
ಡೊನಾಲ್ಡ್ ಟ್ರಂಪ್ ವಿರುದ್ಧ ಹಲವು ನಗರಗಳಲ್ಲಿ ಪ್ರತಿಭಟನೆ ನಡೆಸಲಾಯಿತು.
ಅಮೆರಿಕದಲ್ಲಿ 'ನೋ ಕಿಂಗ್ಸ್' ಕಿಚ್ಚು; ಟ್ರಂಪ್ ಆಡಳಿತದ ವಿರುದ್ಧ ಬೀದಿಗಿಳಿದ ಜನ
'ನೋ ಕಿಂಗ್ಸ್' (ಯಾರೂ ರಾಜರಲ್ಲ) ಎಂಬ ಹೆಸರಿನಡಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಸುಮಾರು 80 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ಮೂಲಕ ಟ್ರಂಪ್ ಸರ್ಕಾರಕ್ಕೆ ನಾಗರಿಕ ಧಂಗೆಯ ಎಚ್ಚರಿಕೆ ರವಾನಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಠಿಣ ವಲಸೆ ನೀತಿ, ಇರಾನ್ ಮೇಲಿನ ಯುದ್ಧದ ನಿರ್ಧಾರ ಸೇರಿದಂತೆ ಅವರ ಸರ್ವಾಧಿಕಾರಿ ಧೋರಣೆ ವಿರುದ್ಧ ಅಮೆರಿಕದಾದ್ಯಂತ ಜನ ಪ್ರತಿಭಟನೆಗೆ ಇಳಿದಿದ್ದಾರೆ.
'ನೋ ಕಿಂಗ್ಸ್' (ಯಾರೂ ರಾಜರಲ್ಲ) ಎಂಬ ಹೆಸರಿನಡಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಸುಮಾರು 80 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ಮೂಲಕ ಟ್ರಂಪ್ ಸರ್ಕಾರಕ್ಕೆ ನಾಗರಿಕ ಧಂಗೆಯ ಎಚ್ಚರಿಕೆ ರವಾನಿಸಿದ್ದಾರೆ. ಅಮೆರಿಕದ 50 ರಾಜ್ಯಗಳ 3,300ಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಕಾಲಕ್ಕೆ ಪ್ರತಿಭಟನೆಗಳು ನಡೆದಿರುವುದು ಟ್ರಂಪ್ ಆಡಳಿತ ವಿರೋಧಿ ಅಲೆಗೆ ಸಾಕ್ಷಿಯಾಗಿದೆ. ನ್ಯೂಯಾರ್ಕ್, ಲಾಸ್ ಏಂಜಲೀಸ್, ಷಿಕಾಗೋ ಮತ್ತು ವಾಷಿಂಗ್ಟನ್ ಡಿಸಿ ನಗರಗಳಲ್ಲಿ ಪ್ರತಿಭಟನಾಕಾರರ ಸಂಖ್ಯೆ ಬೃಹತ್ ಪ್ರಮಾಣದಲ್ಲಿತ್ತು.
ವಲಸೆ ಮತ್ತು ಯುದ್ಧ ನೀತಿಗೆ ವಿರೋಧ
ಡೊನಾಲ್ಡ್ ಟ್ರಂಪ್ ಅವರ ಕಠಿಣ ವಲಸೆ ನೀತಿ, ಸುಂಕ ಏರಿಕೆಯ ಬೆದರಿಕೆ ಹಾಗೂ ಇರಾನ್ ವಿರುದ್ಧದ ಮಿಲಿಟರಿ ಕ್ರಮಗಳನ್ನು ಖಂಡಿಸಿ ನಾಗರಿಕರು ಆಕ್ರೋಶ ಹೊರಹಾಕಿದ್ದಾರೆ. "ನಮಗೆ ರಾಜ ಬೇಡ, ಸಂವಿಧಾನ ಬೇಕು" ಎಂಬ ಘೋಷಣೆಗಳೊಂದಿಗೆ ಪ್ರತಿಭಟನಾಕಾರರು ಶ್ವೇತಭವನದತ್ತ ಮೆರವಣಿಗೆ ನಡೆಸಿದರು. ಪ್ರಖ್ಯಾತ ನಟ ರಾಬರ್ಟ್ ಡಿ ನಿರೋ ಸೇರಿದಂತೆ ಹಲವು ಗಣ್ಯರು ಈ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.
ಕಳೆದ ಜನವರಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಫೆಡರಲ್ ಏಜೆಂಟರ ಗುಂಡಿಗೆ ಬಲಿಯಾಗಿದ್ದ ರೆನೀ ಗುಡ್ ಮತ್ತು ಅಲೆಕ್ಸ್ ಪ್ರೆಟ್ಟಿ ಅವರ ಸ್ಮರಣಾರ್ಥ ಮಿನ್ನೇಸೋಟದಲ್ಲಿ ಬೃಹತ್ ರ‍್ಯಾಲಿ ನಡೆಸಲಾಯಿತು. ಗಾಯಕ ಬ್ರೂಸ್ ಸ್ಪ್ರಿಂಗ್‌ಸ್ಟೀನ್ ಅವರು ಪ್ರತಿಭಟನಾ ಗೀತೆಯನ್ನು ಹಾಡುವ ಮೂಲಕ ಚಳವಳಿಗೆ ಧ್ವನಿಯಾದರು.
