KS Dakshina Murthy

ಸಮರನೌಕೆ ಕಳಿಸಲು ನಿರಾಕರಣೆ: ಟ್ರಂಪ್‌ಗೆ ನ್ಯಾಟೊ ಮಿತ್ರ ರಾಷ್ಟ್ರಗಳ ಡಿಚ್ಚಿ- ಇರಾನ್‌ಗೆ ನೈತಿಕ ವಿಜಯ


ಸಮರನೌಕೆ ಕಳಿಸಲು ನಿರಾಕರಣೆ: ಟ್ರಂಪ್‌ಗೆ ನ್ಯಾಟೊ ಮಿತ್ರ ರಾಷ್ಟ್ರಗಳ ಡಿಚ್ಚಿ- ಇರಾನ್‌ಗೆ ನೈತಿಕ ವಿಜಯ
x
ಲಂಡನ್‌ನ ಬಸ್ ನಿಲ್ದಾಣದಲ್ಲಿ ಕಳೆದ ಕಂಡುಬಂದ ಪೋಸ್ಟರ್. ʼಎವ್ರಿ ಒನ್ ಹೇಟ್ಸ್ ಎಲಾನ್ʼ ಎಂಬ ಹೆಸರಿನ ಗುಂಪು ಪ್ರತಿಭಟನಾರ್ಥವಾಗಿ ಅಳವಡಿಸಿದ ಈ ಪೋಸ್ಟರ್ನ್‌ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರಗಳ ಬಗ್ಗೆ ಕುಹಕವಾಡಲಾಗಿದೆ.

ಹೊರ್ಮುಜ್ ಜಲಸಂಧಿಯನ್ನು ರಕ್ಷಿಸಬೇಕೆಂಬ ಟ್ರಂಪ್ ಬೇಡಿಕೆಯನ್ನು ನ್ಯಾಟೊ ಮಿತ್ರ ರಾಷ್ಟ್ರಗಳು ಸಾರಾಸಗಟಾಗಿ ತಿರಸ್ಕರಿಸಿವೆ. ಆ ಮೂಲಕ ಇರಾನ್ ವಿರುದ್ಧ ನಡೆಸುತ್ತಿರುವ ಯುದ್ಧದ ಮೇಲೆ ನಮಗೆ ನಂಬಿಕೆಯಿಲ್ಲ ಎಂದು ಸಾರಿದಂತಾಗಿದೆ.

ಇರಾನ್ ತಡೆದು ನಿಲ್ಲಿಸಿರುವ ಅಂತಾರಾಷ್ಟ್ರೀಯ ಸರಕು ಸಾಗಣೆಯನ್ನು ರಕ್ಷಿಸಲು ಯುದ್ಧ ನೌಕೆಗಳನ್ನು ಕಳುಹಿಸಿಕೊಡಿ ಎಂದು ಮೊರೆಯಿಟ್ಟಿದ್ದಾರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್. ಈ ಆದೇಶವನ್ನು ಸಾರಾಸಗಟು ತಿರಸ್ಕರಿಸಿರುವ ಐರೋಪ್ಯ ಮಿತ್ರರಾಷ್ಟ್ರಗಳು ತಮ್ಮಲ್ಲಿ ಉಳಿದುಕೊಂಡಿದ್ದ ಅಳಿದುಳಿದ ಘನತೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿವೆ.

ಟ್ರಂಪ್ ಅವರ ಈ ಬೇಡಿಕೆಯನ್ನು ನೇರವಾಗಿ ತಿರಸ್ಕರಿಸುವ ಮೂಲಕ ಅಮೆರಿಕದ ನ್ಯಾಟೊ ಮಿತ್ರರಾಷ್ಟ್ರಗಳು ಇಸ್ರೇಲ್ ಜೊತೆಗೂಡಿ ಇರಾನ್ ವಿರುದ್ಧ ಅಮೆರಿಕ ನಡೆಸುತ್ತಿರುವ ಅಪ್ರಚೋದನಕಾರಿ ಹಾಗೂ ಅಕ್ರಮ ಸಮರದ ವಿರುದ್ಧ ಅವಿಶ್ವಾಸ ವ್ಯಕ್ತಪಡಿಸಿದೆ. ಈ ಪ್ರಕ್ರಿಯೆಯಲ್ಲಿ ಇರಾನ್ ನೈತಿಕವಾಗಿ ಜಯ ಗಳಿಸಿದಂತೆ ಕಂಡರೆ ಅಮೆರಿಕವೊಂದು ʼದಂಗೆಕೋರʼ ರಾಷ್ಟ್ರದಂತೆ ಸ್ಪಷ್ಟವಾಗಿ ಗೋಚರಿಸುತ್ತಿದೆ.

