
"ಭಾರತದೊಂದಿಗಿನ ಒಪ್ಪಂದ ಮುಂದುವರಿಯಲಿದೆ"- ಸುಪ್ರೀಂ ಕೋರ್ಟ್ ತೀರ್ಪಿನ ಬೆನ್ನಲ್ಲೇ ಟ್ರಂಪ್ ಘೋಷಣೆ
Donald Trump| ಸುಪ್ರೀಂ ಕೋರ್ಟ್ ತೀರ್ಪಿನ ಬೆನ್ನಲ್ಲೇ ಪ್ರಧಾನಿ ಮೋದಿ ಅವರೊಂದಿಗಿನ ಸಂಬಂಧ ಮತ್ತು ರಷ್ಯಾ ತೈಲ ಖರೀದಿ ಬಗ್ಗೆ ಡೊನಾಲ್ಡ್ ಟ್ರಂಪ್ ನೀಡಿದ ಮಹತ್ವದ ಹೇಳಿಕೆಗಳು ಇಲ್ಲಿವೆ.
ಅಮೆರಿಕದ ಸುಪ್ರೀಂ ಕೋರ್ಟ್ ಸುಂಕಗಳ ವಿಚಾರದಲ್ಲಿ ಡೊನಾಲ್ಡ್ ಟ್ರಂಪ್ ನಿರ್ಧಾರವನ್ನು ತಳ್ಳಿಹಾಕಿದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಟ್ರಂಪ್, "ಭಾರತದೊಂದಿಗಿನ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಇಲ್ಲ, ಒಪ್ಪಂದವು ಜಾರಿಯಲ್ಲಿದೆ" ಎಂದು ಸ್ಪಷ್ಟಪಡಿಸಿದ್ದಾರೆ. ವೈಟ್ ಹೌಸ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ತಮ್ಮ ಸಂಬಂಧ ಅದ್ಭುತವಾಗಿದೆ ಎಂದು ಪುನರುಚ್ಛರಿಸಿದ್ದಾರೆ.
ರಷ್ಯಾ ತೈಲ ಮತ್ತು ಭಾರತದ ನಿರ್ಧಾರ
ಭಾರತವು ರಷ್ಯಾದಿಂದ ತೈಲವನ್ನು ಖರೀದಿಸುತ್ತಿತ್ತು, ಆದರೆ ನನ್ನ ವಿನಂತಿಯ ಮೇರೆಗೆ ಭಾರತ ತನ್ನ ನಿರ್ಧಾರದಿಂದ ಹಿಂದೆ ಸರಿದಿತ್ತು ಎಂದು ಟ್ರಂಪ್ ಹೇಳಿದ್ದಾರೆ. "ತಿಂಗಳಿಗೆ 25,000 ಜನರು ಸಾಯುತ್ತಿರುವ ಭೀಕರ ಯುದ್ಧವನ್ನು (ರಷ್ಯಾ-ಉಕ್ರೇನ್) ಕೊನೆಗಾಣಿಸಲು ನಾವು ಬಯಸುತ್ತೇವೆ, ಅದಕ್ಕಾಗಿಯೇ ರಷ್ಯಾದಿಂದ ದೂರ ಸರಿಯುವಂತೆ ನಾನು ಭಾರತಕ್ಕೆ ವಿನಂತಿಸಿದ್ದೆ" ಎಂದು ಅವರು ತಿಳಿಸಿದ್ದಾರೆ. ಇತ್ತೀಚಿನ ಕಾರ್ಯಕಾರಿ ಆದೇಶದ ಮೂಲಕ ರಷ್ಯಾ ತೈಲ ಖರೀದಿಗಾಗಿ ಭಾರತದ ಮೇಲೆ ಹೇರಿದ್ದ ಶೇ. 25ರಷ್ಟು ದಂಡನಾತ್ಮಕ ಸುಂಕವನ್ನು ಟ್ರಂಪ್ ತೆಗೆದುಹಾಕಿದ್ದಾರೆ. ಇದಕ್ಕೆ ಪ್ರತಿಯಾಗಿ ಭಾರತವು ಅಮೆರಿಕದ ಇಂಧನ ಉತ್ಪನ್ನಗಳನ್ನು ಖರೀದಿಸಲು ಸಮ್ಮತಿಸಿದೆ.