ಪ್ರತಿಭಟನಾಕಾರರನ್ನು ಕೆಣಕಿದ ಟ್ರಂಪ್ ವ್ಯಂಗ್ಯ
ನಾಗರಿಕರ ಬೃಹತ್ ಪ್ರತಿಭಟನೆಗಳಿಗೆ ಕಿವಿಗೊಡಬೇಕಾಗಿದ್ದ ಡೊನಾಲ್ಡ್ ಟ್ರಂಪ್ ಅವರು ಕೃತಕ ಬುದ್ಧಿಮತ್ತೆ ಬಳಸಿ ತಯಾರಿಸಿದ ವ್ಯಂಗ್ಯ ವಿಡಿಯೋ ಹಂಚಿಕೊಳ್ಳುವ ಮೂಲಕ ಪ್ರತಿಭಟನಾಕಾರರನ್ನು ಕೆಣಕಿದ್ದಾರೆ. ವಿಡಿಯೋದಲ್ಲಿ ತಮ್ಮನ್ನು 'ರಾಜ' ಎಂದು ಬಿಂಬಿಸಿಕೊಂಡಿರುವ ಅವರು, ಪ್ರತಿಭಟನಾಕಾರರ ಮೇಲೆ ಫೈಟರ್ ಜೆಟ್ ಮೂಲಕ ಮಲ ಸುರಿಸುವಂತೆ ಚಿತ್ರಿಸಿರುವುದು ತೀವ್ರ ಟೀಕೆಗೆ ಗುರಿಯಾಗಿದೆ.
ಜಾಗತಿಕ ಮಟ್ಟದಲ್ಲಿ ಪ್ರತಿಧ್ವನಿಸಿದ ಚಳವಳಿ
ಅಮೆರಿಕ ಮಾತ್ರವಲ್ಲದೆ ಯುರೋಪಿನ ಪ್ರಮುಖ ನಗರಗಳಾದ ರೋಮ್, ಮ್ಯಾಡ್ರಿಡ್ ಮತ್ತು ಆಮ್‌ಸ್ಟರ್‌ಡ್ಯಾಂನಲ್ಲೂ ಟ್ರಂಪ್ ನೀತಿಗಳ ವಿರುದ್ಧ ಸಾವಿರಾರು ಜನರು ಬೀದಿಗಿಳಿದು ಅಮೆರಿಕನ್ ಪ್ರತಿಭಟನಾಕಾರರಿಗೆ ಬೆಂಬಲ ಸೂಚಿಸಿದ್ದಾರೆ. "ಯಾವುದೇ ದೇಶವು ಜನರ ಒಪ್ಪಿಗೆಯಿಲ್ಲದೆ ಆಳ್ವಿಕೆ ನಡೆಸಲು ಸಾಧ್ಯವಿಲ್ಲ. ನಾವು ಇಲ್ಲಿರುವುದು ನಮ್ಮ ಸಂವಿಧಾನದ ರಕ್ಷಣೆಗಾಗಿ." ಎಂದು ನಿವೃತ್ತ ಯೋಧ ಹಾಗೂ ಪ್ರತಿಭಟನಾಕಾರ ಮಾರ್ಕ್ ಮೆಕ್‌ಕೌಘಿ ಹೇಳಿದ್ದಾರೆ.
ಟ್ರಂಪ್ ಅವರ ಎರಡನೇ ಅವಧಿಯ ಆಡಳಿತವು ದಿನದಿಂದ ದಿನಕ್ಕೆ ಸಂಘರ್ಷಮಯವಾಗುತ್ತಿದೆ. ಇತ್ತೀಚೆಗೆ ಇರಾನ್ ಮೇಲಿನ ಯುದ್ಧ ಖಂಡಿಸಿ ಉನ್ನತ ಅಧಿಕಾರಿಗಳು ರಾಜೀನಾಮೆ ನೀಡಿದ್ದರು. ಮತ್ತೊಂದೆಡೆ ನ್ಯಾಟೊ ರಾಷ್ಟ್ರಗಳು ಕೂಡ ಅಮೆರಿಕದೊಂದಿಗೆ ಯುದ್ಧದಲ್ಲಿ ಕೈ ಜೋಡಿಸಲು ನಿರಾಕರಿಸಿರುವುದು ಟ್ರಂಪ್ ಅವರ ಆಡಳಿತ ವಿರೋಧಿ ಅಲೆಗೆ ಸಾಕ್ಷಿಯಾಗಿದೆ.