ಗುರಿಯಿಲ್ಲ, ಕಾರ್ಯತಂತ್ರವಿಲ್ಲದ ಸಮರ

ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಕ್ಷಿಪಣಿ ದಾಳಿ ಶುರುವಿಟ್ಟುಕೊಂಡು ಎರಡು ವಾರಗಳು ಕಳೆದುಹೋಗಿವೆ. ಆದರೆ ಈ ದಾಳಿಯ ಹಿಂದೆ ಒಂದು ಸ್ಪಷ್ಟ ಯೋಜನೆಯಾಗಲಿ, ಅದನ್ನು ಕೊನೆಗೊಳಿಸುವ ಪ್ಲಾನ್ ಆಗಲಿ,. ಅಂತಿಮ ಗುರಿಯಾಗಲಿ ಅಥವಾ ಕಾಂಕ್ರೀಟ್ ಕಾರ್ಯತಂತ್ರವಾಗಲಿ ಇಲ್ಲವೇ ಇಲ್ಲ ಎಂಬುದು ಇಡೀ ಜಗತ್ತಿಗೆ ದಿನದಿಂದ ದಿನಕ್ಕೆ ಸ್ಪಷ್ಟವಾಗುತ್ತ ಸಾಗಿದೆ.

ಹೇಗಾದರೂ ಮಾಡಿ ಇರಾನ್ ಮೇಲೆ ದಾಳಿ ಮಾಡಬೇಕು ಎಂಬುದು ಇಸ್ರೇಲ್ನ ಸುದೀರ್ಘ ಕನಸಾಗಿತ್ತು. ಇನ್ನು ಇರಾನ್ನಲ್ಲಿದ್ದ ಆಡಳಿತವನ್ನು ಬದಲಿಸಿ ಮತ್ತು ಇಸ್ಲಾಮಿಕ್ ವ್ಯವಸ್ಥೆಯನ್ನು ಕಿತ್ತೆಸೆದು ಅಮೆರಿಕ-ಇಸ್ರೇಲಿ ಸ್ನೇಹಿ ಸರ್ಕಾರವನ್ನು ಸ್ಥಾಪಿಸುವುದು ಟ್ರಂಪ್ ಅವರ ಕಲ್ಪನೆಯಾಗಿತ್ತು.

ಅಂತಾರಾಷ್ಟ್ರೀಯ ವ್ಯಾಪಾರಕ್ಕಾಗಿ ಇರಾನಿನ ಹೊರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸುವುದು ಈಗ ಅತ್ಯಂತ ನಿರ್ಣಾಯಕವಾಗಿದೆ. ಇಂತಹ ಕಾಲಘಟ್ಟದಲ್ಲಿ ತಮ್ಮ ಯುದ್ಧ ನೌಕೆಗಳನ್ನು ಕಳುಹಿಸುವಂತೆ ಟ್ರಂಪ್ ಮಾಡಿಕೊಂಡ ಮನವಿಗೆ ಜರ್ಮನಿ, ಬ್ರಿಟನ್ ಮತ್ತು ಫ್ರಾನ್ಸ್ನಂತಹ ಪ್ರಬಲ ಐರೋಪ್ಯ ರಾಷ್ಟ್ರಗಳು ಮನ್ನಣೆ ನೀಡದೇ ಇರುವುದು ಅತ್ಯಂತ ಗಮನಾರ್ಹ ಸಂಗತಿಯಾಗಿದೆ. ಅಮೆರಿಕದ ಮಿತ್ರರಾಷ್ಟ್ರಗಳ ನಡುವೆ ಕಂಡುಬಂದಿರುವ ಈ ಪರಿಯ ಒಮ್ಮತ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ಯಾಕೆಂದರೆ ಇತ್ತೀಚಿನ ವರ್ಷಗಳಲ್ಲಿ ಈ ರಾಷ್ಟ್ರಗಳು ಟ್ರಂಪ್ ಅವರ ಮುಂದೆ ಹೇಗೆ ಮಣಿಯುತ್ತಿದ್ದವು ಎಂಬುದರ ಕಡೆಗೆ ಯೋಚಿಸಿ ನೋಡಿದರೆ ನಿಜಕ್ಕೂ ಇದು ಅನಿರೀಕ್ಷಿತ ತಿರುವು ಅನಿಸುತ್ತದೆ.

