ಶೇ. 200 ಸುಂಕದ ಬೆದರಿಕೆ, 11 ಫೈಟರ್ ಜೆಟ್ ಪತನ; ಭಾರತ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದ ಟ್ರಂಪ್‌
x
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಶೇ. 200 ಸುಂಕದ ಬೆದರಿಕೆ, 11 ಫೈಟರ್ ಜೆಟ್ ಪತನ; ಭಾರತ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದ ಟ್ರಂಪ್‌

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತ-ಪಾಕ್ ಸಂಘರ್ಷ ನಿಲ್ಲಿಸಿದ್ದಾಗಿ ಮತ್ತು 11 ಫೈಟರ್ ಜೆಟ್ ಪತನದ ಬಗ್ಗೆ ನೀಡಿದ ವಿವಾದಾತ್ಮಕ ಹೇಳಿಕೆಯ ಸಂಪೂರ್ಣ ವಿವರ ಇಲ್ಲಿದೆ.


Click the Play button to hear this message in audio format

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತ ಮತ್ತು ಪಾಕಿಸ್ತಾನದ ನಡುವಿನ ಹಗೆತನದ ಕುರಿತು ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಚರ್ಚೆ ಹುಟ್ಟುಹಾಕಿದ್ದಾರೆ. ವಾಷಿಂಗ್‌ಟನ್‌ನಲ್ಲಿ ನಡೆದ 'ಗಾಜಾ ಬೋರ್ಡ್ ಆಫ್ ಪೀಸ್'ನ ಉದ್ಘಾಟನಾ ಸಭೆಯಲ್ಲಿ ಮಾತನಾಡಿದ ಅವರು, ತಾವು ಆರ್ಥಿಕ ಸುಂಕದ ಬೆದರಿಕೆ ಹಾಕುವ ಮೂಲಕ ಉಭಯ ದೇಶಗಳ ನಡುವಿನ ದೊಡ್ಡ ಯುದ್ಧವನ್ನೇ ತಡೆದಿದ್ದಾಗಿ ಪ್ರತಿಪಾದಿಸಿದ್ದಾರೆ.

ಟ್ರಂಪ್ ಹೇಳಿದ್ದೇನು?

200% ಟ್ಯಾರಿಫ್ ಎಚ್ಚರಿಕೆ: "ಭಾರತ ಮತ್ತು ಪಾಕಿಸ್ತಾನ ಯುದ್ಧ ಮಾಡಲು ತುದಿಗಾಲಿನಲ್ಲಿ ನಿಂತಿದ್ದವು. ಆಗ ನಾನು ಉಭಯ ದೇಶಗಳಿಗೆ ಫೋನ್ ಮಾಡಿ, ಒಂದೊಮ್ಮೆ ನೀವು ಯುದ್ಧ ಮುಂದುವರಿಸಿದರೆ ಎರಡೂ ದೇಶಗಳ ಮೇಲೆ 200 ಪ್ರತಿಶತದಷ್ಟು ವ್ಯಾಪಾರ ಸುಂಕ ಹೇರುತ್ತೇನೆ ಎಂದು ಎಚ್ಚರಿಸಿದೆ. ಹಣದ ನಷ್ಟದ ಮಾತು ಬಂದಾಗ ಅವರು ಯುದ್ಧದ ನಿರ್ಧಾರದಿಂದ ಹಿಂದೆ ಸರಿದರು" ಎಂದು ಟ್ರಂಪ್ ಹೇಳಿದ್ದಾರೆ.

ಸಂಘರ್ಷದ ತೀವ್ರತೆಯ ಬಗ್ಗೆ ಮಾತನಾಡಿದ ಟ್ರಂಪ್, ಆ ಸಮಯದಲ್ಲಿ ಬರೋಬ್ಬರಿ 11 ಅತ್ಯಂತ ದುಬಾರಿ ಫೈಟರ್ ಜೆಟ್‌ಗಳನ್ನು ಹೊಡೆದುರುಳಿಸಲಾಗಿತ್ತು ಎಂಬ ಹೊಸ ಅಂಶವನ್ನು ಸೇರಿಸಿದ್ದಾರೆ.

2.5 ಕೋಟಿ ಜೀವಗಳ ರಕ್ಷಣೆ: ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್ ಅವರು ತಮ್ಮನ್ನು ಶ್ಲಾಘಿಸಿದ್ದಾರೆ ಎಂದು ಹೇಳಿಕೊಂಡ ಟ್ರಂಪ್, "ಶರೀಫ್ ಅವರು ನಮ್ಮ ಚೀಫ್ ಆಫ್ ಸ್ಟಾಫ್ ಮುಂದೆ, ಅಧ್ಯಕ್ಷ ಟ್ರಂಪ್ ಅವರು ಸಂಘರ್ಷ ತಡೆಯುವ ಮೂಲಕ 2.5 ಕೋಟಿ ಜನರ ಜೀವ ಉಳಿಸಿದ್ದಾರೆ ಎಂದು ಹೇಳಿದ್ದಾರೆ," ಎಂದು ತಿಳಿಸಿದ್ದಾರೆ.

ಆಪರೇಷನ್ ಸಿಂದೂರ್ ಮತ್ತು ಪಹಲ್ಗಾಮ್ ದಾಳಿ

ಕಳೆದ ವರ್ಷ ಏಪ್ರಿಲ್‌ನಲ್ಲಿ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದನಾ ದಾಳಿಯಲ್ಲಿ 26 ನಾಗರಿಕರು ಬಲಿಯಾದ ನಂತರ, ಭಾರತವು ಪಾಕಿಸ್ತಾನದ ಭಯೋತ್ಪಾದನಾ ಮೂಲಸೌಕರ್ಯಗಳ ಮೇಲೆ 'ಆಪರೇಷನ್ ಸಿಂದೂರ್' ನಡೆಸಿತ್ತು. ಈ ವೇಳೆ ಉಭಯ ದೇಶಗಳ ನಡುವೆ ವಾಯುಸೇನೆಗಳ ಕಾಳಗ ನಡೆದು ಉದ್ವಿಗ್ನತೆ ಗರಿಷ್ಠ ಮಟ್ಟ ತಲುಪಿತ್ತು.

ಭಾರತದ ಖಡಕ್ ತಿರುಗೇಟು

ಡೊನಾಲ್ಡ್ ಟ್ರಂಪ್ ಅವರ ಈ ಬಣ್ಣದ ಮಾತುಗಳನ್ನು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು (MEA) ಸಾರಾಸಗಟಾಗಿ ತಳ್ಳಿಹಾಕಿದೆ. "ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷವನ್ನು ಕೊನೆಗಾಣಿಸಲು ಯಾವುದೇ ಮೂರನೇ ವ್ಯಕ್ತಿಯ ಹಸ್ತಕ್ಷೇಪ ಅಥವಾ ಸಂಧಾನ ನಡೆದಿಲ್ಲ. ಈ ನಿರ್ಧಾರವನ್ನು ಉಭಯ ದೇಶಗಳ ಮಿಲಿಟರಿ ಕಾರ್ಯಾಚರಣೆಯ ಮಹಾನಿರ್ದೇಶಕರ (DGMO) ಮಟ್ಟದಲ್ಲಿ ದ್ವಿಪಕ್ಷೀಯವಾಗಿ ತೆಗೆದುಕೊಳ್ಳಲಾಗಿದೆ," ಎಂದು ಭಾರತ ಸ್ಪಷ್ಟಪಡಿಸಿದೆ.

Read More
Next Story