
ಮೃತ ಲಿಟನ್ ಚಂದ್ರ ದಾಸ್
ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ದಾಳಿ: ಕ್ಷುಲ್ಲಕ ಜಗಳಕ್ಕೆ ಹಿಂದೂ ಉದ್ಯಮಿಯ ಬರ್ಬರ ಹತ್ಯೆ
ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಸ್ಥಿತಿ ಚಿಂತಾಜನಕವಾಗಿದೆ. ಕಳೆದ 18 ದಿನಗಳ ಅಲ್ಪಾವಧಿಯಲ್ಲಿಯೇ ಕನಿಷ್ಠ 9 ಮಂದಿ ಹಿಂದೂಗಳು ವಿವಿಧ ದಾಳಿಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.
ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಮೇಲಿನ ದೌರ್ಜನ್ಯ ಮತ್ತು ಸರಣಿ ಹತ್ಯೆಗಳು ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಢಾಕಾದ ಕಾಲಿಗಂಜ್ ಪ್ರದೇಶದಲ್ಲಿ ಕೇವಲ ಕ್ಷುಲ್ಲಕ ಕಾರಣಕ್ಕಾಗಿ ನಡೆದ ವಾಗ್ವಾದವು ವಿಕೋಪಕ್ಕೆ ಹೋಗಿ, ಉದ್ರಿಕ್ತ ಗುಂಪೊಂದು 60 ವರ್ಷದ ಹಿಂದೂ ಉದ್ಯಮಿ ಲಿಟನ್ ಚಂದ್ರ ದಾಸ್ ಅವರನ್ನು ಮಾರಕಾಸ್ತ್ರಗಳಿಂದ ಹೊಡೆದು ಅಮಾನವೀಯವಾಗಿ ಹತ್ಯೆಗೈದಿದೆ.
ಲಿಟನ್ ಚಂದ್ರ ದಾಸ್ ಅವರು ಸ್ಥಳೀಯವಾಗಿ ಹೋಟೆಲ್ ಮತ್ತು ಸಿಹಿ ತಿಂಡಿ ಅಂಗಡಿಯನ್ನು ನಡೆಸುತ್ತಿದ್ದರು. ಶನಿವಾರ ಬೆಳಿಗ್ಗೆ ಅವರ ಅಂಗಡಿಯ ಉದ್ಯೋಗಿ ಅನಂತ ದಾಸ್ ಮತ್ತು ಗ್ರಾಹಕರೊಬ್ಬರ ನಡುವೆ ಸಣ್ಣ ವಿಷಯಕ್ಕೆ ಜಗಳ ಆರಂಭವಾಗಿತ್ತು. ಈ ವೇಳೆ ತಮ್ಮ ಉದ್ಯೋಗಿಯನ್ನು ರಕ್ಷಿಸಲು ಲಿಟನ್ ಮಧ್ಯಪ್ರವೇಶಿಸಿದ್ದಾರೆ. ಇದರಿಂದ ಕುಪಿತಗೊಂಡ ದುಷ್ಕರ್ಮಿಗಳ ಗುಂಪು, ಲಿಟನ್ ಅವರ ಮೇಲೆ ಮುಗಿಬಿದ್ದಿದೆ. ಮೊದಲು ಥಳಿಸಿ, ನಂತರ ಕಬ್ಬಿಣದ ರಾಡ್‌ಗಳಿಂದ ಬಲವಾಗಿ ಹೊಡೆದಿದ್ದಾರೆ. ತೀವ್ರ ರಕ್ತಸ್ರಾವದಿಂದ ಲಿಟನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮೂವರು ಶಂಕಿತರನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
18 ದಿನಗಳಲ್ಲಿ 9 ಸಾವು
ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಸ್ಥಿತಿ ಚಿಂತಾಜನಕವಾಗಿದೆ. ಕಳೆದ 18 ದಿನಗಳ ಅಲ್ಪಾವಧಿಯಲ್ಲಿಯೇ ಕನಿಷ್ಠ 9 ಮಂದಿ ಹಿಂದೂಗಳು ವಿವಿಧ ದಾಳಿಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ ತಿಂಗಳು ಧರ್ಮನಿಂದನೆ ಆರೋಪದ ಮೇಲೆ ಕಾರ್ಮಿಕ ದೀಪು ಚಂದ್ರ ದಾಸ್ ಅವರನ್ನು ಸಜೀವವಾಗಿ ದಹಿಸಲಾಗಿತ್ತು. ರಾಜ್‌ಬಾರಿ ಎಂಬಲ್ಲಿ ಅಮೃತ್ ಮೊಂಡಲ್ ಎಂಬುವವರನ್ನು ಸುಲಿಗೆ ನೆಪದಲ್ಲಿ ಥಳಿಸಿ ಕೊಲ್ಲಲಾಗಿತ್ತು.
ಪೆಟ್ರೋಲ್ ಬಂಕ್ ಸಿಬ್ಬಂದಿಯ ಹತ್ಯೆ
ಇನ್ನೊಂದು ಆಘಾತಕಾರಿ ಘಟನೆಯಲ್ಲಿ, ಪೆಟ್ರೋಲ್ ಬಂಕ್ ಉದ್ಯೋಗಿ ರಿಪನ್ ಸಹಾ ಎಂಬುವವರನ್ನು ಕಾರು ಹರಿಸಿ ಕೊಲೆ ಮಾಡಲಾಗಿದೆ. ಪೆಟ್ರೋಲ್ ಹಾಕಿಸಿಕೊಂಡು ಹಣ ನೀಡದೆ ಪರಾರಿಯಾಗುತ್ತಿದ್ದವರನ್ನು ತಡೆಯಲು ಹೋದಾಗ ಈ ಕೃತ್ಯ ಎಸಗಲಾಗಿದೆ. ಈ ಕಾರು ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (BNP) ಮುಖಂಡರೊಬ್ಬರಿಗೆ ಸೇರಿದ್ದು ಎಂಬ ಮಾಹಿತಿ ಲಭ್ಯವಾಗಿದೆ.