ಬದಲಾಗದ ಐರೋಪ್ಯರ ನಿಲುವು

ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ಐರೋಪ್ಯ ಮಿತ್ರ ರಾಷ್ಟ್ರಗಳು ಇರಾನ್ನ್ನು ನೋಡುವ ದೃಷ್ಟಿಕೋನದಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂಬುದು. ಇನ್ನು ಇರಾನ್ನ್ನು ಇಂದಿಗೂ ಸತತವಾಗಿ ಪರಮಾಣು ಮಿಲಿಟರಿ ಶಕ್ತಿಯನ್ನು ದಕ್ಕಿಸಿಕೊಳ್ಳಲು ಪ್ರಯತ್ನಿಸುತ್ತಿರುವ ರಾಷ್ಟ್ರವಾಗಿಯೇ ಅವು ನೋಡುತ್ತಿವೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇರಾನ್ ಮೇಲಿನ ದಾಳಿಯಲ್ಲಿ ಈ ನ್ಯಾಟೊ ರಾಷ್ಟ್ರಗಳು ಅಮೆರಿಕ ಮತ್ತು ಇಸ್ರೇಲ್ಗೆ ಬೆಂಬಲ ನೀಡುವುದನ್ನು ನಿಲ್ಲಿಸಿಲ್ಲ. ಇರಾನ್ ನಡೆಸುವ ಪರಮಾಣು ಕಾರ್ಯಕ್ರಮವನ್ನು ವಿರೋಧಿಸುವುದರ ಜೊತೆಗೆ ಇರಾನ್ನಲ್ಲಿರುವ ಸರ್ಕಾರವನ್ನು ಅವು ʼಧಮನಕಾರಿ ಆಡಳಿತʼ ಎಂದು ಕರೆಯಲೇನು ಹಿಂಜರಿಯುವುದಿಲ್ಲ.

ಆದರೆ ಇವೆಲ್ಲವೂ ʼದೂರದಲ್ಲಿ ನಿಂತು ಕೊಡುವ ಬೆಂಬಲʼ ಎನ್ನುವುದು ಈಗ ಸ್ಪಷ್ಟವಾಗುತ್ತಿದೆ. ಟ್ರಂಪ್ ಮತ್ತು ಬೆಂಜಮಿನ್ ನೆತನ್ಯಾಹು ಇಬ್ಬರೂ ಸೇರಿ ಬಾಂಬ್ ದಾಳಿ ಶುರುಮಾಡಿಕೊಂಡಾಗ ಕೊಟ್ಟ ಬೆಂಬಲವು ದೂರದಲ್ಲಿ ನಿಂತು ಕೊಡುವ ಪ್ರೋತ್ಸಾಹಕ್ಕೆ ಸೀಮಿತವಾಗಿತ್ತು. ಈಗ ಟ್ರಂಪ್ ಹೊರ್ಮುಜ್ ಜಲಸಂಧಿಯ ಯುದ್ಧಕ್ಕೆ ನೇರವಾಗಿ ಬನ್ನಿ ಎಂದು ಕರೆಯುತ್ತಿದ್ದಾರೆ, ಆದರೆ ಮಿತ್ರರು ಹಿಂಜರಿಯುತ್ತಿದ್ದಾರೆ.

ದಿಟ್ಟ ನಿಲುವಿನ ಸ್ಪೇನ್

ಇಂತಹ ಸ್ಥಿತಿಯಲ್ಲಿ ಸ್ಪೇನ್ ತಳೆದ ನಿಲುವನ್ನು ಪ್ರತ್ಯೇಕವಾಗಿ ಉಲ್ಲೇಖಿಸಬೇಕಾಗಿದೆ. ಮೊದಲಿನಿಂದಲೂ ಟ್ರಂಪ್ ಅವರ ಅನೇಕ ತೀರ್ಮಾನಗಳನ್ನು (ಸುಂಕದ ಹೇರಿಕೆ ಮತ್ತು ಗ್ರೀನ್ಲ್ಯಾಂಡ್ ವಿವಾದ) ದಿಟ್ಟವಾಗಿ ವಿರೋಧಿಸುತ್ತ ಬಂದಿದ್ದು ಸ್ಪೇನ್. ಅಷ್ಟು ಮಾತ್ರವಲ್ಲದೆ ಇರಾನ್ ಮೇಲಿನ ದಾಳಿಗಾಗಿ ತನ್ನಲ್ಲಿರುವ ಅಮೆರಿಕದ ಸೇನಾ ನೆಲೆಗಳಾದ ರೋಟಾ ಮತ್ತು ಮೊರಾನ್ನ್ನು ಬಳಸಿಕೊಳ್ಳಲು ಅದು ಸ್ಷಷ್ಟವಾಗಿ ನಿರಾಕರಿಸಿರುವುದು ಗಮನಿಸಬೇಕಾದ ಸಂಗತಿ.

