ಸುಪ್ರೀಂ ಕೋರ್ಟ್‌ಗೆ ಟ್ರಂಪ್ ಸವಾಲು: ವಿಶ್ವದ ಎಲ್ಲಾ ದೇಶಗಳ ಆಮದಿನ ಮೇಲೆ ಶೇ. 10ರಷ್ಟು ಸುಂಕ ಘೋಷಣೆ!
x
ಡೊನಾಲ್ಡ್‌ ಟ್ರಂಪ್‌(ಸಂಗ್ರಹ ಚಿತ್ರ)

ಸುಪ್ರೀಂ ಕೋರ್ಟ್‌ಗೆ ಟ್ರಂಪ್ ಸವಾಲು: ವಿಶ್ವದ ಎಲ್ಲಾ ದೇಶಗಳ ಆಮದಿನ ಮೇಲೆ ಶೇ. 10ರಷ್ಟು ಸುಂಕ ಘೋಷಣೆ!

Donald Trump tariff| ಫೆಬ್ರವರಿ 24ರಿಂದ ಭಾರತ ಸೇರಿದಂತೆ ಎಲ್ಲಾ ದೇಶಗಳ ಆಮದಿನ ಮೇಲೆ ಶೇ. 10ರಷ್ಟು ಸುಂಕ ಜಾರಿಗೊಳಿಸಲಾಗುತ್ತದೆ.


Click the Play button to hear this message in audio format

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿಶ್ವದ ಎಲ್ಲಾ ದೇಶಗಳಿಂದ ಆಮದು ಮಾಡಿಕೊಳ್ಳುವ ಉತ್ಪನ್ನಗಳ ಮೇಲೆ ಶೇ. 10ರಷ್ಟು ಜಾಗತಿಕ ಸುಂಕ ವಿಧಿಸುವ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದ್ದಾರೆ. ಸುಪ್ರೀಂ ಕೋರ್ಟ್ ಅವರ ಹಳೆಯ ಸುಂಕದ ನೀತಿಯನ್ನು ಅಸಿಂಧುಗೊಳಿಸಿದ ಕೆಲವೇ ಗಂಟೆಗಳಲ್ಲಿ ಟ್ರಂಪ್ ಈ ಮಹತ್ವದ ಕ್ರಮ ಕೈಗೊಂಡಿದ್ದಾರೆ.

ಫೆಬ್ರವರಿ 24ರಿಂದ ಹೊಸ ಸುಂಕ ಜಾರಿ

ಟ್ರಂಪ್ ಅವರ ಈ ಹೊಸ ಆದೇಶವು ಫೆಬ್ರವರಿ 24ರಂದು ಭಾರತೀಯ ಕಾಲಮಾನ ಬೆಳಿಗ್ಗೆ 10:31 ರಿಂದ ಜಾರಿಗೆ ಬರಲಿದೆ. "ಓವಲ್ ಕಚೇರಿಯಿಂದ ಎಲ್ಲಾ ದೇಶಗಳ ಮೇಲೆ ಶೇ. 10ರಷ್ಟು ಸುಂಕ ವಿಧಿಸುವ ಆದೇಶಕ್ಕೆ ಸಹಿ ಹಾಕಲು ನನಗೆ ಹೆಮ್ಮೆಯಾಗುತ್ತಿದೆ" ಎಂದು ಟ್ರಂಪ್ ತಮ್ಮ 'ಟ್ರೂತ್ ಸೋಶಿಯಲ್' ಖಾತೆಯಲ್ಲಿ ಬರೆದುಕೊಂಡಿದ್ದಾರೆ.

