡಲಾಗಿತ್ತು. ಉಸ್ಮಾನ್ ಹಾದಿ ಎಂಬ ವಿದ್ಯಾರ್ಥಿ ನಾಯಕನ ಹತ್ಯೆಯ ನಂತರ ದೇಶದ ವಿವಿಧೆಡೆ ಅಶಾಂತಿ ತಲೆದೋರಿದೆ. ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನಸ್ ಈ ಪ್ರಕರಣಗಳಲ್ಲಿ ಕಠಿಣ ಕ್ರಮಕ್ಕೆ ಆದೇಶಿಸಿದ್ದಾರೆ.