ನ್ಯಾಟೊ ಮಿತ್ರ ರಾಷ್ಟ್ರಗಳು ತೋರಿಸಿರುವ ಈ ತಿರಸ್ಕಾರವು ಟ್ರಂಪ್ ಅವರ ತರ್ಕಹೀನವಾದ ಮತ್ತು ಅನಿಶ್ಚಿತ ಬೇಡಿಕೆಗಳಿಗೆ ಜಗತ್ತು ಹೇಗೆ ಸ್ಪಂದಿಸುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಮಿತ್ರ ರಾಷ್ಟ್ರಗಳು ಸಹಕರಿಸಬೇಕು ಎಂದು ಅವರು ಇತ್ತೀಚೆಗೆ ನೀಡುವ ಆದೇಶವು (ಹೇಳಿಕೇಳಿ ಟ್ರಂಪ್ ಯಾರನ್ನೂ ʼವಿನಂತಿಸುವʼ ಸ್ವಭಾವದವರಲ್ಲ ಎಂಬುದು ಎಲ್ಲರಿಗೂ ತಿಳಿದ ಸಂಗತಿ) ಇರಾನ್ ವಿರುದ್ಧದ ಕ್ಷಿಪಣಿ ದಾಳಿಗಳು ಯೋಜಿಸಿದಂತೆ ನಡೆಯುತ್ತಿಲ್ಲ ಎಂಬುದರ ಸ್ಪಷ್ಟ ಸೂಚನೆಯಾಗಿದೆ. ಟ್ರಂಪ್ ಅವರು ಇಷ್ಟೊಂದು ಹತಾಶರಾಗಿದ್ದಾರೆಯೇ ಎಂಬುದು ಸದ್ಯದಲ್ಲಿಯೇ ತಿಳಿಯಲಿದೆ. ಇರಾನ್ ವಿಚಾರದಲ್ಲಿ ಟ್ರಂಪ್ ಅವರ ವಿವೇಚನಾರಹಿತ ನಿರ್ಧಾರದ ವ್ಯತಿರಿಕ್ತ ಪರಿಣಾಮಗಳನ್ನು ಅನುಭವಿಸುತ್ತಲೇ ಮಧ್ಯಪ್ರಾಚ್ಯ ಅಥವಾ ಪಶ್ಚಿಮ ಏಷ್ಯಾದಲ್ಲಿನ ಈ ಅನಿಶ್ಚಿತ ಸ್ಥಿತಿಯನ್ನು ಜಗತ್ತು ಅರ್ಥಮಾಡಿಕೊಳ್ಳಲಾಗದೇ ಗೊಂದಲಕ್ಕೆ ಸಿಲುಕಿದೆ.

ತನ್ನ ಅಹಮ್ಮಿನ ಕೋಟೆಯಲ್ಲಿ…

ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ, ಅದರಲ್ಲೂ ವಿಶೇಷವಾಗಿ ತಮ್ಮ ಎರಡನೇ ಅವಧಿಯಲ್ಲಿ, ಪಾಶ್ಚಿಮಾತ್ಯ ಮಿತ್ರ ರಾಷ್ಟ್ರಗಳನ್ನು ಗೌರವದಿಂದ ನಡೆಸಿಕೊಳ್ಳುವಲ್ಲಿ ಎಡವಿದ ಟ್ರಂಪ್ ಅವರಿಗೆ ಈಗ ಅವರನ್ನೇ ಸಹಾಯಕ್ಕಾಗಿ ಮೊರೆ ಹೋಗುವುದು ನಿಶ್ಚಿತವಾಗಿಯೂ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ತಮ್ಮ ಪೂರ್ವಜ ಜೋ ಬಿಡೆನ್ ಅವರ ಕಾಲದಲ್ಲಿ ಶುರುವಾದ ಉಕ್ರೇನ್-ರಷ್ಯಾ ಯುದ್ಧವನ್ನು ಕೊನೆಗೊಳಿಸುತ್ತೇನೆ ಹೊರಟಾಗ ಅವರು ತಮ್ಮ ಐರೋಪ್ಯ ಪಾಲುದಾರರನ್ನು ಕಂಡಿದ್ದು ಅತ್ಯಂತ ತಿರಸ್ಕಾರದ ನೋಟದಿಂದ ಎಂಬುದನ್ನು ಅವರಾದರೂ ಹೇಗೆ ಮರೆತಾರು.