"ನಾನು ಭಾರತ-ಪಾಕಿಸ್ತಾನ ಯುದ್ಧ ನಿಲ್ಲಿಸಿದೆ"
ತಮ್ಮ ಹಳೆಯ ವಾದವನ್ನು ಪುನರುಚ್ಚರಿಸಿದ ಟ್ರಂಪ್, ಕಳೆದ ಬೇಸಿಗೆಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯುತ್ತಿದ್ದ ಯುದ್ಧವನ್ನು ಕೇವಲ 'ಸುಂಕ'ದ ಬೆದರಿಕೆಯ ಮೂಲಕ ತಾನು ನಿಲ್ಲಿಸಿದೆ ಎಂದು ಪ್ರತಿಪಾದಿಸಿದ್ದಾರೆ. "10 ವಿಮಾನಗಳು ಪತನಗೊಂಡಿದ್ದವು ಮತ್ತು ಆ ಯುದ್ಧವು ಪರಮಾಣು ಯುದ್ಧವಾಗಿ ಬದಲಾಗುವ ಸಾಧ್ಯತೆಯಿತ್ತು. ಆದರೆ ನೀವು ಯುದ್ಧ ಮುಂದುವರಿಸಿದರೆ ಅಮೆರಿಕದ ಜೊತೆ ವ್ಯಾಪಾರ ಮಾಡುವಂತಿಲ್ಲ ಮತ್ತು ಎರಡೂ ದೇಶಗಳು ಶೇ. 200ರಷ್ಟು ಸುಂಕ ಪಾವತಿಸಬೇಕಾಗುತ್ತದೆ ಎಂದು ನಾನು ಎಚ್ಚರಿಕೆ ನೀಡಿದ್ದೆ. ಕೂಡಲೇ ಅವರು ಶಾಂತಿಗೆ ಒಪ್ಪಿಕೊಂಡರು. ನಾನು 3.5 ಕೋಟಿ ಜನರ ಜೀವ ಉಳಿಸಿದೆ ಎಂದು ಪಾಕಿಸ್ತಾನದ ಪ್ರಧಾನಿಯೇ ಹೇಳಿದ್ದಾರೆ" ಎಂದು ಟ್ರಂಪ್ ವಿಚಿತ್ರ ವಾದ ಮಂಡಿಸಿದ್ದಾರೆ.
ವ್ಯಾಪಾರ ಒಪ್ಪಂದದ ಹೊಸ ಸ್ವರೂಪ
ಭಾರತದೊಂದಿಗಿನ ಹೊಸ ಒಪ್ಪಂದದ ಅಡಿಯಲ್ಲಿ ಅಮೆರಿಕವು ವಿಧಿಸುವ ಸುಂಕವನ್ನು ಶೇ. 25ರಿಂದ ಶೇ. 18ಕ್ಕೆ ಇಳಿಸಲಾಗುವುದು. "ಮೊದಲು ಭಾರತವು ನಮ್ಮನ್ನು ಸುಲಿಗೆ ಮಾಡುತ್ತಿತ್ತು, ಪ್ರಧಾನಿ ಮೋದಿ ಅತ್ಯಂತ ಬುದ್ಧಿವಂತ ಮನುಷ್ಯ. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ನಾವು ಅವರಿಗೆ ಸುಂಕ ಪಾವತಿಸುತ್ತಿಲ್ಲ, ಬದಲಿಗೆ ಅವರು ನಮಗೆ ಸುಂಕ ಪಾವತಿಸುತ್ತಿದ್ದಾರೆ. ಇದು ನ್ಯಾಯಯುತವಾದ ಒಪ್ಪಂದ" ಎಂದು ಟ್ರಂಪ್ ಹೇಳಿದ್ದಾರೆ. ಅಮೆರಿಕದ ಸುಪ್ರೀಂ ಕೋರ್ಟ್ ತೀರ್ಪಿನ ನಂತರವೂ ಭಾರತದೊಂದಿಗಿನ ಎಲ್ಲಾ ವ್ಯವಹಾರಗಳು ವಿಭಿನ್ನ ರೀತಿಯಲ್ಲಿ ಮುಂದುವರಿಯಲಿವೆ ಎಂದು ಅವರು ಭರವಸೆ ನೀಡಿದ್ದಾರೆ.