'ನಾನು ಏನು ಬೇಕಾದರೂ ಮಾಡಬಲ್ಲೆ': ಕೋರ್ಟ್ ವಿರುದ್ಧ ಕಿಡಿ

ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಟ್ರಂಪ್, "ನ್ಯಾಯಾಲಯದ ತೀರ್ಪು ನನ್ನ ಅಧಿಕಾರವನ್ನು ಮಿತಿಗೊಳಿಸಿಲ್ಲ. ನನಗೆ ದೇಶದ ವ್ಯಾಪಾರವನ್ನು ಧ್ವಂಸ ಮಾಡುವ ಅಥವಾ ವಿದೇಶಿ ರಾಷ್ಟ್ರಗಳ ಮೇಲೆ ನಿರ್ಬಂಧ ಹೇರುವ ಅಧಿಕಾರವಿದೆ. ಅಂತಹದ್ದರಲ್ಲಿ ಸುಂಕ ವಿಧಿಸಲು ಸಾಧ್ಯವಿಲ್ಲ ಎನ್ನುವುದು ಹಾಸ್ಯಾಸ್ಪದ" ಎಂದು ಆಕ್ರೋಶ ಹೊರಹಾಕಿದ್ದಾರೆ. 1974ರ ವ್ಯಾಪಾರ ಕಾಯ್ದೆಯ ಸೆಕ್ಷನ್ 122ರ ಅಡಿಯಲ್ಲಿ ಈ ಹೊಸ ಸುಂಕವನ್ನು ವಿಧಿಸಲಾಗಿದ್ದು, ಇದು ಸುಮಾರು ಐದು ತಿಂಗಳ ಕಾಲ ಜಾರಿಯಲ್ಲಿರಲಿದೆ.

ಯಾರಿಗೆ ವಿನಾಯಿತಿ? ಯಾರಿಗೆ ಹೊಡೆತ?

ವೈಟ್ ಹೌಸ್ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಕೆಲವು ನಿರ್ದಿಷ್ಟ ಕ್ಷೇತ್ರಗಳಿಗೆ ಈ ಸುಂಕದಿಂದ ವಿನಾಯಿತಿ ನೀಡಲಾಗಿದೆ. ಇಂಧನ, ಔಷಧಗಳು, ವಾಹನ, ಏರೋಸ್ಪೇಸ್, ನಿರ್ಣಾಯಕ ಖನಿಜಗಳು ಮತ್ತು ಕರೆನ್ಸಿ ಲೋಹಗಳಿಗೆ ವಿನಾಯಿತಿ ನೀಡಲಾಗಿದೆ. ಅಮೆರಿಕದ ಜೊತೆ ಸರಿಯಾಗಿ ನಡೆದುಕೊಳ್ಳದ ದೇಶಗಳು ಇನ್ನು ಮುಂದೆ ಹೆಚ್ಚಿನ ಸುಂಕವನ್ನು ಎದುರಿಸಬೇಕಾಗುತ್ತದೆ ಎಂದು ಟ್ರಂಪ್ ಎಚ್ಚರಿಸಿದ್ದಾರೆ.

175 ಬಿಲಿಯನ್ ಡಾಲರ್ ಆದಾಯದ ಭವಿಷ್ಯವೇನು?

ಈ ಹಿಂದೆ ತುರ್ತು ಪರಿಸ್ಥಿತಿ ಕಾನೂನಿನಡಿ ಸಂಗ್ರಹಿಸಲಾಗಿದ್ದ ಸುಮಾರು 175 ಬಿಲಿಯನ್ ಡಾಲರ್ ಸುಂಕದ ಹಣವನ್ನು ವಾಪಸ್ ನೀಡಬೇಕೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಟ್ರಂಪ್, "ಇದು ಮುಂದಿನ ಎರಡು ವರ್ಷಗಳ ಕಾಲ ನ್ಯಾಯಾಲಯದಲ್ಲಿ ಹೋರಾಟ ನಡೆಸಲಿದೆ" ಎಂದು ಹೇಳುವ ಮೂಲಕ ತಕ್ಷಣವೇ ಹಣ ಹಿಂತಿರುಗಿಸುವ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ.

Read More
Next Story