ರಷ್ಯಾ ಮುಂದಿಟ್ಟ ಷರತ್ತುಗಳಿಗೆ ಒಪ್ಪಿಕೊಂಡು ಕದನ ವಿರಾಮಕ್ಕೆ ಸಹಿ ಹಾಕುವಂತೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನೆಸ್ಕಿ ಅವರ ಮೇಲೆ ಟ್ರಂಪ್ ಸಾರ್ವಜನಿಕವಾಗಿಯೇ ಒತ್ತಡ ಹೇರಲು ಪ್ರಯತ್ನಿಸಿದ್ದನ್ನು ಕಂಡು ಐರೋಪ್ಯ ರಾಷ್ಟ್ರಗಳು ಬೆಚ್ಚಿಬಿದ್ದಿದ್ದವು. ಆದರೆ ಟ್ರಂಪ್ ಮಾತ್ರ ಅವ್ಯಾವುದಕ್ಕೂ ಕ್ಯಾರೇ ಅನ್ನಲಿಲ್ಲ. ಇಂದಿಗೂ ರಷ್ಯಾ ಮತ್ತು ಉಕ್ರೇನ್ ನಡುವೆ ಶಾಂತಿ ಸ್ಥಾಪಿಸುವ ಅವರ ಪ್ರಯತ್ನಗಳಲ್ಲಿ ಐರೋಪ್ಯ ಮಿತ್ರ ರಾಷ್ಟ್ರಗಳ ಅಭಿಪ್ರಾಯಗಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲದಂತಾಗಿದೆ.

ನ್ಯಾಟೊ ಸಂಸ್ಥೆಯ ವಿರುದ್ಧ ಟ್ರಂಪ್ ಬುಸುಗುಡುತ್ತಿದ್ದುದು ಅವರ ಮೊದಲ ಅವಧಿಯಲ್ಲಿಯೇ ಸ್ಪಷ್ಟವಾಗಿ ಕಾಣುತ್ತಿತ್ತು. ಆ ಸಂಸ್ಥೆಯನ್ನು ವಿಸರ್ಜಿಸುವ ಸಮಯ ಸನ್ನಿಹಿತವಾಗಿದೆ ಎಂದು ಅವರು ಅಂದೇ ಹೇಳಿದ್ದರು. ಅಂದಿನಿಂದಲೂ ಟ್ರಂಪ್ ನ್ಯಾಟೊ ಮೇಲೆ ಒತ್ತಡ ಹೇರುತ್ತಲೇ ಬಂದಿದ್ದಾರೆ. ಐರೋಪ್ಯ ರಾಷ್ಟ್ರಗಳು ತಮ್ಮ ಆರ್ಥಿಕ ಕೊಡುಗೆಯನ್ನು ಹೆಚ್ಚಿಸಬೇಕು ಮತ್ತು ಅವುಗಳನ್ನು ರಕ್ಷಿಸುವ ಹೊರೆ ಅಮೆರಿಕದ ಮೇಲೆ ಇರಬಾರದು ಎಂಬುದು ಅವರ ಬೇಡಿಕೆಯಾಗಿತ್ತು.

ಈ ನ್ಯಾಟೊ ರಾಷ್ಟ್ರಗಳು ಟ್ರಂಪ್ ಅವರು ಮಾಡುತ್ತಿದ್ದ ಎಲ್ಲ ಅವಮಾನಗಳನ್ನೂ ಸಹಿಸಿಕೊಂಡು ಬಂದವು. ಎಲ್ಲಕ್ಕಿಂತ ದಯನೀಯ ಸಂಗತಿ ಎಂದರೆ ಟ್ರಂಪ್ ಹೇಳುತ್ತಿರುವುದರಲ್ಲಿ ಏನಾದರೂ ಅರ್ಥವಿರಬಹುದೇನೋ ಎಂದು ನಂಬಲೂ ಶುರುಮಾಡಿಕೊಂಡವು!

ಮುರಿದುಬಿದ್ದ ಒಪ್ಪಂದದ ಪರಾಕಾಷ್ಠೆ

ಇರಾನ್ ವಿಚಾರದಲ್ಲಿಯೂ ನ್ಯಾಟೊ ಮಿತ್ರ ರಾಷ್ಟ್ರಗಳ ಬಗ್ಗೆ ಟ್ರಂಪ್ ಅವರಿಗೆ ಅಷ್ಟೇನೂ ಗೌರವ ಇರಲಿಲ್ಲ ಎಂಬ ಸಂಗತಿಯು ಅವರ ಮೊದಲ ಅವಧಿಯಲ್ಲಿಯೇ ಸ್ಪಷ್ಟವಾಗಿ ಕಾಣುತ್ತಿತ್ತು. 2018ರಲ್ಲಿ ಬರಾಕ್ ಒಬಾಮಾ ಅವರು ಐರೋಪ್ಯ ರಾಷ್ಟ್ರಗಳೊಂದಿಗೆ ಸೇರಿ ಮಾಡಿಕೊಂಡಿದ್ದ ಇರಾನ್ ಪರಮಾಣು ಒಪ್ಪಂದದಿಂದ ಹಠಾತ್ ಹೊರನಡೆದುಬಿಟ್ಟರು. ಈ ಒಪ್ಪಂದವನ್ನು ಜನಪ್ರಿಯವಾಗಿ P5+1 ಒಪ್ಪಂದ (ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಐದು ಕಾಯಂ ಸದಸ್ಯ ರಾಷ್ಟ್ರಗಳು, ಜರ್ಮನಿ ಮತ್ತು ಐರೋಪ್ಯ ಒಕ್ಕೂಟ) ಎಂದು ಕರೆಯಲಾಗುತ್ತಿತ್ತು. ಈಗ ಏನು ಇರಾನ್ ಮೇಲೆ ಕ್ಷಿಪಣಿ ದಾಳಿಗಳು ನಡೆಯುತ್ತಿವೆಯೋ ಅದು ವಾಸ್ತವವಾಗಿ ಅಂದು ಮುರಿದುಬಿದ್ದ ಒಪ್ಪಂದದ ಪರಾಕಾಷ್ಠೆಯಾಗಿದೆ.

ಒಂದಾನೊಂದು ಕಾಲದಲ್ಲಿ ಜಗತ್ತನ್ನು ಆಳಿದ್ದ ಬ್ರಿಟನ್, ಜರ್ಮನಿ ಮತ್ತು ಫ್ರಾನ್ಸ್ನಂತಹ ದೊಡ್ಡ ಐರೋಪ್ಯ ಶಕ್ತಿಗಳು 2015ರ ಒಪ್ಪಂದದ ಪರವಾಗಿ ಗಟ್ಟಿಯಾಗಿ ನಿಲ್ಲುತ್ತವೆ ಎಂಬುದು ಇರಾನ್ ನಿರೀಕ್ಷೆಯಾಗಿತ್ತು. ಬದಲಾಗಿ, ಆರಂಭಿಕ ಹಂತದಲ್ಲಿ ಅಸಮಾಧಾನ ವ್ಯಕ್ತಪಡಿಸಿದ ನಂತರ, ಇವೆಲ್ಲವೂ ಟ್ರಂಪ್ ಅವರ ತಾಳಕ್ಕೆ ತಕ್ಕಂತೆ ಕುಣಿಯಲು ಆರಂಭಿಸಿದವು ಮತ್ತು ಅವರ ವಿವಾದಾತ್ಮಕ ನಿರ್ಧಾರಗಳನ್ನು ಬೆಂಬಲಿಸಿದವು. ಅಷ್ಟೇ ಅಲ್ಲದೆ, ಅವು ಪರೋಕ್ಷವಾಗಿ ಇಸ್ರೇಲ್ ಮತ್ತು ಅಮೆರಿಕದ ಬೆಂಬಲಕ್ಕೆ ನಿಂತವು ಮತ್ತು ಇರಾನ್ ತನ್ನ ಪರಮಾಣು ಮಹತ್ವಾಕಾಂಕ್ಷೆಯನ್ನು ಬಿಡುವಂತೆ ಒತ್ತಡ ಹೇರುವ ಪ್ರಯತ್ನದಲ್ಲಿ ಕೈಜೋಡಿಸಿದವು.

ಟ್ರಂಪ್ ಮೊದಲ ಅವಧಿಯ ಬಳಿಕ 2020 ರಿಂದ 2024ರ ವರೆಗೆ ಅಧಿಕಾರದಲ್ಲಿದ್ದ ಜೋ ಬಿಡೆನ್, ಇರಾನ್ ಒಪ್ಪಂದವನ್ನು ಮತ್ತೆ ಹಳಿಗೆ ತರುವುದಾಗಿ ಹೇಳಿಕೊಂಡಿದ್ದರು. ಆದರೆ ಅದಕ್ಕೆ ಮತ್ತೆ ಜೀವ ನೀಡಲು ಅವರಿಗೆ ಸಾಧ್ಯವಾಗಲೇ ಇಲ್ಲ. ಇದು 2025ರಲ್ಲಿ ಮತ್ತೆ ಅಧಿಕಾರದ ಸೂತ್ರ ಹಿಡಿದ ಟ್ರಂಪ್ಗೆ ಅನುಕೂಲಕರವಾಗಿ ಪರಿಣಮಿಸಿತು.

ಲಕ್ಷ್ಮಣ ರೇಖೆ ದಾಟಿದ ನಡೆಗಳು

ಕಳೆದ ವರ್ಷದ ಜೂನ್ನಲ್ಲಿ ಇಸ್ರೇಲ್ ಜೊತೆ ಸೇರಿಕೊಂಡು ಹನ್ನೆರಡು ದಿನಗಳ ಯುದ್ಧ ಕೈಗೊಂಡ ಟ್ರಂಪ್, ಇರಾನ್ನ ಪರಮಾಣು ಸ್ಥಾವರಗಳ ಮೇಲೆ ದಾಳಿ ಮಾಡಿ ಇರಾನಿನ ಸಾಮರ್ಥ್ಯವನ್ನು ನಾಶಮಾಡಿದ್ದೇನೆ ಎಂದು ಹೇಳಿಕೊಂಡಿದ್ದರು. ಆದರೆ ಟ್ರಂಪ್ ಅವರ ಈ ಹೇಳಿಕೆಗಳು ಅರ್ಧ ಸತ್ಯ ಎಂಬುದು ಬಹುಬೇಗ ಸಾಬೀತಾಗಿ ಹೋಯಿತು. ಈಗ ನಡೆಯುತ್ತಿರುವ ಸಂಘರ್ಷದಲ್ಲಿ ಇರಾನ್ ವಿಶ್ವದ ಅಗ್ರಶಕ್ತಿ ಅಮೆರಿಕ ಮತ್ತು ಬಹಳ ದೊಡ್ಡ ಮಿಲಿಟರಿ ಬಲವನ್ನು ಹೊಂದಿರುವ ಇಸ್ರೇಲ್ಗೆ ಸಮಬಲವಾದ ಪೈಪೋಟಿ ನೀಡುತ್ತಿರುವುದು ಗಮನಾರ್ಹ.

ತಮ್ಮ ವಿಶಿಷ್ಟವಾದ 'ಬುಲಿಸಂ' (ದಬ್ಬಾಳಿಕೆಯ) ಗುಣವನ್ನು ಬಳಸುತ್ತಿರುವ ಅಮೆರಿಕದ ಈ ವಿಲಕ್ಷಣ ಅಧ್ಯಕ್ಷರು, ತಮ್ಮ ಬೇಡಿಕೆಯನ್ನು ನಿರಾಕರಿಸಿದರೆ ಪರಿಸ್ಥಿತಿ “ಬಹಳ ಕೆಟ್ಟದಾಗಿರುತ್ತದೆ” ಎಂದು ಯುರೋಪ್ಗೆ ಎಚ್ಚರಿಕೆ ನೀಡಿದ್ದಾರೆ. ಆದರೆ ಅವರ ಈ ಎಚ್ಚರಿಕೆಯನ್ನು ನಿರ್ಲಕ್ಷಿಸಿರುವುದು, ಇಲ್ಲಿಯವರೆಗೆ ಟ್ರಂಪ್ ಎದುರು ಮಣಿಯುತ್ತಿದ್ದ ನ್ಯಾಟೊ ಮಿತ್ರರಾಷ್ಟ್ರಗಳ ಪಾಲಿಗೆ ಅವರು 'ಲಕ್ಷ್ಮಣ ರೇಖೆ' ದಾಟಿದ್ದಾರೆ ಎಂಬುದಕ್ಕೆ ಸ್ಪಷ್ಟ ಪುರಾವೆಯಾಗಿದೆ.

ಈ ಹಿಂದೆ ಗ್ರೀನ್ಲ್ಯಾಂಡ್ನ್ನು ಸ್ವಾಧೀನಪಡಿಸಿಕೊಳ್ಳುತ್ತೇನೆ ಎಂದು ಟ್ರಂಪ್ ಬೆದರಿಕೆಯೊಡ್ಡಿದಾಗ ಭಿನ್ನಾಭಿಪ್ರಾಯ ವ್ಯಕ್ತವಾಗಿತ್ತು. ಗ್ರೀನ್ಲ್ಯಾಂಡ್ನ್ನು ಆಳುವ ಡೆನ್ಮಾರ್ಕ್ ಎಂಬ ಮಿತ್ರರಾಷ್ಟ್ರದ ಮೇಲೆ ಟ್ರಂಪ್ ಹಾಕಿದ ಈ ದರ್ಪದ ಬೇಡಿಕೆಯನ್ನು ಐರೋಪ್ಯ ರಾಷ್ಟ್ರಗಳು ವಿರೋಧಿಸಲೇಬೇಕಾಯಿತು. ಅಂದು ಮಿಲಿಟರಿ ಕ್ರಮದ ಬೆದರಿಕೆ ಹಾಕಿದ್ದ ಟ್ರಂಪ್, ನಂತರ ಹಿಂದೆ ಸರಿದು ಮಾತುಕತೆಯ ಮೂಲಕ ಮುಂದುವರಿಯುವುದಾಗಿ ಹೇಳಿದ್ದರು.

ಒಂಟಿಯಾದರೇ ಟ್ರಂಪ್?

ಈ ಬಾರಿ, ಅಮೆರಿಕದ ಆಪ್ತ ಮಿತ್ರ ಬ್ರಿಟನ್ ಮತ್ತು ಅದರ ಪ್ರಧಾನಿ ಕೈರ್ ಸ್ಟಾರ್ಮರ್ ಅವರನ್ನು ಟ್ರಂಪ್ ಕಟುವಾಗಿ ಟೀಕಿಸಿದ್ದಾರೆ. ಇರಾನ್ ಮೇಲಿನ ದಾಳಿಗೆ ಕೈಜೋಡಿಸದಿದ್ದಕ್ಕೆ, ಅಮೆರಿಕದ ಫೈಟರ್ ಜೆಟ್ಗಳಿಗೆ ವಾಯುನೆಲೆಗಳನ್ನು ಬಳಸಲು ಅನುಮತಿ ನೀಡದೇ ಇದ್ದುದಕ್ಕೆ ಮತ್ತು ಈಗ ಹೊರ್ಮುಜ್ ಜಲಸಂಧಿಯನ್ನು ರಕ್ಷಿಸುವ ಅವರ ಆದೇಶವನ್ನು ಒಪ್ಪದಿದ್ದಕ್ಕೆ ಈ ಟೀಕೆ ವ್ಯಕ್ತವಾಗಿದೆ.

ಅಂತೆಯೇ, ಅಂದು ಶ್ವೇತಭವನದಲ್ಲಿ ಸ್ಪೇನ್ ಪ್ರಧಾನಿ ಪೆಡ್ರೊ ಸ್ಯಾಂಚೆಜ್ ಅವರ ಮೇಲೆ ಟ್ರಂಪ್ ವಾಗ್ದಾಳಿ ನಡೆಸುತ್ತಿದ್ದಾಗ ಮೌನವಾಗಿ ಕುಳಿತಿದ್ದ ಜರ್ಮನಿಯ ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್, ಕೊನೆಗೂ ಧೈರ್ಯ ತಂದುಕೊಂಡು ಇರಾನ್ ಸಂಘರ್ಷದಲ್ಲಿ ತಮ್ಮ ದೇಶ ಭಾಗಿಯಾಗುವುದಿಲ್ಲ ಎಂದು ಅಮೆರಿಕ ಅಧ್ಯಕ್ಷರಿಗೆ ತಿಳಿಸಿದ್ದಾರೆ.

ಯುರೋಪ್ನಿಂದ ವ್ಯಕ್ತವಾಗಿರುವ ಈ ಪ್ರತಿರೋಧವು ಸ್ವಲ್ಪ ತಡವಾಗಿದ್ದರೂ, ಇದು ಬಹುಶಃ ಟ್ರಂಪ್ ಪಾಲಿಗೆ ಕೊನೆಯ ಹೊಡೆತವಾಗಲಿದೆ. ಆಸ್ಟ್ರೇಲಿಯಾ ಮತ್ತು ಜಪಾನ್ ಸೇರಿದಂತೆ ತಮ್ಮ ಮಿತ್ರರಾಷ್ಟ್ರಗಳ ನಡುವೆಯೇ ಟ್ರಂಪ್ ಈಗ ಒಂಟಿಯಾಗುತ್ತಿದ್ದಾರೆ. ಅವರ ಇರಾನ್ ಯುದ್ಧಕ್ಕೆ ಯಾರೂ ಬೆಂಬಲ ನೀಡುತ್ತಿಲ್ಲ, ಇದು ಈ ಸಂಘರ್ಷವನ್ನು ಕೊನೆಗೊಳಿಸಲು ಸಿಕ್ಕಿರುವ ಅತ್ಯುತ್ತಮ ಅವಕಾಶ.

Next Story